ADVERTISEMENT

ಸಂಪಾದಕೀಯ | ಜನಪರ ಆಡಳಿತ: ವಿರೋಧ ಪಕ್ಷದ ನಾಯಕನ ಹೊಣೆಯೂ ಗುರುತರ

ಸಂಪಾದಕೀಯ
Published 20 ನವೆಂಬರ್ 2023, 0:30 IST
Last Updated 20 ನವೆಂಬರ್ 2023, 0:30 IST
   

ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಜವಾಬ್ದಾರಿ ವಿರೋಧ ಪಕ್ಷದ ನಾಯಕನದು

ಕಾಂಗ್ರೆಸ್‌ ನೇತೃತ್ವದ ಈಗಿನ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆಯುವ ಹೊತ್ತಿಗಾದರೂ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆರ್. ಅಶೋಕ ಅವರನ್ನು ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆಯ ಜೊತೆಯಲ್ಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನೂ ಬದಲಿಸುವ ಮಾತು ಮುನ್ನೆಲೆಗೆ ಬಂದಿತ್ತು. ಅಳೆದೂ ತೂಗಿ ಕೊನೆಗೂ ಈಗ ಎರಡೂ ಸ್ಥಾನಗಳಿಗೆ ಆಯ್ಕೆ ಮತ್ತು ನೇಮಕ ಆಗಿದೆ.

‘ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲೂ ಆಗಿಲ್ಲ’ ಎಂಬ ಕಾಂಗ್ರೆಸ್‌ ನಾಯಕರ ನಿರಂತರ ಲೇವಡಿಯಿಂದ ಬಿಜೆಪಿಯ ಸ್ಥಳೀಯ ನಾಯಕರ ನೈತಿಕ ಸ್ಥೈರ್ಯ ಕುಸಿದಂತಾಗಿತ್ತು. ತಡವಾಗಿಯಾದರೂ ಆದ ಈ ಆಯ್ಕೆ ಮತ್ತು ನೇಮಕದಿಂದಾಗಿ ಪಕ್ಷದ ನಾಯಕರು ನಿಟ್ಟುಸಿರು ಬಿಡುವಂತಾಗಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನವು ವಿರೋಧ ಪಕ್ಷದ ನಾಯಕನಿಲ್ಲದೇ ಮುಗಿದಿತ್ತು. ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಜರುಗಲಿದೆ.

ADVERTISEMENT

ಈ ಅಧಿವೇಶನಕ್ಕೆ ಮುನ್ನವೇ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿರುವುದರಿಂದ ಬಿಜೆಪಿಯು ಮತ್ತೊಮ್ಮೆ ಮುಜುಗರಕ್ಕೆ ಸಿಲುಕುವುದರಿಂದ ಪಾರಾಗಿದೆ. ವಿರೋಧ ಪಕ್ಷದ ನಾಯಕನ ಆಯ್ಕೆಯ ದಿನ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ, ಅಶೋಕ ಅವರ ಆಯ್ಕೆಯು ಬಹುಮತದ ನಿರ್ಧಾರವೇ ವಿನಾ ಸರ್ವಾನು
ಮತದಿಂದ ಆಗಿರುವುದಲ್ಲ ಎಂಬುದು ಸ್ಪಷ್ಟ. ಬಿಜೆಪಿಯ 66ರ ಶಾಸಕರ ಪೈಕಿ, ಇಬ್ಬರು ಬಂಡಾಯವೆದ್ದು ಸಭೆಯಿಂದ ಹೊರನಡೆದರೆ, ಮೂವರು ಗೈರುಹಾಜ ರಾಗಿದ್ದರು. ಹಟಕ್ಕೆ ಬಿದ್ದು ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಏರಿಸುವಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದಾರೆ.

ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿಯೂ ಅವರ ಮಾತೇ ಮೇಲುಗೈ ಸಾಧಿಸಿದೆ ಎಂಬ ಚರ್ಚೆ ಪಕ್ಷದ ವಲಯದಲ್ಲೇ ನಡೆದಿದೆ. ಸರ್ಕಾರದ ನೀತಿ–ನಿಲುವುಗಳಲ್ಲಿನ ಅರೆಕೊರೆಗಳನ್ನು ಎತ್ತಿಹಿಡಿಯುವುದರ ಜೊತೆಗೆ ಜನರ ಬವಣೆಗಳನ್ನು ಸದನದ ಕಲಾಪದಲ್ಲಿ ಸಮರ್ಥವಾಗಿ ಮಂಡಿಸಿ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ನಾಯಕ ಪರ್ಯಾಯ ಶಕ್ತಿಕೇಂದ್ರವಾಗಿ ರೂಪುಗೊಂಡರೆ, ತಮ್ಮ ಮಗನ ಭವಿಷ್ಯಕ್ಕೆ ಸವಾಲು ಎದುರಾಗಬಹುದೆಂಬ ಯಡಿಯೂರಪ್ಪ ಅವರ ಆತಂಕವೂ ಈ ಆಯ್ಕೆಯ ಹಿಂದೆ ಕೆಲಸ ಮಾಡಿದೆ ಎಂಬ ಮಾತನ್ನು ಅಲ್ಲಗಳೆಯಲಾಗದು.

ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ವಿಧಾನಸಭೆ ಹಾಗೂ ಪರಿಷತ್ತಿನ ವಿರೋಧ ಪಕ್ಷದ
ನಾಯಕರಾಗಿದ್ದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದಕ್ಕೊಂದು ಘನತೆ, ಸಾರ್ವಜನಿಕ ಸಭ್ಯತೆಯ ಮೆರುಗು ಮೂಡಿಸಿದ್ದಾರೆ, ಜನಪರ ಕಾಳಜಿಯ ಚೌಕಟ್ಟನ್ನು ರೂಪಿಸಿಕೊಟ್ಟಿದ್ದಾರೆ. ತಮ್ಮ ಸಾಮರ್ಥ್ಯವನ್ನು ಹುರಿಗೊಳಿಸಿಕೊಂಡು ಈ ಉದಾತ್ತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸವಾಲು ಅಶೋಕ ಅವರ ಮುಂದಿದೆ. ಏಳು ಬಾರಿ ಶಾಸಕರಾಗಿ, ಹಲವು ಸಚಿವ ಖಾತೆಗಳನ್ನು ನಿಭಾಯಿಸಿದ ಅನುಭವ ಇರುವ ಅಶೋಕ ಅವರು, ತಾವು ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದ ಆಚೆಗೆ ತಮ್ಮ ವ್ಯಕ್ತಿತ್ವವನ್ನು ಹಿಗ್ಗಿಸಿಕೊಂಡವರಲ್ಲ. ರಾಜ್ಯ ಮಟ್ಟದ ನಾಯಕನಾಗಿ ಹೊರಹೊಮ್ಮುವ ಅವಕಾಶವನ್ನು ಪಕ್ಷ ಈಗ ಅವರಿಗೆ ಕಲ್ಪಿಸಿದೆ.

ಸಂಸದೀಯ ಪ್ರಜಾಸತ್ತೆಯಲ್ಲಿ ಮುಖ್ಯಮಂತ್ರಿಗೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷದ ನಾಯಕನಿಗೂ ಇದೆ. ಹೀಗಾಗಿ, ಈ ಸ್ಥಾನವನ್ನು ಛಾಯಾಮುಖ್ಯಮಂತ್ರಿ ಎಂದೇ ಕರೆಯಲಾಗುತ್ತದೆ. ಆಡಳಿತ ಪಕ್ಷದ ಲೋಪ–ದೋಷಗಳನ್ನು ತಿದ್ದುವ ಮೂಲಕ ಜನರ ನೋವಿಗೆ ದನಿಯಾಗಬೇಕಾದ ಗುರುತರ ಹೊಣೆ ಈ ಸ್ಥಾನದ್ದಾಗಿದೆ. ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಹೊಣೆಯೂ ಇದೆ. ಹೀಗೆ, ಕಾರ್ಯನಿರ್ವಹಿಸಬೇಕಾದರೆ ಕರ್ನಾಟಕ ಭೌಗೋಳಿಕ ಚಹರೆಗಳ ಅರಿವಿರಬೇಕು. ನೆಲದ ದನಿಗೆ ಕಿವಿಗೊಟ್ಟು, ಅದನ್ನು ಆಳುವವರ ಕಿವಿಗೆ ಮುಟ್ಟಿಸಿ, ಸರ್ಕಾರವನ್ನು ಬಡಿದೆಬ್ಬಿಸುವ ಚಾತುರ್ಯವೂ ಬೇಕು. ಅಲಕ್ಷಿತ ಸಮುದಾಯಗಳ ಸಂಕಷ್ಟ, ಮುಖ್ಯವಾಗಿ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಅನುಭವಿಸುತ್ತಿರುವ ಶೋಷಣೆಗಳ ಬಗ್ಗೆ ಅಧ್ಯಯನದಿಂದ ದಕ್ಕಿಸಿಕೊಂಡ ವಿವರಗಳಿದ್ದರಷ್ಟೇ ಸರ್ಕಾರ ತಪ್ಪಿ ನಡೆದಾಗ ಚಾಟಿ ಬೀಸಲು ಸಾಧ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯದ ಸಂಬಂಧ, ನೀತಿಗಳ ಪರಿಣಾಮ, ಮುಖ್ಯವಾಗಿ ಹಣಕಾಸಿನ ವಿಷಯದ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ, ಸರ್ಕಾರ ಹೇಳಿದ್ದನ್ನೇ ನಂಬಿ ಕೂರಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಅಬ್ಬರ, ಸಭಾಧ್ಯಕ್ಷರ ಪೀಠದ ಎದುರು ಧರಣಿ, ಸಭಾತ್ಯಾಗವು ಅತ್ಯುತ್ತಮ ನಾಯಕ ಆರಿಸಿಕೊಳ್ಳಬೇಕಾದ ದಾರಿಯಲ್ಲ.

ಸಾರ್ವಜನಿಕ ಸಭ್ಯತೆ, ಸಭಾ ಘನತೆಯನ್ನು ಕಾಪಾಡಿಕೊಂಡು ಸರ್ಕಾರವನ್ನು ಮಣಿಸುವ ವಾಕ್‌ ಸಾಮರ್ಥ್ಯ ಮತ್ತು ಶಾಸಕರನ್ನು ಒಟ್ಟಿಗೆ ಕರೆದೊಯ್ಯವ ಚಾತುರ್ಯವೂ ಬೇಕು. 135 ಶಾಸಕರೊಂದಿಗೆ ಭಾರಿ ಬಹುಮತ ಇರುವ ಆಡಳಿತ ಪಕ್ಷ ಇರುವಾಗ ವಿರೋಧ ಪಕ್ಷದ ನಾಯಕ ದುರ್ಬಲನಾದರೆ, ಸರ್ಕಾರ ಆಡಿದ್ದೇ ಆಟ ಎಂಬಂತಾಗುತ್ತದೆ. ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಲು ಅಗತ್ಯ ತಯಾರಿ ಮಾಡಿಕೊಂಡರೆ ಅಶೋಕ ಅವರಿಗೆ ಇದು ಕಷ್ಟದ ಹಾದಿಯಲ್ಲ. ಬಳಸಿಕೊಳ್ಳದಿದ್ದರೆ ಜನರಿಗೆ, ರಾಜ್ಯಕ್ಕೆ ಹಾಗೂ ಅವರು ಪ್ರತಿನಿಧಿಸುವ ಪಕ್ಷಕ್ಕೆ ನಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.