ವಿಚಾರಣೆ ಇಲ್ಲದೆಯೇ ಆರೋಪಿಗಳನ್ನು ಜೈಲಿನಲ್ಲಿ ಇರಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಈಚೆಗೆ ಬಹಳ ಕಟುವಾಗಿ ಮಾತನಾಡಿದೆ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಜಾರಿ ನಿರ್ದೇಶನಾಲಯವು (ಇ.ಡಿ) ದೇಶದ ತುಂಬೆಲ್ಲ ಬಹಳ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿರುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್‌ನ ಮಾತುಗಳು ಬಹಳ ಮಹತ್ವದ್ದಾಗುತ್ತವೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿ ಆರೋಪಿಗಳಾಗಿ ಜೈಲಿನಲ್ಲಿ ಇರುವ ವ್ಯಕ್ತಿಗಳ ವಿರುದ್ಧ ಪೂರಕ ದೋಷಾರೋಪ ಪಟ್ಟಿಗಳನ್ನು ಸಲ್ಲಿಸುತ್ತ, ಅವರಿಗೆ ಜಾಮೀನು ಸಿಗುವುದನ್ನು ತಡೆಯುವ ಇ.ಡಿ. ಯತ್ನವನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ತೀವ್ರವಾಗಿ ಟೀಕಿಸಿದೆ. ಜಾರ್ಖಂಡ್‌ನ ಮುಖ್ಯಮಂತ್ರಿ ಆಗಿದ್ದ ಹೇಮಂತ್ ಸೊರೇನ್ ಅವರ ನಿಕಟವರ್ತಿ ಪ್ರೇಮ್ ಪ್ರಕಾಶ್ ಎನ್ನುವವರ ಪ್ರಕರಣದಲ್ಲಿ ಕೋರ್ಟ್ ಈ ಮಾತುಗಳನ್ನು ಆಡಿದೆ. ಪ್ರಕಾಶ್ ಅವರನ್ನು ಅಕ್ರಮ ಗಣಿಗಾರಿಕೆ ಜೊತೆ ನಂಟು ಹೊಂದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ 2022ರಲ್ಲಿ ಬಂಧಿಸಲಾಗಿದೆ. ತನಿಖಾ ಸಂಸ್ಥೆಯು ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತಲೇ ಇರುವ ಕಾರಣ ಪ್ರಕಾಶ್ ಅವರು ಇನ್ನೂ ಜೈಲಿನಲ್ಲೇ ಇದ್ದಾರೆ. ಪೂರಕ ದೋಷಾರೋಪ ಪಟ್ಟಿಗಳನ್ನು ಸಲ್ಲಿಸುವ ಮೂಲಕ ಜಾರಿ ನಿರ್ದೇಶನಾಲಯವು ಆರೋಪಿಯ ಹಕ್ಕುಗಳನ್ನು ನಿರಾಕರಿಸಿದ್ದಷ್ಟೇ ಅಲ್ಲದೆ, ಕಾನೂನು ಪ್ರಕ್ರಿಯೆಯನ್ನು ಕೂಡ ವಿಳಂಬಗೊಳಿಸಿದೆ ಎಂದು ಪೀಠವು ಹೇಳಿದೆ.
‘ನೀವು ವ್ಯಕ್ತಿಯೊಬ್ಬನನ್ನು ಬಂಧಿಸಿದಾಗ ವಿಚಾರಣೆ ಶುರುವಾಗಬೇಕು’ ಎಂದು ಇ.ಡಿ. ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿರುವ ಪೀಠವು ಆರೋಪಿಯನ್ನು ಯಾವುದೇ ವಿಚಾರಣೆಗೆ ಗುರಿಪಡಿಸದೆ 18 ತಿಂಗಳುಗಳಿಂದ ನಿರಂತರವಾಗಿ ಜೈಲಿನಲ್ಲಿ ಇರಿಸಿರುವುದು ‘ನಮ್ಮನ್ನು ಕಳವಳಕ್ಕೆ ಈಡುಮಾಡಿದೆ’ ಎಂದು ಹೇಳಿದೆ. ಕಾನೂನನ್ನು ಮೀರಲು ಇ.ಡಿ. ಪೂರಕ ದೋಷಾರೋಪ ಪಟ್ಟಿ ಸಲ್ಲಿಸುವ ಕೆಲಸ ಮಾಡುತ್ತಿದೆ. ದೇಶದ ಪ್ರಜೆಗಳಿಗೆ ಜೀವಿಸುವ ಸ್ವಾತಂತ್ರ್ಯವನ್ನು ಕಲ್ಪಿಸಿರುವ ಸಂವಿಧಾನದ 21ನೇ ವಿಧಿಯಿಂದಾಗಿ ಜಾಮೀನಿನ ಹಕ್ಕು ಕೂಡ ಪ್ರಜೆಗಳಿಗೆ ಇದೆ. ಪಿಎಂಎಲ್‌ಎ ಕಾನೂನು ಜಾಮೀನು ನೀಡಲು ಒಡ್ಡುವ ಷರತ್ತುಗಳು ಅತ್ಯಂತ ಪ್ರಮುಖವಾದ ಮೂಲಭೂತ ಹಕ್ಕಿಗೆ ವಿರುದ್ಧವಾಗಿವೆ. ವಿಚಾರಣೆ ವಿಳಂಬವಾದರೆ, ಆರೋಪಿಯು ಜೈಲಿನಲ್ಲಿ ಬಹುಕಾಲದಿಂದ ಇದ್ದರೆ ಆತನಿಗೆ ಜಾಮೀನು ನೀಡಬಾರದು ಎಂದು ಕಾನೂನು ಹೇಳುವುದಿಲ್ಲ ಎಂಬ ಮಾತನ್ನು ಪೀಠವು ಇ.ಡಿಗೆ ಹೇಳಿದೆ. ಪಿಎಂಎಲ್‌ಎ ಕಾನೂನಿನ ಸೆಕ್ಷನ್ 45ರಲ್ಲಿ ಇರುವ ಜಾಮೀನಿನ ಷರತ್ತುಗಳನ್ನು ಕೋರ್ಟ್ ಈ ಹಿಂದೆ ಅಸಿಂಧುಗೊಳಿಸಿದ್ದೂ ಇದೆ. ಆರೋಪಿಯು ಯಾವುದೇ ತಪ್ಪು ಮಾಡಿಲ್ಲ ಎಂದು ಭಾವಿಸಲು ಸಾಕಷ್ಟು ಆಧಾರಗಳಿವೆ ಎಂಬುದು ಹಾಗೂ ಜಾಮೀನು ಪಡೆದ ನಂತರ ಆರೋಪಿಯು ಮತ್ತೆ ಯಾವುದೇ ಅಪರಾಧ ಎಸಗುವುದಿಲ್ಲ ಎಂಬುದು ಜಾಮೀನು ನೀಡುವಾಗ ನ್ಯಾಯಾಲಯಕ್ಕೆ ಮನವರಿಕೆ ಆಗಬೇಕು ಎಂದು ಈ ಸೆಕ್ಷನ್ ಹೇಳುತ್ತದೆ.
ಕೋರ್ಟ್ ಆಡಿರುವ ಮಾತುಗಳು ಸ್ವಾತಂತ್ರ್ಯಕ್ಕೆ ಬೆಲೆ ಕೊಡುವ ನಿಲುವನ್ನು ಮತ್ತೊಮ್ಮೆಸ್ಪಷ್ಟಪಡಿಸುವಂತೆ ಇವೆ. ಅಲ್ಲದೆ, ಕೋರ್ಟ್ ಈ ಹಿಂದೆ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದ ಹಲವು ತೀರ್ಪುಗಳಲ್ಲಿ ಆಡಿದ್ದ ಮಾತುಗಳಿಗೆ ಅನುಗುಣವಾಗಿಯೂ ಇವೆ. ಹಣದ ಅಕ್ರಮ ವರ್ಗಾವಣೆಯಂತಹ ಅಪರಾಧಗಳನ್ನು ತಡೆಯಲು ಕಠಿಣವಾದ ಕಾನೂನು ಕ್ರಮಗಳ ಅಗತ್ಯ ಇದೆಯಾದರೂ, ಅಂತಹ ಕಾನೂನುಗಳನ್ನು ನಾಗರಿಕರ ಮೂಲಭೂತ ಹಕ್ಕು ಹಾಗೂ ಸ್ವಾತಂತ್ರ್ಯ ಕಸಿಯಲು ಬಳಸಬಾರದು. ಪಿಎಂಎಲ್‌ಎ ಕಾನೂನನ್ನು ಈಗ ವ್ಯಾಪಕವಾಗಿ ಬಳಕೆ ಮಾಡುತ್ತಿರುವುದು ಸರ್ಕಾರದ ಟೀಕಾಕಾರರಿಗೆ ಹಾಗೂ ವಿರೋಧಿಗಳಿಗೆ ಕಿರುಕುಳ ನೀಡಲಿಕ್ಕೇ ವಿನಾ, ಆ ಕಾನೂನನ್ನು ಜಾರಿಗೆ ತಂದ ಮೂಲ ಉದ್ದೇಶಕ್ಕಾಗಿ ಅಲ್ಲ. ಈ ಕಾಯ್ದೆಯ ಅಡಿಯಲ್ಲಿ ದಾಖಲು ಮಾಡಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣವು ಬಹಳ ಕಡಿಮೆ ಇದೆ ಎಂಬುದು ಇದನ್ನು ತೋರಿಸುತ್ತಿದೆ. ಇ.ಡಿ. ದಾಖಲು ಮಾಡಿರುವ ಬಹುತೇಕ ಪ್ರಕರಣಗಳು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ನಾಗರಿಕರ ಹಕ್ಕುಗಳಿಗೆ ಬೆಲೆ ಕೊಡಲು ಸುಪ್ರೀಂ ಕೋರ್ಟ್ ಹೇಳಿರುವ ಕಿವಿಮಾತು ಬಹಳ ಮುಖ್ಯ ಹಾಗೂ ಬಹಳ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.