ADVERTISEMENT

ಸಂಪಾದಕೀಯ: ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ– ಕಠಿಣ ಶಿಕ್ಷೆಯಾಗಲಿ

ಸಂಪಾದಕೀಯ

ಸಂಪಾದಕೀಯ
Published 13 ಡಿಸೆಂಬರ್ 2023, 19:19 IST
Last Updated 13 ಡಿಸೆಂಬರ್ 2023, 19:19 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿ ಥಳಿಸಿರುವ ದೌರ್ಜನ್ಯ ಪಶು ಪ್ರವೃತ್ತಿಯನ್ನೂ ನಾಚಿಸುವಷ್ಟು ಅಮಾನುಷವಾದುದು ಹಾಗೂ ನಾಗರಿಕ ಸಮಾಜದಲ್ಲಿ ಸುಪ್ತವಾಗಿರುವ ಹಿಂಸೆ–ಕ್ರೌರ್ಯವನ್ನು ಸೂಚಿಸುವಂತಹದ್ದು.

ದೌರ್ಜನ್ಯಕ್ಕೊಳಗಾದ ಮಹಿಳೆಯ ಪುತ್ರ ತನ್ನ ಪ್ರೇಮಿಯೊಂದಿಗೆ ಊರು ಬಿಟ್ಟು ಹೋಗಿರುವ ಘಟನೆಯ ಹಿನ್ನೆಲೆಯಲ್ಲಿ, ಯುವತಿಯ ಕುಟುಂಬದವರು ಈ ಹೀನಕೃತ್ಯ ಎಸಗಿದ್ದಾರೆ. ಹುಡುಗನ ತಾಯಿಯನ್ನು ಬೆತ್ತಲುಗೊಳಿಸಿ, ಬೀದಿಯಲ್ಲಿ ಓಡಾಡಿಸಿದ ನಂತರ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಊರು ತೊರೆದಿರುವ ಪ್ರೇಮಿಗಳಿಬ್ಬರೂ ಒಂದೇ ಜಾತಿಗೆ ಸೇರಿದ್ದರೂ ಯುವತಿಯ ಕುಟುಂಬದವರು ಮದುವೆಗೆ ಒಪ್ಪಿಗೆ ನೀಡಿಲ್ಲ.

ADVERTISEMENT

ಯುವತಿಗೆ ಬೇರೊಂದು ಸಂಬಂಧವನ್ನು ಗೊತ್ತುಪಡಿಸಿ ನಿಶ್ಚಿತಾರ್ಥ ನಡೆಸಿದ್ದಾರೆ. ಇದರಿಂದಾಗಿ ಯುವಕ, ಯುವತಿ ಯಾರಿಗೂ ಹೇಳದೆ ಊರು ಬಿಟ್ಟುಹೋಗಿದ್ದಾರೆ. ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಕ್ರುದ್ಧಗೊಂಡ ಯುವತಿಯ ಕಡೆಯವರು ಯುವಕನ ತಾಯಿಯನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ.

ಮಹಿಳೆಯರ ಮೇಲೆ ನಡೆಯುವ ಬಹುತೇಕ ದೌರ್ಜನ್ಯದ ಕೃತ್ಯಗಳಲ್ಲಿ ಜಾತಿ ವ್ಯಸನದ ವಿಕೃತಿ ಇರುತ್ತದಾದರೂ ಹೆಣ್ಣನ್ನು ತನ್ನ ಅಡಿಯಾಳಾಗಿ ಭಾವಿಸುವ ಪುರುಷ ಅಹಂಕಾರವೂ ಪ್ರಮುಖವಾಗಿ ಇರುತ್ತದೆ. ಸುಪ್ತವಾಗಿ ಇರುವ ಈ ಅಹಂಕಾರ ಅಥವಾ ದರ್ಪ, ಅವಕಾಶ ಸಿಕ್ಕಾಗ ಪ್ರಕಟಗೊಳ್ಳುತ್ತದೆ. ಹೆಣ್ಣನ್ನು ಸರಕಿನಂತೆ ಭಾವಿಸುವ ಗಂಡು ಮನಃಸ್ಥಿತಿಗೆ ಜಾತಿ ಶ್ರೇಷ್ಠತೆಯ ಗೀಳೂ ಜೊತೆಯಾದಲ್ಲಿ ಸಂತ್ರಸ್ತ ಹೆಣ್ಣಿನ ಸ್ಥಿತಿ ಮತ್ತಷ್ಟು ಘೋರವಾಗಿರುತ್ತದೆ.

ವಂಟಮೂರಿ ಗ್ರಾಮದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಮಾನಭಂಗ, ಕೊಲೆ ಯತ್ನ, ಹಲ್ಲೆ, ದೊಂಬಿ, ನಿಂದನೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್‌, ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಆದೇಶಿಸಿರುವುದು ಸಮಾಧಾನ ತರುವ ಬೆಳವಣಿಗೆ. ಆದಷ್ಟು ಬೇಗ ವಿಚಾರಣೆ ಮುಗಿದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯ ಪ್ರಕಾರ, ಮಹಿಳೆಯರನ್ನು ಬೆತ್ತಲೆಗೊಳಿಸುವ ವಿಕೃತ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕರ್ನಾಟಕದಲ್ಲಿಯೂ ವರ್ಷದಿಂದ ವರ್ಷಕ್ಕೆ  ಹೆಚ್ಚುತ್ತಲೇ ಇವೆ. ಮಹಿಳೆಯರನ್ನು ವಿವಸ್ತ್ರಗೊಳಿಸುವ ಉದ್ದೇಶದ ದೌರ್ಜನ್ಯ ಪ್ರಕರಣಗಳು 2022ರಲ್ಲಿ ಅತಿಹೆಚ್ಚು ದಾಖಲಾಗಿರುವ ಮೂರನೇ ರಾಜ್ಯ ಕರ್ನಾಟಕ. ಒಡಿಶಾ ಹಾಗೂ ಉತ್ತರಪ್ರದೇಶ ಮೊದಲೆರಡು ಸ್ಥಾನಗಳಲ್ಲಿರುವ ರಾಜ್ಯಗಳಾಗಿವೆ. ಇದೇ ವರ್ಷದ ಮೇ ತಿಂಗಳಲ್ಲಿ, ಕುಕಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ ಮಣಿಪುರದಿಂದ ವರದಿಯಾಗಿತ್ತು.

ಕೌಟುಂಬಿಕ ಹಾಗೂ ಸಮುದಾಯಗಳ ನಡುವಿನ ಕಲಹಗಳು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವಲ್ಲಿ ಕೊನೆಗೊಳ್ಳುವುದು ದುರದೃಷ್ಟಕರ. ಈ ಘಟನೆಗಳು, ಮಹಿಳೆಯರಲ್ಲಿ ಅಸುರಕ್ಷಿತ ಭಾವನೆಯನ್ನು ಉಂಟುಮಾಡುವುದರ ಜೊತೆಗೆ, ಲಿಂಗತಾರತಮ್ಯದ ಸಮರ್ಥನೆಯೂ ಆಗಿರುತ್ತವೆ. ಮಹಿಳೆಯರನ್ನು ಅವಮಾನಿಸುವ ಕೃತ್ಯಗಳು ನಡೆದಾಗ ಸಮಾಜದಲ್ಲಿ ಭಾವುಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ದೌರ್ಜನ್ಯದ ಪ್ರಕರಣಗಳನ್ನು ರಾಜಕಾರಣದ ಕಣ್ಣೋಟದ ಮೂಲಕ ವಿಶ್ಲೇಷಿಸುವ ಪ್ರಯತ್ನಗಳು ನಡೆಯುತ್ತವೆ.

ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆನ್ನುವ ‘ಬುಲ್ಡೋಜರ್‌ ನ್ಯಾಯಪದ್ಧತಿ’ಯ ಪ್ರತಿಪಾದನೆಯೂ ಆಗುತ್ತದೆ. ಆದರೆ, ದುಂಡಾವರ್ತಿ ನಡವಳಿಕೆಗಳಿಗೆ ಅದೇ ಮಾರ್ಗದಲ್ಲಿ ಪ್ರತಿಕ್ರಿಯಿಸುವುದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ನ್ಯಾಯಾಲಯದ ಆಚೆಗಿನ ಯಾವುದೇ ನ್ಯಾಯನಿರ್ಣಯವು ಅಧಿಕಾರ ಮತ್ತು ಕಾನೂನಿನ ಅಪಬಳಕೆಯಾಗಿರುತ್ತದೆ ಹಾಗೂ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಪ್ರಯತ್ನವಾಗಿರುತ್ತದೆ. ಕೃತ್ಯ ಅದೆಷ್ಟೇ ಅಮಾನುಷವಾಗಿದ್ದರೂ ಅದನ್ನು ಕಾನೂನಿನ ಮೂಲಕವೇ ಎದುರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಿವಾರ್ಯ.

ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವಷ್ಟಕ್ಕೆ ಸರ್ಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಹೆಣ್ಣನ್ನು ಅವಮಾನಗೊಳಿಸುವ ಪ್ರತಿಯೊಂದು ಕೃತ್ಯವೂ ಲಿಂಗಸಮಾನತೆಯನ್ನು ಜಾರಿಗೆ ತರುವ ಪ್ರಯತ್ನಕ್ಕೆ ಎದುರಾಗುವ ಹಿನ್ನಡೆ ಎಂದೇ ಭಾವಿಸಬೇಕು ಹಾಗೂ ಅಂತಹ ಕೃತ್ಯಗಳಿಗೆ ಅವಕಾಶವಿಲ್ಲದಂತೆ ಸಮಾಜ ಹಾಗೂ ಶಿಕ್ಷಣವನ್ನು ಮಾನವೀಯಗೊಳಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.