ಹುಲಿಗಳ ಸಂತಾನದ ಸಮೃದ್ಧಿಯಿಂದಾಗಿ ಬರುವ ಸಮಸ್ಯೆಗಳನ್ನು ನಾಜೂಕಿನಿಂದ ನಿವಾರಿಸಿಕೊಳ್ಳಬೇಕಿದೆ
ಜಗತ್ತೇ ಮೆಚ್ಚಿಕೊಳ್ಳುವಂತೆ ಭಾರತದ ‘ಹುಲಿ ಯೋಜನೆ’ ಯಶಸ್ಸಿನ 50ನೇ ವರ್ಷಕ್ಕೆ ಕಾಲಿಟ್ಟಿದೆ. ಐವತ್ತು ವರ್ಷಗಳ ಹಿಂದೆ 1,780ರಷ್ಟಿದ್ದ ಹುಲಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತ, ಈ ಐದು ದಶಕಗಳಲ್ಲಿ 3,682ಕ್ಕೆ ಏರಿದೆ. ಇದು ಬಹುದೊಡ್ಡ ಸಾದನೆ.
ಏಕೆಂದರೆ, ಇದೇ ಅವಧಿಯಲ್ಲಿ ಜನಸಂಖ್ಯೆ (1970ರಲ್ಲಿ 55 ಕೋಟಿ ಇದ್ದುದು) 140 ಕೋಟಿಗೆ ಏರಿದೆ, ಪ್ರಜೆಗಳ ಜೀವಿತಾವಧಿ ಏರಿದೆ, ಕೃಷಿ ವಿಸ್ತರಣೆ ಹೆಚ್ಚುತ್ತಲೇ ಹೋಗಿದೆ, ವನ್ಯಬೇಟೆಗೆ ಬಳಸುವ ಶಸ್ತ್ರಾಸ್ತ್ರಗಳ ಗುಣಮಟ್ಟ ಹೆಚ್ಚಾಗಿದೆ. ಇವೆಲ್ಲವುಗಳ ನಡುವೆಯೂ ಹುಲಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಹುಲಿಗಳನ್ನು ಅವುಗಳ ಸಹಜ ಪರಿಸರದಲ್ಲೇ ನೋಡಲು ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದರಿಂದ ಹಣದ ಗಳಿಕೆಯೂ ಗಣನೀಯವಾಗಿ ಹೆಚ್ಚಿದೆ.
ರಾಷ್ಟ್ರದ ಈ ಯಶಸ್ಸಿನಲ್ಲಿ ಕರ್ನಾಟಕದ ಪಾಲು ದೊಡ್ಡದು. ನಮ್ಮ ಅರಣ್ಯ ರಕ್ಷಕರು, ವನ್ಯಜೀವಿ ವಿಜ್ಞಾನಿಗಳು ಹಾಗೂ ವನಪ್ರೇಮಿಗಳ ಸಹಯೋಗದಿಂದ ಹುಲಿಗಳ ಸಂರಕ್ಷಿತ ಪ್ರದೇಶಗಳ ಸಂಖ್ಯೆ ಹೆಚ್ಚಾಗಿದ್ದು, ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು ಅಷ್ಟೇ ಅಲ್ಲ, ದೇಶಕ್ಕೇ ಮಾದರಿಯಾಗುವಂತೆ ಹುಲಿಗಳ ಗಣತಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡಿದ್ದು ಕರ್ನಾಟಕದ ಹೆಗ್ಗಳಿಕೆಯಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 563ಕ್ಕೆ ಏರಿದೆ. ಸಹಜವಾಗಿಯೇ ಜುಲೈ 29ರ ‘ಅಂತರರಾಷ್ಟ್ರೀಯ ವ್ಯಾಘ್ರ ದಿನ’ದಂದು ಈ ಸಂಭ್ರಮ ವನಪ್ರೇಮಿಗಳಲ್ಲಿ ಗರಿಗೆದರಿದ್ದು ನಾನಾ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.
ಆದರೆ ಹುಲಿಗಳ ಸಂಖ್ಯಾವೃದ್ಧಿಯಿಂದಾಗಿ ಸುಶಿಕ್ಷಿತ, ನಗರವಾಸಿ ವನ್ಯಪ್ರೇಮಿಗಳಲ್ಲಿ ಕಂಡಷ್ಟೇ ಸಂಭ್ರಮ ಅಭಯಾರಣ್ಯದ ಸುತ್ತಲೂ ವಾಸಿಸುತ್ತಿರುವ ತಳಸಮುದಾಯದಲ್ಲಿ, ರೈತರಲ್ಲಿ ಮನೆಮಾಡಿದೆಯೇ ಎಂದು ಕೇಳಿದರೆ ನಮಗೆ ಭಿನ್ನ ಚಿತ್ರಣವೇ ಸಿಕ್ಕೀತು. ಹುಲಿಗಳ ಸಂಖ್ಯಾವೃದ್ಧಿಯಿಂದಾಗಿ ಹುಲಿಗಳಿಗೂ ತೊಂದರೆ ಆಗುತ್ತಿದೆ, ಸುತ್ತ ವಾಸಿಸುತ್ತಿರುವ ಜನಸಮುದಾಯಕ್ಕೂ ಸಂಕಷ್ಟಗಳು ದಿನೇದಿನೇ ಹೆಚ್ಚುತ್ತಿವೆ.
ಉದಾಹರಣೆಗೆ, ನಾಗರಹೊಳೆ ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಪ್ರತಿ ಹುಲಿಗೆ ಓಡಾಡಲು ಸರಾಸರಿ ಹತ್ತು ಚದರ ಕಿಲೊಮೀಟರ್ ಸ್ಥಳಾವಕಾಶ ಇದ್ದುದು ಈಗ ಆರು ಚದರ ಕಿಲೊಮೀಟರ್‌ಗೆ ಇಳಿದಿದೆ. ದಟ್ಟಣೆ ಹೆಚ್ಚಿದ್ದರಿಂದ ಹುಲಿಗಳು ಗಡಿರಕ್ಷಣೆ– ವಿಸ್ತರಣೆಗೆಂದು ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಸಾವಪ್ಪುತ್ತಿರುವ ವರದಿಗಳೂ ಆಗಾಗ ಬರುತ್ತಿವೆ.
ನಮ್ಮ ರಾಜ್ಯದ ಶೇಕಡ 40ರಷ್ಟು ಹುಲಿಗಳು ಸಂರಕ್ಷಿತ ಪ್ರದೇಶಗಳ ಹೊರಗಡೆಯೇ ವಾಸಿಸುತ್ತಿವೆ. ಸಹಜವಾಗಿ ಅಲ್ಲೆಲ್ಲ ಮನುಷ್ಯರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಕಾಡಾನೆ, ಕಾಡುಹಂದಿ, ಕಾಟಿ ಮತ್ತು ಮಂಗಗಳ ಹಾವಳಿಯಿಂದ ರೈತರು ಈಗಾಗಲೇ ರೋಸಿಹೋಗಿದ್ದಾರೆ. ಅವುಗಳ ಬೇಟೆಗೆಂದು ಬೆನ್ನಟ್ಟಿ ಬಫರ್ ವಲಯವನ್ನು ದಾಟಿ ಬರುವ ಹುಲಿಗಳು ದನ-ಕುರಿಗಳನ್ನು ಕೊಂದಾಗ ಕುಪಿತ ರೈತರು ವಿಷ ಹಾಕಿಯೊ, ಉರುಳಿಗೆ ಸಿಕ್ಕಿಸಿಯೊ ಅಥವಾ ವಿದ್ಯುತ್ ಆಘಾತ ಕೊಟ್ಟೋ ಹುಲಿಗಳನ್ನು ಸಾಯಿಸುತ್ತಾರೆ.
ಹಿಂದೆ ರಾಜಮಹಾರಾಜರ ಮತ್ತು ಬ್ರಿಟಿಷ್ ಅಧಿಕಾರಿಗಳ ಬಂದೂಕಿನಿಂದಾಗಿ ಅಳಿವಿನಂಚಿಗೆ ಬಂದಿದ್ದ ಹುಲಿಗಳು ಈಗ ರಕ್ಷಿತಾರಣ್ಯಗಳ ಆಸುಪಾಸಿನಲ್ಲಿ ವಾಸಿಸುವ ರೈತಸಮುದಾಯದ ದೇಸಿ ಮಾರಕಾಸ್ತ್ರಗಳಿಗೆ ಬಲಿಯಾಗಬೇಕಿದೆ. ಈ ಸಮಸ್ಯೆಯನ್ನು ನಿವಾರಿಸುವ ದಿಸೆಯಲ್ಲಿ ಬಫರ್ ವಲಯವನ್ನೇ ಮೂಲ ಅರಣ್ಯದೊಳಕ್ಕೆ ಸೇರಿಸುವ ಕೆಲಸ ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಕೆಲವೆಡೆ ನಡೆದಿದೆ.
ವನ್ಯಜೀವಿಗಳ ಸಂರಕ್ಷಣೆಯ ಸಮಸ್ಯೆ ತೀರಾ ಸಂಕೀರ್ಣವಾದುದು. ಹುಲಿಗಳು ಬದುಕಬೇಕೆಂದರೆ ಮೇಯುವ ಜೀವಿಗಳ ಸಂಖ್ಯೆ ಸಾಕಷ್ಟಿರಬೇಕು. ಅಲ್ಲಿ ಲಂಟಾನಾ, ಯುಪಟೋರಿಯಂ, ಪಾರ್ಥೇನಿಯಂನಂತಹ ಕಳೆ ಇರಬಾರದು. ಕಳೆ ನಿಯಂತ್ರಣಕ್ಕೆಂದು ವ್ಯಾಪಕ ಪ್ರಮಾಣದಲ್ಲಿ ಕಳೆನಾಶಕ ರಾಸಾಯನಿಕಗಳನ್ನು ಸುರಿಯುತ್ತಾ ಹೋದರೆ (ಇತ್ತೀಚೆಗೆ ದಾಂಡೇಲಿ ಅರಣ್ಯವಲಯದಲ್ಲಿ ವಿಷ ಸಿಂಪಡಣೆ ಮಾಡುತ್ತಿದ್ದ ಅಧಿಕಾರಿಯೇ ಅಸುನೀಗಿದ್ದಾರೆ) ಅಲ್ಲಿ ಮೇಯುವ ವನ್ಯಜೀವಿಗಳಿಗೂ ಅಪಾಯ ತಪ್ಪಿದ್ದಲ್ಲ.
ಅನಾರೋಗ್ಯಪೀಡಿತ ಜಿಂಕೆ, ಕಡವೆ, ಕಾಟಿಗಳನ್ನು ಹಿಡಿದು ಭಕ್ಷಿಸುವ ಹುಲಿ, ಚಿರತೆಗಳ ಸಂತಾನ ಅದೆಷ್ಟು ಸುದೃಢ ಇದ್ದೀತೊ ಎಲ್ಲೂ ಅಧ್ಯಯನ ನಡೆದಂತಿಲ್ಲ. ಮೇಲಾಗಿ, ರಕ್ಷಿತಾರಣ್ಯದ ಸೀಮಿತ ವಲಯದಲ್ಲಿ ವಾಸಿಸುವ ಪ್ರಾಣಿಗಳು ಅನಿವಾರ್ಯವಾಗಿ ತಮ್ಮತಮ್ಮೊಳಗೇ ವಂಶಾಭಿವೃದ್ಧಿ ಮಾಡಿಕೊಳ್ಳುತ್ತಿದ್ದರೂ ತಳಿದೌರ್ಬಲ್ಯ ತಲೆದೋರುತ್ತದೆ. ಹಿಂದಿನಂತೆ ಹುಲಿಗಳು ಸುದೃಢ ಸಂತಾನಕ್ಕಾಗಿ ಒಂದು ಕಾಡಿನಿಂದ ಇನ್ನೊಂದಕ್ಕೆ ನಿರಾತಂಕವಾಗಿ ಚಲಿಸುವಂತೆಯೂ ಇಲ್ಲ.
ವಿವಿಧ ಅಭಯಾರಣ್ಯಗಳನ್ನು ಮತ್ತೆ ಹಸಿರುಪಟ್ಟಿಯ ಮೂಲಕ ಜೋಡಿಸುವುದಂತೂ ಸಾಧ್ಯವಿಲ್ಲ. ರಕ್ಷಿತ ಅರಣ್ಯವಲಯದ ಆಸುಪಾಸಿನ ರೈತರ ಜಮೀನನ್ನು ಖರೀದಿಸಿ ಅರಣ್ಯ ವಿಸ್ತರಣೆ ಮಾಡುವುದೂ ಸುಲಭದ್ದಲ್ಲ. ಈಗ ಉಳಿದ ಒಂದೇ ಉಪಾಯವೆಂದರೆ, ಹುಲಿಗಳ ಸಂಖ್ಯೆ ತೀರಾ ಜಾಸ್ತಿ ಇರುವ ಬಂಡೀಪುರ- ನಾಗರಹೊಳೆಯಂಥ ಕ್ಷೇತ್ರಗಳಿಂದ ಕಡಿಮೆ ದಟ್ಟಣೆ ಇರುವ ಅರಣ್ಯಗಳಿಗೆ ಅವುಗಳ ಸ್ಥಾನಾಂತರ ಮಾಡುವುದು. ಸವಾಲು ಬೆಟ್ಟದಷ್ಟಿದೆ. ಸಮೃದ್ಧಿಯಿಂದಾಗಿ ಬರುವ ಸಮಸ್ಯೆಗಳನ್ನು ನಾಜೂಕಿನಿಂದ ನಿವಾರಿಸಿಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.