ADVERTISEMENT

ಸಂಪಾದಕೀಯ: ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಸಾಧನೆ; ದೇಶದ ಚೆಸ್‌ಗೆ ಮತ್ತಷ್ಟು ಬಲ

ಸಂಪಾದಕೀಯ
Published 23 ಸೆಪ್ಟೆಂಬರ್ 2024, 23:18 IST
Last Updated 23 ಸೆಪ್ಟೆಂಬರ್ 2024, 23:18 IST
ಅರ್ಜುನ್
ಅರ್ಜುನ್   

ಹಂಗರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ತಂಡಗಳು ಓಪನ್ ಮತ್ತು ಮಹಿಳೆಯರ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನದ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿವೆ. ಕೆಲವು ವರ್ಷಗಳಿಂದ ವಿಶ್ವ ಚೆಸ್‌ನಲ್ಲಿ ಭಾರತ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಈ ಸಾಧನೆ ಪುಷ್ಟೀಕರಿಸಿದೆ. ಹಾಗೆ ನೋಡಿದರೆ, ಒಲಿಂಪಿಯಾಡ್‌ನಲ್ಲಿ ಈ ಸಾಧನೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಓಪನ್ ವಿಭಾಗದಲ್ಲಿ ಭಾರತ ಎರಡನೇ ಶ್ರೇಯಾಂಕ (ಅಮೆರಿಕ ಅಗ್ರ ಶ್ರೇಯಾಂಕ) ಪಡೆದಿದ್ದರೆ, ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಗಳಿಸಿತ್ತು. ಯುವ ಆಟಗಾರರಾದ ಅರ್ಜುನ್ ಇರಿಗೇಶಿ, ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ ಜೊತೆಗೆ ಅನುಭವಿಗಳಾದ ವಿದಿತ್ ಎಸ್‌.ಗುಜರಾತಿ ಮತ್ತು ಹರಿಕೃಷ್ಣ ತಂಡದಲ್ಲಿದ್ದರು. ಪುರುಷರ ತಂಡ ಒಂದು ಸುತ್ತಿನ ಪಂದ್ಯ (ಉಜ್ಬೇಕಿಸ್ತಾನ ವಿರುದ್ಧ) ‘ಡ್ರಾ’ ಮಾಡಿಕೊಂಡಿದ್ದು ಬಿಟ್ಟರೆ, ಉಳಿದ ಹತ್ತು ಸುತ್ತುಗಳಲ್ಲೂ ಜಯ ಗಳಿಸಿ, ಗರಿಷ್ಠ 22ರಲ್ಲಿ 21 ಪಾಯಿಂಟ್ಸ್‌ ಗಳಿಸಿದ್ದು ಭಾರತ ಸಾಧಿಸಿದ ಪ್ರಾಬಲ್ಯಕ್ಕೆ ಪುರಾವೆ. ಭಾರತದ ಆಟಗಾರರು ಆಡಿದ ಒಟ್ಟು 44 ಪಂದ್ಯಗಳಲ್ಲಿ ಸೋತಿದ್ದು ಒಂದು ಮಾತ್ರ. ಭಾರತಕ್ಕೂ, ಎರಡನೇ ಸ್ಥಾನ ಗಳಿಸಿದ್ದ ಅಮೆರಿಕಕ್ಕೂ ನಾಲ್ಕು ಪಾಯಿಂಟ್‌ಗಳ ಅಂತರವಿತ್ತು. ಗುಕೇಶ್ ಮತ್ತು ಅರ್ಜುನ್ ಕ್ರಮವಾಗಿ ಒಂದನೇ ಮತ್ತು ಮೂರನೇ ಬೋರ್ಡ್‌ನಲ್ಲಿ ಅಮೋಘ ಸಾಧನೆಗಾಗಿ ವೈಯಕ್ತಿಕ ಚಿನ್ನಗಳನ್ನೂ ಗೆದ್ದರು. ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿರುವ ತೆಲಂಗಾಣದ ಅರ್ಜುನ್ ಇರಿಗೇಶಿ 11 ಪಂದ್ಯಗಳಿಂದ 10 ಪಾಯಿಂಟ್ಸ್ ಗಳಿಸಿದ್ದು ವೃದ್ಧಿಸುತ್ತಿರುವ ಅವರ ಸಾಮರ್ಥ್ಯಕ್ಕೆ ಕನ್ನಡಿ. 18 ವರ್ಷ ವಯಸ್ಸಿನ ಗುಕೇಶ್ 10 ಪಂದ್ಯಗಳಿಂದ 9 ಪಾಯಿಂಟ್ಸ್ ಕಲೆಹಾಕಿದರು. ಇವರಿಬ್ಬರ ಸ್ಥಿರ ಪ್ರದರ್ಶನದ ಜೊತೆಗೆ ವಿದಿತ್ ಗುಜರಾತಿ, ಪ್ರಜ್ಞಾನಂದ, ಹರಿಕೃಷ್ಣ ಅವರು ನೀಡಿದ ಬೆಂಬಲ ಭಾರತವನ್ನು ಚಾಂಪಿಯನ್ ಪಟ್ಟಕ್ಕೆ ತಂದು ನಿಲ್ಲಿಸಿತು. ಗುಕೇಶ್ ಈಗ ವಿಶ್ವ ಚೆಸ್‌ ಫೆಡರೇಷನ್‌ (ಫಿಡೆ) ಕ್ರಮಾಂಕ ಪಟ್ಟಿಯಲ್ಲಿ ಐದನೇ ಕ್ರಮಾಂಕಕ್ಕೆ ಏರಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಅನುಭವಿ ದ್ರೋಣವಲ್ಲಿ ಹಾರಿಕಾ ಜೊತೆಗೆ ಯುವ ಆಟಗಾರ್ತಿಯರಾದ ವೈಶಾಲಿ ಆರ್‌., ದಿವ್ಯಾ ದೇಶಮುಖ್, ವಂತಿಕಾ ಅಗರವಾಲ್ ಮತ್ತು ಮೀಸಲು ಆಟಗಾರ್ತಿಯಾಗಿ ತಾನಿಯಾ ಸಚ್‌ದೇವ್ ಭಾರತ ತಂಡದಲ್ಲಿದ್ದರು. ಜೂನ್‌ನಲ್ಲಿ ವಿಶ್ವ ಬಾಲಕಿಯರ ಜೂನಿಯರ್ ಚಾಂಪಿಯನ್ ಆಗಿದ್ದ ದಿವ್ಯಾ ಅವರ ಪ್ರದರ್ಶನ ಎಲ್ಲರ ಹುಬ್ಬೇರಿಸಿತು. ನಾಗ್ಪುರದ 19 ವರ್ಷ ವಯಸ್ಸಿನ ಈ ಆಟಗಾರ್ತಿ 11 ಸುತ್ತುಗಳ ಪೈಕಿ ಎಂಟರಲ್ಲಿ ಗೆದ್ದು, ಮೂರು ಡ್ರಾ ಮಾಡಿಕೊಂಡರು. ಅಷ್ಟೇ ಅಲ್ಲ, ಮೂರನೇ ಬೋರ್ಡ್‌ನಲ್ಲಿ ಈ ಸಾಧನೆಗಾಗಿ ವೈಯಕ್ತಿಕ ಚಿನ್ನದ ಪದಕವನ್ನೂ ಪಡೆದರು. ನಾಲ್ಕನೇ ಬೋರ್ಡ್‌ನಲ್ಲಿ ಆಡಿದ ದೆಹಲಿಯ ವಂತಿಕಾ ಅವರ ಆಟದ ಮಟ್ಟವೂ ಕಡಿಮೆಯೇನಾಗಿರಲಿಲ್ಲ. ಅವರ ಸಾಧನೆಗೂ ನಾಲ್ಕನೇ ಬೋರ್ಡ್‌ನ ಚಿನ್ನ ಒಲಿಯಿತು. ಇವರಿಬ್ಬರ ಸ್ಥಿರ ಪ್ರದರ್ಶನ ತಂಡದ ಯಶಸ್ಸಿನ ಓಟಕ್ಕೆ ಕಾರಣವಾಯಿತು. 11 ಸುತ್ತುಗಳಲ್ಲಿ ಭಾರತದ ವನಿತೆಯರು ಸೋತಿದ್ದು ಒಂದು (ಪೋಲೆಂಡ್ ಎದುರು) ಸುತ್ತಿನಲ್ಲಿ ಮಾತ್ರ. ಭಾರತದ ಯುವಪಡೆ ಕೆಲ ಸಮಯದಿಂದ ಅಮೋಘ ಪ್ರದರ್ಶನ ನೀಡುತ್ತಿದೆ. ಮಹಾಬಲಿಪುರಂನಲ್ಲಿ ನಡೆದ 2022ರ ಒಲಿಂಪಿಯಾಡ್‌ನಲ್ಲಿ ಭಾರತ ತಂಡಗಳು ಕಂಚಿನ ಪದಕ ಪಡೆದಿದ್ದವು. ಬಾಕುವಿನಲ್ಲಿ ಹೋದ ವರ್ಷದ ಆಗಸ್ಟ್‌ನಲ್ಲಿ ಪ್ರಜ್ಞಾನಂದ ಚೆಸ್‌ ವಿಶ್ವಕಪ್‌ ಫೈನಲ್‌ ತಲುಪಿದ್ದು ಜಗದ ಗಮನಸೆಳೆದಿತ್ತು. ಕೆನಡಾದಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಟೂರ್ನಿಯ ಪುರುಷರ ವಿಭಾಗದಲ್ಲಿ ಭಾರತದ ಮೂವರು, ಮಹಿಳಾ ವಿಭಾಗದಲ್ಲಿ ಇಬ್ಬರು ಭಾಗವಹಿಸಿದ್ದರು. ಎಂಟು ಆಟಗಾರರಷ್ಟೇ ಭಾಗವಹಿಸುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಗುಕೇಶ್‌ ವಿಜೇತರಾದರು. ಆ ಮೂಲಕ, ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್‌ ಲಿರೆನ್‌ ಅವರಿಗೆ ಚಾಲೆಂಜರ್ ಆಗಿದ್ದಾರೆ. ಅರ್ಜುನ್ ಇರಿಗೇಶಿ ವೇಗವಾಗಿ ರೇಟಿಂಗ್ ಏರಿಸಿಕೊಂಡು ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಈಗ 2,800ರ ರೇಟಿಂಗ್ ಸನಿಹದಲ್ಲಿದ್ದಾರೆ. ಈಗ ಒಲಿಂಪಿಯಾಡ್‌ನ ಯಶಸ್ಸು, ಕ್ರಿಕೆಟ್‌ಪ್ರಿಯ ಭಾರತದಲ್ಲಿ ಚೆಸ್‌ ಆಟದ ಬೆಳವಣಿಗೆಗೆ ಇನ್ನಷ್ಟು ಶಕ್ತಿ ತುಂಬಲಿದೆ. ನವೆಂಬರ್‌ 25ರಿಂದ ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ಗುಕೇಶ್ ಅವರಿಗೆ ಒಲಿಂಪಿಯಾಡ್‌ನ ಯಶಸ್ಸು ಇನ್ನಷ್ಟು ಉತ್ಸಾಹ ತುಂಬುವುದರಲ್ಲಿ ಸಂದೇಹವಿಲ್ಲ.

ವಂತಿಕಾ ಅಗರವಾಲ್
ಗುಕೇಶ್
ದಿವ್ಯಾ ದೇಶಮುಖ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT