ADVERTISEMENT

ಸಂಪಾದಕೀಯ | ಕೆಎಸ್‌ಪಿಸಿಬಿ: ನೇಮಕಾತಿಯಲ್ಲಿನ ‘ಮಾಲಿನ್ಯ’ ಮೊದಲು ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:57 IST
Last Updated 24 ನವೆಂಬರ್ 2021, 20:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪರಿಸರ ಮಾಲಿನ್ಯಕ್ಕೆ ಕಾರಣವಾದ ಆರೋಪ ಹೊತ್ತಿರುವ ಕೆಲವು ಕಂಪನಿಗಳಿಗೆ ಸಲಹೆಗಾರರಾಗಿದ್ದ ಡಾ. ಶಾಂತ್‌ ಅವ್ವೇರಹಳ್ಳಿ ತಿಮ್ಮಯ್ಯ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಆಶ್ಚರ್ಯಕರ. ಸರ್ಕಾರದ ಉದ್ದೇಶದ ಕುರಿತೇ ಸಂಶಯವನ್ನು ಮೂಡಿಸುವಂತಹ ನಡೆ ಇದು.

ಮಾಲಿನ್ಯಕಾರಕ ಉದ್ಯಮಗಳೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೆಎಸ್‌ಪಿಸಿಬಿ ಮುಖ್ಯಸ್ಥರ ಸ್ಥಾನದಲ್ಲಿ ಕೂರಿಸುವ ಮೂಲಕ ಪರಿಸರ ಸಂರಕ್ಷಣೆಯ ವಿಷಯದಲ್ಲಿ ತಮಗೆ ಒಂದಿನಿತೂ ಆಸಕ್ತಿಯಿಲ್ಲ ಎಂಬ ಸಂದೇಶವನ್ನೂ ಆಡಳಿತದ ಹೊಣೆ ಹೊತ್ತವರು ರವಾನಿಸಿದಂತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲೂ ಹಿತಾಸಕ್ತಿ ಸಂಘರ್ಷದ ಅಪಾಯವನ್ನು ಅಲಕ್ಷಿಸಿ, ಕೈಗಾರಿಕೆ ಮತ್ತು ಪರಿಸರ ಖಾತೆ ಎರಡಕ್ಕೂ ಒಬ್ಬರೇ ಸಚಿವರನ್ನು ನೇಮಕ ಮಾಡಲಾಗಿತ್ತು.

ಅದು ಸಾಲದು ಎನ್ನುವಂತೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳಲು ವಾರ್ತಾ ಮತ್ತು ಪ್ರಸಾರ ಖಾತೆಯನ್ನೂ ಅದೇ ವ್ಯಕ್ತಿಗೆ ವಹಿಸಿಕೊಡಲಾಗಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವೂ ಹಿತಾಸಕ್ತಿ ಸಂಘರ್ಷದ ವಿಷಯದಲ್ಲಿ ಕೇಂದ್ರದದಾರಿಯನ್ನೇ ಅನುಸರಿಸಿದೆ. ಡಾ. ಶಾಂತ್‌ ಅವರೇ ಸಲಹೆಗಾರರಾಗಿದ್ದ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಯೋಜನೆಯೊಂದಕ್ಕೆ ಪರಿಸರ ಇಲಾಖೆಯು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇತ್ತೀಚೆಗೆ ರದ್ದುಮಾಡಿದೆ. ಕೈಕೊಂಡ್ರಹಳ್ಳಿ ಮತ್ತು ಕಸವನಹಳ್ಳಿ ಕೆರೆಗಳಿಗೆ ಹಾನಿಯುಂಟುಮಾಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಹಿತಾಸಕ್ತಿ ಸಂಘರ್ಷದ ಕಾರಣಕ್ಕಾಗಿ ಅಧ್ಯಕ್ಷರ ಹುದ್ದೆಗೆ ಅವರ ಹೆಸರನ್ನು ಪರಿಗಣಿಸದಿರಲು ಇದಕ್ಕಿಂತ ಬೇರೆ ಯಾವ ಕಾರಣ ಬೇಕಿತ್ತು? ಅದಾನಿ, ಗೋದ್ರೇಜ್‌, ವೇದಾಂತ ಸೇರಿದಂತೆ ಹಲವು ಬೃಹತ್‌ ಕಂಪನಿಗಳ ಸಲಹೆಗಾರರಾಗಿ, ಕೇಂದ್ರ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ತರಲು ನೆರವಾಗಿರುವುದು ಕೆಎಸ್‌ಪಿಸಿಬಿ ಮುಖ್ಯಸ್ಥರ ಹುದ್ದೆಗೇರಲು ಖಂಡಿತವಾಗಿಯೂ ಅರ್ಹತೆಯನ್ನು ತಂದುಕೊಡಲಾರದು.

ಮಾಲಿನ್ಯ ನಿಯಂತ್ರಣ ಮಂಡಳಿಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವುಗಳು ರಾಜಕಾರಣಿಗಳ ಅಧೀನಕ್ಕೆ ಒಳಪಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌, ಬಹಳ ಹಿಂದೆಯೇ ತುಂಬಾ ಸ್ಪಷ್ಟವಾಗಿ ಹೇಳಿದೆ. ಕೆಎಸ್‌ಪಿಸಿಬಿಯ ಅಧ್ಯಕ್ಷರಾಗುವವರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಅನುಭವ ಹೊಂದಿದವರಾಗಿರಬೇಕು ಇಲ್ಲವೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಿದ ಅನುಭವವುಳ್ಳ ಸರ್ಕಾರಿ ಅಧಿಕಾರಿಯಾಗಿರಬೇಕು ಎಂದು ರಾಜ್ಯ ಹೈಕೋರ್ಟ್‌ ಸಹ ಹೇಳಿದೆ. ಪರಿಸರ ಸಂರಕ್ಷಣೆ ಕಾರ್ಯದಲ್ಲಿ 15 ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿದವರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಬಹುದು ಎಂದು ಕೇಂದ್ರ ಪರಿಸರ ಇಲಾಖೆಯ ಮಾರ್ಗಸೂಚಿ ಹೇಳುತ್ತದೆ.

ಮೇಲಿನ ಯಾವುದೇ ಮಾನದಂಡದಿಂದ ನೋಡಿದರೂ ಡಾ.ಶಾಂತ್‌ ಅವರು ಕೆಎಸ್‌ಪಿಸಿಬಿ ಅಧ್ಯಕ್ಷರ ಹುದ್ದೆಗೆ ಸೂಕ್ತ ವ್ಯಕ್ತಿಯಲ್ಲ ಎನ್ನುವುದು ಎದ್ದು ಕಾಣುವ ಅಂಶ. ವಿಪರ್ಯಾಸದ ಸಂಗತಿ ಎಂದರೆ, ಮಾಲಿನ್ಯಕಾರಕ ಕಂಪನಿಗಳ ಪರವಾಗಿ ಈ ಹಿಂದೆ ವರದಿ ಬರೆದಿದ್ದ ವ್ಯಕ್ತಿಯೇ ಈಗ ತೀರ್ಪು ನೀಡುವ ಜಾಗದಲ್ಲಿ ಕುಳಿತಿರುವುದು. ‘ಖಾಸಗಿ ಕಂಪನಿಗಳಿಗಾಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಆ ಕಂಪನಿಗಳ ಯೋಜನೆಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸುತ್ತಾರೆ ಎಂದು ಹೇಳುವುದು ಕಷ್ಟ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ಕೋಟ್ಯಂತರ ರೂಪಾಯಿ ದಂಡ ಹಾಕಿಸಿಕೊಂಡ ಮಾಲಿನ್ಯಕಾರಕ ಉದ್ಯಮಗಳೊಂದಿಗೇ ಸಂಬಂಧ ಹೊಂದಿದ್ದ ವ್ಯಕ್ತಿ ರಾಜ್ಯದ ಪರಿಸರದ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳಲಿದ್ದಾರೆ ಎಂಬುದನ್ನು ಹೇಗೆತಾನೆ ನಂಬುವುದು’ ಎನ್ನುವ ಪರಿಸರವಾದಿಗಳ ಪ್ರಶ್ನೆ ಸಮಂಜಸವೇ ಆಗಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷರ ಹುದ್ದೆಗೆ ಮಾಡಲಾಗಿರುವ ಇತ್ತೀಚಿನ ಬಹುತೇಕ ನೇಮಕಗಳು ವಿವಾದದ ರಾಡಿ ಎಬ್ಬಿಸಿವೆ. ಕೆಲವೊಮ್ಮೆ ರಾಜಕಾರಣಿಗಳು, ಇನ್ನು ಕೆಲವೊಮ್ಮೆ ಬಿಲ್ಡರ್‌ಗಳು ಆ ಹುದ್ದೆಗೆ ಏರಿದ್ದಾರೆ. ಅದರಲ್ಲೂ ಅಧ್ಯಕ್ಷರಾಗಿದ್ದ ಒಬ್ಬರು ತಾವು ಆಗಿನ ಮುಖ್ಯಮಂತ್ರಿಯವರ ಸಂಬಂಧಿಕರಿಗೆ ₹ 16 ಕೋಟಿ ಲಂಚ ಕೊಡಲಾಗದ ಕಾರಣಕ್ಕೆ ತಮ್ಮ ಸಹಿಯನ್ನು ಫೋರ್ಜರಿ ಮಾಡಿ ರಾಜೀನಾಮೆ ಪತ್ರ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದರು. ಪರಿಸರ ಸಂರಕ್ಷಣೆಯಂತಹ ವಿಷಯದಲ್ಲಿ, ಮಹತ್ವದ ಹುದ್ದೆಗೆ ನೇಮಕ ಮಾಡುವಲ್ಲಿ ಆಡಳಿತ ವ್ಯವಸ್ಥೆ ಇಷ್ಟೊಂದು ಅಸೂಕ್ಷ್ಮವಾಗಿ ನಡೆದುಕೊಳ್ಳುವುದು ಸರ್ವಥಾ ಸರಿಯಲ್ಲ. ಸನ್ನಿವೇಶದ ಗಾಂಭೀರ್ಯ ಅರಿತು, ಪರಿಸರವಾದಿಗಳ ಆತಂಕವನ್ನು ಅರ್ಥಮಾಡಿಕೊಂಡು ಸದರಿ ನೇಮಕವನ್ನು ರಾಜ್ಯ ಸರ್ಕಾರ ರದ್ದುಗೊಳಿಸಬೇಕು. ಕೋರ್ಟ್‌ಗಳ ಮಾರ್ಗದರ್ಶನ ಹಾಗೂ ಪರಿಸರ ಇಲಾಖೆಯ ಮಾರ್ಗಸೂಚಿ ಅನ್ವಯ ಅರ್ಹ ವ್ಯಕ್ತಿಯನ್ನೇ ಆ ಹುದ್ದೆಗೆ ನೇಮಕ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.