ADVERTISEMENT

ಸಂಪಾದಕೀಯ | ಇ–ಸ್ವತ್ತು ಹೊಸ ತಂತ್ರಾಂಶ; ಪಂಚಾಯಿತಿ ಮೇಲಿನ ವಿಶ್ವಾಸ ಹೆಚ್ಚಲಿ

ಇ-ಸ್ವತ್ತು ದಾಖಲೆ ನೀಡಿಕೆ ವ್ಯವಸ್ಥೆ ದುರ್ಬಳಕೆ ಆಗದಂತೆ ಬಿಗಿಯಾದ ನಿಗಾ ಇರಿಸಬೇಕು

ಸಂಪಾದಕೀಯ
Published 30 ಜುಲೈ 2024, 23:59 IST
Last Updated 30 ಜುಲೈ 2024, 23:59 IST
   

ರಾಜ್ಯದ ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳ ಹೊರವಲಯಗಳಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣ ಕೆಲವು ದಶಕಗಳಿಂದ ವ್ಯಾಪಕವಾಗಿ ಹೆಚ್ಚುತ್ತಿದೆ. ಭೂಪರಿವರ್ತನೆಯ ಆದೇಶ ಪಡೆಯದೆ ಮತ್ತು ಸಕ್ಷಮ ಪ್ರಾಧಿಕಾರಗಳಿಂದ ನಕ್ಷೆಗೆ ಅನುಮೋದನೆ ಪಡೆಯದೆ ಬಡಾವಣೆ ನಿರ್ಮಿಸುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಇ-ಸ್ವತ್ತು ದಾಖಲೆ ನೀಡುವ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನೇ ಬಂಡವಾಳ ಮಾಡಿಕೊಂಡು ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಪೂರಕ ದಾಖಲೆಗಳ ಕೊರತೆಯ ಮಧ್ಯೆಯೂ ಇ-ಸ್ವತ್ತು ದಾಖಲೆ ಪಡೆಯಲು ಇರುವ ಅವಕಾಶವನ್ನು ಈ ರೀತಿ ಬಡಾವಣೆ ನಿರ್ಮಿಸುವವರು ದೊಡ್ಡ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ.

ನಿಯಮಾನುಸಾರ ಅನುಮತಿಯನ್ನೇ ಪಡೆಯದೆ ಅನಧಿಕೃತವಾಗಿ ನಿರ್ಮಾಣ ಮಾಡಿದ ಬಡಾವಣೆಗಳಲ್ಲಿನ ನಿವೇಶನಗಳನ್ನು ಮಾರಾಟ ಮಾಡುವುದನ್ನು ತಡೆಯಲು ಅಂತಹ ಆಸ್ತಿಗಳ ನೋಂದಣಿ ನಿಯಂತ್ರಿಸುವಂತೆ ಹೈಕೋರ್ಟ್‌ 2012ರ ಜುಲೈನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕೃಷಿಯೇತರ ಆಸ್ತಿಗಳಿಗೆ ಇ-ಸ್ವತ್ತು ದಾಖಲೆಗಳನ್ನು ನೀಡುವ ವ್ಯವಸ್ಥೆಯನ್ನು 2013ರ ಜೂನ್‌ನಲ್ಲಿ ಜಾರಿಗೆ ತರಲಾಗಿತ್ತು. ಇದಕ್ಕಾಗಿಯೇ ತಂತ್ರಾಂಶವೊಂದನ್ನು ರೂಪಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅದರ ಮೂಲಕವೇ ಇ-ಸ್ವತ್ತು ದಾಖಲೆಯನ್ನು ಸೃಜಿಸಿ, ಸಂಬಂಧಿಸಿದವರಿಗೆ ನೀಡಲು ಅವಕಾಶ ಕಲ್ಪಿಸಿತ್ತು.

ಆದರೆ, ಇ-ಸ್ವತ್ತು ತಂತ್ರಾಂಶದಲ್ಲಿನ ನ್ಯೂನತೆಗಳು ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವವರಿಗೆ ವರದಾನವಾಗಿ ಪರಿಣಮಿಸಿದ್ದವು. ಆಸ್ತಿಯ ಮೂಲ, ತೆರಿಗೆ ಪಾವತಿ ಮಾಹಿತಿ, ಆಸ್ತಿಯ ಫೋಟೊಗಳಿಲ್ಲದೇ ಇ-ಸ್ವತ್ತು ನೀಡುವ ಅವಕಾಶ ಇತ್ತು. ಇದು ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ದಾಖಲೆ ನೀಡಿಕೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರಕ್ಕೂ ಬಾಗಿಲು ತೆರೆಯಿತು.

ADVERTISEMENT

ಪರಿಣಾಮವಾಗಿ ಗ್ರಾಮ ಪಂಚಾಯಿತಿಗಳು ನೀಡುವ ಇ-ಸ್ವತ್ತು ದಾಖಲೆಯನ್ನು ನಂಬಿ ಆಸ್ತಿ ಖರೀದಿಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. 11 ವರ್ಷಗಳಾದರೂ ಇ-ಸ್ವತ್ತು ತಂತ್ರಾಂಶದಲ್ಲಿನ ನ್ಯೂನತೆ, ಗೊಂದಲಗಳಿಗೆ ಪರಿಹಾರ ದೊರಕಿರಲಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣ, ಅವುಗಳಲ್ಲಿನ ಆಸ್ತಿಗಳ ಮಾರಾಟ ಸಲೀಸಾಗಿ ಮುಂದುವರಿದಿತ್ತು.

ಇ-ಸ್ವತ್ತು ದಾಖಲೆ ನೀಡಿಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದಕ್ಕಾಗಿ ಹೊಸ ತಂತ್ರಾಂಶವನ್ನು ರೂಪಿಸಿದ್ದು, ಸದ್ಯದಲ್ಲೇ ಅದರ ಬಳಕೆ ಆರಂಭವಾಗಲಿದೆ. ಆಸ್ತಿಗಳ ಮಾಲೀಕತ್ವ ಲಭಿಸಿದ ಬಗೆ, ತೆರಿಗೆ ಪಾವತಿ ಮತ್ತು ಬಾಕಿ, ಭೂ ಪರಿವರ್ತನೆ ಹಾಗೂ ಬಡಾವಣೆ ನಕ್ಷೆ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದರೆ ಮಾತ್ರವೇ ಹೊಸ ತಂತ್ರಾಂಶದಲ್ಲಿ ಇ-ಸ್ವತ್ತು ದಾಖಲೆ ಸೃಜಿಸಲು ಅವಕಾಶವಿದೆ. ಆಸ್ತಿಯ ಫೋಟೊ ಒದಗಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಈ ಕ್ರಮದಿಂದ ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆ ಮತ್ತು ನಕ್ಷೆ ಅನುಮೋದನೆ ಇಲ್ಲದೆ ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವುದನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅಂತಹ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ಸೃಜಿಸಲು ಸಾಧ್ಯವಾಗದೇ ಇದ್ದರೆ, ಅವುಗಳನ್ನು ಮಾರುವುದಕ್ಕೂ ಅವಕಾಶ ದೊರಕದು. ಆಗ ಅನಧಿಕೃತ ಬಡಾವಣೆಗಳೂ ನಿರ್ಮಾಣ ಆಗಲಾರವು. ಆಸ್ತಿಗಳ ಮೇಲಿನ ವ್ಯಾಜ್ಯ, ಸಾಲ, ಕಾನೂನು ತೊಡಕುಗಳು, ಗುತ್ತಿಗೆಗೆ ನೀಡಿರುವ ಮಾಹಿತಿಯನ್ನೂ ಇ-ಸ್ವತ್ತು ದಾಖಲೆಯಲ್ಲಿ ನಮೂದಿಸುವುದು ಕಡ್ಡಾಯವಾಗಲಿದೆ. ಇದರಿಂದ ಖರೀದಿದಾರರು ಮೋಸ ಹೋಗುವ ಸಾಧ್ಯತೆ ಕಡಿಮೆಯಾಗಲಿದೆ. ಹಳೆಯ ತಂತ್ರಾಂಶದಲ್ಲಿ ಆಸ್ತಿಗಳ ವರ್ಗೀಕರಣದಲ್ಲಿ ಇದ್ದ ಸಮಸ್ಯೆಯಿಂದಾಗಿ ಕೃಷಿ ಜಮೀನಿನಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಸವಾಲಾಗಿತ್ತು.

ಇದರಿಂದ ಗ್ರಾಮ ಪಂಚಾಯಿತಿಗಳ ತೆರಿಗೆ ವರಮಾನದ ಸೋರಿಕೆ ಆಗುತ್ತಿತ್ತು. ಈಗ ಹೊಸ ತಂತ್ರಾಂಶದಲ್ಲಿ ಇಂತಹ ಕಟ್ಟಡಗಳಿಗಾಗಿಯೇ ಪ್ರತ್ಯೇಕ ಪ್ರವರ್ಗವನ್ನು ಸೃಜಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಜಮೀನುಗಳಲ್ಲಿರುವ ಎಲ್ಲ ಕಟ್ಟಡಗಳನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಸಾಧ್ಯವಾಗಲಿದೆ.

ಈವರೆಗೆ ಬಳಕೆಯಲ್ಲಿದ್ದ ಇ-ಸ್ವತ್ತು ತಂತ್ರಾಂಶದಲ್ಲಿನ ನ್ಯೂನತೆಗಳು ಮತ್ತು ಅವುಗಳ ಪರಿಣಾಮವಾಗಿ ಉಂಟಾದ ಗೊಂದಲಗಳಿಗೆ ಹೊಸ ಇ-ಸ್ವತ್ತು ತಂತ್ರಾಂಶವು ಪರಿಹಾರ ದೊರಕಿಸುವ ಭರವಸೆ ಮೂಡಿದೆ. ತಳಮಟ್ಟದಲ್ಲಿ ಸಮಸ್ಯೆಗಳನ್ನು ಅರಿಯಲು ದೀರ್ಘಕಾಲ ಶ್ರಮವಹಿಸಿ ಇ-ಸ್ವತ್ತು ದಾಖಲೆ ನೀಡಿಕೆಯಲ್ಲಿನ ಎಲ್ಲ ನ್ಯೂನತೆಗಳಿಗೂ ಪರಿಹಾರ ಒದಗಿಸಬಹುದಾದ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿ, ಬಳಕೆಗೆ ತಂದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕ್ರಮ ಶ್ಲಾಘನೀಯ.

ಆದರೆ, ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವವರು ಮತ್ತು ಪಂಚಾಯಿತಿಗಳ ಅಧಿಕಾರಿವರ್ಗ ಹೊಸ ತಂತ್ರಾಂಶವನ್ನೂ ದುರ್ಬಳಕೆ ಮಾಡಲು ಯತ್ನಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇಲಾಖೆಯು ತಂತ್ರಾಂಶ ರೂಪಿಸುವಲ್ಲಿ ತೋರಿದ ಮುತುವರ್ಜಿಯನ್ನು ಅದರ ಅನುಷ್ಠಾನದಲ್ಲೂ ತೋರಬೇಕು. ಇ-ಸ್ವತ್ತು ದಾಖಲೆ ನೀಡಿಕೆ ವ್ಯವಸ್ಥೆ ದುರ್ಬಳಕೆ ಆಗದಂತೆ ಬಿಗಿಯಾದ ನಿಗಾ ಇರಿಸಬೇಕು. ಅನಧಿಕೃತ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ಸೃಜಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಗ್ರಾಮ ಪಂಚಾಯಿತಿಗಳು ನೀಡುವ ಇ-ಸ್ವತ್ತು ದಾಖಲೆಯ ವಿಶ್ವಾಸ ವೃದ್ಧಿಯಾಗುವುದರ ಜತೆಯಲ್ಲೇ ಅನಧಿಕೃತ ಬಡಾವಣೆಗಳ ನಿರ್ಮಾಣ ಹಾಗೂ ಅಲ್ಲಿನ ನಿವೇಶನಗಳ ನೋಂದಣಿಗೆ ಕಡಿವಾಣ ಬೀಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.