ADVERTISEMENT

ಸಂಪಾದಕೀಯ | ಕಜಾನ್‌ನಲ್ಲಿ ಮೋದಿ–ಷಿ ಭೇಟಿ; ಹೊಸ ಸೌಹಾರ್ದ ಬಹುಕಾಲ ಇರಲಿ

ಈ ಸೌಹಾರ್ದ ಎಷ್ಟು ದಿನ ಇರಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಚೀನಾಕ್ಕೆ ಭಾರತವು ಈ ಬಾರಿ ಕೊಡಬಾರದು

ಸಂಪಾದಕೀಯ
Published 25 ಅಕ್ಟೋಬರ್ 2024, 23:49 IST
Last Updated 25 ಅಕ್ಟೋಬರ್ 2024, 23:49 IST
SAMPADAKIYA 
SAMPADAKIYA    

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ರಷ್ಯಾದ ತತಾರ್‌ಸ್ತಾನ್ ಗಣರಾಜ್ಯದ ರಾಜಧಾನಿ ಕಜಾನ್‌ನಲ್ಲಿ ನಡೆದ ಬ್ರಿಕ್ಸ್‌ನ 16ನೇ ಶೃಂಗಸಭೆ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಐದು ವರ್ಷಗಳಲ್ಲಿ ಇದು ಈ ಇಬ್ಬರ ನಡುವೆ ನಡೆದ ಮೊದಲ ಅಧಿಕೃತ ದ್ವಿಪಕ್ಷೀಯ ಮಾತುಕತೆ. ಪೂರ್ವ ಲಡಾಕ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ 2020ರ ಏಪ್ರಿಲ್‌–ಮೇ ತಿಂಗಳಲ್ಲಿ ನಡೆದ ಸೇನಾ ಸಂಘರ್ಷವು ಎರಡೂ ದೇಶಗಳ ನಡುವಣ ಸಂಬಂಧವು ಹದಗೆಡುವಂತೆ ಮಾಡಿತ್ತು. ಇಬ್ಬರು ನಾಯಕರ ಭೇಟಿಗೆ ಕೆಲವು ವಾರಗಳಿಂದಲೇ ಪೂರ್ವತಯಾರಿ ನಡೆದಿತ್ತು.

ರಾಜತಂತ್ರಜ್ಞರು ಮತ್ತು ಸೇನಾಧಿಕಾರಿಗಳ ನಡುವೆ ಹಲವು ಸುತ್ತುಗಳ ಮಾತುಕತೆ ಆಗಿತ್ತು. ಗಡಿಯ ಎರಡೂ ಭಾಗಗಳಲ್ಲಿ ಜಮಾಯಿಸಲಾಗಿದ್ದ ಸೈನಿಕರನ್ನು ಪರಸ್ಪರ ಒಪ್ಪಿಗೆ ಮೂಲಕ ಹಿಂದಕ್ಕೆ ಕರೆಸಿಕೊಳ್ಳಲಾಗಿದ್ದರೂ ಡೆಪ್ಸಾಂಗ್‌ ಮತ್ತು ಡೆಮ್‌ಚೋಕ್‌ನಲ್ಲಿ ಸಂಘರ್ಷ ಮುಂದುವರಿದಿತ್ತು, ರಾಜತಂತ್ರಜ್ಞರು ಮತ್ತು ಸೇನಾಧಿಕಾರಿಗಳ ನಡುವಣ ಮಾತುಕತೆಯ ಬಳಿಕ ಈ ಪ್ರದೇಶಗಳಲ್ಲಿಯೂ ಗಸ್ತು ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಮಾತುಕತೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗಿತ್ತು. 

ಇತ್ತೀಚೆಗೆ ನಡೆದಿರುವ ಒಪ್ಪಂದದ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಿಲ್ಲ. 2020ರಲ್ಲಿ ಭಾರತವು ಗಸ್ತು ನಡೆಸುತ್ತಿದ್ದ ಪ್ರದೇಶಗಳಲ್ಲಿ ಗಸ್ತು ಆರಂಭಿಸಲು ಚೀನಾ ಒಪ್ಪಿಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ಗಸ್ತು ನಡೆಸುತ್ತಿದ್ದ ಹಲವು ಪ್ರದೇಶಗಳಿಗೆ ಭಾರತದ ಸೈನಿಕರು ಹೋಗುವುದನ್ನು ಚೀನಾದ ಸೈನಿಕರು 2020ರಲ್ಲಿ ತಡೆದಿದ್ದರು. 2020ರ ಹಿಂದಿನ ಸ್ಥಿತಿಗೆ ಗಸ್ತು ವ್ಯವಸ್ಥೆ ಮರುಸ್ಥಾಪನೆಯಾದರೆ ಅದು ಭಾರತಕ್ಕೆ ಮಹತ್ವದ ಬೆಳವಣಿಗೆ ಎಂಬುದರಲ್ಲಿ ಅನುಮಾನವೇ ಇಲ್ಲ. ದೌಲತ್‌ ಬೇಗ್‌ ಓಲ್ಡಿ ಸೇನಾ ನೆಲೆಯಿಂದ ಕಾರ್ಯಾಚರಣೆ ನಡೆಸಲು ಮತ್ತು ಕಾರಕೋರಂ ಕಣಿವೆಯವರೆಗೆ ಸಾಗುವುದು ಭಾರತಕ್ಕೆ ಸಾಧ್ಯವಾಗುತ್ತದೆ. ಚೀನಾದ ಆಕ್ರಮಣಶೀಲತೆಗೆ ತಡೆ ಒಡ್ಡಲು ಇದರಿಂದ ಅನುಕೂಲವಾಗುತ್ತದೆ. ಆಗಾಗ ಕುಟುಕುತ್ತಲೇ ಇರುವ ಚೀನಾದ ಕಾರ್ಯತಂತ್ರದ ಬೆದರಿಕೆ ಸದಾ ಇದ್ದೇ ಇರುತ್ತದೆ. ಗಾಲ್ವನ್‌ ಕಣಿವೆ ಮತ್ತು ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಆಗಿರುವ  ಗಸ್ತು ಸ್ಥಗಿತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ.

ADVERTISEMENT

ಗೋಗ್ರಾ ಪೋಸ್ಟ್‌ ಮತ್ತು ಹಾಟ್‌ ಸ್ಪ್ರಿಂಗ್‌ನ ವಿವಿಧ ಪ್ರದೇಶಗಳಿಂದ ಎರಡೂ ದೇಶಗಳು ಸೇನೆ ಹಿಂತೆಗೆದುಕೊಂಡ ಬಳಿಕ ಸೃಷ್ಟಿಸಲಾದ ‘ತಟಸ್ಥ ವಲಯಗಳು’ ಹಾಗೆಯೇ ಮುಂದುವರಿಯಲಿವೆ. ಎಲ್‌ಎಸಿಯ ಉದ್ದಕ್ಕೂ 2020ಕ್ಕೂ ಹಿಂದಿನ ಗಸ್ತು ವ್ಯವಸ್ಥೆ ಮರುಸ್ಥಾಪನೆ ಆಗದೇ ಇದ್ದರೆ ಚೀನಾದ ಸೇನೆಗೆ ಅದು ಅನುಕೂಲಕರ ಸ್ಥಿತಿ. ವಿವಾದಿತ ಗಡಿಯಲ್ಲಿ ಈಗ ಆಗಿರುವ ಬದಲಾವಣೆಗಳೇ ‘ಹೊಸ ವಾಸ್ತವ’ ಎಂಬುದನ್ನು ಚೀನಾವು ಹೇರದಂತೆ ಭಾರತವು ನೋಡಿಕೊಳ್ಳಬೇಕು; ಹಾಗೆ ಆಗುವುದಿಲ್ಲ ಎಂಬ ಭರವಸೆಯನ್ನು ಸರ್ಕಾರವು ಜನರಿಗೆ ನೀಡಬೇಕು. 

ಮೋದಿ ಅವರು ಷಿ ಅವರಿಗೆ ಸಾಬರಮತಿ ನದಿಯ ದಂಡೆಯಲ್ಲಿ 2014ರ ಸೆಪ್ಟೆಂಬರ್‌ನಲ್ಲಿ
ಆತಿಥ್ಯ ಒದಗಿಸುತ್ತಿದ್ದಾಗ ಅತ್ತ ಲಡಾಕ್‌ನ ಎಲ್‌ಎಸಿಯ ಚುಮಾರ್‌ ಎಂಬಲ್ಲಿ ಸೇನೆಗಳ ನಡುವೆ ಮುಖಾಮುಖಿ ನಡೆದಿತ್ತು. ಪಶ್ಚಿಮ ಭೂತಾನ್‌ನ ದೋಕಲಾಂ ತಪ್ಪಲಿನಲ್ಲಿ 2017ರ ಜೂನ್‌–ಆಗಸ್ಟ್‌ನಲ್ಲಿ ಚೀನಾ ಕಾರ್ಯಾಚರಣೆ ನಡೆಸಿತ್ತು. ಅದಾಗಿ ಒಂದು ವರ್ಷಕ್ಕೂ ಮೊದಲೇ ಇಬ್ಬರೂ ನಾಯಕರು ಚೀನಾದ ವುಹಾನ್‌ನಲ್ಲಿ ‘ಅನೌಪಚಾರಿಕ’ ಮಾತುಕತೆ ನಡೆಸಿದ್ದರು. ಅದಾದ ಬಳಿಕ, 2019ರ
ಅಕ್ಟೋಬರ್‌ನಲ್ಲಿ ಇಬ್ಬರೂ ನಾಯಕರು ಚೆನ್ನೈ ಸಮೀಪದ ಮಾಮಲ್ಲಪುರದಲ್ಲಿ ಭೇಟಿಯಾದರು. ಆದರೆ ಈ ಎರಡೂ ಕಡೆಯಲ್ಲಿ ವ್ಯಕ್ತವಾದ ಸ್ನೇಹ ಮತ್ತ ಸೌಹಾರ್ದ ಬಹುಕಾಲ ಬಾಳಲಿಲ್ಲ.

2020ರ ಜೂನ್‌ನಲ್ಲಿ ಗಾಲ್ವನ್‌ ಕಣಿವೆಯಲ್ಲಿ ಭಾರತದ ಯೋಧರು ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯಿತು. ಈ ಸಂಘರ್ಷವು ಎರಡೂ ದೇಶಗಳ ನಡುವಣ ಸಂಬಂಧವನ್ನು ಪಾತಾಳಕ್ಕೆ ತಳ್ಳಿತು. ನಾಲ್ಕು ವರ್ಷಗಳಿಂದ ಪರಿಸ್ಥಿತಿ ಹಾಗೆಯೇ ಇದೆ. ಈಗ, ತತಾರ್‌ಸ್ತಾನ್‌ನಲ್ಲಿ ಮೂಡಿರುವ ಸೌಹಾರ್ದವು ಎಷ್ಟು ದಿನ ಬಾಳಬಹುದು? ಈ ಸೌಹಾರ್ದ ಎಷ್ಟು ದಿನ ಇರಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಚೀನಾಕ್ಕೆ ಭಾರತವು ಈ ಬಾರಿ ಕೊಡಬಾರದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.