ADVERTISEMENT

ಸಂಪಾದಕೀಯ | ಮರಕುಂಬಿ ಆದೇಶ: ಜಾತಿದೌರ್ಜನ್ಯ ವಿರೋಧಿ ಹೋರಾಟಕ್ಕೆ ಭೀಮಬಲ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 0:17 IST
Last Updated 31 ಅಕ್ಟೋಬರ್ 2024, 0:17 IST
..
..   

ಕೊಪ್ಪಳ ಜಿಲ್ಲೆಯ ಮರಕುಂಬಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಧಿಸಿದೆ. ಈ ಆದೇಶವು ಜಾತಿಹಿಂಸೆ ಮತ್ತು ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ನಿಸ್ಸಂಶಯವಾಗಿ ಒಂದು ಮೈಲಿಗಲ್ಲು; ಜಾತಿ ಆಧಾರಿತ ಹಿಂಸೆ ಮತ್ತು ತಾರತಮ್ಯ ವಿರೋಧಿ ಹೋರಾಟಕ್ಕೆ ಆತ್ಮವಿಶ್ವಾಸ ತುಂಬುವಂತಹದ್ದು. ಜಾತಿ ಕಾರಣದಿಂದಾಗಿ ದಲಿತರನ್ನು ನಿಂದಿಸುವವರಿಗೆ ಹಾಗೂ ಅವರ ಮೇಲೆ ದೌರ್ಜನ್ಯ ಎಸಗುವವರಿಗೆ ಈ ಆದೇಶವು ಎಚ್ಚರಿಕೆಯಂತಿದೆ. ದಲಿತರ ಮೇಲಿನ ಹಿಂಸೆ–ದೌರ್ಜನ್ಯ, ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗುತ್ತಿರುವ ಉದಾಹರಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ನ್ಯಾಯಾಲಯದ ಆದೇಶವು ಶೋಷಿತರಿಗೆ ಕಾನೂನಿನ ಬಗ್ಗೆ ನಂಬಿಕೆ ಉಳಿಸುವಂತಿದೆ. ‘ಇಂಥ ಪ್ರಕರಣದಲ್ಲಿ ಅನುಕಂಪ ತೋರುವುದು ನ್ಯಾಯದ ಅಪಹಾಸ್ಯ ಆಗಲಿದೆ’ ಎಂದು ನ್ಯಾಯಾಧೀಶ ಸಿ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿರುವುದು ಕಾನೂನು ವ್ಯವಸ್ಥೆಯ ಘನತೆಯನ್ನು ಹೆಚ್ಚಿಸುವಂತಹದ್ದಾಗಿದೆ. 2014ರ ಆಗಸ್ಟ್ 28ರಂದು ಮರಕುಂಬಿಯಲ್ಲಿ ದಲಿತರು ಮತ್ತು ಪ್ರಬಲ ಜಾತಿಗಳಿಗೆ ಸೇರಿದವರ ನಡುವೆ ಸಂಘರ್ಷ ಉಂಟಾಗಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಉಂಟಾದ ಜಗಳ ತೀವ್ರ ಸಂಘರ್ಷವಾಗಿ ಬದಲಾಗಿತ್ತು. ದಲಿತ ಕೇರಿಯ ಮೇಲೆ ದಾಳಿ ನಡೆಸಿದ್ದ ಜಾತಿವ್ಯಸನಿಗಳ ಗುಂಪು, ದಲಿತರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಗುಡಿಸಲುಗಳಿಗೆ ಬೆಂಕಿ ಹಚ್ಚಿತ್ತು. ಆ ಪ್ರಕರಣದಲ್ಲಿ ದಾಖಲಾಗಿದ್ದ ದೂರನ್ನು ಆಧರಿಸಿ 117 ಜನರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಜೀವಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಚಾರಣೆ ಅವಧಿಯಲ್ಲಿ ಮೃತಪಟ್ಟಿರುವ ಆರೋಪಿಗಳು ಹಾಗೂ ಇಬ್ಬರು ಬಾಲಕರನ್ನು ಹೊರತುಪಡಿಸಿ, 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಜಾತಿನಿಂದನೆ ಕಾಯ್ದೆ ಅನ್ವಯವಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮೂವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವರ್ಷಗಳ ಕಾಲ ನಡೆದ ವಿಚಾರಣೆ ತಾರ್ಕಿಕ ಅಂತ್ಯ ತಲುಪಿ, ತಪ್ಪಿತಸ್ಥ ರಿಗೆ ಶಿಕ್ಷೆಯಾಗಿರುವುದರಿಂದಾಗಿ ಸಂತ್ರಸ್ತರಿಗೆ ವಿಳಂಬವಾಗಿಯಾದರೂ ನ್ಯಾಯ ದೊರಕಿದಂತಾಗಿದೆ ಎಂದು ಸದ್ಯಕ್ಕೆ ಸಮಾಧಾನಪಡಬಹುದು.

ಮರಕುಂಬಿ ಗ್ರಾಮದ ಹಿಂಸಾಚಾರವು ಈ ದೇಶದ ಯಾವುದೇ ಗ್ರಾಮದಲ್ಲಿ ನಡೆಯಬಹುದಾದ ಜಾತಿದ್ವೇಷದ ವಿದ್ಯಮಾನದಂತಿದೆ. ದಲಿತರ ಮೇಲೆ ಹಲ್ಲೆ, ಅತ್ಯಾಚಾರ, ಅವಮಾನ ಎಸಗುವ ಕೃತ್ಯಗಳು ಪ್ರತಿನಿತ್ಯ ಮಾಧ್ಯಮ
ಗಳಲ್ಲಿ ವರದಿಯಾಗುತ್ತಲೇ ಇವೆ. ಪರಿಶಿಷ್ಟ ಜಾತಿಯ ಮಹಿಳೆ ನೀರು ಕುಡಿದದ್ದಕ್ಕಾಗಿ ಸಾರ್ವಜನಿಕ ನೀರು ಸರಬರಾಜು ಟ್ಯಾಂಕನ್ನು ಶುದ್ಧೀಕರಿಸಲಾಗುತ್ತದೆ. ಗ್ರಾಮದೇವತೆಯ ಗುಜ್ಜುಕೋಲು ಮುಟ್ಟಿದ ಬಾಲಕನ ಮೇಲೆ ಹಲ್ಲೆ ನಡೆಸಿ, ಅವನ ಕುಟುಂಬಕ್ಕೆ ದಂಡ ವಿಧಿಸಲಾಗುತ್ತದೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಶಿಕ್ಷಕರೇ ಮಲದ ಗುಂಡಿಗೆ ಇಳಿಸುತ್ತಾರೆ. ಕೂದಲು ಕತ್ತರಿಸಲು ನಿರಾಕರಣೆ, ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಊಟ–ಉಪಾಹಾರ ನೀಡುವುದು, ಧಾರ್ಮಿಕ ಆಚರಣೆಯಿಂದ ಕೆಲವು ವರ್ಗಗಳನ್ನು ದೂರವಿಡುವುದು, ಬಾಡಿಗೆಗೆ ಮನೆ ನೀಡದಿರುವುದು... ಇವೆಲ್ಲವೂ ಅಸ್ಪೃಶ್ಯತೆಯ ಆಚರಣೆಗಳೇ ಆಗಿವೆ. ಇಂಥ ನಡವಳಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ, ನಾಗರಿಕ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ ಎನ್ನುವುದನ್ನು ಜಾತಿವ್ಯಸನಿಗಳಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಹೊಣೆಗಾರಿಕೆ. ದುರದೃಷ್ಟವಶಾತ್‌, ಜಾತಿಯ ಹೆಸರಿನಲ್ಲಿ ನಡೆಯುವ ಶೋಷಣೆಗಳನ್ನು ಸಹಜ ಎನ್ನುವಂತೆ ಸ್ವೀಕರಿಸುವ ಮನಃಸ್ಥಿತಿ ಸಮಾಜದಲ್ಲಿದೆ. ಅತ್ಯಾಚಾರದಂಥ ಪಶುಸದೃಶ ಕೃತ್ಯಗಳಿಗೆ ವ್ಯಕ್ತವಾಗುವ ಪ್ರತಿಕ್ರಿಯೆಗಳೂ ಜಾತಿಯ ನೆಲೆಗಟ್ಟಿನಲ್ಲಿರುತ್ತವೆ. ದೇಶ ಸ್ವತಂತ್ರಗೊಂಡು ಎಪ್ಪತ್ತೈದು ವರ್ಷಗಳು ಕಳೆದ ನಂತರವೂ ದೇಶದ ಜಾತ್ಯತೀತ ಸ್ವರೂಪ ನಿರಂತರವಾಗಿ ಪರೀಕ್ಷೆಗೊಳಗಾಗುತ್ತಲೇ ಇದೆ ಹಾಗೂ ಗಾಸಿಗೊಳ್ಳುತ್ತಿದೆ. ಕಂಬಾಲಪಲ್ಲಿಯಲ್ಲಿ ನಡೆದ ದಲಿತ ಹತ್ಯಾಕಾಂಡಕ್ಕೆ ಇಡೀ ರಾಜ್ಯ ಬೆಚ್ಚಿಬಿದ್ದಿತ್ತು. ಆ ಬಳಿಕವೂ ಜಾತಿ ಹೆಸರಿನಲ್ಲಿ ಕ್ರೌರ್ಯ ಮರುಕಳಿಸುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಜಾತಿವ್ಯಸನಕ್ಕೆ ಪೆಟ್ಟು ಕೊಡುವ ಪ್ರಯತ್ನಗಳು ಹಿನ್ನಡೆ ಸಾಧಿಸುವ ಉದಾಹರಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಪ್ರಕಟಗೊಂಡಿರುವ ಮರಕುಂಬಿ ಪ್ರಕರಣಕ್ಕೆ ಸಂಬಂಧಿಸಿದ ಆದೇಶವು ನ್ಯಾಯ ಹಾಗೂ ಸಾಮಾಜಿಕ ಸುಧಾರಣೆಯ ದಿಸೆಯಲ್ಲಿ ಆಶಾಕಿರಣದಂತೆ ಕಾಣಿಸುತ್ತಿದೆ. ಇಂಥ ನಡೆಗಳು ಹೆಚ್ಚಿದಷ್ಟೂ ನ್ಯಾಯದ ಬಗೆಗಿನ ಜನಸಾಮಾನ್ಯರ ವಿಶ್ವಾಸ ಹೆಚ್ಚುತ್ತದೆ; ಜಾತಿವಿನಾಶದ ಪ್ರಯತ್ನಗಳಿಗೂ ಭೀಮಬಲ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT