ADVERTISEMENT

ಸಂಪಾದಕೀಯ: ಬಿಜೆಪಿ ಸಖ್ಯ ತೊರೆದ ಎಐಎಡಿಎಂಕೆ; ದ್ರಾವಿಡ ನೆಲದಲ್ಲಿ ಯಾರಿಗೆ ಅನುಕೂಲ?

ಸಂಪಾದಕೀಯ
Published 29 ಸೆಪ್ಟೆಂಬರ್ 2023, 0:30 IST
Last Updated 29 ಸೆಪ್ಟೆಂಬರ್ 2023, 0:30 IST
   

ಚುನಾವಣಾ ರಾಜಕಾರಣದ ತಕ್ಷಣದ ಲಾಭಕ್ಕಿಂತ ದೀರ್ಘಾವಧಿ ಲೆಕ್ಕಾಚಾರದ ಮೇಲೆ ಬಿಜೆಪಿ ಭರವಸೆ ಇಟ್ಟಿದೆ. ಎಐಎಡಿಎಂಕೆಗೆ ಈಗ ಹಿಂದಿನಂತೆ ಬಿಜೆಪಿಯ ಅಗತ್ಯ ಇಲ್ಲ

ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್‌ ಪಕ್ಷವನ್ನು ಸೇರಿಸಿಕೊಂಡ ಮರುದಿನವೇ ತಮಿಳುನಾಡಿನಲ್ಲಿ ಪ್ರಮುಖ ಮಿತ್ರಪಕ್ಷವಾಗಿದ್ದ ಎಐಎಡಿಎಂಕೆ ಸಖ್ಯವನ್ನು ಬಿಜೆಪಿ ಕಳೆದುಕೊಂಡಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಬಿಜೆಪಿ ಜೊತೆಗಿನ ನಂಟು ಕಡಿದುಕೊಂಡಿರುವುದಾಗಿ ಘೋಷಿಸಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥೆಯಾಗಿದ್ದ ಜೆ.ಜಯಲಲಿತಾ ಅವರ ಮರಣದ ನಂತರ ಈ ಪಕ್ಷವು ಹಲವು ಬದಲಾವಣೆಗಳನ್ನು ಕಂಡಿದೆ. ಹಲವು ವರ್ಷಗಳಿಂದ ಇದ್ದ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಕೆಲವು ಅನುಕೂಲಗಳು ಆಗಿದ್ದವು. ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಹಾಗಾಗಿಯೇ ಅಲ್ಲಿ ಮಿತ್ರಪಕ್ಷವೊಂದರ ಅಗತ್ಯ ಬಿಜೆಪಿಗೆ ಇತ್ತು.

ಜಯಲಲಿತಾ ಸಾವಿನ ನಂತರ ನಾಯಕತ್ವ ಮತ್ತು ಸಂಘಟನಾತ್ಮಕ ಸಮಸ್ಯೆಗಳನ್ನು ಎದುರಿಸಿದ ಎಐಎಡಿಎಂಕೆಗೆ ಬಿಜೆಪಿಯೊಂದಿಗಿನ ಮೈತ್ರಿ ನೆರವಾಗಿತ್ತು. ಈಗ, ಎಡಪ್ಪಾಡಿ ಪಳನಿಸ್ವಾಮಿ ಅವರು ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಹಾಗಾಗಿ, ಎಐಎಡಿಎಂಕೆಗೆ ಹಿಂದಿನಂತೆ ಈಗ ಬಿಜೆಪಿಯ ಅಗತ್ಯ ಇಲ್ಲ. ದ್ರಾವಿಡ ಸಂಸ್ಕೃತಿಯ ಪ್ರಾಬಲ್ಯದ ರಾಜ್ಯದಲ್ಲಿ ಬಿಜೆಪಿ ಜೊತೆಗಿನ ನಂಟು ಎಐಎಡಿಎಂಕೆಗೆ ಹೊರೆಯಾಗಿಯೇ ಪರಿಣಮಿಸಿತ್ತು. ಹಿಂದುತ್ವವಾದಿ ‍ಪಕ್ಷದ ಜೊತೆಗೆ ಇರುವುದು ಎಐಎಡಿಎಂಕೆಗೆ ರಾಜಕೀಯವಾಗಿ ಹಾನಿಕರವಾಗುವುದರ ಜೊತೆಗೆ ಚುನಾವಣೆಯಲ್ಲಿಯೂ ಉಪಯುಕ್ತವೇನೂ ಅಲ್ಲ. ತನ್ನ ಮತಗಳು ಬಿಜೆಪಿ ಪಾಲಾಗಿಬಿಡಬಹುದು ಎಂಬ ಭಯವೂ ಎಐಎಡಿಎಂಕೆಗೆ ಇತ್ತು. 

ADVERTISEMENT

ಸನಾತನ ಧರ್ಮಕ್ಕೆ ಸಂಬಂಧಿಸಿ ಇತ್ತೀಚೆಗೆ ಸೃಷ್ಟಿಯಾದ ವಿವಾದವು ಎಐಎಡಿಎಂಕೆಯ ಇಕ್ಕಟ್ಟಿನ ಸ್ಥಿತಿಯನ್ನು ಬಯಲಾಗಿಸಿದೆ. ಸನಾತನ ಧರ್ಮವನ್ನು ಟೀಕಿಸಿದ ಉದಯನಿಧಿ ಸ್ಟಾಲಿನ್‌ ಅವರನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಆದರೆ, ಉದಯನಿಧಿಯವರನ್ನು ಎಐಎಡಿಎಂಕೆ ಟೀಕಿಸಿದರೂ ಅವರ ಹೇಳಿಕೆಯನ್ನು ಖಂಡಿಸಲಿಲ್ಲ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಆಕ್ರಮಣಕಾರಿ ವರ್ತನೆ ಮತ್ತು ಕಾರ್ಯಶೈಲಿಯೂ ಎಐಎಡಿಎಂಕೆಗೆ ಇರುಸುಮುರುಸು ಉಂಟುಮಾಡಿದೆ.

ದ್ರಾವಿಡ ಚಳವಳಿಯ ನಾಯಕ ಸಿ.ಎನ್‌. ಅಣ್ಣಾದೊರೈ ಮತ್ತು ಜಯಲಲಿತಾ ಅವರ ಕುರಿತು ಅಣ್ಣಾಮಲೈ ಆಡಿದ್ದ ಅಸಡ್ಡೆಯ ಮಾತುಗಳು ಕೂಡ ಮೈತ್ರಿ ಮುರಿಯುವಲ್ಲಿ ಕೆಲಸ ಮಾಡಿವೆ. ಎಐಎಡಿಎಂಕೆ ಮೈತ್ರಿಯಿಂದ ಹೊರನಡೆಯಲಿ, ಆ ಬಳಿಕ ಸ್ವತಂತ್ರವಾಗಿಯೇ ರಾಜ್ಯದಲ್ಲಿ ಪಕ್ಷ ಕಟ್ಟಬಹುದು ಎಂಬುದು ಅಣ್ಣಾಮಲೈ ಅವರ ಉದ್ದೇಶವಿದ್ದರೂ ಇರಬಹುದು. ಎಐಎಡಿಎಂಕೆಗೆ ಬಿಜೆಪಿಯ ಕೇಂದ್ರ ನಾಯಕತ್ವದ ಕುರಿತು ಯಾವುದೇ ಅಸಮಾಧಾನ ಇಲ್ಲ ಎಂಬುದು ಕೂಡ ಇಲ್ಲಿ ಗಮನಾರ್ಹ. ಬಿಜೆಪಿಯ ಕೇಂದ್ರ ನಾಯಕತ್ವವು ಎಐಎಡಿಎಂಕೆ ಬದಲಿಗೆ ಅಣ್ಣಾಮಲೈ ಅವರನ್ನೇ ನೆಚ್ಚಿಕೊಂಡಿದೆ. ಚುನಾವಣಾ ರಾಜಕಾರಣದ ತಕ್ಷಣದ ಲಾಭಕ್ಕಿಂತ ಅಣ್ಣಾಮಲೈ ಅವರ ದೀರ್ಘಾವಧಿ ಲೆಕ್ಕಾಚಾರದ ಮೇಲೆ ಬಿಜೆಪಿ ಭರವಸೆ ಇಟ್ಟಿದೆ. 

ತಮಿಳುನಾಡಿಗೆ ಬಿಜೆಪಿ ವಿಶೇಷ ಮಹತ್ವ ನೀಡಿರುವುದು ನಿಜ. ತಮಿಳು ಪರಂಪರೆಯ ಸ್ಮರಣೆ, ತಮಿಳುನಾಡಿನ ಸೆಂಗೋಲ್‌ (ರಾಜದಂಡ) ಅನ್ನು ಸಂಸತ್ತಿನ ಹೊಸ ಕಟ್ಟಡದಲ್ಲಿ ಸ್ಥಾಪಿಸಿರುವುದು, ರಾಜ್ಯದ ಲೋಕಸಭಾ ಕ್ಷೇತ್ರವೊಂದರಿಂದ ನರೇಂದ್ರ ಮೋದಿ ಅವರು ಸ್ಪರ್ಧಿಸಬಹುದು ಎಂಬ ಯೋಚನೆಗಳೆಲ್ಲ ಇದನ್ನು ಸೂಚಿಸುತ್ತವೆ. ಎರಡೂ ಪಕ್ಷಗಳ ಮೈತ್ರಿಯು ಮುಗಿದುಹೋದ ಅಧ್ಯಾಯವಾದರೆ, ರಾಜ್ಯದಲ್ಲಿ ಚುನಾವಣಾ ಲಾಭ ಪಡೆದುಕೊಳ್ಳುವುದು ಬಿಜೆಪಿಗೆ ಸಾಧ್ಯವಿಲ್ಲ. ದೇಶದ ಹೆಚ್ಚು ಪ್ರಗತಿಪರ ಮತ್ತು ಆರ್ಥಿಕವಾಗಿ ಸದೃಢವಾದ ದಕ್ಷಿಣ ಭಾಗವು ಬಿಜೆಪಿಗೆ ಒಲಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡರೂ ಚುನಾವಣೆಯಲ್ಲಿ ಹೆಚ್ಚಿನ ಲಾಭವೇನೂ ಆಗದು. ಬಿಜೆಪಿಯ ರಾಜಕೀಯ ಮತ್ತು ಸೈದ್ಧಾಂತಿಕ ಹೊರೆಯನ್ನು ಕಳಚಿಕೊಂಡ ಬಳಿಕ, ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಭರವಸೆಯಲ್ಲಿ ಎಐಎಡಿಎಂಕೆ ಇದೆ. 2024ರ ಲೋಕಸಭಾ ಚುನಾವಣೆಗಿಂತ 2026ರ ವಿಧಾನಸಭಾ ಚುನಾವಣೆ ಮೇಲೆ ತನ್ನ ಗಮವನ್ನು ಅದು ಕೇಂದ್ರೀಕರಿಸಿದೆ. ಎಐಎಡಿಎಂಕೆ ಮತ್ತು ಬಿಜೆಪಿ ಪ್ರತ್ಯೇಕವಾಗಿರುವುದು ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಅನುಕೂಲಕರವಾಗಿ ಪರಿಣಮಿಸಬಹುದು. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಅದರ ಲಾಭ ಈ ಮೈತ್ರಿಕೂಟಕ್ಕೆ ದೊರಕಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.