ADVERTISEMENT

ಕೆರೆ ಕೋಡಿ ಒಡೆದು ಅನಾಹುತ: ಆಡಳಿತ ವ್ಯವಸ್ಥೆಗೆ ಪಾಠವಾಗಲಿ

ಬೆಂಗಳೂರಿನಲ್ಲಿ ಇನ್ನಷ್ಟು ಕೆರೆಗಳ ಕೋಡಿ ಒಡೆಯದಂತೆ ಸಮರ್ಪಕವಾಗಿ ಅವುಗಳನ್ನು ನಿರ್ವಹಣೆ ಮಾಡಬೇಕು. ನೀರಿನ ಸಮಗ್ರ ನಿರ್ವಹಣೆಗೆ ವೈಜ್ಞಾನಿಕ ಯೋಜನೆ ರೂಪಿಸಬೇಕು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 4:59 IST
Last Updated 27 ನವೆಂಬರ್ 2019, 4:59 IST
ಸಂಪಾದಕೀಯ
ಸಂಪಾದಕೀಯ    

ಬೆಂಗಳೂರಿನ ಕೆರೆಗಳು ಮಾಲಿನ್ಯದ ಪರಿಣಾಮವಾಗಿ ಬೆಂಕಿ ಹಾಗೂ ನೊರೆ ಸಮಸ್ಯೆಯಿಂದ ಈವರೆಗೆ ಕುಖ್ಯಾತಿ ಗಳಿಸಿದ್ದವು. ಈಗ ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿವೆ. ಉತ್ತಮ ಮಳೆಯಾಗಿ ಕೆರೆಗಳೆಲ್ಲ ಭರ್ತಿಯಾಗಿವೆ ಎಂದು ಜನ ಸಂಭ್ರಮಿಸಿದ್ದಾರೆ. ಆದರೆ, ಎರಡೇ ತಿಂಗಳಲ್ಲಿ ಮೂರು ಕೆರೆಗಳ ಕೋಡಿ ಒಡೆದಿವೆ. ನೀರು ಹೊರನುಗ್ಗಿ ಸೃಷ್ಟಿಯಾದ ಪ್ರವಾಹದಿಂದ ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸಿವೆ. ಕಳೆದ ತಿಂಗಳು ದೊಡ್ಡಬಿದರಕಲ್ಲು ಕೆರೆಯ ಕೋಡಿ ಒಡೆದು ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಇದಕ್ಕೆ ಭಾರಿ ಮಳೆ ಕಾರಣವಾಗಿತ್ತು. ಆದರೆ, ಎರಡು ವಾರಗಳ ಹಿಂದೆ ಒಡೆದ ಹೊಸಕೆರೆಹಳ್ಳಿ ಕೆರೆ ಹಾಗೂ ಮೂರು ದಿನಗಳ ಹಿಂದೆ ಒಡೆದು ಭಾರಿ ಅವಾಂತರವನ್ನೇ ಸೃಷ್ಟಿಸಿರುವ ಹುಳಿಮಾವು ಕೆರೆಯ ಅವಘಡಗಳಲ್ಲಿ ಮನುಷ್ಯನ ಕೈವಾಡ ಇರುವುದು ತೀವ್ರ ಆತಂಕಕಾರಿ. ಹುಳಿಮಾವು ಕೆರೆಯ ದಂಡೆ ಒಡೆದು ಏಕಾಏಕಿ ನೀರು ನುಗ್ಗಿದ್ದರಿಂದ ಆರು ಬಡಾವಣೆಗಳ 800ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು. ಅಲ್ಲಿ ಈಗ ನೀರು ಇಳಿದಿದ್ದರೂ ಕೆಸರು ಇನ್ನೂ ಹಾಗೇ ಉಳಿದಿದೆ. ಕೆಸರಿನ ದುರ್ನಾತದಿಂದ ನಾಗರಿಕರು ತತ್ತರಿಸುತ್ತಿದ್ದಾರೆ. ಅಂಗಡಿ– ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ನೂರಾರು ಮಂದಿ ಆಶ್ರಯ ಕಳೆದುಕೊಂಡು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಗೊಂಡಿದ್ದಾರೆ. ಹುಳಿಮಾವು ಕೆರೆ 2016ಕ್ಕೂ ಮುನ್ನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸುಪರ್ದಿಯಲ್ಲಿತ್ತು. ಬಿಡಿಎ ಇದನ್ನು ಸರಿಯಾಗಿ ನಿರ್ವಹಿಸದಿರುವುದೇ ಈ ಅವಘಡಕ್ಕೆ ಕಾರಣ ಎಂಬುದು ಮೇಯರ್‌ ಎಂ.ಗೌತಮ್ ಕುಮಾರ್‌ ಅವರ ಆರೋಪ.

ಕೆರೆಯ ದಂಡೆ ಒಡೆಸುವಲ್ಲಿ ಅಧಿಕಾರಿಗಳ ಕೈವಾಡ ಇದೆ ಎಂಬ ಗುಮಾನಿಯೂ ಇದೆ. ಬಿಬಿಎಂಪಿಯೇ ಜಲಮಂಡಳಿ ಎಂಜಿನಿಯರ್‌ ಒಬ್ಬರ ವಿರುದ್ಧ ಶಂಕೆ ವ್ಯಕ್ತಪಡಿಸಿ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದೆ. ಇನ್ನೊಂದೆಡೆ, ಕೋಡಿ ಒಡೆದಿದ್ದಕ್ಕೂ ತನಗೂ ಸಂಬಂಧ ಇಲ್ಲ ಎಂದು ಜಲಮಂಡಳಿ ಹೇಳಿದೆ. ಕೆರೆಗಳ ಸಂರಕ್ಷಣೆಗೆ ಕಟಿಬದ್ಧವಾಗಿ ದುಡಿಯಬೇಕಾದ ಸರ್ಕಾರಿ ಸಂಸ್ಥೆಗಳೇ ಹೀಗೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ವಿಪರ್ಯಾಸವೇ ಸರಿ. ನಗರದ ಬಹುತೇಕ ಕೆರೆಗಳ ಹೂಳು ತೆಗೆದು ದಂಡೆಗಳನ್ನು ಭದ್ರಪಡಿಸಿರುವುದರಿಂದ ಮಳೆಗಾಲದಲ್ಲಿ ಯಾವುದೇ ಕೆರೆಯ ಕೋಡಿ ಒಡೆಯುವುದಿಲ್ಲ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಏಪ್ರಿಲ್‌ನಲ್ಲಿ ನೀಡಿದ್ದ ಭರವಸೆ ಹುಸಿಯಾಗಿದೆ. ಹೊಸಕೆರೆಹಳ್ಳಿ ಕೆರೆಯನ್ನು ಬಿಡಿಎ ನಿರ್ವಹಣೆ ಮಾಡುತ್ತಿದೆ. ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಇದರ ಅಭಿವೃದ್ಧಿ ಕಾಮಗಾರಿ ಇನ್ನೂ ಎರಡು ವರ್ಷ ಕಳೆದರೂ ಪೂರ್ಣಗೊಳ್ಳುವ ಲಕ್ಷಣವಿಲ್ಲ. ಒಂದು ಜಲಕಾಯದ ಅಭಿವೃದ್ಧಿಗೆ ನಾಲ್ಕೈದು ವರ್ಷಗಳು ಬೇಕೇ ಎಂಬ ಬಗ್ಗೆ ಪ್ರಾಧಿಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಸಾವಿರ ಕೆರೆಗಳ ಬೀಡು ಎಂದೇ ಗುರುತಿಸಿಕೊಂಡಿದ್ದ ಬೆಂಗಳೂರಿನಲ್ಲಿ ಈಗ 210 ಕೆರೆಗಳಷ್ಟೇ ಉಳಿದಿವೆ. ಇವುಗಳ ನಿರ್ವಹಣೆ ಹೊಣೆಯನ್ನು ಬಿಬಿಎಂಪಿ, ಬಿಡಿಎ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಹಂಚಲಾಗಿದೆ. ಬಿಡಿಎ ವಶದಲ್ಲಿದ್ದ 36 ಕೆರೆಗಳ ಹೊಣೆಯನ್ನು 2016ರಲ್ಲಿ ಪಾಲಿಕೆಗೆ ವಹಿಸಲಾಗಿತ್ತು. ಆ ಬಳಿಕ ಬಿಬಿಎಂಪಿ ಸುಪರ್ದಿಗೆ 168 ಹಾಗೂ ಬಿಡಿಎ ಸುಪರ್ದಿಗೆ 32 ಕೆರೆಗಳು ಸೇರಿವೆ. ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಯ ಅವ್ಯವಸ್ಥೆ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ಛೀಮಾರಿ ಹಾಕಿಸಿಕೊಂಡರೂ ಬಿಬಿಎಂಪಿ, ಬಿಡಿಎ ಮತ್ತು ಜಲಮಂಡಳಿಗೆ ಬುದ್ಧಿ ಬಂದಂತಿಲ್ಲ. ಈ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣಿಸುವಂತಿದೆ. ಕೆರೆಗಳ ಒತ್ತುವರಿ ಕುರಿತು ಎ.ಟಿ.ರಾಮಸ್ವಾಮಿ ಸಮಿತಿ ಹಾಗೂ ಕೆ.ಬಿ.ಕೋಳಿವಾಡ ಸಮಿತಿ ತಿಂಗಳುಗಟ್ಟಲೆ ಅಧ್ಯಯನ ನಡೆಸಿ ವರದಿ ನೀಡಿವೆ. ಆರಂಭದಲ್ಲಿ ಒತ್ತುವರಿ ತೆರವು ನಡೆಯಿತಾದರೂ, ಬಳಿಕ ಸರ್ಕಾರವು ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದರಿಂದ ಕಾರ್ಯಾಚರಣೆ ಅರ್ಧದಲ್ಲೇ ಸ್ಥಗಿತಗೊಂಡಿತು. ಒತ್ತುವರಿಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ 19 ಕೆರೆಗಳು ಕಣ್ಮರೆಯಾಗಿರುವ ಬಗ್ಗೆ ಹೈಕೋರ್ಟ್‌ ಇತ್ತೀಚೆಗೆ ಚಾಟಿ ಬೀಸಿದೆ. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ಕೆರೆಗಳ ಕುರಿತು ವರದಿ ಸಿದ್ಧಪಡಿಸಿರುವ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ), 19 ಕೆರೆಗಳ ಪೈಕಿ ಎರಡರಲ್ಲಿ ಮಾತ್ರ ನೀರಿದೆ ಎಂದು ಅಭಿಪ್ರಾಯಪಟ್ಟಿದೆ. ನಿತ್ಯ 140 ಕೋಟಿ ಲೀಟರ್‌ ಕಾವೇರಿ ನೀರು ಬೆಂಗಳೂರಿಗೆ ಪೂರೈಕೆಯಾಗುತ್ತಿದೆ. ಇದರ ಅರ್ಧದಷ್ಟು ನೀರು ರಾಜಕಾಲುವೆ, ಒಳಚರಂಡಿ, ಪೈಪ್‌ಗಳ ಮೂಲಕ ಬೆಂಗಳೂರಿನ ಜಲಕಾಯಗಳ ಒಡಲು ಸೇರುತ್ತಿದೆ. ಇದರ ಜತೆಗೆ ಮಳೆ ನೀರೂ ಸೇರಿ ಈ ಕೆರೆಗಳ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಗಿದೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಇನ್ನಷ್ಟು ಕೆರೆಗಳ ಕೋಡಿ ಒಡೆಯುವ ಅಪಾಯ ಇದೆ. ಮೂರು ಕೆರೆಗಳ ಕೋಡಿ ಒಡೆದಿರುವುದು ಸರ್ಕಾರಕ್ಕೆ ಪಾಠವಾಗಬೇಕು. ನಗರದಲ್ಲಿ ನೀರಿನ ಸಮಗ್ರ ನಿರ್ವಹಣೆಗೆ ವೈಜ್ಞಾನಿಕ ಯೋಜನೆ ರೂಪಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.