ಚಲಾವಣೆಯಾದ ಒಟ್ಟು ಮತಗಳಲ್ಲಿ ‘ನೋಟಾ’ (ಮತ ಯಾರಿಗೂ ಇಲ್ಲ) ಸಂಖ್ಯೆ ಹೆಚ್ಚಿದ್ದ ಕ್ಷೇತ್ರಗಳಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಕೋರಿಕೆ ಇರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿರುವುದು ಸ್ವಾಗತಾರ್ಹ ನಡೆ. ನೋಟಾ ಮತಗಳ ಸಂಖ್ಯೆಯು ಯಾವುದೇ ಅಭ್ಯರ್ಥಿಗೆ ಸಿಗುವ ಮತಗಳ ಸಂಖ್ಯೆಗಿಂತ ಹೆಚ್ಚಾಗುವ ಸಾಧ್ಯತೆ ಇದ್ದಿರಬಹುದು, ಇಲ್ಲದಿರಲೂಬಹುದು. ಆದರೆ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು ಎದುರಾಳಿಗಳೇ ಇಲ್ಲದೆ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ನೋಟಾ ಕುರಿತ ಅರ್ಜಿಯು ಮಹತ್ವದ್ದಾಗು ತ್ತದೆ. ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಿ ನೋಟಾ ಆಯ್ಕೆಗೆ ಮತದಾರರಿಗೆ ಅವಕಾಶ ಕಲ್ಪಿಸಿದ್ದರೆ, ಮತದಾರರ ನಿಜವಾದ ಒಲವು ಏನು ಎಂಬುದು ಗೊತ್ತಾಗುತ್ತಿತ್ತು ಎಂದು ಕೋರ್ಟ್‌ಗೆ ವಿವರಿಸಲಾಗಿದೆ. ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದ ಮತಗಳಿಗೆ ಎಷ್ಟು ಮೌಲ್ಯ ಇದೆಯೋ ನೋಟಾ ಮತಕ್ಕೂ ಅಷ್ಟೇ ಮೌಲ್ಯ ಇದೆ. ಯಾವುದೇ ಕ್ಷೇತ್ರದಲ್ಲಿ ಮತದಾರರಿಗೆ ಅವರ ಮತ ಚಲಾಯಿಸುವ ಅವಕಾಶವನ್ನು ನಿರಾಕರಿಸಬಾರದು. ಕ್ಷೇತ್ರವೊಂದರಲ್ಲಿ ಒಬ್ಬನೇ ಅಭ್ಯರ್ಥಿ ಕಣದಲ್ಲಿ ಇದ್ದಾಗಲೂ ಆ ಅಭ್ಯರ್ಥಿಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸುವ ಅವಕಾಶವನ್ನು ಮತದಾರರಿಗೆ ನೀಡಬೇಕು. ಈ ಹಿನ್ನೆಲೆಯಲ್ಲಿ, ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸದೆಯೇ ಅಭ್ಯರ್ಥಿ
ಒಬ್ಬರನ್ನು ಜಯಶಾಲಿ ಎಂದು ಘೋಷಿಸುವುದು ತಪ್ಪಾಗುತ್ತದೆ.
ನೋಟಾ ಮತಗಳಿಗೆ ಸಂಬಂಧಿಸಿದಂತೆ, ಆ ಮತಗಳು ಇತರ ಅಭ್ಯರ್ಥಿಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಉಂಟುಮಾಡಬೇಕು ಎಂಬ ಬಗ್ಗೆ ನಿಯಮಗಳನ್ನು ಕೋರ್ಟ್ ರೂಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಮತದಾರರ ಸಬಲೀಕರಣದ ಉದ್ದೇಶದಿಂದ 2013ರಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಆಧರಿಸಿ ನೋಟಾ ಆಯ್ಕೆಯನ್ನು ಜಾರಿಗೆ ತರಲಾಯಿತು. ಕಣದಲ್ಲಿ ಇರುವ ಯಾವ ಅಭ್ಯರ್ಥಿಯೂ ಸೂಕ್ತ ಅಲ್ಲ ಎಂದು ಹೇಳಲು ಮತದಾರರಿಗೆ ಇದು ಈಗ ಸಾಂಕೇತಿಕ ಅಸ್ತ್ರದ ಮಾದರಿಯಲ್ಲಿ ಮಾತ್ರ ಬಳಕೆಗೆ ಲಭ್ಯವಿದೆ. ಚುನಾವಣಾ ಪ್ರಕ್ರಿಯೆಯ ಮೇಲೆ ಇದು ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ. ನೋಟಾವನ್ನು ಕಾಲ್ಪನಿಕ ಅಭ್ಯರ್ಥಿ ಎಂದು ಗುರುತಿಸಿ, ಆ ಅಭ್ಯರ್ಥಿಯು (ಅಂದರೆ, ನೋಟಾ ಮತಗಳು) ಇತರ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದಲ್ಲಿ, ಆ ಕ್ಷೇತ್ರದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ರಾಜ್ಯ ಚುನಾವಣಾ ಆಯೋಗಗಳು ಅಧಿಸೂಚನೆ ಹೊರಡಿಸಿವೆ. ಇದೇ ಬಗೆಯ ನಿಯಮಗಳು ಕೆಲವು ದೇಶಗಳಲ್ಲಿಯೂ ಜಾರಿಯಲ್ಲಿ ಇವೆ. ಹೀಗಾಗಿ, ಈ ನಿಯಮಗಳನ್ನು ಇತರ ರಾಜ್ಯಗಳಿಗೂ ವಿಸ್ತರಿಸಬೇಕು, ರಾಷ್ಟ್ರಮಟ್ಟದಲ್ಲಿಯೂ ಇವನ್ನು ಅನ್ವಯಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ನೋಟಾಗಿಂತ ಕಡಿಮೆ ಸಂಖ್ಯೆಯಲ್ಲಿ ಮತಗಳನ್ನು ಪಡೆಯುವ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸುವುದು ನೋಟಾ ಉದ್ದೇಶವನ್ನೇ ನಿರರ್ಥಕಗೊಳಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ನೋಟಾ ಆಯ್ಕೆಯನ್ನು ನೀಡಿದ ನಂತರದಲ್ಲಿ, ಆ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗು
ತ್ತದೆ. ಈಗ ನೋಟಾ ಮತಗಳನ್ನು, ಅದಕ್ಕಿಂತ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಯನ್ನು ಹಾಸ್ಯಮಾಡಲು ಮಾತ್ರ ಉಲ್ಲೇಖಿಸಲಾಗುತ್ತಿದೆ. ಯಾರಿಗೂ ಮತ ಇಲ್ಲ ಎಂಬ ಆಯ್ಕೆಯನ್ನು ನೀಡಿದ ನಂತರದಲ್ಲಿ, ಅದು ಹೇಗೆ ಕೆಲಸ ಮಾಡಬೇಕು ಎಂಬ ವಿಚಾರವಾಗಿಯೂ ಒಂದಿಷ್ಟು ನಿಯಮಗಳು ಇರುವುದು ಒಳಿತು. ನೋಟಾ ಆಯ್ಕೆಯ ಕಾರಣದಿಂದಾಗಿ ಮತದಾನದ ಪ್ರಮಾಣವೇನೂ ಹೆಚ್ಚಳ ಕಂಡಿಲ್ಲ; ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೇಲೆಯೂ ಅದು ಪರಿಣಾಮ ಬೀರಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನೋಟಾ ಆಯ್ಕೆಯು ಇನ್ನಷ್ಟು ಹೆಚ್ಚು ಉತ್ತಮವಾಗಿ ಬಳಕೆಯಾಗುವಂತೆ ಮಾಡಲು ಚುನಾವಣಾ ಆಯೋಗವು ದಾರಿ ಹುಡುಕಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇಕಡ 1ರಷ್ಟು ಮತಗಳನ್ನು ನೋಟಾ ಪಡೆದಿತ್ತು. ಶೇ 1ಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವ ರಾಜಕೀಯ ಪಕ್ಷಗಳೂ ಇವೆ. ನೋಟಾ ಎಂಬುದು ಮತದಾರರಿಗೆ ಒಂದು ಪರಿಣಾಮಕಾರಿ ಅಸ್ತ್ರವಾಗುವಂತೆ ಆಯೋಗವು ನಿಯಮ ರೂಪಿಸಬೇಕು. ಅಂತಹ ನಿಯಮಗಳು ರೂಪ ಪಡೆಯುವುದಕ್ಕೆ ಸುಪ್ರೀಂ ಕೋರ್ಟ್ ಒತ್ತಾಸೆಯಾಗಿ ನಿಲ್ಲಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.