ADVERTISEMENT

ಖಾಸಗಿತನದ ಹಕ್ಕು ರಕ್ಷಣೆ ಸರ್ಕಾರಕ್ಕೆ ಬದ್ಧತೆ ಬೇಕು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 20:31 IST
Last Updated 4 ನವೆಂಬರ್ 2019, 20:31 IST
   

ಪೆಗಾಸಸ್‌ ಎಂಬ ಬೇಹುಗಾರಿಕೆ ತಂತ್ರಾಂಶ ಬಳಸಿತನ್ನ 1,400 ಬಳಕೆದಾರರ ಮೇಲೆ ನಿಗಾ ಇರಿಸಲಾಗಿತ್ತು ಎಂಬ ವಿಚಾರವನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ಕಳೆದ ವಾರ ಬಹಿರಂಗಪಡಿಸಿದೆ. ಹೀಗೆ ಗೂಢಚರ್ಯೆಗೆ ಒಳಗಾದವರಲ್ಲಿ ಭಾರತದ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ವಕೀಲರು ಮತ್ತು ರಾಜಕಾರಣಿಗಳು ಇದ್ದಾರೆ. ಹೆಚ್ಚು ಸುರಕ್ಷಿತ ಎಂದು ಭಾವಿಸಲಾಗಿದ್ದ ವಾಟ್ಸ್‌ಆ್ಯಪ್‌ ತಾಣವೇ ಇಂತಹ ಸೈಬರ್‌ ದಾಳಿಗೆ ತುತ್ತಾಗಿರುವುದು ಬಳಕೆದಾರರಲ್ಲಿ ಕಳವಳ ಹುಟ್ಟಿಸಿದೆ. ವಾಟ್ಸ್‌ಆ್ಯಪ್‌ನ ಕರೆ ಕಾರ್ಯನಿರ್ವಹಣೆ ವ್ಯವಸ್ಥೆಯ ಲೋಪವೊಂದನ್ನು ಗುರುತಿಸಿ, ಅದರ ಮೂಲಕ ಪೆಗಾಸಸ್‌ ಅನ್ನು ಕೆಲವು ಮೊಬೈಲ್‌ಗಳ ಒಳಗೆ ಸೇರಿಸಲಾಗಿದೆ. ಈ ಗೂಢಚರ್ಯೆ ತಂತ್ರಾಂಶವು ಮೊಬೈಲ್‌ನಲ್ಲಿರುವ ಎಲ್ಲ ಮಾಹಿತಿಯನ್ನೂ ವಶಕ್ಕೆ ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಬಳಕೆದಾರರ ಗಮನಕ್ಕೆ ಬಾರದಂತೆ ಮೊಬೈಲ್‌ನ ಕ್ಯಾಮೆರಾವನ್ನು ಬಳಸಿಕೊಳ್ಳುತ್ತದೆ.

ಮೊಬೈಲ್‌ ಅನ್ನು ಮೈಕ್ರೊಫೋನ್‌ ಆಗಿ ಪರಿವರ್ತಿಸಿ, ಕೋಣೆಯಲ್ಲಿ ಇರುವ ವ್ಯಕ್ತಿಗಳು ಆಡುವ ಮಾತುಗಳನ್ನು ಸಂಚುಕೋರರಿಗೆ ತಲುಪಿಸುವ ಕೆಲಸವನ್ನೂ ಮಾಡುತ್ತದೆ.ಇಂತಹ ಬೇಹುಗಾರಿಕೆಯು ಖಾಸಗಿತನದ ಹಕ್ಕು ಮತ್ತು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಕಂಟಕ. ಭಾರತದಲ್ಲಿ ವಾಟ್ಸ್‌ಆ್ಯಪ್‌ನ 40 ಕೋಟಿ ಬಳಕೆದಾರರು ಇದ್ದಾರೆ ಎಂಬ ಅಂದಾಜು ಇದೆ. ಇಷ್ಟೊಂದು ಭಾರಿ ಸಂಖ್ಯೆಯ ಜನರ ಬಹುತೇಕ ಎಲ್ಲ ಮಾಹಿತಿಯನ್ನು ಕದಿಯುವುದು ಬಹಳ ಸುಲಭ ಎಂಬುದನ್ನು ‘ಪೆಗಾಸಸ್‌ ಪ್ರಕರಣ’ವು ತೋರಿಸಿಕೊಟ್ಟಿದೆ. ಹಾಗಿದ್ದರೆ, ಭಾರತದ ಸಂವಿಧಾನವು ಕೊಟ್ಟ ಖಾಸಗಿತನದ ಹಕ್ಕಿನ ಗತಿ ಏನು ಎಂಬುದು ಬಹಳ ಗಂಭೀರವಾದ ಪ್ರಶ್ನೆ. ಖಾಸಗಿತನದ ಹಕ್ಕು ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗ ಎಂದು ಸುಪ್ರೀಂ ಕೋರ್ಟ್‌ 2017ರಲ್ಲಿ ಹೇಳಿತ್ತು. ಇಷ್ಟಾದರೂ ಈ ಹಕ್ಕಿನ ರಕ್ಷಣೆಯ ಬಗ್ಗೆ ಯಾರೂ ವಿಶೇಷ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ.

ಭಾರತದ ಸುಮಾರು 121 ಜನರ ಮೇಲೆ ಗೂಢಚರ್ಯೆ ನಡೆದಿರಬಹುದು ಎಂಬ ಶಂಕೆಯನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ವ್ಯಕ್ತಪಡಿಸಿದೆ.‘ಪೆಗಾಸಸ್‌’ ಗೂಢಚರ್ಯೆ ತಂತ್ರಾಂಶವನ್ನು ಸರ್ಕಾರ ಮತ್ತು ಸರ್ಕಾರದ ಸಂಸ್ಥೆಗಳಿಗೆ ಅಲ್ಲದೆ ಬೇರೆ ಯಾರಿಗೂ ಮಾರಾಟ ಮಾಡಿಲ್ಲ ಎಂದು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ದೃಢವಾಗಿ ಹೇಳಿದೆ. ಹಾಗಿದ್ದರೆ, ಈ ಜನರ ಮೇಲೆ ಬೇಹುಗಾರಿಕೆ ಮಾಡುವಂತೆ ಆದೇಶಿಸಿದವರು ಯಾರು ಎಂಬ ಪ್ರಶ್ನೆ ಹುಟ್ಟುತ್ತದೆ.ಹೀಗೆ ಬೇಹುಗಾರಿಕೆಗೆ ಒಳಗಾದ ಕೆಲವರ ಹೆಸರು ಈಗ ಬಹಿರಂಗವಾಗಿದೆ. ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಜೈಲಿನಲ್ಲಿರುವ ‘ಸಾಮಾಜಿಕ ಹೋರಾಟಗಾರರ’ ಪರ ವಕೀಲರು, ದಲಿತ ಹೋರಾಟಗಾರರು, ಪತ್ರಕರ್ತರು, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಮುಂತಾದವರಿಗೆ ‘ಮೊಬೈಲ್‌ ಹ್ಯಾಕ್‌ ಆಗಿದೆ’ ಎಂಬ ಕರೆ, ವಾಟ್ಸ್‌ಆ್ಯಪ್‌ ಸಂಸ್ಥೆಯಿಂದ ಬಂದಿದೆ ಎನ್ನಲಾಗಿದೆ. ಇವರಲ್ಲಿ ಹೆಚ್ಚಿನವರು ಕೇಂದ್ರದ ಈಗಿನ ಆಡಳಿತಾರೂಢ ಪಕ್ಷವನ್ನು ಪ್ರಶ್ನಿಸುತ್ತಿರುವವರು. ಸರ್ಕಾರಕ್ಕಷ್ಟೇ ಲಭ್ಯವಿದೆ ಎನ್ನಲಾಗುವ ಗೂಢಚರ್ಯೆ ತಂತ್ರಾಂಶವನ್ನು ಭಾರತದಲ್ಲಿ ಬಳಸಿದವರು ಯಾರು ಎಂಬ ಗಂಭೀರ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕಿದೆ. ಬೇಹುಗಾರಿಕೆ ನಡೆದಿರುವ ಶಂಕೆ ಇದೆ ಎಂಬ ಮಾಹಿತಿಯನ್ನು ಮೇ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿಯೇ ಎರಡು ಬಾರಿ ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದು ವಾಟ್ಸ್‌ಆ್ಯಪ್‌ ಸಂಸ್ಥೆ ಹೇಳಿದೆ. ಅದು ಅಪೂರ್ಣ ಮಾಹಿತಿ ಎಂಬುದು ಸರ್ಕಾರದ ವಾದ.

ADVERTISEMENT

ಜನರ ಖಾಸಗಿತನದ ಹಕ್ಕನ್ನು ರಕ್ಷಿಸುವ ಹೊಣೆ ಹೊತ್ತಿರುವ ಸರ್ಕಾರ, ವಾಟ್ಸ್‌ಆ್ಯಪ್‌ನ ಕಿವಿ ಹಿಂಡಿ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕಿತ್ತಲ್ಲವೇ? ಬೇಹುಗಾರಿಕೆ ವಿಚಾರ ಬಹಿರಂಗವಾದ ಬಳಿಕ, ಹಿಂದೆಯೂ ಇಂತಹುದು ಆಗಿತ್ತು, ಪ್ರಣವ್‌ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದಾಗ, ವಿ.ಕೆ.ಸಿಂಗ್‌ ಅವರು ಸೇನಾ ಮುಖ್ಯಸ್ಥರಾಗಿದ್ದಾಗ ಅವರ ಮೇಲೆ ಗೂಢಚರ್ಯೆ ನಡೆಸಲಾಗಿತ್ತು ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಹಿಂದೆಯೂ ಬೇಹುಗಾರಿಕೆ ಆಗಿತ್ತು ಎಂಬ ಕಾರಣಕ್ಕೆ, ಈಗ ಆಗಿರುವುದನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ? ಖಾಸಗಿತನದ ಹಕ್ಕಿನ ಬಗ್ಗೆ ಭಾರತದಲ್ಲಿ ಬಹಳ ಅಸಡ್ಡೆ ಇದೆ. ಆದರೆ, ಎಲ್ಲವೂ ಡಿಜಿಟಲ್‌ ಆಗುತ್ತಿರುವ, ಸರ್ಕಾರವೂ ಅದನ್ನು ಉತ್ತೇಜಿಸುತ್ತಿರುವ ಈ ಹೊತ್ತಿನಲ್ಲಿ, ಖಾಸಗಿತನದ ಹಕ್ಕಿನ ರಕ್ಷಣೆ ಬಗ್ಗೆ ಸರ್ಕಾರಕ್ಕೆ ಗಾಢವಾದ ಬದ್ಧತೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.