ಹಗರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು– ಒಬ್ಬರು ಐಎಎಸ್, ಮತ್ತೊಬ್ಬರು ಐಪಿಎಸ್ ಅಧಿಕಾರಿ– ಒಂದೇ ದಿನ ಬಂಧನಕ್ಕೆ ಒಳಗಾಗಿರುವುದು ರಾಜ್ಯದಲ್ಲಿ ಭ್ರಷ್ಟಾಚಾರದ ಬೇರುಗಳು ಎಷ್ಟೊಂದು ಆಳಕ್ಕಿಳಿದಿವೆ ಎನ್ನುವುದಕ್ಕೆ ಜ್ವಲಂತ ನಿದರ್ಶನ. ತನಿಖಾ ತಂಡಗಳ ಮೂಗನ್ನು ಹೈಕೋರ್ಟ್ ಒಂದುವೇಳೆ ಅಷ್ಟು ಗಟ್ಟಿಯಾಗಿ ಹಿಡಿಯದೇ ಹೋಗಿದ್ದರೆ ಈ ಬಂಧನಗಳು ಇಷ್ಟು ಬೇಗ ಆಗುತ್ತಿದ್ದವೇ ಎಂಬ ಪ್ರಶ್ನೆ ಇದೆ. ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಯನ್ನು ಚುರುಕುಗೊಳಿಸಲು ಎಂತಹ ನೂಕುಬಲ ಬೇಕಿದೆ ಎಂಬುದನ್ನೂ ಈ ಪ್ರಕರಣಗಳು ಎತ್ತಿತೋರಿವೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿ ನಿರ್ದಿಷ್ಟ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರೂ ಆಗಿದ್ದ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ಸಿಐಡಿ ಬಂಧಿಸಿದೆ. ಪರೀಕ್ಷೆಯಲ್ಲಿ ಅಗತ್ಯ ಅಂಕಗಳೊಂದಿಗೆ ತೇರ್ಗಡೆ ಹೊಂದಲು ಹಲವು ಅಭ್ಯರ್ಥಿಗಳು ತಲಾ ₹ 80 ಲಕ್ಷದವರೆಗೆ ಲಂಚ ನೀಡಿದ್ದಾರೆ ಎಂದು ಹೇಳಲಾಗಿದೆ. ‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆರಂಭದಲ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ್ದನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ. ಆದರೆ, ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳು ಬಯಲುಗೊಳ್ಳುತ್ತಾ ಹೋದಂತೆ ತನಿಖೆಗೆ ಆದೇಶಿಸದೆ ರಾಜ್ಯ ಸರ್ಕಾರದ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ. ನೇಮಕಾತಿ ವಿಭಾಗದ ಮುಖ್ಯಸ್ಥ
ರಾಗಿದ್ದ ಅಧಿಕಾರಿಯ ಸುತ್ತಲೇ ಈಗ ಹಗರಣ ಸುತ್ತಿಕೊಂಡಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ₹100 ಕೋಟಿಗೂ ಅಧಿಕ ಮೊತ್ತ ಕೈಯಿಂದ ಕೈಗೆ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಪ್ರಶ್ನೆ ಏನೆಂದರೆ, ಇನ್ನೂ ಉನ್ನತ ಹುದ್ದೆಯಲ್ಲಿರುವವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಯೇಅಥವಾ ಪೌಲ್ ಅವರ ಹಂತಕ್ಕೆ ಅದು ಕೊನೆಗೊಂಡಿದೆಯೇ ಎನ್ನುವುದು. ಹಿರಿಯ ರಾಜಕಾರಣಿಗಳ ಸಂಬಂಧಿಕರೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆಪಾದನೆ ಮಾಡುತ್ತಿವೆ. ಅದೊಂದು ವೇಳೆ ನಿಜವೇ ಆಗಿದ್ದರೆ ಕಾನೂನಿನ ಕೈಗಳು ಅವರತನಕ ತಲುಪುವುದು ಸಂಶಯಾಸ್ಪದ. ಹಿಂದೆ ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ಎಎಪಿ ಮುಖಂಡ ಭಾಸ್ಕರ್ ರಾವ್, ‘ಅಮ್ರಿತ್ ಪೌಲ್ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಲ್ಲವನ್ನೂ ಬಹಿರಂಗಗೊಳಿಸ
ಬಹುದು, ಇಲ್ಲದಿದ್ದರೆ ಅವರ ಸೂತ್ರಧಾರರೇ ಅವರನ್ನು ರಕ್ಷಿಸುತ್ತಾರೆ’ ಎಂದು ಟ್ವೀಟ್ ಮಾಡಿರುವುದು ಬಲು ಅರ್ಥಗರ್ಭಿತ.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತೊಂದು ಪ್ರಕರಣದಲ್ಲಿ ಬಂಧಿಸಿದೆ. ಲಂಚ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಈ ಅಧಿಕಾರಿಗೆ ‘ರಕ್ಷಣೆ’ ನೀಡಲಾಗುತ್ತಿದೆ ಎಂದು ಎಸಿಬಿಗೆ ಹೈಕೋರ್ಟ್ ಛೀಮಾರಿ ಹಾಕಿದ ಮೇಲೆಯೇ ಈ ಬಂಧನವಾಗಿದೆ. ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದ ಉಪ ತಹಶೀಲ್ದಾರ್ ಹಾಗೂ ಗುತ್ತಿಗೆ ನೌಕರ ಇಬ್ಬರೂ ತಪ್ಪೊಪ್ಪಿಕೊಂಡು, ಭೂವ್ಯಾಜ್ಯದಲ್ಲಿ ಅನುಕೂಲಕರ ತೀರ್ಪು ನೀಡಲು ಜಿಲ್ಲಾಧಿಕಾರಿ ಪರವಾಗಿ ಆ ಲಂಚವನ್ನು ಪಡೆದಿದ್ದಾಗಿ ಹೇಳಿಕೆ ಕೊಟ್ಟಿದ್ದರು. ‘ಭ್ರಷ್ಟಾಚಾರದ ನೆಲೆ’ ಎಂದು ಕುಖ್ಯಾತಿ ಗಳಿಸಿದ ಜಿಲ್ಲಾಧಿಕಾರಿ ಕಚೇರಿ ಬೇಡದ ಕಾರಣಕ್ಕಾಗಿ ಸುದ್ದಿಯಲ್ಲಿರುವುದು ಇದೇ ಮೊದಲ ಸಲವೇನೂ ಅಲ್ಲ. ಜಿಲ್ಲಾಧಿಕಾರಿ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ಐಎಂಎ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಬಿ.ಎಂ. ವಿಜಯಶಂಕರ್ ಕೂಡ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡರು. ನಕಲಿ ಭೂದಾಖಲೆ ಸೃಷ್ಟಿಸಿದ ಆರೋಪದ ಮೇಲೆ, ಜಿಲ್ಲಾಧಿಕಾರಿಯಾಗಿದ್ದ ಎಂ.ಕೆ. ಅಯ್ಯಪ್ಪ ಕೂಡ ಬಂಧನಕ್ಕೆ ಒಳಗಾಗಿದ್ದರು.
ಭ್ರಷ್ಟಾಚಾರದ ಬ್ರಹ್ಮಾಂಡವನ್ನು ನೋಡಿಯೇ ನ್ಯಾಯಮೂರ್ತಿ ಎಚ್.ಬಿ. ಸಂದೇಶ್ ಅವರು, ‘ಎಸಿಬಿಯೇ ಭ್ರಷ್ಟರಅತಿದೊಡ್ಡ ಕೂಪವಾಗಿದೆ. ಎಸಿಬಿ ಕಚೇರಿಗಳೆಲ್ಲ ‘ಕಲೆಕ್ಷನ್ ಸೆಂಟರ್’ಗಳಾಗಿವೆ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಹಿಡಿಯೋದು ಬಿಟ್ಟು ಬಾಲಂಗೋಚಿಗಳನ್ನು ಹಿಡಿದುಕೊಂಡು ಕೋರ್ಟ್‌ಗೆ ಬರುತ್ತೀರಿ’ ಎಂದು ಎಸಿಬಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಇಚ್ಛಾಶಕ್ತಿ ರಾಜಕಾರಣಿಗಳಲ್ಲಿ ಇಲ್ಲ. ಏಕೆಂದರೆ, ಭ್ರಷ್ಟವ್ಯವಸ್ಥೆಯ ಬಹುದೊಡ್ಡ ಫಲಾನುಭವಿಗಳು ಅವರೇ ಆಗಿದ್ದಾರೆ. ಎಸಿಬಿಯು ಎಲ್ಲಿಯವರೆಗೆ ಅವರ ನಿಯಂತ್ರಣದಲ್ಲಿರುವುದೋ ಅಲ್ಲಿಯವರೆಗೆ ಅದು ಕೂಡ ಭ್ರಷ್ಟಾಚಾರವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ ಎಂಬುದನ್ನು ನಂಬುವುದು ಕಷ್ಟ. ಇಂತಹ ಸನ್ನಿವೇಶದಲ್ಲಿ ಕೋರ್ಟ್‌ವೊಂದೇ ಆಶಾಕಿರಣ. ಅದು ತನ್ನ ಹೊಣೆಯನ್ನು ನಿಭಾಯಿಸಿದ್ದರಿಂದಲೇ ಮೇಲಿನ ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ. ಆದರೆ, ತನ್ನಲ್ಲಿ ದಾಖಲಾದ ಪ್ರಕರಣಗಳಿಗೆ ಸೀಮಿತವಾಗಿ ಕ್ರಮ ಜರುಗಿಸುವಂತೆ ಕೋರ್ಟ್ ನೋಡಿಕೊಳ್ಳಬಹುದೇ ವಿನಾ ಇಡೀ ಭ್ರಷ್ಟ ವ್ಯವಸ್ಥೆಯನ್ನು ಅದೇ ಮೂಲೋತ್ಪಾಟನೆ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಮೇಲಿನ ಎರಡೂ ಬಂಧನಗಳು ಆಯಾ ಪ್ರಕರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸಲು ನೆರವಾಗಬಹುದೇ ಎಂಬುದು ಸದ್ಯದ ಮಟ್ಟಿಗೆ ಯಕ್ಷಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.