ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ನೀತಿ ಆಯೋಗದ ಸಭೆಯು ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವವನ್ನು ಪ್ರದರ್ಶಿಸುವ ಬದಲು, ಒಡಕನ್ನು ತೋರಿಸುವ ಮೂಲಕ ಮುಕ್ತಾಯ ಕಂಡಿದೆ. ಈ ಸಭೆಯ ಪ್ರಧಾನ ವಿಷಯ ‘ವಿಕಸಿತ ಭಾರತ @ 2047’ ಆಗಿತ್ತು. ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಿಂದ ದೂರ ಉಳಿದರು. ಈ ಪೈಕಿ, ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳ ನೇತೃತ್ವದ ಸರ್ಕಾರಗಳು ಇರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯನ್ನು ಬಹಿಷ್ಕರಿಸಿದ್ದರು. ಇವರಲ್ಲಿ ಕರ್ನಾಟಕದ ಮುಖ್ಯಮಂತ್ರಿಯೂ ಇದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಗೆ ಬಂದಿದ್ದರಾದರೂ ಮಧ್ಯದಲ್ಲೇ ಎದ್ದು ಹೊರನಡೆದರು. ತಮ್ಮ ಕ್ರಮವನ್ನು ಅವರು ಬಹಿಷ್ಕಾರ ಎಂದೇ ಕರೆದರು.
ನೀತಿ ಆಯೋಗದ ಚಟುವಟಿಕೆಗಳ ಕುರಿತು ಹಿಂದೆಯೂ ಟೀಕೆಗಳು ಇದ್ದವು. ಆದರೆ ಈಗಿನ ಬಹಿಷ್ಕಾರವು ಒಕ್ಕೂಟ ವ್ಯವಸ್ಥೆಯಲ್ಲಿನ ಸಂಬಂಧಗಳು ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ನೀತಿ ಆಯೋಗದ ಪಾತ್ರದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಮಾಡಿದೆ. ನೀತಿ ಆಯೋಗವನ್ನು ಮೋದಿ ನೇತೃತ್ವದ ಸರ್ಕಾರವು 2015ರಲ್ಲಿ ಸಲಹಾ ಸಂಸ್ಥೆಯ ರೂಪದಲ್ಲಿ ರಚಿಸಿತ್ತು. ಅದುವರೆಗೆ ಇದ್ದ ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗವನ್ನು ರಚಿಸಲಾಯಿತು. ನೀತಿ ಆಯೋಗವು ಸಹಕಾರ ಒಕ್ಕೂಟ ವ್ಯವಸ್ಥೆಗೆ ಇಂಬು ಕೊಡುತ್ತದೆ ಎಂಬ ನಿರೀಕ್ಷೆ ಹೊಂದಲಾಗಿತ್ತು.
ಕೇಂದ್ರ ಬಜೆಟ್‌ನಲ್ಲಿ ನ್ಯಾಯಸಮ್ಮತವಾದ ಪಾಲು ಸಿಕ್ಕಿಲ್ಲ, ಯೋಜನೆಗಳ ಹಂಚಿಕೆಯಲ್ಲಿ ತಾರತಮ್ಯ
ಆಗಿದೆ ಎಂದು ಅನ್ನಿಸಿದ ಕಾರಣಕ್ಕೆ ರಾಜ್ಯಗಳು ಸಭೆಯನ್ನು ಬಹಿಷ್ಕರಿಸಿದ್ದವು. ಆದರೆ, ಈ ರೀತಿ ಬಹಿಷ್ಕಾರ ಮಾಡಿರುವುದಕ್ಕೆ ಹಳೆಯ ಕಾರಣಗಳೂ ಇವೆ. ನೀತಿ ಆಯೋಗವು ಯಾವಾಗಲೂ ಕೇಂದ್ರ ಸರ್ಕಾರದ ಜೊತೆ ನಿಂತಿದೆಯೇ ವಿನಾ ಅದು ರಾಜ್ಯಗಳ ಜೊತೆ ಹೆಚ್ಚು ಸಂವಾದ ನಡೆಸಿಲ್ಲ. ಆಯೋಗವು ರಾಜ್ಯಗಳ ಸಕ್ರಿಯ ಭಾಗೀದಾರಿಕೆಗೆ ಅವಕಾಶ ಕಲ್ಪಿಸುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೇಂದ್ರ ಸರ್ಕಾರದ ಸಲಹಾ ಸಂಸ್ಥೆಯ ರೂಪದಲ್ಲಿಯೇ ಕೆಲಸ ಮಾಡುತ್ತಾ ಬಂದಿದೆ.
ರಾಜ್ಯಗಳಿಗೆ ಸಂಪನ್ಮೂಲ ಹಂಚುವುದರಲ್ಲಿ ಯೋಜನಾ ಆಯೋಗದ ಪಾತ್ರವೂ ಇರುತ್ತಿತ್ತು. ಆದರೆ, ನೀತಿ ಆಯೋಗಕ್ಕೆ ಅಂತಹ ಪಾತ್ರ ಇಲ್ಲ. ಚರ್ಚೆ, ಸಂವಾದ ಹಾಗೂ ನಿರ್ಣಯಗಳನ್ನು ಕೈಗೊಳ್ಳುವುದಕ್ಕಾಗಿ ರೂಪಿಸಿದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಈಗ ಬಹುತೇಕ ನಿಷ್ಕ್ರಿಯವಾಗಿದೆ. ಈ ಮಂಡಳಿಯು ಒಕ್ಕೂಟ ವ್ಯವಸ್ಥೆಗೆ ಅಗತ್ಯವಿದ್ದಂತಹ ವೇದಿಕೆಯಾಗಿತ್ತು. ತಮಗೆ ಸಂಬಂಧಿಸಿದ ನೀತಿಗಳು ಹಾಗೂ ನಿರ್ಧಾರಗಳಲ್ಲಿ ತಮ್ಮ ಮಾತಿಗೇ ಬೆಲೆ ಇಲ್ಲವಾಗಿದೆ ಎಂದು ಹಲವು ರಾಜ್ಯಗಳಿಗೆ ಅನ್ನಿಸುತ್ತಿದೆ. ರಾಜ್ಯಗಳ ಜೊತೆ ಮಾತುಕತೆಯೂ ನಡೆಯುತ್ತಿಲ್ಲ.
ನೀತಿ ಆಯೋಗದ ಸಭೆಯು ಹಲವು ವಿಷಯಗಳ ಬಗ್ಗೆ ಚರ್ಚಿಸಿತು. ರಾಜ್ಯಗಳಿಗೆ ಹೂಡಿಕೆದಾರಸ್ನೇಹಿ ಸೂಚ್ಯಂಕವೊಂದನ್ನು ರೂಪಿಸುವುದು, ಬಡತನವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ನದಿಗಳ ಜೋಡಣೆ ಕುರಿತು ಚರ್ಚೆಗಳು ನಡೆದವು ಎಂದು ವರದಿಗಳು ಹೇಳಿವೆ. ಈ ವಿಚಾರಗಳಲ್ಲಿ ಕ್ರಿಯಾಶೀಲರಾಗುವ ಅಗತ್ಯ ಇದೆ ಎಂದು ಪ್ರಧಾನಿಯವರು ಪ್ರತಿಪಾದಿಸಿದ್ದಾರೆ. ಯುವಕರನ್ನು ಉದ್ಯೋಗ ನಿಭಾಯಿಸಲು ಸನ್ನದ್ಧರಾಗುವಂತೆ ಮಾಡಬೇಕಿದೆ ಎಂದೂ ಅವರು ಹೇಳಿದ್ದಾರೆ. ಸಭೆಯಲ್ಲಿ ನಡೆದ ಚರ್ಚೆಗಳಲ್ಲಿ ರಾಜ್ಯಗಳು ಬಹಳ ಹುರುಪಿನಿಂದ ಭಾಗಿಯಾಗಿದ್ದವು, ಹಲವು ಸಲಹೆಗಳನ್ನು ನೀಡಿದವು ಎಂದು ಕೂಡ ಹೇಳಲಾಗಿದೆ.
ಆದರೆ, ಭಾರತದ ದೊಡ್ಡ ಭೂಭಾಗವನ್ನು ಪ್ರತಿನಿಧಿಸುವ ರಾಜ್ಯಗಳು ಸಭೆಯಲ್ಲಿ ಭಾಗಿಯಾಗಿರಲಿಲ್ಲ, ಈ ಸಭೆಯು ಕೇಂದ್ರ ಹಾಗೂ ಹಲವು ರಾಜ್ಯಗಳ ನಡುವೆ ಮೂಡಿರುವ ಅವಿಶ್ವಾಸದ ದ್ಯೋತಕವಾಯಿತು ಎಂಬುದು ಮುಖ್ಯವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂವಾದಕ್ಕೆ ಅವಕಾಶ ಮಾಡಿಕೊಡಬೇಕಿದ್ದ ವೇದಿಕೆಗಳು ದುರ್ಬಲಗೊಂಡಿವೆ, ಕೆಲವು ವೇದಿಕೆಗಳು ನಿಷ್ಕ್ರಿಯವಾಗಿವೆ. ಇದು, ಗಂಭೀರ ಕಳವಳಕ್ಕೆ ಕಾರಣವಾಗುವ ಸಂಗತಿಯೇ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.