ADVERTISEMENT

ಸಂಪಾದಕೀಯ: ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು

ಸಂಪಾದಕೀಯ
Published 15 ಜೂನ್ 2024, 0:18 IST
Last Updated 15 ಜೂನ್ 2024, 0:18 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಕುವೈತ್‌ನಲ್ಲಿ 45 ಭಾರತೀಯರ ಬದುಕು ಕೊನೆಗೊಳಿಸಿದ ಬೆಂಕಿ ಅವಘಡವು ಇತ್ತೀಚಿನ ವರ್ಷಗಳಲ್ಲಿ ದೇಶದ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಭಾರತೀಯರ ಸಾವಿಗೆ ಕಾರಣವಾದ ಗಂಭೀರ ದುರಂತವಾಗಿದೆ. ಅಪಾರ್ಟ್‌ಮೆಂಟ್‌ವೊಂದರಲ್ಲಿ ಉಂಟಾದ ಈ ಬೆಂಕಿ ಆಕಸ್ಮಿಕದಲ್ಲಿ ಸತ್ತವರ ಸಂಖ್ಯೆ 49. ಕಂಪನಿಯೊಂದು ಈ ಅಪಾರ್ಟ್‌ಮೆಂಟ್‌ ಅನ್ನು ತನ್ನ ಕಾರ್ಮಿಕರು ಮತ್ತು ಇತರ ಸಿಬ್ಬಂದಿಗಾಗಿ ಬಾಡಿಗೆಗೆ ಪಡೆದುಕೊಂಡಿತ್ತು. ಈ ಕಂಪನಿ ಕೂಡ ಭಾರತೀಯರೊಬ್ಬರಿಗೆ ಸೇರಿದ್ದಾಗಿದೆ. ಬೆಂಕಿ ದುರಂತದಲ್ಲಿ ಹಲವು ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಮತ್ತು ಗಾಯಗೊಂಡವರಿಗೆ ಸಂಬಂಧಿಸಿದ ಮಾಹಿತಿಯನ್ನು ತಕ್ಷಣವೇ ಕುಟುಂಬದ ಸದಸ್ಯರಿಗೆ ತಿಳಿಸುವ ದಿಸೆಯಲ್ಲಿ ಸರ್ಕಾರವು ತ್ವರಿತವಾಗಿ ಸ್ಪಂದಿಸಿದೆ. ಮೃತದೇಹಗಳನ್ನು ತಾಯ್ನಾಡಿಗೆ ತರಲಾಗಿದೆ.  ಬೆಂಕಿ ಅವಘಡದ ಸಂತ್ರಸ್ತರ ನೆರವು ಕಾರ್ಯಾಚರಣೆಯ ಉಸ್ತುವಾರಿಯನ್ನು ವಿದೇಶಾಂಗ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್‌ ಸಿಂಗ್‌ ಅವರು ವಹಿಸಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಕೇರಳ ಮತ್ತು ತಮಿಳುನಾಡಿನವರು. ಉತ್ತರ ಭಾರತದ ಕೆಲವು ರಾಜ್ಯಗಳವರೂ ಮೃತಪಟ್ಟಿದ್ದಾರೆ. ಈ ಎಲ್ಲ ರಾಜ್ಯಗಳು ತಮ್ಮವರ ನೆರವಿಗೆ ಧಾವಿಸಿವೆ. 

ಕೈಗಾರಿಕಾ ಪ್ರದೇಶ ಅಥವಾ ಹೆಚ್ಚು ಜನರು ನೆಲಸಿರುವ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಸಾವುನೋವು ಉಂಟುಮಾಡುವ ಇಂತಹ ದುರಂತಗಳು ನಡೆಯುತ್ತವೆ. ಕುವೈತ್‌ನ ಜನಸಂಖ್ಯೆಯಲ್ಲಿ
ಶೇಕಡ 20ರಷ್ಟು ಭಾರತೀಯರಿದ್ದಾರೆ. ಅಲ್ಲಿನ ಕಾರ್ಮಿಕ ಬಲದಲ್ಲಿ ಭಾರತೀಯರ ಪ್ರಮಾಣ ಸುಮಾರು ಶೇ 30ರಷ್ಟು. ಹಾಗಾಗಿಯೇ ದುರಂತದಲ್ಲಿ ಮೃತಪಟ್ಟವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚು ಇದೆ. ವಿದೇಶಗಳಲ್ಲಿ ಭಾರತೀಯರ ಜೀವನ ಸ್ಥಿತಿಗತಿ ಹಾಗೂ ಅವರು ಎದುರಿಸುವ ಅಪಾಯಗಳ ಕುರಿತು ಈ ದುರಂತವು ಗಮನಹರಿಸುವಂತೆ ಮಾಡಿದೆ. ವಿಶೇಷವಾಗಿ, ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿರುವ ಮತ್ತು ಕೆಲಸ ಮಾಡುತ್ತಿರುವ ಮಧ್ಯಪ್ರಾಚ್ಯದ ದೇಶಗಳ ಕಡೆಗೆ ಗಮನಹರಿಸಬೇಕಾಗಿದೆ. ಕುವೈತ್‌ನಲ್ಲಿ ಇತ್ತೀಚಿನ ಎರಡು ವರ್ಷಗಳಲ್ಲಿ 1,400ಕ್ಕೂ ಹೆಚ್ಚು ಭಾರತೀಯರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. ಇವರಲ್ಲಿ ಎಲ್ಲರೂ ಅವಘಡಗಳಲ್ಲಿ ಮೃತಪಟ್ಟಿಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಭಾರತೀಯರು ನೀಡಿದ ಸಾವಿರಾರು ದೂರುಗಳಿವೆ. ಕಾನೂನುಗಳನ್ನು ಉಲ್ಲಂಘಿಸಿ ಅಸುರಕ್ಷಿತ ಸ್ಥಿತಿಯಲ್ಲಿ ಬದುಕುವುದು ಅಂತಹ ಸಮಸ್ಯೆಗಳಲ್ಲಿ ಒಂದು. ಕತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್‌ ಪಂದ್ಯಾವಳಿಗಾಗಿ ಮೂಲಸೌಕರ್ಯ ನಿರ್ಮಾಣ ಸಂದರ್ಭದಲ್ಲಿ ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿ
ಕೊಳ್ಳಲಾಗಿದೆ ಮತ್ತು ಮಾನವ ಹಕ್ಕುಗಳನ್ನು ವ್ಯಾಪಕವಾಗಿ ಉಲ್ಲಂಘಿಸಲಾಗಿದೆ ಎಂಬ ದೂರುಗಳು ಇವೆ. ಕೆಲವು ಸಮಸ್ಯೆಗಳತ್ತ ಈಗಲೂ ಗಮನಹರಿಸಿಲ್ಲ.

ADVERTISEMENT

ಬೇರೆ ದೇಶಗಳಲ್ಲಿ ಇರುವ ಭಾರತೀಯರ ಕುರಿತು ಭಾರತ ಸರ್ಕಾರ ಮತ್ತು ಆ ದೇಶಗಳಲ್ಲಿ ಇರುವ ಭಾರತದ ರಾಯಭಾರ ಕಚೇರಿಗಳು ಹೆಚ್ಚಿನ ನಿಗಾ ವಹಿಸಬೇಕಿದೆ. ಕೆಲವು ದೇಶಗಳಲ್ಲಿ, ಕಾರ್ಮಿಕರ ಮಾನವ ಹಕ್ಕುಗಳ ರಕ್ಷಣೆ ಮತ್ತು ಅವರ ಅಗತ್ಯಗಳ ಪೂರೈಕೆಗೆ ಸಂಬಂಧಿಸಿ ಸಮಂಜಸವಾದ ಕಾನೂನುಗಳು ಇಲ್ಲ. ಕೆಲವು ದೇಶಗಳಲ್ಲಿ ಕಾನೂನುಗಳ ಅನುಷ್ಠಾನ ಪರಿಣಾಮಕಾರಿಯಾಗಿ ಇಲ್ಲ. ವಿದೇಶಗಳಲ್ಲಿ ಇರುವ ಭಾರತೀಯ ಕಾರ್ಮಿಕರ ಜೀವ ಮತ್ತು ಸೊತ್ತುಗಳು ಅಪಾಯಕ್ಕೆ ಒಳಗಾಗದಂತೆ ರಕ್ಷಿಸಲು ಅಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಕೆಲಸ ಮಾಡಬೇಕಿದೆ. ಭಾರತದಲ್ಲಿ ಜನಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಾಗೆಯೇ ಕೆಲಸದ ಬೇಡಿಕೆಯೂ ಹೆಚ್ಚುತ್ತಿದೆ. ಇತರ ಹಲವು ದೇಶಗಳಲ್ಲಿ ಜನಸಂಖ್ಯೆ ಮತ್ತು ಕಾರ್ಮಿಕ ಬಲವು ಕುಸಿತದ ಹಾದಿಯಲ್ಲಿದೆ. ಹಾಗಾಗಿ, ಭಾರತೀಯರು ಕೆಲಸ ಮತ್ತು ಕೆಲಸಕ್ಕೆ ಸಂಬಂಧಿಸಿದ ಅಗತ್ಯಗಳಿಗಾಗಿ ವಿವಿಧ ದೇಶಗಳಿಗೆ ಹೋಗುವುದು ಹೆಚ್ಚುತ್ತಲೇ ಇದೆ. ಹೀಗೆ ಬೇರೆ ದೇಶಗಳಿಗೆ ಹೋದ ಭಾರತೀಯರಿಗೆ ರಕ್ಷಣೆ ಒದಗಿಸಬೇಕಾದುದು ಭಾರತ ಸರ್ಕಾರದ ಹೊಣೆಗಾರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.