ಆಶ್ರಯ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಮನೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಗ್ರಾಮಸಭೆಗಳಿಗೆ ಇರುವ ಪರಮಾಧಿಕಾರವನ್ನು ಮೊಟಕುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಪುನರ್‌ಪರಿಶೀಲನೆಗೆ ಒಳಪಡಬೇಕಿದೆ. ಈ ತೀರ್ಮಾನವು ಪಂಚಾಯತ್ ರಾಜ್ ಆಶಯಗಳನ್ನು ಬುಡಮೇಲು ಮಾಡುತ್ತದೆ. ‘ಆಶ್ರಯ ಮನೆಗಳ ಹಂಚಿಕೆಯಲ್ಲಿ ಹಣ ದುರುಪಯೋಗ ಆಗಿದೆ. ಖೊಟ್ಟಿ ಬಿಲ್ ಮತ್ತು ಒಂದೇ ಮನೆಯನ್ನು ನಾಲ್ಕೈದು ಜನರಿಗೆ ಹಂಚಿದಂತೆ ದಾಖಲೆ ಸೃಷ್ಟಿಸಿ ಹಣ ಪಡೆದಿರುವುದು ಚಿತ್ರದುರ್ಗ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ನಡೆಸಿದ ಪರಿಶೀಲನೆಯಿಂದ ಹೊರಬಿದ್ದಿದೆ’ ಎಂದು ವಸತಿ ಸಚಿವರು ಹೇಳಿದ್ದಾರೆ. ಇಂತಹ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ತಹಶೀಲ್ದಾರ್ ಹಾಗೂ ಪಿ.ಡಿ.ಒ ಒಳಗೊಂಡ ಉಸ್ತುವಾರಿ ಸಮಿತಿ ರಚಿಸುವುದಾಗಿ ಅವರು ತಿಳಿಸಿದ್ದಾರೆ. ಅಕ್ರಮಗಳನ್ನು ತಡೆಯುವುದು ಅಗತ್ಯವಾಗಿ ಆಗಬೇಕಾದ ಕೆಲಸ. ಅಂತಹ ಕೃತ್ಯಗಳನ್ನು ಪತ್ತೆಹಚ್ಚಿ, ಅವುಗಳಲ್ಲಿ ಶಾಮೀಲಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಆದರೆ, ಅದನ್ನೇ ನೆಪವಾಗಿ ಇರಿಸಿಕೊಂಡು ಗ್ರಾಮಸಭೆಗಳ ಅಧಿಕಾರಕ್ಕೇ ಕತ್ತರಿ ಹಾಕುವುದು ತರವಲ್ಲ. ಗ್ರಾಮಸಭೆಗಳಲ್ಲಿ ಸಿದ್ಧಗೊಳ್ಳುವ ಫಲಾನುಭವಿಗಳ ಪಟ್ಟಿಗೆ ಉಸ್ತುವಾರಿ ಸಮಿತಿಯ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಿದರೆ ಗ್ರಾಮಸಭೆಯ ನಿರ್ಣಯಕ್ಕೆ ಏನು ಕಿಮ್ಮತ್ತು ಉಳಿಯುತ್ತದೆ? ಈ ಹಿಂದೆ, ಶಾಸಕರು ಮತ್ತು ಅಧಿಕಾರಿಗಳ ಹಸ್ತಕ್ಷೇಪದ ಬಗ್ಗೆಯೇ ದೂರುಗಳಿದ್ದವು. ಪ್ರಭಾವಿಗಳು, ಶಾಸಕರ ಹಿಂಬಾಲಕರು ಈ ಸವಲತ್ತನ್ನು ಕಬಳಿಸಿದ ಆರೋಪಗಳು ಇದ್ದವು. ಹೀಗಾಗಿಯೇ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲ ಕಾರ್ಯಕ್ರಮಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಲಾಯಿತು. ಈ ಪ್ರಕ್ರಿಯೆಯಲ್ಲಿ ಏನಾದರೂ ಲೋಪದೋಷಗಳು, ಅಧಿಕಾರ ದುರ್ಬಳಕೆ ಆಗಿದ್ದಲ್ಲಿ, ಅದಕ್ಕೆ ಕಾರಣರಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಅವಕಾಶ ಇದೆ. ಮಾತ್ರವಲ್ಲ, ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಅಕ್ರಮಗಳ ನೆಪ ಹೇಳಿಕೊಂಡು ಪಂಚಾಯಿತಿ ಸಂಸ್ಥೆಗಳ ಅಧಿಕಾರ ಕಸಿಯುವ ಪ್ರಯತ್ನದ ಹಿಂದೆ ಶಾಸಕರನ್ನು ಸಂತೃಪ್ತಗೊಳಿಸುವ ಹುನ್ನಾರವಿದೆ ಎಂದು ಯಾರಾದರೂ ಭಾವಿಸಿದರೆ ಅದನ್ನು ತಪ್ಪು ಎನ್ನಲಾಗದು.
ಪಂಚಾಯತ್ ರಾಜ್ ಕಾಯ್ದೆ ಮೂಲಕ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಶಕ್ತವಾಗಿ ಜಾರಿಗೊಳಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಈ ಕ್ರಾಂತಿಕಾರಕ ಪ್ರಯೋಗಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲವೇ ಮಂದಿ ಬಳಿ ಮಡುಗಟ್ಟಿದ್ದ ಅಧಿಕಾರವು ಪಂಚಾಯಿತಿ ಸಂಸ್ಥೆಗಳ ಮೂಲಕಸಮಾಜದ ಎಲ್ಲ ಸ್ತರದ ಜನರಿಗೂ ತಲುಪುವಂತಾಯಿತು. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೂ ನೀತಿ ನಿರೂಪಣೆಯ ಭಾಗವಾಗುವ ಅವಕಾಶ ದೊರೆಯಿತು. ಗ್ರಾಮಸಭೆಗಳಿಗೆ ಪರಮಾಧಿಕಾರ ನೀಡುವ ಮೊದಲು, ಆಶ್ರಯ ಮನೆಗಳ ಹಂಚಿಕೆಯು ಶಾಸಕರ ಆಣತಿಯಂತೆ ನಡೆಯುತ್ತಿತ್ತು. ಆ ಅಧಿಕಾರ ಕೈಜಾರಿದ್ದಕ್ಕೆ ಅವರಲ್ಲಿ ಮೊದಲಿನಿಂದಲೂ ಸಿಟ್ಟಿದೆ. ಅದನ್ನು ಅನೇಕ ಶಾಸಕರು ಹಿಂದಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದಾರೆ. ನಿಯಮಗಳನ್ನು ಬದಲಿಸಿ, ಪಂಚಾಯತ್ ಸಂಸ್ಥೆಗಳನ್ನು ದುರ್ಬಲಗೊಳಿಸುವ ಯತ್ನಗಳು ಆಗಿಂದಾಗ್ಗೆ ನಡೆಯುತ್ತಲೇ ಇವೆ. ಅದರ ಹಿಂದೆ ಶಾಸಕರ ಒತ್ತಡವೇ ಕೆಲಸ ಮಾಡಿದೆ ಎಂಬುದು ಗುಟ್ಟೇನಲ್ಲ. 2007 ಮತ್ತು 2016ರಲ್ಲೂ ಈ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿದ್ದವು. ಅದರ ವಿರುದ್ಧ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಮತ್ತು ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ಹೋರಾಟ ನಡೆಸಿದ್ದವು. ರಾಜ್ಯಪಾಲರು ಮತ್ತು ಹೈಕೋರ್ಟ್ ಮಧ್ಯಪ್ರವೇಶದಿಂದ ಸರ್ಕಾರದ ಉದ್ದೇಶ ಈಡೇರಿರಲಿಲ್ಲ. ಈಗಿನ ಪ್ರಯತ್ನವನ್ನೂ ಶಾಸಕರನ್ನು ಓಲೈಸುವ ಪರಿಪಾಟದ ಮುಂದುವರಿದ ಭಾಗವೆಂದೇ ಪರಿಗಣಿಸಬೇಕಾಗುತ್ತದೆ. ಶಾಸನ ರೂಪಿಸುವಂತಹ ಮೂಲ ಕರ್ತವ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದ ಶಾಸಕರಿಗೆ ಸ್ಥಳೀಯ ಆಡಳಿತದಲ್ಲಿ ಮೂಗು ತೂರಿಸಲು ಅವಕಾಶ ಕಲ್ಪಿಸುವುದು ವಿವೇಚನಾಯುತ ನಿರ್ಧಾರವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.