ADVERTISEMENT

ಸಂಪಾದಕೀಯ: ‘ರಾಜಪಥ’ದ ಮರುನಾಮಕರಣ; ಟೊಳ್ಳು ಸಾಂಕೇತಿಕತೆಯ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 13:31 IST
Last Updated 28 ಜನವರಿ 2023, 13:31 IST
   

ಹೆಸರೆಂಬುದು ಗುರುತು ಇದ್ದಂತೆ. ಅದು ಏನನ್ನೋ ಸೂಚಿಸುತ್ತಿರುತ್ತದೆ; ಪರಿಕಲ್ಪನೆಗಳನ್ನು, ಚಿಂತನೆಗಳನ್ನು ನೆನಪಿಸಿಕೊಡುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಇತಿಹಾಸವನ್ನು ತನ್ನೊಡಲಲ್ಲಿ ಇರಿಸಿಕೊಂಡಿರುತ್ತದೆ. ವ್ಯಕ್ತಿಗಳನ್ನು ಮತ್ತು ಸ್ಥಳಗಳನ್ನು ಗುರುತಿಸುವುದಕ್ಕೆ ಮಾತ್ರ ಹೆಸರಿನ ಬಳಕೆ ಯಾಗುವುದಿಲ್ಲ. ಬದಲಿಗೆ, ಒಂದು ಅರ್ಥವನ್ನು ಧ್ವನಿಸಲು, ಏನನ್ನೋ ಹೇಳಲು ಹೆಸರನ್ನು ಬಳಸ ಲಾಗುತ್ತದೆ. ರಾಜಕೀಯ ಸಂಕಥನಗಳನ್ನು ಕಟ್ಟಲಿಕ್ಕೆ ಕೂಡ ಹೆಸರಿನ ಬಳಕೆ ಆಗುವುದಿದೆ. ಒಂದು ಹೆಸರನ್ನು ಕೈಬಿಡುವುದು ಹೊಸ ಹೆಸರು ನೀಡುವಷ್ಟೇ ಮಹತ್ವವನ್ನು ಹೊಂದಿರುತ್ತದೆ. ಈಚಿನ ವರ್ಷಗಳಲ್ಲಿ ದೇಶದಲ್ಲಿ ಕಾಣುತ್ತಿರುವ ಹೆಸರು ಬದಲಾವಣೆಯ ಅಲೆಯ ಜೊತೆ ಕೆಳಮಟ್ಟದ ರಾಜಕೀಯ ಬೆಸೆದುಕೊಂಡಿದೆ. ಇಲ್ಲಿ ಉನ್ನತ ಭಾವನೆಗಳು ಅಥವಾ ಇತಿಹಾಸವನ್ನು ಋಜು ಕ್ರಮದಲ್ಲಿ ಅರಿಯುವ ಧೋರಣೆ ಕಾಣುತ್ತಿಲ್ಲ. ನವದೆಹಲಿಯ ರಾಜಪಥವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಿದ ಕ್ರಮವು ರಾಜಕೀಯವನ್ನು ಅಸಂಗತ ಮಟ್ಟಕ್ಕೆ ಒಯ್ದ ನಡೆ. ಮರುನಾಮಕರಣಕ್ಕೆ ನೀಡಿರುವ ಸಮರ್ಥನೆಯಲ್ಲಿ ಸಾಮಾನ್ಯ ಜ್ಞಾನ ಕಾಣುತ್ತಿಲ್ಲ. ರಾಜಪಥ ಎಂಬ ಹೆಸರು ಬ್ರಿಟಿಷ್ ಆಡಳಿತಕ್ಕೆ ತೋರಿದ್ದ ಗುಲಾಮಿತನದ ದ್ಯೋತಕವಾಗಿತ್ತು, ಹೊಸ ಹೆಸರು ಆ ಗುಲಾಮಿತನದಿಂದ ಬಿಡುಗಡೆ ಪಡೆದಿರುವು ದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಹೇಳಿದ್ದಾರೆ. 2022ರಲ್ಲಿ ಒಂದು ರಸ್ತೆಗೆ ಹೊಸ ಹೆಸರು ಇರಿಸಿದ್ದರಿಂದಾಗಿ ವಸಾಹತುಶಾಹಿ ಆಡಳಿತ ಕೊನೆಗೊಂಡು, ಸ್ವಾತಂತ್ರ್ಯ ಸಿಕ್ಕಿದ್ದಲ್ಲ. ಗಾಂಧಿ, ನೆಹರೂ, ಪಟೇಲ್, ಬೋಸ್ ಅವರಂತಹ ನಾಯಕರ ಮುಂದಾಳತ್ವದಲ್ಲಿ ನಡೆದ ಹೋರಾಟದ ಫಲವಾಗಿ ವಸಾಹತು ಆಡಳಿತವು 1947ರಲ್ಲಿಯೇ ಕೊನೆಗೊಂಡಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವು ಬಹಳ ಕಠಿಣವಾದುದಾಗಿತ್ತು, ಅನುಭವಗಮ್ಯವಾಗಿತ್ತು. ಈಗಿನ ಮರುನಾಮಕರಣವು ಸಾಂಕೇತಿಕ ಮಾತ್ರ.

ಭಾರತವು ಬ್ರಿಟಿಷ್ ವಸಾಹತು ಆಗಿದ್ದ ಕಾಲದ ‘ಕಿಂಗ್ಸ್‌ವೇ’, ಇಂಡಿಯಾ ಗೇಟ್‌ನಿಂದ ರೈಸಿನಾ ಹಿಲ್‌ವರೆಗೆ ಸಾಗುತ್ತದೆ. ಈ ಮಾರ್ಗದ ಹೆಸರನ್ನು ಸ್ವಾತಂತ್ರ್ಯ ದೊರೆತ ತಕ್ಷಣ ರಾಜಪಥ ಎಂದು
ಬದಲಾಯಿಸಲಾಯಿತು. ‘ಕ್ವೀನ್ಸ್‌ವೇ’ ಹೆಸರನ್ನು ‘ಜನಪಥ’ ಎಂದು ಬದಲಿಸಲಾಯಿತು. ರಾಜಪಥ ಎಂಬ ಹೆಸರು ಎಷ್ಟರಮಟ್ಟಿಗೆ ಭಾರತೀಯ ಆಗಿತ್ತು, ಕರ್ತವ್ಯಪಥ ಎಂಬ ಹೆಸರು ಅದಕ್ಕಿಂತ ಇನ್ನೆಷ್ಟು ಹೆಚ್ಚು ಭಾರತೀಯ ಆಗಬಹುದು? ಈಗ ರಾಜಭವನ ಎಂಬ ಹೆಸರನ್ನೂ ಬದಲಾಯಿಸಲಾಗುತ್ತದೆಯೇ? ಕರ್ತವ್ಯಪಥ ಎಂಬ ಹೆಸರಿನ ಮೂಲಕ ಸರ್ಕಾರವು ತನ್ನ ಕರ್ತವ್ಯಗಳು ಹಾಗೂ ಜವಾಬ್ದಾರಿಗಳು ಹೆಚ್ಚು ಮುಖ್ಯ ಎಂದು ಭಾವಿಸುತ್ತದೆ ಎಂಬ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ ಎಂದಾದರೆ, ಅದನ್ನು ತನ್ನ ನೀತಿಗಳು ಹಾಗೂ ಕ್ರಿಯೆಗಳ ಮೂಲಕ ತೋರಿಸಬೇಕು. ಹೆಸರು ಬದಲಾವಣೆ ಹಾಗೂ ಮಾತುಗಳ ಮೂಲಕ ಮಾತ್ರವೇ ಅಲ್ಲ. ದೇಶವನ್ನು ಒಂದಾಗಿ ಇರಿಸುವುದು, ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು, ಅರ್ಥ ವ್ಯವಸ್ಥೆಯನ್ನು ಸುಧಾರಿಸುವುದು, ಬಡವರಿಗೆ ನೆರವಾಗುವುದು, ದುರ್ಬಲ ವರ್ಗಗಳಿಗೆ ರಕ್ಷಣೆ ಒದಗಿಸುವುದು, ಪ್ರಜಾತಂತ್ರವನ್ನು ಬಲಿಷ್ಠಗೊಳಿಸುವುದು, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ದೇಶ ಮುನ್ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯಗಳು. ಹೆಸರು ಬದಲಾಯಿಸುವುದರಿಂದ ಈ ಯಾವುವೂ ಈಡೇರುವುದಿಲ್ಲ. ಹೆಸರು ಬದಲಾವಣೆಯು ಭ್ರಮೆಯನ್ನು ಸೃಷ್ಟಿಸಬಲ್ಲದು, ಗಮನವನ್ನು ಬೇರೆಡೆ ಸೆಳೆಯಬಲ್ಲದು.

ನಾಗರಿಕರ ಪಾಲಿಗೆ ಹಕ್ಕುಗಳಿಗಿಂತಲೂ ಕರ್ತವ್ಯಗಳೇ ಹೆಚ್ಚು ಮುಖ್ಯ ಎಂಬ ಸಂದೇಶ ರವಾನಿಸುವ ಉದ್ದೇಶದಿಂದ ಹೆಸರು ಬದಲಾವಣೆ ಆಗಿದೆ ಎಂದಾದರೆ, ಅದು ತಪ್ಪು. ಪ್ರಜೆಗಳ ಮೂಲಭೂತ ಹಕ್ಕುಗಳು ದೇಶದ ಸಂವಿಧಾನದ ಆತ್ಮವಿದ್ದಂತೆ. ಮೂಲಭೂತ ಕರ್ತವ್ಯಗಳ ಕುರಿತ ವಿವರಣೆಯನ್ನು ಹಿಂದೊಮ್ಮೆ ಸರ್ವಾಧಿಕಾರಿ ಆಡಳಿತ ಇದ್ದಾಗ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಸರ್ವಾಧಿಕಾರಿ ಮನಃಸ್ಥಿತಿಯು ಪ್ರಜೆಗಳ ಹಕ್ಕುಗಳ ಮಹತ್ವವನ್ನು ಕುಗ್ಗಿಸಿ, ಕರ್ತವ್ಯಕ್ಕೆ ಹೆಚ್ಚಿನ ಮಹತ್ವ ಕೊಡುವ ಕೆಲಸ ಮಾಡುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಕುರಿತು ಇಂದಿನ ಆಡಳಿತವು ಸೃಷ್ಟಿಸಿರುವ ಹೊಸ ಹಾಗೂ ತಪ್ಪು ಸಂಕಥನದ ಭಾಗವಾಗಿ ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ಬೋಸ್ ಅವರನ್ನು ಮರೆಯಲಾಯಿತು, ಅವರನ್ನು ನಿರ್ಲಕ್ಷಿಸಲಾಯಿತು ಎಂದು ಮೋದಿ ಅವರು ಹೇಳಿದ್ದಾರೆ. ಇದು ತಪ್ಪು ಹೇಳಿಕೆ. ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪರಿವಾರಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ತಮ್ಮವರೆಂಬ ಹೀರೊಗಳು ಇಲ್ಲ. ಹಾಗಾಗಿ ಪಕ್ಷವು ಬೋಸ್ ಅವರನ್ನು ತನ್ನವರನ್ನಾಗಿಸಿಕೊಳ್ಳಲು ಯತ್ನಿಸುತ್ತಿದೆ. ಪಕ್ಷವು ಹಿಂದೆ ಸರ್ದಾರ್ ವಲ್ಲಭಭಾಯಿ ಪಟೇಲರ ವಿಚಾರದಲ್ಲಿಯೂ ಹೀಗೇ ಮಾಡಿತ್ತು. ಹುಸಿ ಇತಿಹಾಸವನ್ನು ಅರಸಲು ಹಾಗೂ ತನಗೆ ಬೇರೊಂದು ಹಿನ್ನೆಲೆ ಇದೆ ಎಂದು ತೋರಿಸಲು ನಡೆಸುತ್ತಿರುವ ಯತ್ನ ಇದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.