ವಸತಿ ನಿಲಯದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಸರಣಿಯೋಪಾದಿ ಯಲ್ಲಿ ಪ್ರಕರಣಗಳು ದಾಖಲಾಗಿವೆ. ಇಡೀ ಸಮಾಜ ಆಘಾತಕ್ಕೆ ಒಳಗಾಗುವಂತಹ ಪ್ರಕರಣವಿದು. ರಾಜ್ಯದಲ್ಲಿ ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಕ್ಕಳ ಹಕ್ಕುಗಳಿಗೆ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು
(ಕೆಎಸ್‌ಸಿಪಿಸಿಆರ್) ಕಾಯಂ ಅಧ್ಯಕ್ಷ, ಸದಸ್ಯರಿಲ್ಲದೇ ದುರ್ಬಲಗೊಂಡಿದೆ. ಆಯೋಗವು ರಾಜ್ಯದಲ್ಲಿ ಮಕ್ಕಳ ಹಕ್ಕುಗಳಿಗೆ ರಕ್ಷಣೆ ಒದಗಿಸುವುದಕ್ಕಾಗಿಯೇ ಇರುವ ಅರೆನ್ಯಾಯಿಕ ಪ್ರಾಧಿಕಾರ.
ಈ ಆಯೋಗಕ್ಕೆ ಹತ್ತು ತಿಂಗಳಿನಿಂದ ಕಾಯಂ ಅಧ್ಯಕ್ಷರೇ ಇಲ್ಲ. ಆರು ಸದಸ್ಯರ ಅಧಿಕಾರದ ಅವಧಿ ಜುಲೈ 9ಕ್ಕೆ ಕೊನೆಗೊಂಡಿದ್ದು, ಮೂರೂವರೆ ತಿಂಗಳಿನಿಂದ ಇಡೀ ಆಯೋಗವೇ ಅಸ್ತಿತ್ವ ಕಳೆದುಕೊಂಡಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಯಾವುದೇ ಪ್ರಕರಣದ ವಿಚಾರಣೆ ನಡೆಸಲು ಮತ್ತು ಆದೇಶ ಹೊರಡಿಸಲು ಸಾಧ್ಯವಾಗದ ಸ್ಥಿತಿ ಆಯೋಗದಲ್ಲಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳಿಗೆ ಆರ್‌ಟಿಇ ಅಡಿ ಶಾಲೆಗಳಿಗೆ ನೀಡಬೇಕಿದ್ದ ಪ್ರವೇಶವನ್ನು ನಿರಾಕರಿಸುವುದು ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ 1,200ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ವಿಚಾರಣೆಗೆ ಬಾಕಿ ಇವೆ.
ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುವ ಅಧಿಕಾರವನ್ನು ಆಯೋಗ ಹೊಂದಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ, ಶಿಫಾರಸುಗಳನ್ನು ಮಾಡುವ ಜವಾಬ್ದಾರಿಯೂ ಆಯೋಗಕ್ಕಿದೆ. ಅಧ್ಯಕ್ಷರು, ಸದಸ್ಯರೇ ಇಲ್ಲದೆ ಆಯೋಗದ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ ಯಾತ್ರೆ’ಯು ಕರ್ನಾಟಕದಲ್ಲಿ ಸಾಗುತ್ತಿರುವಾಗ ಬಾಲಕನೊಬ್ಬ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ನಡೆಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮ
ಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್), ರಾಹುಲ್ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ರವಾನಿಸಿತ್ತು.
ಆದರೆ, ಮುರುಘಾ ಮಠದ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪದಡಿ ದಾಖಲಾದ ಪ್ರಕರಣದ ವರದಿ ಕೇಳಿ ಸ್ಥಳೀಯ ಪೊಲೀಸರಿಗೆ ಪತ್ರ ಬರೆಯುವುದಕ್ಕೆ ಸೀಮಿತವಾಯಿತು ಎನ್‌ಸಿಪಿಸಿಆರ್ ಪಾತ್ರ. ಇಂತಹ ಆಯೋಗಗಳು ತಮ್ಮ ಅಧಿಕಾರವನ್ನು ಸರಿಯಾಗಿ ಚಲಾಯಿಸುವ ಬದಲಿಗೆ ಅಧಿಕಾರದಲ್ಲಿರುವ ರಾಜಕಾರಣಿಗಳ ಕೈಗೊಂಬೆಯಂತೆ ಹೇಗೆ ಕೆಲಸ ಮಾಡುತ್ತವೆ ಮತ್ತು ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಲು ಹೇಗೆ ಬಳಕೆಯಾಗುತ್ತವೆ ಎಂಬುದಕ್ಕೆ ಇದು ಸಾಕ್ಷಿ.
ಕೇಂದ್ರ ಸರ್ಕಾರವು ಜಾರಿಗೊಳಿಸಿದ ‘ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ–2005’ರ ಅಡಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾರ್ಯನಿರ್ವಹಿಸುತ್ತದೆ. 2007ರಲ್ಲಿ ರಾಜ್ಯದಲ್ಲಿ ಆಯೋಗವು ಅಸ್ತಿತ್ವಕ್ಕೆ ಬಂದಿದೆ. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆ ಖಾಲಿ ಆದಾಗಲೆಲ್ಲ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಬಾರಿ ದೀರ್ಘ ಕಾಲದಿಂದ ಎಲ್ಲ ಹುದ್ದೆಗಳು ಖಾಲಿ ಉಳಿದಿವೆ.
ಕೆಎಸ್‌ಸಿಪಿಸಿಆರ್ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ರಾಜ್ಯ ಸರ್ಕಾರ ತೋರುತ್ತಿರುವ ವಿಳಂಬ ಧೋರಣೆಯು ಅದು ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಹೊಂದಿರುವ ನಿರಾಸಕ್ತಿಯನ್ನು ಎತ್ತಿ ತೋರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಐದು ಮಂದಿಯ ಹೆಸರನ್ನು ಮುಖ್ಯಮಂತ್ರಿಯವರಿಗೆ ಶಿಫಾರಸು ಮಾಡಲಾಗಿದೆ. ಆರು ಸದಸ್ಯ ಸ್ಥಾನಗಳಿಗೆ 80 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವವರ ಪರವಾಗಿ ಪ್ರಭಾವಿ ಸಚಿವರು, ರಾಜಕಾರಣಿಗಳು ಮತ್ತು ಮಠಾಧೀಶರು ಪ್ರಭಾವ ಬೀರುತ್ತಿರುವ ಆರೋಪಗಳಿವೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಯ್ಕೆ
ಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿವೆ. ಮುರುಘಾ ಮಠದ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿರುವ ವಿದ್ಯಾರ್ಥಿನಿಯರೆಲ್ಲರೂ ಕೆಎಸ್‌ಸಿಪಿಸಿಆರ್ ಬಳಿ ಹೋಗದೆ ಸರ್ಕಾರೇತರ ಸಂಸ್ಥೆಯೊಂದರ ನೆರವು ಪಡೆದಿರುವುದು ಆಯೋಗದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆ ಮೂಡುವಂತೆ ಮಾಡಿದೆ.
ಯಾವುದೇ ರಾಜಕೀಯ ಪಕ್ಷದ ನಂಟು ಹೊಂದಿಲ್ಲದ, ಮಕ್ಕಳ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಬದ್ಧತೆ ಹೊಂದಿರುವ ವ್ಯಕ್ತಿಗಳನ್ನು ಆಯೋಗದ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ನೇಮಿಸುವುದರಿಂದ ಮಾತ್ರ ಆಯೋಗದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಾಧ್ಯ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ, ಸದಸ್ಯರ ನೇಮಕಾತಿ ವಿಚಾರದಲ್ಲಿ ಮುಖ್ಯಮಂತ್ರಿಯವರು ಯಾವುದೇ ಒತ್ತಡಕ್ಕೆ ಮಣಿಯದೆ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು. ಆ ಮೂಲಕ ರಾಜ್ಯದಲ್ಲಿ ಮಕ್ಕಳ ಹಕ್ಕುಗಳಿಗೆ ರಕ್ಷಣೆ ಒದಗಿಸುವ ಭರವಸೆಯನ್ನು ಮೂಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.