ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ)2022–23ನೇ ಸಾಲಿನ ಬಜೆಟ್, ನಗರದ 1.30 ಕೋಟಿಗೂ ಅಧಿಕ ನಿವಾಸಿಗಳ ಆಶೋತ್ತರಗಳ ಪ್ರತಿಬಿಂಬದಂತಿರಬೇಕಿತ್ತು. ಆದರೆ, ಬಜೆಟ್ ಮಂಡನೆ ವಿಚಾರದಲ್ಲಿ ಬಿಬಿಎಂಪಿಯು ನಡೆದುಕೊಂಡ ರೀತಿ ಅದರ ಘನತೆಗೆ ತಕ್ಕುದಾಗಿರಲಿಲ್ಲ. ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರು ಬಜೆಟ್ ಮಂಡಿಸುವುದು ವಾಡಿಕೆ. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಇಲ್ಲದ ಕಾರಣ, ಹಣಕಾಸು ವಿಭಾಗದ ವಿಶೇಷ ಆಯುಕ್ತರು ಇದೇ ಪೌರ ಸಭಾಂಗಣದಲ್ಲಿ 2021–22ನೇ ಸಾಲಿನ ಬಜೆಟ್ ಮಂಡಿಸಿದ್ದರು. ಈ ವರ್ಷ ಈ ಪರಿಪಾಟವನ್ನೇ ಕೈಬಿಡಲಾಗಿದೆ. ಬಿಬಿಎಂಪಿ ಆಡಳಿತಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಈಗಿನ ಸರ್ಕಾರವು 2020ರ ಬಿಬಿಎಂಪಿ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರ ಸೆಕ್ಷನ್ 194ರ ಪ್ರಕಾರ, ಮುಖ್ಯ ಆಯುಕ್ತರು ಕಳುಹಿಸುವ ಬಜೆಟ್ ಅಂದಾಜು ಮತ್ತು ಪ್ರಸ್ತಾವಗಳನ್ನು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯು ಪರಿಶೀಲಿಸಬೇಕು. ಇತರ ಸ್ಥಾಯಿ ಸಮಿತಿಗಳ ಪ್ರಸ್ತಾವಗಳನ್ನೂ ಪಡೆದು ಬಜೆಟ್ ಅಂದಾಜನ್ನು ಸಿದ್ಧಪಡಿಸಬೇಕು. ಸೆಕ್ಷನ್ 196ರ ಪ್ರಕಾರ ಬಿಬಿಎಂಪಿ ಬಜೆಟ್, ಹೊಸ ಆರ್ಥಿಕ ವರ್ಷಾರಂಭಕ್ಕಿಂತ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅಂಗೀಕಾರಗೊಳ್ಳಬೇಕು. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲ. ಹಾಗಾಗಿ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಕಾರ್ಯಭಾರದ ಹೊಣೆ ಆಡಳಿತಾಧಿಕಾರಿಯದು. ಯಾವತ್ತು ಬಜೆಟ್ ಮಂಡಿಸಬೇಕು ಎಂಬ ಬಗ್ಗೆ ಆರ್ಥಿಕ ವರ್ಷ ಮುಗಿಯುವ ಕೊನೆಯ ದಿನದವರೆಗೂ ನಿರ್ಧಾರ ತಳೆಯಲು ಅವರಿಗೆ ಸಾಧ್ಯವಾಗದಿರುವುದು
ಅಚ್ಚರಿಯ ವಿಷಯ. ಇಂತಹ ದುಃಸ್ಥಿತಿಯನ್ನು ಪಾಲಿಕೆ ತಂದುಕೊಂಡಿದ್ದೇಕೆ? ಮಾರ್ಚ್ 31ರಂದು ರಾತ್ರೋರಾತ್ರಿ ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಪಾಲಿಕೆ ಬಜೆಟ್‌ನ ಪ್ರತಿಯನ್ನು ಅಪ್‌ಲೋಡ್ ಮಾಡಲಾಗಿದೆ. ಬಿಬಿಎಂಪಿ ಆಡಳಿತವು ಬಜೆಟ್ ಅನ್ನು ಈ ರೀತಿ ಕದ್ದುಮುಚ್ಚಿ ಪ್ರಕಟಿಸಿದ್ದರ ಉದ್ದೇಶವೇನೆಂಬುದೇ ಅರ್ಥವಾಗುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ನಗರದ ಅಭಿವೃದ್ಧಿ ಕುರಿತು ನಿಜವಾದ ಕಾಳಜಿ ಇದ್ದಿದ್ದರೆ, ಅವರು ಬಜೆಟ್ ಅನ್ನು ಶ್ರದ್ಧೆಯಿಂದ ರೂಪಿಸುತ್ತಿದ್ದರು. ಹಾಗಾಗದಿರುವುದು ನಗರದ ಜನರ ದೌರ್ಭಾಗ್ಯವೇ ಸರಿ.
ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ನ ಆಡಳಿತ ಇಲ್ಲದ ಕಾರಣ ಬೆಂಗಳೂರು ಅಭಿವೃದ್ಧಿ ಖಾತೆಯ ಉಸ್ತುವಾರಿ ಹೊತ್ತವರ ಜವಾಬ್ದಾರಿ ಮತ್ತಷ್ಟು ಹೆಚ್ಚಿರುತ್ತದೆ. ಸದ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಬಜೆಟ್ ಮಂಡನೆ ವಿಚಾರದಲ್ಲಿ ಬಿಬಿಎಂಪಿ ಕಾಯ್ದೆಯ ಆಶಯಗಳು ಪಾಲನೆಯಾಗದ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದ ಬಳಿಕವೂ ಅವರು ತಪ್ಪನ್ನು ಸರಿಪಡಿಸುವುದಕ್ಕೆ ಆಸಕ್ತಿ ವಹಿಸಿದಂತೆ ತೋರುತ್ತಿಲ್ಲ. ಸರ್ಕಾರಕ್ಕೆ ಈ ನಗರದಿಂದ ಬೊಕ್ಕಸ ಸೇರುವ ವರಮಾನದ ಮೇಲಿರುವಷ್ಟು ಕಾಳಜಿ, ಇಲ್ಲಿನ ಆಡಳಿತ ವ್ಯವಸ್ಥೆಯ ಮೇಲೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಬಜೆಟ್ ಪ್ರತಿಯಲ್ಲೂ ನಗರದ ಅಭಿವೃದ್ಧಿ ಕುರಿತ ಒಳನೋಟಗಳಿಲ್ಲ. ಸರ್ಕಾರವು ಬಿಬಿಎಂಪಿಗೂ ‘ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ– 2003’ ಹಾಗೂ ‘ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ) ನಿಯಮಗಳು– 2021’ ಅನ್ನು ಈ ವರ್ಷದ ಮಾರ್ಚ್ 10ರಿಂದ ಜಾರಿಗೊಳಿಸಿದೆ. ಅದರ ಪ್ರಕಾರ ಬಜೆಟ್ ಗಾತ್ರವು ವಾಸ್ತವಕ್ಕೆ ಹತ್ತಿರವಾಗಿರುವಂತೆ ನೋಡಿಕೊಳ್ಳಬೇಕು. ಇತ್ತೀಚಿನ ನಾಲ್ಕು ವರ್ಷಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದ (ಸಿಎಜಿಆರ್) ಆಧಾರದಲ್ಲಿ ಬಿಬಿಎಂಪಿ ಬಜೆಟ್ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ. 2021–22ನೇ ಸಾಲಿನಲ್ಲಿ ಬಿಬಿಎಂಪಿಯು ತೆರಿಗೆ ಮತ್ತು ಕರಗಳಿಂದ ₹ 4,253.20 ಕೋಟಿ ವರಮಾನ ನಿರೀಕ್ಷಿಸಿ ಬಜೆಟ್ ಮಂಡಿಸಿತ್ತು. ಪರಿಷ್ಕೃತ ಬಜೆಟ್‌ನಲ್ಲಿ ಇದನ್ನು ₹ 2,828.60 ಕೋಟಿಗೆ ಕಡಿತಗೊಳಿಸಲಾಗಿದೆ. ನಿರೀಕ್ಷೆಗೂ ವಾಸ್ತವಕ್ಕೂ ಇರುವ ವ್ಯತ್ಯಾಸವನ್ನು
ಬಜೆಟ್‌ನಲ್ಲೇ ನೀಡಿರುವ ಈ ಅಂಕಿ ಅಂಶಗಳು ಹೇಳುತ್ತಿವೆ. ಇಷ್ಟಾಗಿಯೂ 2022– 23ನೇ ಸಾಲಿನ ಬಜೆಟ್‌ನಲ್ಲಿ ತೆರಿಗೆ ಮತ್ತು ಕರಗಳಿಂದ ₹ 3,680.15 ಕೋಟಿ ವರಮಾನ ನಿರೀಕ್ಷಿಸಿ ಬಜೆಟ್ ಗಾತ್ರವನ್ನು
₹ 10,484.28 ಕೋಟಿಗೆ ನಿಗದಿಪಡಿಸಲಾಗಿದೆ. ಈ ಸಲದ ಬಜೆಟ್ ಅನ್ನೂ ಸಿಎಜಿಆರ್‌ಗೆ ಅನುಗುಣವಾಗಿ ರೂಪಿಸಿಲ್ಲ ಎಂಬುದು ಅದರ ಗಾತ್ರವನ್ನು ನೋಡಿದಾಗಲೇ ಮನದಟ್ಟಾಗುತ್ತದೆ. ನಗರದ ಸ್ವತ್ತುಗಳ ಬಿ– ಖಾತಾಗಳನ್ನು ಕ್ರಮಬದ್ಧಗೊಳಿಸಲಾಗುತ್ತದೆ ಎಂದು ಈ ಹಿಂದಿನ ಬಜೆಟ್‌ಗಳಲ್ಲೂ ಪ್ರಸ್ತಾಪಿಸಲಾಗಿತ್ತು. ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ. ಈ ಸಲದ ಬಜೆಟ್‌ನಲ್ಲಿ ಇದನ್ನು ಮತ್ತೊಮ್ಮೆ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಅದರಿಂದ ₹ 1 ಸಾವಿರ ಕೋಟಿ ವರಮಾನವನ್ನೂ ನಿರೀಕ್ಷಿಸಲಾಗಿದೆ. ಬಜೆಟ್‌ನಲ್ಲಿ ಕಂದಾಯ ಸ್ವೀಕೃತಿಯ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರದಲ್ಲಿ ಇಲ್ಲದಿದ್ದಾಗ ವರಮಾನ ಮತ್ತು ವೆಚ್ಚದ ಲೆಕ್ಕ ಸರಿದೂಗಿಸಲು ಅಂಕಿ–ಅಂಶಗಳಲ್ಲಿ ಇಂತಹ ಕಸರತ್ತುಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಬಜೆಟ್ ರೂಪಿಸುವ ವಿಚಾರದಲ್ಲಿ ಅಧಿಕಾರಿಗಳು ತೋರಿದ ಅಸಡ್ಡೆಯು ಅದರ ಅನುಷ್ಠಾನದ ವೇಳೆಯೂ ಮುಂದುವರಿಯಬಾರದು. ಬಜೆಟ್ ಕಾರ್ಯಕ್ರಮಗಳನ್ನು ಶ್ರದ್ಧೆಯಿಂದ ಅನುಷ್ಠಾನಗೊಳಿಸಬೇಕು. ಬಿಬಿಎಂಪಿ ಕುರಿತು ಸರ್ಕಾರ ಅಸಡ್ಡೆ ತೋರುವುದನ್ನು ಬಿಟ್ಟು ಇನ್ನು ಮುಂದಾದರೂ ರಾಜ್ಯದ ಆರ್ಥಿಕ ಶಕ್ತಿಕೇಂದ್ರವಾದ ಬೆಂಗಳೂರು ನಗರದ ಆಡಳಿತವನ್ನು ಸರಿದಾರಿಗೆ ತರುವುದಕ್ಕೆ
ಕ್ರಮ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.