ಶಿಕ್ಷಣದ ಗುಣಮಟ್ಟ ಸುಧಾರಣೆಯ ದಿಸೆಯಲ್ಲಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಬೇಕು, ಮೂಲಸೌಕರ್ಯವನ್ನು ಹೆಚ್ಚಿಸಬೇಕು
ಕೇಂದ್ರ ಸರ್ಕಾರವು 2021–22ನೇ ಸಾಲಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ವರದಿಯನ್ನು ಈಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಆಗಿರುವ ಬೆಳವಣಿಗೆ ಹಾಗೂ ಅಭಿವೃದ್ಧಿ ಕುರಿತ ಸ್ವಾಗತಾರ್ಹವಾದ ಒಂದಿಷ್ಟು ಸಂಗತಿಗಳು ಇವೆ. ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಆಗಿರುವುದನ್ನು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರ್ಪಡೆ ಆಗುತ್ತಿರುವುದು ಹೆಚ್ಚಾಗಿರುವುದನ್ನು ಇದು ತೋರಿಸುತ್ತಿದೆ. 2014–15ರ ನಂತರದಲ್ಲಿ ದೇಶದಲ್ಲಿ ಹೊಸದಾಗಿ ಏಳು ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳು ಆರಂಭವಾಗಿವೆ, ವಿದ್ಯಾರ್ಥಿಗಳ ಸೇರ್ಪಡೆಯಲ್ಲಿನ ಹೆಚ್ಚಳವು ಶೇಕಡ 25ಕ್ಕಿಂತ ಜಾಸ್ತಿ ಇದೆ. 3.42 ಕೋಟಿ ಇದ್ದ ವಿದ್ಯಾರ್ಥಿಗಳ ಸಂಖ್ಯೆಯು 4.33 ಕೋಟಿಗೆ ತಲುಪಿದೆ.
2014–15ರ ನಂತರದಲ್ಲಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರುವ ಪ್ರಮಾಣವು ಶೇ 32ರಷ್ಟು ಜಾಸ್ತಿ ಆಗಿದೆ. ಅಂದರೆ ಪುರುಷ ವಿದ್ಯಾರ್ಥಿಗಳ ಸೇರ್ಪಡೆಯಲ್ಲಿ ಆಗಿರುವ ಹೆಚ್ಚಳಕ್ಕಿಂತ, ಮಹಿಳಾ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣವು ಜಾಸ್ತಿ ಇದೆ. ಎಲ್ಲ ವಿಭಾಗಗಳಲ್ಲಿಯೂ ವಿದ್ಯಾರ್ಥಿನಿಯರ ಸೇರ್ಪಡೆಯಲ್ಲಿ ಬೆಳವಣಿಗೆ ಒಳ್ಳೆಯ ಮಟ್ಟದಲ್ಲಿದೆ. 2.12 ಲಕ್ಷ ಇರುವ ಪಿಎಚ್.ಡಿ ವಿದ್ಯಾರ್ಥಿಗಳ ಪೈಕಿ ಮಹಿಳೆಯರ ಪಾಲು 98 ಸಾವಿರಕ್ಕಿಂತ ಹೆಚ್ಚು. ಈಗ ಸ್ನಾತಕೋತ್ತರ ಹಂತದಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಹೆಚ್ಚು. ಉನ್ನತ ಶಿಕ್ಷಣದ ವಿವಿಧ ಹಂತಗಳಲ್ಲಿ ಪದವಿ ಪಡೆದವರಲ್ಲಿ ಮಹಿಳೆಯರ ಪಾಲು ಶೇ 50.8ರಷ್ಟು.
ಸಮೀಕ್ಷೆಯ ಮೂಲಕ ಸಂಗ್ರಹಿಸಿರುವ ದತ್ತಾಂಶ ಗಳು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರಲು ಸಹಾಯಕ. ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ. ಜನಸಂಖ್ಯೆಯನ್ನು ಅಭಿವೃದ್ಧಿ ಸಾಧಿಸಲು ಪ್ರಮುಖ ಉಪಕರಣವನ್ನಾಗಿ ಬಳಕೆ ಮಾಡಿಕೊಳ್ಳಬೇಕು ಎಂಬುದು ಒಪ್ಪಿತ ಸಂಗತಿ. ಯುವಜನರ ಶಿಕ್ಷಣದ ಮಟ್ಟವನ್ನು ಹೆಚ್ಚು ಮಾಡುವುದು ಅಗತ್ಯ. ಹಾಗೆ ಮಾಡಿದಾಗ, ದೇಶದ ಅರ್ಥ ವ್ಯವಸ್ಥೆಯ ಬೇರೆ ಬೇರೆ ವಲಯಗಳಲ್ಲಿ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆಗುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗುವ ಪ್ರಮಾಣವು (ಜಿಇಆರ್) ಶೇಕಡ 28.4ರಷ್ಟು ಇದೆ. ಇದನ್ನು ಇನ್ನಷ್ಟು ಸುಧಾರಿಸಲು ಅವಕಾಶ ಇದೆ. ಕರ್ನಾಟಕದಲ್ಲಿ ಈ ಪ್ರಮಾಣವು ಶೇ 36.2ರಷ್ಟು ಇದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ತುಸು ಹೆಚ್ಚು. ಹೀಗಿದ್ದರೂ, ತಮಿಳುನಾಡಿನಲ್ಲಿ ದಾಖಲಾಗಿರುವ ಶೇ 47ರ ಮಟ್ಟಕ್ಕಿಂತ ಕಡಿಮೆ.
ಈ ಸಮೀಕ್ಷೆಯಲ್ಲಿ ಕೆಲವು ಕಳವಳಗಳನ್ನು ಕೂಡ ಪ್ರಸ್ತಾಪಿಸಲಾಗಿದೆ. ಏಳು ವರ್ಷಗಳ ಹಿಂದೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಸಂಖ್ಯೆಯು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಂಖ್ಯೆಗಿಂತ ಕಡಿಮೆ ಇತ್ತು. ಆದರೆ ಈಗ ಅವುಗಳ ಸಂಖ್ಯೆಯಲ್ಲಿನ ಹೆಚ್ಚಳದ ಪ್ರಮಾಣವು ಶೇ 81ರಷ್ಟು. ಇದೇ ಅವಧಿಯಲ್ಲಿ ಸರ್ಕಾರಿ ಸಂಸ್ಥೆಗಳ ಸಂಖ್ಯೆಯಲ್ಲಿನ ಹೆಚ್ಚಳವು ಶೇ 53ರಷ್ಟು ಮಾತ್ರ. ಖಾಸಗಿ ಸಂಸ್ಥೆಗಳ ಶುಲ್ಕ ಹಾಗೂ ಇತರ ವೆಚ್ಚಗಳು ಸರ್ಕಾರಿ ಸಂಸ್ಥೆಗಳಲ್ಲಿನ ವೆಚ್ಚಗಳಿಗಿಂತ ಹೆಚ್ಚಿರುತ್ತವೆ. ಇದರಿಂದಾಗಿ, ದುರ್ಬಲ ವರ್ಗಗಳಿಗೆ ಸೇರಿದವರಿಗೆ ಈ ಸಂಸ್ಥೆಗಳನ್ನು ಸೇರುವುದು ಕಷ್ಟಸಾಧ್ಯ. ಉನ್ನತ ಶಿಕ್ಷಣ ಕ್ಷೇತ್ರದಿಂದ ಸರ್ಕಾರವು ಹಿಂದೆ ಸರಿಯಬಾರದು. ಅದರ ಬದಲಿಗೆ, ಸರ್ಕಾರವು ಇಲ್ಲಿ ತನ್ನ ಇರುವಿಕೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರ ನೇಮಕವು ಅಗತ್ಯ ಅನುಸಾರ ಆಗುತ್ತಿಲ್ಲ. ಇದು ಕೂಡ ಕಳವಳ ಮೂಡಿಸುವಂಥದ್ದು.
ಬೋಧಕ–ವಿದ್ಯಾರ್ಥಿ ಅನುಪಾತ ಕುಸಿದಲ್ಲಿ ಶಿಕ್ಷಣದ ಗುಣಮಟ್ಟ ಕೂಡ ಇಳಿಕೆ ಕಾಣುತ್ತದೆ. ಬೋಧಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಬೇಕು, ಮೂಲಸೌಕರ್ಯವನ್ನು ಹೆಚ್ಚಿಸಬೇಕು. ಆಗ ಶಿಕ್ಷಣದ ಗುಣಮಟ್ಟವು ಸುಧಾರಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅಗತ್ಯಗಳಿಗೆ ಅನುಗುಣವಾಗಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯ ಇದೆ ಎಂಬುದನ್ನು ಸಮೀಕ್ಷೆಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.