ADVERTISEMENT

ಸಂಪಾದಕೀಯ | ಬಾಲ್ಯವಿವಾಹಕ್ಕೆ ಕೊನೆ; ಕಾನೂನಿನ ಆಚೆ ಪರಿಹಾರ ಇದೆ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಬಲೀಕರಣ ಸಾಧ್ಯವಾಗಿಸುವುದು ಮತ್ತು ಅವರ ಸ್ವಾವಲಂಬನೆಯು ಈ ಸಮಸ್ಯೆಯನ್ನು ಕೊನೆಗಾಣಿಸಬಲ್ಲದು

ಸಂಪಾದಕೀಯ
Published 22 ಅಕ್ಟೋಬರ್ 2024, 0:16 IST
Last Updated 22 ಅಕ್ಟೋಬರ್ 2024, 0:16 IST
   

ಬಾಲ್ಯವಿವಾಹ ಕುರಿತು ಸುಪ್ರೀಂ ಕೋರ್ಟ್‌ ಈಚೆಗೆ ಆಡಿರುವ ಕೆಲವು ಮಾತುಗಳು ಹಾಗೂ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ – 2006’ಕ್ಕೆ (ಪಿಸಿಎಂಎ) ಇನ್ನಷ್ಟು ಬಲ ನೀಡುವ ಉದ್ದೇಶದಿಂದ ನೀಡಿರುವ ಕೆಲವು ನಿರ್ದೇಶನಗಳು, ದೇಶದ ಬಹುತೇಕ ಕಡೆಗಳಲ್ಲಿ ಬಾಲ್ಯವಿವಾಹವು ಮುಂದುವರಿದಿರುವುದನ್ನು ಹಾಗೂ ಈ ವಿಚಾರವಾಗಿ ಕೋರ್ಟ್‌ ಹೊಂದಿರುವ ಕಳವಳವನ್ನು ಧ್ವನಿಸುತ್ತಿವೆ. ಇಂತಹ ಆಚರಣೆಗಳನ್ನು ಇಲ್ಲವಾಗಿಸುವ ಉದ್ದೇಶದಿಂದ ರೂಪಿಸಿದ ಕಾನೂನುಗಳ ಅನುಷ್ಠಾನವು ಸಮರ್ಪಕವಾಗಿ ಆಗುತ್ತಿಲ್ಲ ಎಂಬುದನ್ನೂ ಈ ಮಾತುಗಳು ಹೇಳುತ್ತಿವೆ. ಬಾಲ್ಯವಿವಾಹವು ಬಾಲಕಿಯರ ಮೇಲೂ ಬಾಲಕರ ಮೇಲೂ ಕೆಟ್ಟ ಪರಿಣಾಮ ಬೀರಿದೆ ಎಂಬುದನ್ನು ಕೋರ್ಟ್ ಹೇಳಿದೆ.

‘ಬಾಲ್ಯದಲ್ಲೇ ಮದುವೆ ಮಾಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ, ಸಾಮಾಜಿಕವಾಗಿಯೂ ಏಕಾಂಗಿಯಾಗುತ್ತಾರೆ... ಬಾಲ್ಯದಲ್ಲಿ ಮದುವೆ ಆಗುವ ಗಂಡುಮಕ್ಕಳು ಹೆಚ್ಚಿನ ಜವಾಬ್ದಾರಿಯನ್ನು ಒತ್ತಾಯಪೂರ್ವಕವಾಗಿ ಹೊರಬೇಕಾಗುತ್ತದೆ...’ ಎಂದು ಕೋರ್ಟ್ ಹೇಳಿದೆ. ಬಾಲ್ಯವಿವಾಹವು ಮಕ್ಕಳ ಸ್ವಾಯತ್ತೆ, ಪೂರ್ಣವಾಗಿ ವಿಕಾಸಗೊಳ್ಳುವ ಹಕ್ಕು ಮತ್ತು ಬಾಲ್ಯವನ್ನು ಆನಂದಿಸುವ ಹಕ್ಕನ್ನು ಕಿತ್ತುಕೊಳ್ಳುತ್ತದೆ ಎಂದು ಕೋರ್ಟ್ ಹೇಳಿದೆ. ಜಿಲ್ಲಾ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಬೇಕು, ಬಾಲ್ಯವಿವಾಹ ತಡೆಯಲು ವಿಶೇಷವಾದ ಪೊಲೀಸ್ ಘಟಕಗಳನ್ನು ಬಳಸಿಕೊಳ್ಳಬೇಕು, ಮ್ಯಾಜಿಸ್ಟ್ರೇಟರ ಕೈ ಬಲಪಡಿಸಬೇಕು, ಪ್ರಕರಣಗಳ ವಿಚಾರಣೆಗೆ ವಿಶೇಷವಾದ ತ್ವರಿತಗತಿ ನ್ಯಾಯಾಲಯ ಆರಂಭಿಸಬೇಕು ಎಂಬ ನಿರ್ದೇಶನಗಳನ್ನು ಕೋರ್ಟ್ ನೀಡಿದೆ.

ಬಾಲ್ಯವಿವಾಹ ನಿಷೇಧ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು, ಬಾಲ್ಯವಿವಾಹಕ್ಕೆ ಸಂಬಂಧಿಸಿದ ನಿಶ್ಚಿತಾರ್ಥವನ್ನೂ ನಿಷೇಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಂಸತ್ತಿಗೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ. ಈ ಕಾಯ್ದೆಯ ಅಡಿಯಲ್ಲಿ ದಂಡವನ್ನು ತಪ್ಪಿಸಿಕೊಳ್ಳಲು ನಿಶ್ಚಿತಾರ್ಥವನ್ನು ಬಳಸಿಕೊಳ್ಳ
ಲಾಗುತ್ತಿದೆ. ‘ನಿಶ್ಚಿತಾರ್ಥವಾದ ಮಗು, ಬಾಲ ನ್ಯಾಯ ಕಾಯ್ದೆಯ ಅಡಿಯಲ್ಲಿ ಆರೈಕೆ ಹಾಗೂ ರಕ್ಷಣೆಯ ಅಗತ್ಯವಿರುವ ಮಗು ಆಗಿರಬಹುದು. ಆದರೆ, ಈ ಪದ್ಧತಿಯನ್ನು ನಿರ್ಮೂಲಗೊಳಿಸಲು ನಿರ್ದಿಷ್ಟವಾದ ಕ್ರಮಗಳ ಅಗತ್ಯ ಇದೆ’ ಎಂದು ಕೋರ್ಟ್ ಹೇಳಿದೆ. ಈ ಕಾಯ್ದೆಯು ಬಾಲ್ಯವಿವಾಹವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುತ್ತದೆ.

ADVERTISEMENT

21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡುಮಕ್ಕಳನ್ನು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಈ ಕಾಯ್ದೆಯು ಬಾಲಕ, ಬಾಲಕಿಯರು ಎಂದು ಪರಿಗಣಿಸುತ್ತದೆ. ವೈಯಕ್ತಿಕ ಕಾನೂನುಗಳು ಹಾಗೂ ಪಿಸಿಎಂಎ ನಡುವಿನ ಸಂಬಂಧದ ಬಗ್ಗೆಯೂ ಕೋರ್ಟ್ ಪರಿಶೀಲನೆ ನಡೆಸಿದೆ. ವೈಯಕ್ತಿಕ ಕಾನೂನುಗಳಿಗಿಂತ ಪಿಸಿಎಂಎ ಮಿಗಿಲು ಎಂದು ಸಾರಬೇಕು ಎಂಬ ಕೋರಿಕೆಯು ಕೇಂದ್ರ ಸರ್ಕಾರದ ಕಡೆಯಿಂದ ಬಂದಿದೆ ಎಂದು ಕೋರ್ಟ್ ಹೇಳಿದೆ. ಆದರೆ, ಬಾಲ್ಯವಿವಾಹ ನಿಷೇಧ ಕಾಯ್ದೆಯು ವೈಯಕ್ತಿಕ ಕಾನೂನುಗಳಿಗಿಂತ ಮಿಗಿಲು ಎಂದು ಹೇಳುವ ತಿದ್ದುಪಡಿ ಮಸೂದೆಯೊಂದು 2021ರಲ್ಲಿಯೇ ಸಂಸತ್ತಿನಲ್ಲಿ ಮಂಡನೆ ಆಗಿದ್ದರೂ ಸ್ಥಾಯಿ ಸಮಿತಿಯೊಂದರ ಪರಿಶೀಲನೆಗೆ ವರ್ಗಾವಣೆಯಾದ ಅದು ಇನ್ನೂ ಅಂಗೀಕಾರ ಪಡೆದಿಲ್ಲ ಎಂಬ ಸಂಗತಿಯನ್ನು ಕೋರ್ಟ್ ಹೇಳಿದೆ.

ತ್ರಿವಳಿ ತಲಾಖ್ ನಿಷೇಧ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಗಮನ ಮುಂತಾದ ಕ್ರಮಗಳ ಮೂಲಕ ಕೇಂದ್ರ ಸರ್ಕಾರವು ವೈಯಕ್ತಿಕ ಕಾನೂನುಗಳು ಎಲ್ಲ ಕಾನೂನುಗಳಿಗಿಂತ ಮಿಗಿಲಲ್ಲ ಎಂಬ ಸಂದೇಶ ರವಾನಿಸಲು ಯತ್ನಿಸುತ್ತಿದೆ. ಆದರೆ, ಹಾಗೆ ಮಾಡುವುದಕ್ಕೆ ಸಂಬಂಧಿಸಿದ ಮಸೂದೆಯೊಂದರ ವಿಚಾರದಲ್ಲಿ ಕೇಂದ್ರ ಸರ್ಕಾರವು ಹೆಚ್ಚಿನ ಆಸ್ಥೆ ತೋರಿಸಿಲ್ಲ ಎಂಬುದನ್ನು ಕೋರ್ಟ್‌ ಬೊಟ್ಟುಮಾಡಿದೆ.

ಬಾಲ್ಯವಿವಾಹವು ಯಾವುದೋ ಒಂದು ಧರ್ಮಕ್ಕೆ ಅಥವಾ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳಲ್ಲಿಯೂ ಇದು ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಸರ್ಕಾರಗಳು ಕಾನೂನಿನ ಜಾರಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿಚಾರದಲ್ಲಿ ಕೋರ್ಟ್‌ಗಳು ನಿರ್ದೇಶನಗಳನ್ನು ಮಾತ್ರ ನೀಡಬಹುದು. ಆದರೆ, ಈ ಸಮಸ್ಯೆಗೆ ನಿಜವಾದ ಪರಿಹಾರ ಇರುವುದು ಕಾನೂನಿನ ಪರಿಧಿಯ ಆಚೆಗೆ. ಸಾಮಾಜಿಕವಾಗಿ ಹಿಂದುಳಿದಿರುವಿಕೆ, ಬಡತನ ಮತ್ತು ಶಿಕ್ಷಣದ ಕೊರತೆಯು ಬಾಲ್ಯವಿವಾಹಕ್ಕೆ ನಿಜವಾದ ಕಾರಣಗಳು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಬಲೀಕರಣ ಸಾಧ್ಯವಾಗಿಸುವುದು ಮತ್ತು ಅವರ ಸ್ವಾವಲಂಬನೆಯು ಈ ಸಮಸ್ಯೆಯನ್ನು ಕೊನೆಗಾಣಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.