ಮಣಿಪುರ ಮತ್ತೆ ಪ್ರಕ್ಷುಬ್ಧಗೊಂಡಿದೆ. ಈ ಬಾರಿಯ ಸಂಘರ್ಷವು ಕುಕಿ ಮತ್ತು ಮೈತೇಯಿ ಸಮುದಾಯಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಷೋಭೆಯು ಅಧಿಕಾರದ ಕೇಂದ್ರಗಳನ್ನು ತಾಕಿದೆ. ಉದ್ರಿಕ್ತ ಜನರ ಗುಂಪುಗಳು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪೂರ್ವಿಕರ ಮನೆಯ ಮೇಲೆ, ಕೆಲವು ಸಚಿವರು ಹಾಗೂ ಶಾಸಕರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿವೆ. ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳು ಈಗ ಮತ್ತೆ ಮತ್ತೆ ನಡೆಯುತ್ತಿವೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಹಿಂಸಾಚಾರವು ಅಲ್ಲಿ ದಿನ ಕಳೆದಂತೆ ತೀವ್ರಗೊಳ್ಳುತ್ತಿದೆ. ಈ ತಿಂಗಳ ಆರಂಭದಲ್ಲಿ ಮೈತೇಯಿ ಸಮುದಾಯದ ಶಸ್ತ್ರಸಜ್ಜಿತ ಗುಂಪೊಂದು ಕುಕಿ ಸಮುದಾಯದ ಗ್ರಾಮದ ಮೇಲೆ ದಾಳಿ ನಡೆಸಿದ ನಂತರ ಮತ್ತೆ ಹಿಂಸಾಚಾರ ಆರಂಭವಾಯಿತು. ಆ ಬಳಿಕ ಭದ್ರತಾ ಶಿಬಿರವೊಂದರ ಮೇಲೆ ಕುಕಿ ಸಮುದಾಯದವರು ದಾಳಿ ನಡೆಸಿದರು, ನಂತರದಲ್ಲಿ ಕುಕಿ ಸಮುದಾಯದವರು ಮೈತೇಯಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳು ಸೇರಿ ಕೆಲವರನ್ನು ಅಪಹರಿಸಿ ಹತ್ಯೆ ಮಾಡಿದರು. ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಸೇರಿದ ಸ್ಥಳಗಳ ನಡುವಿನ ಬಫರ್ ಪ್ರದೇಶದಲ್ಲಿ ಗುಂಡಿನ ಚಕಮಕಿಗಳು ನಡೆದಿವೆ, ಆಧುನಿಕ ಶಸ್ತ್ರಾಸ್ತ್ರಗಳನ್ನು ರಾಜ್ಯದಲ್ಲಿ ಬಳಕೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಹಿಂಸಾಚಾರ ವ್ಯಾಪಕವಾಗುತ್ತಿರು ವುದು ಹಾಗೂ ಪರಿಸ್ಥಿತಿ ದಿನ ಕಳೆದಂತೆಲ್ಲ ವಿಷಮ ಗೊಳ್ಳುತ್ತಿರುವುದು ರಾಜಕೀಯ ಪರಿಣಾಮಗಳನ್ನು ಉಂಟುಮಾಡಿದೆ. ಏಳು ಮಂದಿ ಶಾಸಕರ ಬಲ ಹೊಂದಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. ಬಿಕ್ಕಟ್ಟನ್ನು ಶಮನ
ಗೊಳಿಸುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಎನ್‌ಪಿಪಿ ಆರೋಪಿಸಿದೆ. ಬೆಂಬಲವನ್ನು ಹಿಂಪಡೆದಿರುವುದು ಸರ್ಕಾರದ ಪತನಕ್ಕೆ ಕಾರಣವಾಗುವುದಿಲ್ಲ. ಏಕೆಂದರೆ ಬಿರೇನ್ ಸಿಂಗ್ ಅವರಿಗೆ ಸದನದಲ್ಲಿ ಬಹುಮತ ಇದೆ. ಹೀಗಿದ್ದರೂ ಸರ್ಕಾರದ ಭಾಗವೇ ಆಗಿದ್ದ ಪಕ್ಷವೊಂದು ವಿಶ್ವಾಸ ಕಳೆದುಕೊಂಡಿರುವುದನ್ನು ಅದು ತೋರಿಸುತ್ತದೆ. ಬಿಜೆಪಿಯ ಒಳಗೆ ಕೂಡ ಬಿರೇನ್ ಸಿಂಗ್ ಅವರಿಗೆ ವಿರೋಧ ಇದೆ. ಕುಕಿ ಸಮುದಾಯದ ಕಡೆಯವರು ಸೇರಿದಂತೆ ಕೆಲವು ಶಾಸಕರು ಸರ್ಕಾರದಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಮಣಿಪುರ ರಾಜ್ಯದಲ್ಲಿ ಕಳೆದ ವರ್ಷ ಹಿಂಸಾಚಾರ ಶುರು
ವಾಗಿದ್ದಾಗಲೇ, ಬಿರೇನ್ ಸಿಂಗ್ ಕೂಡ ಈ ಸಮಸ್ಯೆಯ ಒಂದು ಭಾಗ ಎಂಬುದು ಸ್ಪಷ್ಟವಾಗಿತ್ತು. ಆದರೆ ಕೇಂದ್ರ ಸರ್ಕಾರವು ಬಿರೇನ್ ಸಿಂಗ್ ಅವರನ್ನು ರಕ್ಷಿಸುತ್ತ ಬಂದಿದೆ.
ಮಣಿಪುರದ ಪರಿಸ್ಥಿತಿಯ ವಿಚಾರವಾಗಿ ಕೇಂದ್ರ ಸರ್ಕಾರವು ಆರಂಭದಿಂದಲೂ ತಾತ್ಸಾರ ಧೋರಣೆಯನ್ನು ಪ್ರದರ್ಶಿಸಿದೆ, ಸಿನಿಕವಾಗಿ ವರ್ತಿಸಿದೆ ಕೂಡ. ಈಗ ಕೇಂದ್ರವು ರಾಜ್ಯದ ಕೆಲವು ಭಾಗಗಳಲ್ಲಿ ಕರಾಳವಾದ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ’ಯನ್ನು (ಎಎಫ್‌ಎಸ್‌ಪಿಎ) ಜಾರಿಗೆ ತಂದಿದೆ. ಮಣಿಪುರದಲ್ಲಿ ಎಎಫ್‌ಎಸ್‌ಪಿಎ ಬಹಳ ಕುಖ್ಯಾತಿಯನ್ನು ಪಡೆದಿದೆ. ಅದನ್ನು ಅಲ್ಲಿ ಮತ್ತೆ ಹೇರಿರುವುದರಿಂದ ಜನರಲ್ಲಿನ ಅವಿಶ್ವಾಸವು ಇನ್ನಷ್ಟು ಹೆಚ್ಚಾಗುವ ಅಪಾಯವೂ ಇದೆ. ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಆ ರಾಜ್ಯದಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಅಥವಾ ಸಶಸ್ತ್ರ ಪಡೆಗಳು ಬಗೆಹರಿಸಲು ಆಗುವುದಿಲ್ಲ. ಕರಾಳವಾದ ಕಾನೂನುಗಳ ಮೂಲಕ, ಕರ್ಫ್ಯೂ ಮೂಲಕ ಅಥವಾ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕವೂ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಆಗುವುದಿಲ್ಲ. ಅಲ್ಲಿನ ಸಮಸ್ಯೆಯನ್ನು ಪರಿಹರಿಸಲು ರಾಜಕೀಯ ಉಪಕ್ರಮವೊಂದರ ಅಗತ್ಯವಿದೆ, ಅದು ಅಲ್ಲಿ ಇನ್ನೂ ಕಾಣುತ್ತಿಲ್ಲ. ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಸೇರಿದ ಶಾಸಕರ ಜಂಟಿ ಸಭೆಯು ಅಲ್ಲಿ ಇನ್ನೂ ಆಗಿಲ್ಲ. ಸಂಘರ್ಷ ಆರಂಭವಾದ ನಂತರ ಅಮಿತ್ ಶಾ ಅವರು ಮಣಿಪುರಕ್ಕೆ ಎರಡು ಬಾರಿ ಮಾತ್ರ ಭೇಟಿ ನೀಡಿದ್ದಾರೆ, ಅದರಲ್ಲಿ ಒಂದು ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಭೇಟಿ. ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಿಲ್ಲ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಮಾತುಕತೆಗೆ ಅವಕಾಶ ಕಲ್ಪಿಸಿ, ವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡದೇ ಇದ್ದರೆ, ಮಣಿಪುರದಲ್ಲಿ ಶಾಂತಿಯು ಮರೀಚಿಕೆಯಾಗಿಯೇ ಉಳಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.