ADVERTISEMENT

ಸಂಪಾದಕೀಯ:ಸಿನಿಮಾ ಲೋಕದಲ್ಲಿ ಲೈಂಗಿಕ ದೌರ್ಜನ್ಯ; ವರದಿ ಆಧರಿಸಿ ತ್ವರಿತ ಕ್ರಮ ಆಗಲಿ

ಸಂಪಾದಕೀಯ
Published 20 ಆಗಸ್ಟ್ 2024, 23:35 IST
Last Updated 20 ಆಗಸ್ಟ್ 2024, 23:35 IST
   

ಮಲಯಾಳ ಸಿನಿಮಾ ಉದ್ಯಮದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯು ಸಲ್ಲಿಸಿದ್ದ ವರದಿಯು ಆಘಾತಕಾರಿ ವಿವರಗಳನ್ನು ಒಳಗೊಂಡಿದೆ. ವರದಿಯು ಸೋಮವಾರ ಬಹಿರಂಗವಾಗಿದೆ. ಮಲಯಾಳದ ಬೆಳ್ಳಿಪರದೆಯ ಹಿಂದೆ ಇರುವ ಕರಾಳ ವಾಸ್ತವಗಳನ್ನು ಇದು ತೆರೆದಿರಿಸಿದೆ. ತೀರಾ ಅಪಮಾನಕಾರಿಯಾದ, ಮಹಿಳಾದ್ವೇಷದ ಮತ್ತು ಕ್ರಿಮಿನಲ್ ವರ್ತನೆಗಳು ಅಲ್ಲಿ ಬಹಳ ಸಹಜ ಎಂದು ವರದಿ ಹೇಳಿದೆ. 2017ರ ಫೆಬ್ರುವರಿ ತಿಂಗಳಲ್ಲಿ ಕೊಚ್ಚಿಯಲ್ಲಿ ನಟಿಯೊಬ್ಬರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ನಂತರ ಈ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ನಟರೊಬ್ಬರು ಆರೋಪಿಯ ಸ್ಥಾನದಲ್ಲಿದ್ದಾರೆ. ಈ ಪ್ರಕರಣವು ಇಂದಿಗೂ ವಿಚಾರಣೆಯ ಹಂತದಲ್ಲೇ ಇದೆ. ಈ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ನಂತರದಲ್ಲಿ ಮಲಯಾಳ ಸಿನಿಮಾ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ ಎಂಬ ಸಂಘಟನೆ ಜನ್ಮತಾಳಿದೆ. ಸಮಿತಿಯ ವರದಿಯು ನಟಿಯರು, ಇತರರು ನೀಡಿದ ಹೇಳಿಕೆಗಳು ಹಾಗೂ ಅವರ ಅನುಭವಗಳನ್ನು ಆಧರಿಸಿದೆ. ಹಲವು ಹೇಳಿಕೆಗಳು ಸಾಕ್ಷ್ಯಗಳನ್ನು ಆಧರಿಸಿವೆ. ಸಮಿತಿಯ ವರದಿಯನ್ನು ಕೇರಳ ಸರ್ಕಾರಕ್ಕೆ 2019ರಲ್ಲೇ ಸಲ್ಲಿಸಲಾಗಿತ್ತು. ಆದರೆ ಕಾನೂನಿನ ಹಾಗೂ ಇತರ ಹಲವು ಸವಾಲುಗಳನ್ನು ಎದುರಿಸಿದ್ದ ಈ ವರದಿಯು ಈಗ ಬಹಿರಂಗ ಆಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ಷ್ಮವಾದ ಸಂಗತಿಗಳು ಹಾಗೂ ಕೆಲವು ಹೆಸರುಗಳ ಉಲ್ಲೇಖವಿರುವ ಪುಟಗಳು ಬಹಿರಂಗಗೊಂಡಿಲ್ಲ.

ಲೈಂಗಿಕ ಕಿರುಕುಳವೇ ನಟಿಯರು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆ ಎಂಬುದನ್ನು ವರದಿಯು ಸ್ಪಷ್ಟಪಡಿಸಿದೆ. ಚಿತ್ರೀಕರಣ ನಡೆಯುವ ಸ್ಥಳಗಳಲ್ಲಿ, ವಸತಿ ವ್ಯವಸ್ಥೆ ಕಲ್ಪಿಸಿರುವಲ್ಲಿ ಹಾಗೂ ಇತರ ಕಡೆಗಳಲ್ಲಿ ಅವರನ್ನು ದೌರ್ಜನ್ಯಕ್ಕೆ ಗುರಿಮಾಡಲಾಗುತ್ತಿದೆ, ಅವರ ಮೇಲೆ ಒತ್ತಡ ಹೇರುವ ಕೆಲಸ ಆಗುತ್ತಿದೆ ಎಂಬುದನ್ನು ವರದಿಯು ದಾಖಲಿಸಿದೆ. ‘ಹೊಂದಾಣಿಕೆ’ಗಳಿಗೆ ಹಾಗೂ ‘ರಾಜಿ ಮಾಡಿಕೊಳ್ಳುವುದಕ್ಕೆ’ ಸಿದ್ಧವಿರುವವರು ವೃತ್ತಿ ಜಗತ್ತಿಗೆ ಪ್ರವೇಶ ಪಡೆದುಕೊಳ್ಳುತ್ತಾರೆ ಮತ್ತು ಅವರು ವೃತ್ತಿಯಲ್ಲಿ ಮುಂದೆ ಬರುತ್ತಾರೆ. ಇದಕ್ಕೆ ಒಪ್ಪದೇ ಇರುವವರು ತಾರತಮ್ಯಕ್ಕೆ ಗುರಿಯಾಗುತ್ತಾರೆ, ನಿಂದನೆಗೆ ಈಡಾಗುತ್ತಾರೆ ಮತ್ತು ಎಲ್ಲ ಬಗೆಯ ಕಿರುಕುಳಗಳನ್ನು ಅನುಭವಿಸಬೇಕಾಗುತ್ತದೆ. ಇಂಥವರ ಮೇಲೆ ಅಭಿಮಾನಿಗಳ ಪಡೆಗಳು ಆನ್‌ಲೈನ್‌ ಮೂಲಕ ದಾಳಿ ನಡೆಸುವುದೂ ಇರುತ್ತದೆ. ಚಿತ್ರೀಕರಣ ನಡೆ ಯುವ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯಗಳೂ ಇರುವುದಿಲ್ಲ, ಸಂಭಾವನೆಯಲ್ಲಿ ತಾರತಮ್ಯ ಇರುತ್ತದೆ. ಸಿನಿಮಾ ಜಗತ್ತಿನಲ್ಲಿ ನಿರ್ಮಾಪಕರು, ನಿರ್ದೇಶಕರು, ನಟರ ಕೂಟವೊಂದು ಇರುತ್ತದೆ ಎಂದು ವರದಿ ಹೇಳಿದೆ. ದೌರ್ಜನ್ಯಕ್ಕೆ ಗುರಿಯಾದವರು ಭದ್ರತೆಗೆ ಬೆದರಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಿಲ್ಲ ಅಥವಾ ಬೇರೆಯವರ ಜೊತೆ ಆ ಬಗ್ಗೆ ಮಾತನಾಡುತ್ತಲೂ ಇಲ್ಲ. ಸಿನಿಮಾ ಲೋಕದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು ಅವರು ಇತರೆಡೆಗಳಲ್ಲಿ ಎದುರಿಸುವ ಸಮಸ್ಯೆಗಳಿಗಿಂತ ಬಹಳ ಭಿನ್ನವಾಗಿ ಇರುತ್ತವೆ ಎಂದು ಸಮಿತಿಯು ಹೇಳಿದೆ. ಸಿನಿಮಾ ಉದ್ಯಮದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರಕುಳವನ್ನು ತಡೆಯುವ ಉದ್ದೇಶದಿಂದ ರೂಪಿಸಿರುವ ಕಾನೂನುಗಳು ಹಾಗೂ ಇತರ ಕಾನೂನುಗಳು ಪರಿಣಾಮಕಾರಿ ಆಗಿಲ್ಲ ಎಂದು ಅದು ಹೇಳಿದೆ. ಅಲ್ಲದೆ, ಸಿನಿಮಾ ಜಗತ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಕಾನೂನು ವ್ಯವಸ್ಥೆ, ದೂರು ನಿರ್ವಹಣಾ ವ್ಯವಸ್ಥೆ ಬೇಕು ಎಂದು ಶಿಫಾರಸು ಮಾಡಿದೆ.

ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಎಡರಂಗ ಸರ್ಕಾರವು ಸಮರ್ಥನೀಯ ಕಾರಣಗಳೇ ಇಲ್ಲದೆ ಈ ವರದಿಯನ್ನು ಹಾಗೆಯೇ ಇರಿಸಿಕೊಂಡಿತ್ತು. ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಕ್ರಮ ಜರುಗಿಸಲು ಅರ್ಹವಾಗಿರುವ ಅಪರಾಧಗಳನ್ನು ವರದಿಯು ಬಹಿರಂಗಪಡಿಸಿದ್ದರೂ ಕೇರಳ ಸರ್ಕಾರವು ಕ್ರಮ ಕೈಗೊಳ್ಳದೆ ಸುಮ್ಮನಿತ್ತು. ಈಗ ಸರ್ಕಾರವು ವರದಿಯನ್ನು ಆಧರಿಸಿ ಕ್ರಮ ಜರುಗಿಸುವುದಕ್ಕೆ ಇರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸಬೇಕು. ಅಪರಾಧ ಎಸಗಿದವರು ಎಷ್ಟೇ ದೊಡ್ಡವರಾಗಿದ್ದರೂ ಅವರು ಕಾನೂನು ಕ್ರಮ ಎದುರಿಸುವಂತೆ, ಶಿಕ್ಷೆ ಅನುಭವಿಸುವಂತೆ ಮಾಡಬೇಕು. ಸಿನಿಮಾ ಲೋಕದಲ್ಲಿನ ಪರಿಸ್ಥಿತಿಯು ಮಹಿಳೆಯರಿಗೆ ಪೂರಕವಾಗಿ ಇರುವಂತೆ ಮಾಡಬೇಕು. ಈ ವರದಿಯಲ್ಲಿನ ಅಂಶಗಳು ಬೇರೆ ಭಾಷೆಗಳ ಸಿನಿಮಾ ಉದ್ಯಮಗಳಿಗೂ ಸಂಗತವಾಗಿ ಕಾಣಬಹುದು. ಬೇರೆಡೆಗಳಲ್ಲಿಯೂ ಮಹಿಳೆಯರು ದೌರ್ಜನ್ಯಕ್ಕೆ ಗುರಿಯಾದ, ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡಿರುವ ದೂರುಗಳು ಹಲವು ಇವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.