ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ತಡೆ ಸಮಾವೇಶವು (ಸಿಒಪಿ29) ಅಜರ್‌ಬೈಜಾನ್‌ನ ಬಾಕುವಿನಲ್ಲಿ ಆರಂಭವಾಗಿದೆ. ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳಿಗೆ ಹಣಕಾಸು ಹೊಂದಿಸುವ ವಿಚಾರದಲ್ಲಿ ಹಲವು ಸವಾಲುಗಳು ಮತ್ತು ಭೀತಿಗಳು ಇದ್ದರೂ ಆಶಾಕಿರಣವೂ ಗೋಚರಿಸಿದೆ. 198 ದೇಶಗಳ ಪ್ರತಿನಿಧಿಗಳು ಮತ್ತು ಸಾವಿರಾರು ಮಂದಿ ಪರಿಸರ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆ ಆಗಿರುವ ಸಂದರ್ಭದಲ್ಲಿಯೇ ಈ ಸಮಾವೇಶವೂ ನಡೆಯುತ್ತಿದೆ. ಟ್ರಂಪ್ ಅವರು ಹವಾಮಾನ ಬದಲಾವಣೆ ತಡೆ ಕ್ರಮಗಳ ಪರವಾಗಿ ಇಲ್ಲ. ಅವರು ಮೊದಲ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಇದ್ದಾಗ ಪ್ಯಾರಿಸ್ ಒಪ್ಪಂದ ಸೇರಿದಂತೆ ಹವಾಮಾನ ಬದಲಾವಣೆ ತಡೆಯ ಎಲ್ಲ ಅಂತರರಾಷ್ಟ್ರೀಯ ಒಪ್ಪಂದಗಳಿಂದ ಅಮೆರಿಕ ಹೊರಹೋಗಿತ್ತು. ಅಮೆರಿಕವು ಜಗತ್ತಿನಲ್ಲಿಯೇ ಅತಿ ಹೆಚ್ಚು ಇಂಗಾಲ ಹೊರಸೂಸುವ ದೇಶ. ಜೊತೆಗೆ ಜಗತ್ತಿನ ಅತ್ಯಂತ ಶ್ರೀಮಂತ ದೇಶ. ಹೀಗಾಗಿ, ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮದ ವೆಚ್ಚ ಭರಿಸುವಲ್ಲಿ ಅಮೆರಿಕವು ದೊಡ್ಡ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂಬ ನಿರೀಕ್ಷೆ ಇದೆ. ಆದರೆ, ಅಮೆರಿಕ ಯಾವ ಪಾತ್ರ ವಹಿಸಬಹುದು ಎಂಬ ವಿಚಾರದಲ್ಲಿ ಈಗ ಅನಿಶ್ಚಿತ ಸ್ಥಿತಿ ಎದುರಾಗಿದೆ. ಶ್ರೀಮಂತ ದೇಶಗಳು, ತೈಲ ಉತ್ಪಾದಕ ದೇಶಗಳು ಸಮಾವೇಶದ ಗುರಿಗಳಿಗೆ ಯಾವ ಪ್ರಮಾಣದ ಬದ್ಧತೆ ತೋರಬಹುದು ಎಂಬುದರ ಕುರಿತು ಪ್ರಶ್ನೆಗಳು ಇವೆ. ಆತಿಥೇಯ ದೇಶದ ಬಗ್ಗೆಯೂ ಇದೇ ಬಗೆಯ ಪ್ರಶ್ನೆಗಳಿವೆ.
ವಿಶ್ವಸಂಸ್ಥೆಯು ನೀಡಿದ ಎಚ್ಚರಿಕೆಯೊಂದಿಗೆ ಸಮಾವೇಶ ಆರಂಭಗೊಂಡಿತು; ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿಗಳು ‘ಬಹುದೊಡ್ಡ ಗಂಡಾಂತರ ಎದುರಿಸುತ್ತಿವೆ’ ಮತ್ತು 2024ರಲ್ಲಿ ತಾಪಮಾನವು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳಿಗೆ ಹಣಕಾಸು ಹೊಂದಿಸುವುದೇ ಸಮಾವೇಶದ ಪ್ರಮುಖ ಕಾರ್ಯಸೂಚಿ– ಇದು ಅತಿ ಹೆಚ್ಚು ವಿವಾದಾತ್ಮಕವಾದ ವಿಷಯವೂ ಹೌದು. ಹವಾಮಾನ ಬದಲಾವಣೆ ತಡೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸುವ ಹೊಸ ತಂತ್ರಜ್ಞಾನ ಅಳವಡಿಕೆಗಾಗಿ 2020ರ ಹೊತ್ತಿಗೆ ವಾರ್ಷಿಕ 10 ಸಾವಿರ ಕೋಟಿ ಡಾಲರ್ (ಸುಮಾರು ₹ 8.43 ಲಕ್ಷ ಕೋಟಿ) ಮೊತ್ತವನ್ನು ಅಭಿವೃದ್ಧಿಶೀಲ ದೇಶಗಳಿಗೆ ನೀಡಬೇಕು ಎಂಬ 15 ವರ್ಷಗಳ ಹಿಂದಿನ ಕರಾರು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಿಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು ನಿಲ್ಲಿಸಬೇಕಿದ್ದರೆ ಚೀನಾವನ್ನು ಹೊರತುಪಡಿಸಿ ಇತರ ಅಭಿವೃದ್ಧಿಶೀಲ ದೇಶಗಳಿಗೆ 2030ರ ಹೊತ್ತಿಗೆ ವರ್ಷಕ್ಕೆ ಎರಡು ಲಕ್ಷ ಕೋಟಿ ಡಾಲರ್ (ಸುಮಾರು ₹168 ಲಕ್ಷ ಕೋಟಿ) ಬೇಕು ಎಂದು ವಿಶ್ವಸಂಸ್ಥೆ ಬೆಂಬಲಿತ ವರದಿಯೊಂದು ಹೇಳಿದೆ. ಇದರಲ್ಲಿ ಒಂದು ಲಕ್ಷ ಕೋಟಿ ಡಾಲರ್ (ಸುಮಾರು ₹84 ಲಕ್ಷ ಕೋಟಿ) ಅನ್ನು ಶ್ರೀಮಂತ ದೇಶಗಳು, ಹೂಡಿಕೆದಾರರು ಮತ್ತು ಅಭಿವೃದ್ಧಿ ಉದ್ದೇಶದ ಬ್ಯಾಂಕುಗಳು ನೀಡಬೇಕು; ಉಳಿದ ಮೊತ್ತವನ್ನು ಆಯಾ ದೇಶಗಳು ಆಂತರಿಕವಾಗಿ ಹೊಂದಿಸಿಕೊಳ್ಳಬೇಕು. ಬಾಕು ಸಮಾವೇಶದಲ್ಲಿ ಈ ನಿರ್ಣಾಯಕ ವಿಚಾರದ ಕುರಿತು ತೀರ್ಮಾನ ಆಗಬಹುದು, ಹಣಕಾಸಿನ ಹೊಸ ಗುರಿ ನಿಗದಿಯಾಗಬಹುದು ಮತ್ತು ಹಣಕಾಸು ಹೊಂದಿಸಿಕೊಳ್ಳಲು ಹೊಸ ವ್ಯವಸ್ಥೆ ರೂಪುಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಇಂಗಾಲ ಹೊರಸೂಸುವಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳ ಹೊಣೆಯನ್ನು ದೇಶಗಳು ವಹಿಸಿಕೊಳ್ಳಬೇಕು. ಅದರ ಪ್ರಕಾರ, ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚಿನ ದೇಣಿಗೆ ನೀಡಬೇಕು. ಆದರೆ, ಇದು ಸರಿಯಾಗಿ ಅನುಷ್ಠಾನ ಆಗಿಲ್ಲ. ಚೀನಾ ಮತ್ತು ಭಾರತದಲ್ಲಿ ತಲಾ ಇಂಗಾಲ ಹೊರಸೂಸುವಿಕೆಯು ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ; ಹಾಗಿದ್ದರೂ ಈ ಎರಡೂ ದೇಶಗಳು ದೇಣಿಗೆ ನೀಡಬೇಕು ಎಂದು ಅಭಿವೃದ್ಧಿ ಹೊಂದಿದ ದೇಶಗಳು ಬಯಸುತ್ತಿವೆ. ಪ್ರತಿಯೊಂದು ದೇಶವೂ ಇಂಗಾಲ ಹೊರಸೂಸುವಿಕೆ ಮತ್ತು ಪಳೆಯುಳಿಕೆ ಇಂಧನ ಬಳಕೆಯನ್ನು ಕಡಿತಗೊಳಿಸಿ, ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಹೊಸ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕಿದೆ. ಪ್ಯಾರಿಸ್ ಒಪ್ಪಂದದ ನಂತರದ ರಾಷ್ಟ್ರೀಯ ಹವಾಮಾನ ತಡೆಯ ಮೊದಲ ಪರಿಷ್ಕೃತ ಕಾರ್ಯಕ್ರಮಗಳನ್ನು ದೇಶಗಳು ಪ್ರಕಟಿಸುವ ಸಾಧ್ಯತೆ ಇದೆ. ಪ್ಯಾರಿಸ್ ಒಪ್ಪಂದದ ಬದ್ಧತೆಗಳಿಗೆ ಸಂಬಂಧಿಸಿ ಭಾರತವು ಇತರೆಲ್ಲ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ ಕೆಲಸ ಮಾಡಿದೆ. ಹಾಗಿದ್ದರೂ ಬಾಕು ಸಮಾವೇಶದಲ್ಲಿ ಭಾರತದ ಉಪಸ್ಥಿತಿಯು ಮಿತವಾದ ಪ್ರಮಾಣದಲ್ಲಷ್ಟೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.