ಪ್ರಧಾನಿ ನರೇಂದ್ರ ಮೋದಿ ಅವರು 2016ನೆಯ ಇಸವಿಯಲ್ಲಿ, ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಹಠಾತ್ತನೆ ಮಾಡಿದ ಘೋಷಣೆಯು ದೇಶವಾಸಿಗಳಲ್ಲಿ ಆಶ್ಚರ್ಯ ಮತ್ತು ಆತಂಕ ಮೂಡಿಸಿತ್ತು. ಅಷ್ಟೇ ತೀವ್ರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಚಲಾವಣೆಯಿಂದ ಇದ್ದಕ್ಕಿದ್ದಂತೆ ಹಿಂದಕ್ಕೆ ಪಡೆಯಲಾದ ನೋಟುಗಳ ಬದಲಿಗೆ ₹ 2,000 ಮುಖಬೆಲೆಯ ನೋಟುಗಳನ್ನು ಹೊಸದಾಗಿ ಚಲಾವಣೆಗೆ ತಂದಿದ್ದು.
ವಾಸ್ತವದಲ್ಲಿ ಇಷ್ಟು ದೊಡ್ಡ ಮುಖಬೆಲೆಯ ನೋಟುಗಳನ್ನು ದೇಶದ ಜನ ನಿತ್ಯದ ವ್ಯವಹಾರಗಳಲ್ಲಿ ಬಳಕೆ ಮಾಡಿರಲಿಲ್ಲ. ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಈ ಮುಖಬೆಲೆಯ ನೋಟು ಗ್ರಾಹಕರಿಗೆ ನೆರವಾಗುವ ಬದಲು ವಿಪರೀತ ಕಿರಿಕಿರಿ ಉಂಟುಮಾಡಿತ್ತು. ನಿತ್ಯದ ಅಗತ್ಯಗಳಿಗೆ ತರಕಾರಿ, ಮೊಟ್ಟೆ, ಮಾಂಸ, ದಿನಸಿ ಖರೀದಿಸಲು ಈ ನೋಟು ಹೆಚ್ಚು ನೆರವಿಗೆ ಬರಲಿಲ್ಲ. ಈ ನೋಟು ಹೆಚ್ಚು ಕಾಲ ಚಲಾವಣೆಯಲ್ಲಿ ಇರಲಿಕ್ಕಿಲ್ಲ ಎಂಬ ಭಾವನೆಯು ಇದನ್ನು ಮೊದಲ ಬಾರಿಗೆ ಕಂಡಾಗಲೇ ಜನರಲ್ಲಿ ಮೂಡಿತ್ತು. ಭಾರಿ ಮೊತ್ತದ ವಹಿವಾಟುಗಳಿಗೆ ಮಾತ್ರ ಈ ನೋಟು ಹೆಚ್ಚು ಉಪಯುಕ್ತವಾಗಿ ಕಂಡಿರಬಹುದು.
ಈಗ ಈ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯುವ ಪ್ರಕ್ರಿಯೆಗೆ ಆರ್‌ಬಿಐ ಚಾಲನೆ ನೀಡಿದೆ. ₹ 2,000 ಮುಖಬೆಲೆಯ ನೋಟುಗಳನ್ನು ಸೆಪ್ಟೆಂಬರ್ 30ಕ್ಕೆ ಮೊದಲು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಅಥವಾ ಬ್ಯಾಂಕ್ ಶಾಖೆಗಳ ಮೂಲಕ ಬೇರೆ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಆರ್‌ಬಿಐ ತಿಳಿಸಿದೆ.
ಈ ನೋಟುಗಳ ಮಾನ್ಯತೆಯು ರದ್ದಾಗಿಲ್ಲ. ಆದರೆ, ಅವುಗಳನ್ನು ಚಲಾವಣೆಯಿಂದ ಹಿಂಪಡೆಯುವ ಪ್ರಕ್ರಿಯೆ ಶುರುವಾಗಿದೆ, ಅಷ್ಟೆ. ವಾಸ್ತವದಲ್ಲಿ ಈ ಕೆಲಸವನ್ನು ಆರ್‌ಬಿಐ 2018–19ರಲ್ಲಿಯೇ ಭಾಗಶಃ ಶುರುಮಾಡಿದೆ. ಆಗಿನಿಂದ ಅದು ಈ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಸೆಪ್ಟೆಂಬರ್ 30ಕ್ಕೆ ಮೊದಲು ₹ 2,000 ಮುಖಬೆಲೆಯ ನೋಟುಗಳನ್ನು ಜಮಾ ಮಾಡಬೇಕು ಅಥವಾ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿರುವ ಆರ್‌ಬಿಐ, ಆ ದಿನಾಂಕದ ನಂತರ ಈ ನೋಟುಗಳಿಗೆ ಮಾನ್ಯತೆ ಇರುತ್ತದೆಯೇ ಎಂಬುದನ್ನು ಖಚಿತವಾಗಿ ವಿವರಿಸಿಲ್ಲ.
ಸೆಪ್ಟೆಂಬರ್ 30ರ ನಂತರವೂ ಈ ನೋಟುಗಳಿಗೆ ಮಾನ್ಯತೆ ಇರುತ್ತದೆ ಎಂದಾದರೆ, ವಿನಿಮಯ ಅಥವಾ ಜಮಾ ಕೆಲಸವನ್ನು ಈ ದಿನಾಂಕಕ್ಕೆ ಮೊದಲು ಮಾಡಿಕೊಳ್ಳಬೇಕು ಎಂಬ ಸೂಚನೆಗೆ ಹೆಚ್ಚಿನ ಬೆಲೆ ಬರುವುದಿಲ್ಲ. ಹೀಗಾಗಿ, ಈ ದಿನಾಂಕದ ನಂತರ ನೋಟುಗಳಿಗೆ ಮಾನ್ಯತೆ ಇರುತ್ತದೆಯೇ ಎಂಬುದನ್ನು ಆರ್‌ಬಿಐ ಖಚಿತಪಡಿಸಬೇಕು. ಆರ್‌ಬಿಐ ಕೈಗೊಂಡಿರುವ ತೀರ್ಮಾನವು ನೋಟು ರದ್ದತಿ ಅಲ್ಲ. ಆರ್‌ಬಿಐ ಈ ಹಿಂದೆಯೂ ನಿರ್ದಿಷ್ಟ ಮುಖಬೆಲೆಯ, ನಿರ್ದಿಷ್ಟ ಅವಧಿಯಲ್ಲಿ ಚಲಾವಣೆಗೆ ಬಂದ ನೋಟುಗಳನ್ನು ಹಿಂಪಡೆದಿದೆ. ಈ ಬಾರಿಯ ಪ್ರಕ್ರಿಯೆಯು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇಲ್ಲ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಕೆಂದರೆ, ಈಗ ಹಣ ಪಾವತಿಗೆ ಜನ ನೋಟುಗಳನ್ನಷ್ಟೇ ಆಶ್ರಯಿಸಿಲ್ಲ. ನೋಟುಗಳ ಸ್ಥಾನವನ್ನು ಡಿಜಿಟಲ್ ಪಾವತಿ ವ್ಯವಸ್ಥೆಗಳು ಆಕ್ರಮಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಡಿಜಿಟಲ್ ಪಾವತಿ ವ್ಯವಸ್ಥೆಯ ಬಳಕೆಯು ವ್ಯಾಪಕವಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಹೀಗಿದ್ದರೂ, ಗೊಂದಲಗಳನ್ನು ಆದಷ್ಟು ಬೇಗ ನಿವಾರಿಸುವುದು ಒಳ್ಳೆಯದು.
ನೋಟುಗಳ ವಿನಿಮಯ ಪ್ರಕ್ರಿಯೆಯು ಮಂಗಳವಾರದಿಂದ ಆರಂಭವಾಗಿದೆ. ವಿನಿಮಯಕ್ಕೆ ಬರುವ ಗ್ರಾಹಕರಲ್ಲಿ ಯಾವುದೇ ದಾಖಲೆ ಕೇಳುವುದಿಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸ್ಪಷ್ಟಪಡಿಸಿದೆ. ಆದರೆ, ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳು ನೋಟು ವಿನಿಮಯಕ್ಕೆ ಬರುವ ಗ್ರಾಹಕರಿಂದ ಗುರುತಿನ ಸಂಖ್ಯೆ ಅಥವಾ ಚೀಟಿ ಕೇಳುತ್ತಿವೆ ಎಂಬ ವರದಿಗಳು ಇವೆ.
ಈ ರೀತಿ ಗುರುತಿನ ಚೀಟಿ ಅಥವಾ ಸಂಖ್ಯೆ ಕೇಳುವ ಅಧಿಕಾರ ಬ್ಯಾಂಕ್‌ಗಳಿಗೆ ಇದೆಯಾದರೂ, ಈ ವಿಚಾರದಲ್ಲಿ ಆರ್‌ಬಿಐ ಏಕರೂಪಿ ನಿಯಮವೊಂದನ್ನು ರೂಪಿಸಿದ್ದರೆ ಗ್ರಾಹಕರಿಗೆ ಗೊಂದಲ ಉಂಟಾಗುತ್ತಿರಲಿಲ್ಲ. ನೋಟು ವಿನಿಮಯಕ್ಕೆ ನಾಲ್ಕು ತಿಂಗಳಿಗೂ ಹೆಚ್ಚಿನ ಕಾಲಾವಕಾಶ ನೀಡಿರುವ ಕಾರಣ, ಆರ್‌ಬಿಐ ಈ ಬಗ್ಗೆ ಗಮನಹರಿಸಲು ಈಗಲೂ ಸಮಯ ಇದೆ. ಗೊಂದಲ ಬಗೆಹರಿಸಿ, ಏಕರೂಪಿ ನಿಯಮ ಜಾರಿಗೆ ತಂದರೆ, ನಿತ್ಯದ ವಹಿವಾಟುಗಳಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡದ ಈ ನೋಟುಗಳು ಬಹುಬೇಗ ಬ್ಯಾಂಕುಗಳತ್ತ ಹರಿದುಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.