ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸಬಹುದಾದ ಕ್ಷಿಪಣಿ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿಪಡಿಸಿದೆ. ‘ಮಿಷನ್ ಶಕ್ತಿ’ ಕಾರ್ಯಾಚರಣೆ ಮೂಲಕ ಕ್ಷಿಪಣಿಯ ಸಾಮರ್ಥ್ಯದ ಪರೀಕ್ಷೆ ಬುಧವಾರ ಯಶಸ್ವಿಯಾಗಿ ನಡೆಯಿತು. ಈ ಕ್ಷಿಪಣಿಯ ಇನ್ನೊಂದು ಪರೀಕ್ಷೆ ಸದ್ಯದಲ್ಲೇ ನಡೆಯಲಿದೆ.
ಉಪಗ್ರಹನಿರೋಧಕ ಕ್ಷಿಪಣಿ, ಭಾರತದ ಶಸ್ತ್ರಾಸ್ತ್ರ ಬತ್ತಳಿಕೆಯ ಅತಿ ಪ್ರಬಲ ಅಸ್ತ್ರ. ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಭಾರತ ಈ ಸಾಧನೆ ಮಾಡಿದೆ. ಇದಕ್ಕಾಗಿ ಶ್ರಮಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳ ಕೌಶಲ ಮತ್ತು ಬುದ್ಧಿವಂತಿಕೆ ಪ್ರಶಂಸನೀಯ. ಭಾರತವು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ, ಚೀನಾದಂತಹ ರಾಷ್ಟ್ರಗಳಿಗೆ ಸರಿಸಮವಾಗಿ ಬೆಳೆಯುತ್ತಿದೆ. ಬೇರೆ ದೇಶಗಳು ನಮ್ಮ ಉಪಗ್ರಹಗಳ ತಂಟೆಗೆ ಬಾರದಂತೆ ನೋಡಿಕೊಳ್ಳಲು ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಬಾಹ್ಯಾಕಾಶ ಮಿಲಿಟರೀಕರಣ ಕ್ಷೇತ್ರಕ್ಕೂ ಭಾರತ ಕಾಲಿಟ್ಟಿದೆ. ಶಕ್ತಿಶಾಲಿ ರಾಷ್ಟ್ರಗಳು ಅಂತರಿಕ್ಷದಲ್ಲಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಇಂತಹ ಅಸ್ತ್ರಗಳನ್ನು ಇಟ್ಟುಕೊಂಡಿವೆ.
ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ದೇಶ, ಬಾಹ್ಯಾಕಾಶವನ್ನು ಬಳಸಿಕೊಂಡರೆ ಮಾತ್ರ ಈ ಅಸ್ತ್ರದ ಬಳಕೆಯ ಪ್ರಶ್ನೆ ಉದ್ಭವಿಸುತ್ತದೆ. ಇದೊಂದು ಅತ್ಯಂತ ಸಂಕೀರ್ಣವಾದ ಮತ್ತು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿ ತಂತ್ರಜ್ಞಾನ. ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿ ಪರಿಭ್ರಮಣ ನಡೆಸುತ್ತಿದ್ದ ನಮ್ಮದೇ ಉಪಗ್ರಹವನ್ನು ಈ ಕ್ಷಿಪಣಿಯು ಕೇವಲ 3 ನಿಮಿಷಗಳಲ್ಲಿ ನಾಶಗೊಳಿಸಿದೆ. ಭೂಕಕ್ಷೆಯ ಕೆಳಹಂತದಲ್ಲೇ ಪರೀಕ್ಷೆ ನಡೆಸಿದ್ದರಿಂದ ಉಪಗ್ರಹ ನಾಶದಿಂದ ಸೃಷ್ಟಿಯಾದ ಕಸಅಂತರಿಕ್ಷದಲ್ಲಿ ಉಳಿದು ಇತರ ಉಪಗ್ರಹಗಳಿಗೆ ಹಾನಿ ಮಾಡುವುದಿಲ್ಲ. ಅದು 2 ವಾರಗಳಲ್ಲಿ ಪುಡಿಯಾಗಿ ಭೂಮಿಗೆ ಬೀಳಲಿದೆ. ದೇಶದ ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಇಂತಹದ್ದೊಂದು ರಕ್ಷಣಾ ತಂತ್ರಜ್ಞಾನದ ಅಗತ್ಯವಿತ್ತು.
ಭಾರತದ ದೇಶಿ ಕ್ಷಿಪಣಿ ಅಭಿವೃದ್ಧಿ ಯೋಜನೆಯು 1983ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಆರಂಭವಾಯಿತು. ನಂತರ ಬಂದ ಸರ್ಕಾರಗಳು ಈ ಯೋಜನೆಗೆ ಮಹತ್ವ ಕೊಟ್ಟು ಮುಂದುವರಿಸಿದವು. ಅತ್ಯಂತ ಬದ್ಧತೆಯುಳ್ಳ ಪ್ರತಿಭಾವಂತ ವಿಜ್ಞಾನಿಗಳು ಮತ್ತು ತಂತ್ರಜ್ಞರು ಈ ಯೋಜನೆಗಾಗಿ ನಿರಂತರವಾಗಿ ದುಡಿದಿದ್ದಾರೆ. ಪರಿಣಾಮವಾಗಿ, ಅತ್ಯಂತ ನಿಖರ ಮತ್ತು ಪರಿಣಾಮ
ಕಾರಿಯಾದ ಕ್ಷಿಪಣಿ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ಆದರೆ, ಉಪಗ್ರಹನಿರೋಧಕ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ತೀರಾ ನಾಟಕೀಯವಾಗಿ ಪ್ರಕಟಿಸುವ ಅಗತ್ಯವಿತ್ತೇ? ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಈ ಪರೀಕ್ಷೆಯ ಯಶಸ್ಸಿನ ಲಾಭ ಪಡೆಯಲು
ಪ್ರಯತ್ನಿಸಿದ್ದಾರೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಆರೋಪದಲ್ಲಿ ಹುರುಳಿಲ್ಲದಿಲ್ಲ.
ಬಾಹ್ಯಾಕಾಶ ವಿಜ್ಞಾನ ಖಾತೆಯು ಪ್ರಧಾನಿ ಬಳಿ ಇದ್ದರೂ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿಯೇ ಪ್ರಕಟಿಸುವ ಪರಿಪಾಟ ತೀರಾ ಅಪರೂಪ. ಇಂತಹ ವಿಷಯಗಳನ್ನು ವಿಜ್ಞಾನಿಗಳಿಗೇ ಬಿಡಬೇಕು. ರಾಜಕಾರಣದ ಸ್ಪರ್ಶ ನೀಡಬಾರದು. ಆದರೆ, ತಾವೊಬ್ಬ ‘ಶಕ್ತಿಶಾಲಿ’ ನಾಯಕ ಎಂಬುದನ್ನು ದೇಶದ ಮುಂದೆ ಬಿಂಬಿಸಿಕೊಳ್ಳಲು ಈ ಅವಕಾಶವನ್ನು ಮೋದಿ ಬಳಸಿಕೊಂಡಿದ್ದಾರೆ. ಈ ಹಿಂದಿನ, ಯುಪಿಎ ಸರ್ಕಾರದ ಅವಧಿಯಲ್ಲೇ ಉಪಗ್ರಹನಿರೋಧಕ ತಂತ್ರಜ್ಞಾನ ಸಿದ್ಧಗೊಂಡಿತ್ತು. ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಟಿ.ವಿ.ಯಲ್ಲಿ ಘೋಷಿಸುವ ಮೂಲಕ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಚುನಾವಣಾ ಆಯೋಗವು ಸಮಿತಿಯೊಂದನ್ನು ರಚಿಸಿರುವುದು ಸ್ವಾಗತಾರ್ಹ. ನೀತಿ ಸಂಹಿತೆಯು ಕಿಮ್ಮತ್ತು ಕಳೆದುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಆಯೋಗದ ಮೇಲೆ ಇದೆ. ಆಡಳಿತಾರೂಢರು ಕೂಡ ನೀತಿ ಸಂಹಿತೆಯನ್ನು ಪಾಲಿಸುವ ಮೂಲಕ ಆಯೋಗದ ಕೈ ಬಲಪಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.