ADVERTISEMENT

ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಮೂಲ ಪತ್ತೆಯಾಗಲಿ, ಸಮಸ್ಯೆ ಕೊನೆಗೊಳ್ಳಲಿ

ಇಂತಹ ಬೆದರಿಕೆ ಸಂದೇಶಗಳ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸಲು, ಅವರನ್ನು ಶಿಕ್ಷಿಸಲು ಅನುವಾಗುವಂತೆ ಸೂಕ್ತ ತನಿಖೆ ಆಗಬೇಕು

ಸಂಪಾದಕೀಯ
Published 24 ಅಕ್ಟೋಬರ್ 2024, 0:30 IST
Last Updated 24 ಅಕ್ಟೋಬರ್ 2024, 0:30 IST
   

ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಹುಸಿ ಬೆದರಿಕೆ ಸಂದೇಶಗಳು ಒಂದರ ಹಿಂದೆ ಒಂದರಂತೆ ಬರಲು ಆರಂಭವಾಗಿ ವಾರ ಕಳೆದಿದೆ. ಇಂತಹ ಬೆದರಿಕೆ ಸಂದೇಶಗಳು ಈ ಅವಧಿಯಲ್ಲಿ ‍ಪ್ರತಿ ದಿನವೂ ಬರುತ್ತಿವೆ. ಇವುಗಳ ಪರಿಣಾಮವಾಗಿ ದೇಶಿ ಹಾಗೂ ವಿದೇಶಿ ವಿಮಾನಯಾನ ಕಂಪನಿಗಳ ಕಾರ್ಯಾಚರಣೆಗೆ ದೊಡ್ಡ ಮಟ್ಟದಲ್ಲಿ ಏಟು ಬಿದ್ದಿದೆ. ಈ ಸಂದೇಶಗಳು ವಿಮಾನ ಪ್ರಯಾಣಕ್ಕೆ ಅಡ್ಡಿ ಉಂಟುಮಾಡುತ್ತಿವೆ. ಸಂದೇಶ ಸ್ವೀಕರಿಸಿದ ವಿಮಾನಗಳ ಹಾರಾಟ ವಿಳಂಬ ಆಗುತ್ತದೆ ಅಥವಾ ಅವುಗಳ ಮಾರ್ಗವನ್ನು ಬದಲಾಯಿಸಬೇಕಾಗುತ್ತದೆ.

ಮಂಗಳವಾರ ಇಂತಹ ಬೆದರಿಕೆ ಸಂದೇಶಗಳು ಸರಿಸುಮಾರು 50 ವಿಮಾನಗಳಿಗೆ ಬಂದಿವೆ. ಅಂದರೆ, ಅಕ್ಟೋಬರ್ 14ರ ನಂತರ ಬಂದಿರುವ ಹುಸಿ ಬೆದರಿಕೆ ಸಂದೇಶಗಳ ಸಂಖ್ಯೆಯು ಸರಿಸುಮಾರು 170 ಆಗಿದೆ. ಭಾರತೀಯ ವಿಮಾನಯಾನ ಕಂಪನಿಗಳೇ ಈ ಸಂದೇಶಗಳ ಮುಖ್ಯ ಗುರಿಯಾಗಿವೆ. ಆದರೆ ಅಮೆರಿಕನ್ ಏರ್‌ಲೈನ್ಸ್, ಜೆಟ್‌ ಬ್ಲ್ಯೂ, ಏರ್‌ ನ್ಯೂಜಿಲೆಂಡ್‌ ವಿಮಾನಯಾನ ಕಂಪನಿಗಳು ಕೂಡ ಈ ಬಗೆಯ ಸಂದೇಶಗಳನ್ನು ಸ್ವೀಕರಿಸಿವೆ. 2014ರಿಂದ 2017ರ ನಡುವಿನ ಅವಧಿಯಲ್ಲಿ ಭಾರತದ ವಿಮಾನಗಳು ಒಟ್ಟು 120 ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ್ದವು.

ಈಗ ಬರುತ್ತಿರುವ ಸಂದೇಶಗಳಿಂದಾಗಿ ವಿಮಾನಯಾನ ಸೇವೆಗಳಿಗೆ ಉಂಟಾಗಿರುವ ಅಡ್ಡಿಯ ಪರಿಣಾಮವಾಗಿ ಪ್ರಯಾಣಿಕರಿಗೆ ತೀರಾಅನನುಕೂಲ ಆಗಿದೆ. ಅಲ್ಲದೆ, ಪ್ರಯಾಣದ ವಿಚಾರವಾಗಿ ಅನಿಶ್ಚಿತತೆ ಸೃಷ್ಟಿಯಾಗಿದೆ. ಒಂಬತ್ತು ದಿನಗಳ ಅವಧಿಯಲ್ಲಿ ಇಂತಹ ಬೆದರಿಕೆ ಸಂದೇಶಗಳು ವಿಮಾನಯಾನ ಕಂಪನಿಗಳಿಗೆ ಒಟ್ಟು ₹600 ಕೋಟಿ ನಷ್ಟ ಉಂಟುಮಾಡಿವೆ ಎಂದು ಅಂದಾಜು ಮಾಡಲಾಗಿದೆ.

ADVERTISEMENT

ಹುಸಿ ಬೆದರಿಕೆ ಸಂದೇಶಗಳ ಸಮಸ್ಯೆಯನ್ನು ತಾಂತ್ರಿಕವಾಗಿ ಹಾಗೂ ಕಾನೂನಿನ ಮೂಲಕ ಎದುರಿಸ
ಬೇಕಿದೆ. ಬಹುತೇಕ ಬೆದರಿಕೆಗಳು ಬಂದಿರುವುದು ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ.ಅವುಗಳ ಐ.ಪಿ. ವಿಳಾಸ ಇರುವುದು ಯುರೋಪಿನಲ್ಲಿ. ಬೆದರಿಕೆ ಸಂದೇಶಗಳ ಮೂಲ ಪತ್ತೆಯನ್ನು ಕ್ಲಿಷ್ಟಕರ ಆಗಿಸುವ ಉದ್ದೇಶದಿಂದ, ವಿಪಿಎನ್ ಸೌಲಭ್ಯ ಬಳಸಿ ಕೊಳ್ಳಲಾಗುತ್ತದೆ. ಇದರ ಪರಿಣಾಮವಾಗಿ, ಬೆದರಿಕೆ ಒಡ್ಡುತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡುವುದು ಬಹಳ ಕಷ್ಟದ ಕೆಲಸವಾಗುತ್ತದೆ. ಕೆಲವು ಬೆದರಿಕೆ ಸಂದೇಶಗಳ ಮೂಲ ಇರುವುದು ಬ್ರಿಟನ್‌ನಲ್ಲಿ ಎಂದು ಶಂಕಿಸಲಾಗಿದೆ.

ಬೆದರಿಕೆ ಸಂದೇಶ ರವಾನಿಸುತ್ತಿರುವವರ ಮೂಲ ಪತ್ತೆ ಮಾಡುವ ಉದ್ದೇಶದ ತನಿಖೆಯನ್ನು ತಪ್ಪುದಾರಿಗೆ ಎಳೆಯಲು ತಾಂತ್ರಿಕವಾಗಿ ಸಾಧ್ಯವಿದೆ. ದುಷ್ಕರ್ಮಿಗಳು ದೇಶದ ಒಳಗೇ ಇದ್ದಿರುವ ಸಾಧ್ಯತೆಯೂ ಇದೆ. ಮೂರು ವಿಮಾನಗಳಿಗೆ ಬೆದರಿಕೆ ಒಡ್ಡಿದ ಆರೋಪದ ಅಡಿಯಲ್ಲಿ ಛತ್ತೀಸಗಢದ ಒಬ್ಬ ಬಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಬಾಲಕ ಇನ್ನೊಬ್ಬನ ಜೊತೆ ಹಣಕಾಸಿನ ತಕರಾರು ಹೊಂದಿದ್ದು, ಬೆದರಿಕೆಗಳನ್ನು ಒಡ್ಡಿದ್ದು ಆತನೇ ಎಂದು ಬಿಂಬಿಸಲು ಯತ್ನಿಸಿದ್ದ ಎಂಬ ವರದಿಗಳಿವೆ. ಆದರೆ ಈಗ ಬಂದಿರುವ ಎಲ್ಲ ಬೆದರಿಕೆ ಸಂದೇಶಗಳೂ ವ್ಯಕ್ತಿಗತ ನೆಲೆಯಲ್ಲಿ ಬಂದಿರುವಂಥವು ಹಾಗೂ ಒಂದಕ್ಕೊಂದು ಸಂಬಂಧ ಇಲ್ಲದವು ಎಂದು ಭಾವಿಸುವುದು ಕಷ್ಟ.

ಕಳೆದ ವರ್ಷ ಇದೇ ಸಂದರ್ಭದಲ್ಲಿ ಫ್ರಾನ್ಸ್‌ನ ಹಲವು ಶಾಲೆಗಳು, ವಸ್ತುಸಂಗ್ರಹಾಲಯಗಳು, ವಿಮಾನಯಾನ ಕಂಪನಿಗಳು ಹುಸಿ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ್ದವು. ಇಂತಹ ಸಂದೇಶಗಳನ್ನು ರವಾನಿಸಿದ್ದ ಬಹುತೇಕರು ಯುವಕರಾಗಿದ್ದರು. ಭಾರತದಲ್ಲಿಯೂ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಇಂತಹ ಬೆದರಿಕೆ ಸಂದೇಶಗಳ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸಲು, ಅವರನ್ನು ಶಿಕ್ಷಿಸಲು ತನಿಖೆ ಆಗಬೇಕು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ಅವರು ಬೆದರಿಕೆ ಸಂದೇಶಗಳನ್ನು ‘ಒಂದಕ್ಕೊಂದು ಸಂಬಂಧ ಇಲ್ಲದವು’ ಎಂದು ಹೇಳಿದ್ದರು. ಆದರೆ ಈಗ ಅವರು, ವಿಮಾನ ಭದ್ರತಾ ನಿಯಮಗಳಲ್ಲಿ ಬದಲಾವಣೆ ತಂದು, ಇಂತಹ ಬೆದರಿಕೆ ಸಂದೇಶ ರವಾನಿಸುವ ವರನ್ನು ವಿಮಾನಗಳಲ್ಲಿ ಪ್ರಯಾಣಿಸುವುದರಿಂದ ಹಲವು ವರ್ಷಗಳವರೆಗೆ ನಿರ್ಬಂಧಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದ್ದಾರೆ. ಬಹುತೇಕ ಕಾನೂನುಗಳು ವಿಮಾನದ ಒಳಗೆ ಆಗುವ ಅಪರಾಧಗಳಿಗೆ ಸಂಬಂಧಿಸಿವೆ. ಸರ್ಕಾರದ ಉದ್ದೇಶ ಈ ಕಾನೂನುಗಳನ್ನು ವಿಮಾನಗಳ ಹೊರಗೆ ಆಗುವ ಅಪರಾಧ ಕೃತ್ಯಗಳಿಗೆ ವಿಸ್ತರಿಸುವುದು ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚು ಮಾಡುವುದು.

ಬೆದರಿಕೆ ಸಂದೇಶ ರವಾನಿಸುವುದನ್ನು ಗಂಭೀರ ಸ್ವರೂಪದ ಅಪರಾಧ ಪ್ರಕರಣ ಎಂದು ಗುರುತಿಸಲಾಗುತ್ತದೆ ಎಂದೂ ಸಚಿವರು ಹೇಳಿದ್ದಾರೆ. ಈಗ ಹುಸಿ ಬೆದರಿಕೆ ಸಂದೇಶಗಳ ಬಗ್ಗೆ ಎಲ್ಲ ಆಯಾಮಗಳಿಂದ ತನಿಖೆ ನಡೆಸುವುದಕ್ಕೆ, ಅಪರಾಧಿಗಳನ್ನು ಗುರುತಿಸುವುದಕ್ಕೆ, ಅವರ ಉದ್ದೇಶ ಏನು ಎಂಬುದನ್ನು ತಿಳಿಯುವುದಕ್ಕೆ ಹಾಗೂ ಇಂತಹ ಸಂದೇಶಗಳಿಗೆ ಅಂತ್ಯ ಕಾಣಿಸುವುದಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ವಿಮಾನಯಾನ ಕಂಪನಿಗಳಿಗೆ ಆಗುತ್ತಿರುವ ಅಡ್ಡಿ, ಪ್ರಯಾಣಿಕರು ಎದುರಿಸುವ ಅನಿಶ್ಚಿತತೆಯನ್ನು ಕೊನೆಗೊಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.