ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ನಡೆದ 11 ವರ್ಷಗಳ ನಂತರ, ಹತ್ಯೆಯ ಆರೋಪಿಗಳಿಗೆ ಶಿಕ್ಷೆ ಆಗಿದೆ. ಆದರೆ, ನ್ಯಾಯದಾನ ವಿಳಂಬವಾದ ಪರಿಣಾಮವಾಗಿ ನ್ಯಾಯದ ನಿರಾಕರಣೆಯೂ ಆಗಿದೆ. ಈ ಹತ್ಯೆಗೆ ಸಂಬಂಧಿಸಿದ ಎಲ್ಲರಿಗೂ ಶಿಕ್ಷೆ ಕೊಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ದಾಭೋಲ್ಕರ್ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ ಇಬ್ಬರನ್ನು ಪುಣೆಯ ವಿಶೇಷ ನ್ಯಾಯಾಲಯವೊಂದು ಶಿಕ್ಷೆಗೆ ಗುರಿಪಡಿಸಿದೆ. ಆದರೆ ಈ ಹತ್ಯೆ ಪ್ರಕರಣದ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಇತರ ಮೂವರನ್ನು ಖುಲಾಸೆಗೊಳಿಸಿದೆ. ಹೀಗೆ ಖುಲಾಸೆಗೊಂಡವರಲ್ಲಿ ವೀರೇಂದ್ರ ಸಿಂಗ್ ತಾವಡೆ ಅವರೂ ಸೇರಿದ್ದಾರೆ. ಈ ವ್ಯಕ್ತಿಯೇ ಮುಖ್ಯ ಸಂಚುಗಾರ ಎಂದು ಪ್ರಕರಣದ ತನಿಖೆ ನಡೆಸಿದ ಸಿಬಿಐ ಆರೋಪಿಸಿತ್ತು. ಐದೂ ಮಂದಿ ಆರೋಪಿಗಳು ಹಿಂದುತ್ವವಾದಿ ಸಂಘಟನೆಯಾದ ಸನಾತನ ಸಂಸ್ಥೆ ಜೊತೆ ನಂಟು ಹೊಂದಿದ್ದರು ಎಂದು ಸಿಬಿಐ ಹೇಳಿತ್ತು. ಆದರೆ, ಐದೂ ಮಂದಿಯ ಪೈಕಿ ಮೂವರ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ತನಿಖಾ ಸಂಸ್ಥೆಯು ವಿಫಲವಾಗಿದೆ. ನ್ಯಾಯಾಲಯವು ಸಿಬಿಐ ಕುರಿತು ಕೆಲವು ಕಟುವಾದ ಮಾತುಗಳನ್ನು ಆಡಿದೆ. ಮೂವರನ್ನು ಖುಲಾಸೆಗೊಳಿಸುತ್ತಿರುವುದು ಅವರು ಹತ್ಯೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂಬ ಕಾರಣಕ್ಕಾಗಿ ಅಲ್ಲ; ಬದಲಿಗೆ, ಪ್ರಕರಣದ ತನಿಖೆಯನ್ನು ನಡೆಸಿದ ಮಹಾರಾಷ್ಟ್ರ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಎಂದು ಕೋರ್ಟ್ ಹೇಳಿದೆ.
ಕೋರ್ಟ್‌ನ ಟೀಕೆಗಳು ಹಾಗೂ ಅದು ಹೇಳಿರುವ ಮಾತುಗಳು ಬಹಳ ಗಂಭೀರವಾದುವು. ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದ ಪ್ರಕರಣವೊಂದನ್ನು ಸರಿಯಾಗಿ ನಿಭಾಯಿಸದೇ ಇದ್ದುದನ್ನು ಆ ಮಾತುಗಳು ತೋರಿಸುತ್ತವೆ. ಹತ್ಯೆಯ ಹಿಂದೆ ಪಿತೂರಿ ಇತ್ತು, ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಪಿತೂರಿಯ ಆರೋಪ ಇತ್ತು ಎಂಬುದು ಕೋರ್ಟ್‌ಗೆ ಮನವರಿಕೆ ಆಗಿದೆ. ತಾವಡೆ ಅವರು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂಬುದಕ್ಕೆ ಆಧಾರ ಇದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಖುಲಾಸೆಗೊಂಡ ಇತರ ಇಬ್ಬರಾದ ಸಂಜೀವ್ ಪುನಾಲೆಕರ್ ಮತ್ತು ವಿಕ್ರಂ ಭವೆ// ವಿರುದ್ಧ ಸಕಾರಣಗಳ ಅನುಮಾನ ಇದೆ ಎಂದೂ ಅದು ಹೇಳಿದೆ. ಆದರೆ ಇವರಿಬ್ಬರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಕೂಡ ಪ್ರಾಸಿಕ್ಯೂಷನ್ ವಿಫಲವಾಯಿತು. ಆರೋಪಿಗಳ ಪರ ವಕೀಲರ ನಡೆಯ ಬಗ್ಗೆ ಕೋರ್ಟ್ ಮಹತ್ವದ ಕೆಲವು ಮಾತುಗಳನ್ನು ಹೇಳಿದೆ. ಆ ವಕೀಲರು ‘ದಾಭೋಲ್ಕರ್ ಅವರನ್ನು ಹಿಂದೂ ವಿರೋಧಿ ಎಂದು ಚಿತ್ರಿಸಿ, ಅವರ ಹತ್ಯೆಯನ್ನು ಸಮರ್ಥಿಸುವಂತೆ’ ನಡೆದುಕೊಂಡಿದ್ದರು ಎಂದು ಹೇಳಿದೆ. ದಾಭೋಲ್ಕರ್ ಅವರ ಹತ್ಯೆಯು ಅವರು ಪಾಲಿಸುತ್ತಿದ್ದ ಸಿದ್ಧಾಂತವನ್ನು ಅಂತ್ಯಗೊಳಿಸುವ ಒಂದು ಯತ್ನವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಈ ಕಾರಣಕ್ಕಾಗಿಯೇ ಇಡೀ ಪ್ರಕರಣವನ್ನು ಹಾಗೂ ಪ್ರಕರಣವನ್ನು ನಿಭಾಯಿಸಿದ ಬಗೆಯನ್ನು ವಿಸ್ತೃತ ನೆಲೆಯಲ್ಲಿ ನೋಡಬೇಕಾದ ಅಗತ್ಯ ಇದೆ.
ದಾಭೋಲ್ಕರ್ ಅವರು ವೈಜ್ಞಾನಿಕ ಮನೋಭಾವವನ್ನು ಪ್ರತಿಪಾದಿಸುತ್ತಿದ್ದರು. 2005ರಲ್ಲಿ ಮಹಾರಾಷ್ಟ್ರದಲ್ಲಿ ರೂಪುಗೊಂಡ ಅಂಧಶ್ರದ್ಧೆ ವಿರೋಧಿ ಮಸೂದೆಯ ಹಿಂದಿನ ಚಾಲಕ ಶಕ್ತಿಯೂ ಅವರಾಗಿದ್ದರು. ಈ ಮಸೂದೆಗೆ ಹಲವು ಬಲಪಂಥೀಯ ಸಂಘಟನೆಗಳು ವಿರೋಧ ದಾಖಲಿಸಿದ್ದವು. ದಾಭೋಲ್ಕರ್ ಹತ್ಯೆಯ ನಂತರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹಲವರ ಹತ್ಯೆಗಳು ನಡೆದವು. ಎಡಪಂಥೀಯ ಚಿಂತಕರಾದ ಗೋವಿಂದ ಪಾನ್ಸರೆ, ಸಂಶೋಧಕ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗಳು ಇಲ್ಲಿ ಪ್ರಮುಖವಾದುವು. ಈ ಎಲ್ಲ ಹತ್ಯೆಗಳಿಗೆ ಒಂದು ಸಂಬಂಧ ಇದೆ ಎಂಬುದು ನಂತರದಲ್ಲಿ ಹೆಚ್ಚೆಚ್ಚು ಸ್ಪಷ್ಟವಾಯಿತು. ಅಷ್ಟೇ ಅಲ್ಲ, ಈ ಪ್ರಕರಣಗಳ ತನಿಖೆಯ ಮೇಲೆ ರಾಜಕೀಯವು ಪ್ರಭಾವ ಬೀರಿತು ಎಂಬುದು ಕೂಡ ಸ್ಪಷ್ಟವಾಯಿತು. ದಾಭೋಲ್ಕರ್ ಅವರ ಹತ್ಯೆ ಆಗಿದ್ದು 2013ರಲ್ಲಿ. ಅವರ ಹತ್ಯೆಯ ಆರೋಪಿಗಳ ಬಂಧನ ಆಗಿದ್ದು 2018ರಲ್ಲಿ. ತನಿಖೆಯು ವೇಗವಾಗಿ ನಡೆಯುತ್ತಿಲ್ಲ, ತನಿಖೆಯು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಸೂಚನೆಗಳು ಆರಂಭದಿಂದಲೂ ಇದ್ದವು. ದಾಭೋಲ್ಕರ್ ಅವರ ಹತ್ಯೆಯ ನಂತರದಲ್ಲಿ ಇದ್ದ ರಾಜಕೀಯ ವಾತಾವರಣ ಕೂಡ ಹತ್ಯೆಯ ತನಿಖೆಯ ಮೇಲೆ, ಪ್ರಾಸಿಕ್ಯೂಷನ್ ಮೇಲೆ ಪ್ರಭಾವ ಉಂಟುಮಾಡಿರಬಹುದು. ಹತ್ಯೆಗಳ ಹಿಂದಿನ ಪಿತೂರಿಯು ಸಂಪೂರ್ಣವಾಗಿ ಬಹಿರಂಗವಾದ ನಂತರದಲ್ಲಿ, ಹತ್ಯೆಯಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾದ ನಂತರದಲ್ಲಿ ಮಾತ್ರವೇ ನ್ಯಾಯದಾನ ಸಂಪೂರ್ಣವಾಗಿ ಆಗಿದೆ ಎಂದು ಹೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.