ಕನಿಷ್ಠ ನೂರು ಪಡಿತರ ಚೀಟಿಗಳಿರುವ ಎಲ್ಲಾ ಹಾಡಿ, ತಾಂಡಾ, ಗೊಲ್ಲರಹಟ್ಟಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಕಾಲೊನಿಗಳಲ್ಲಿ ಇದೇ ವರ್ಷಾಂತ್ಯದೊಳಗೆ ನ್ಯಾಯಬೆಲೆ ಅಂಗಡಿ ಗಳನ್ನು ತೆರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ತಳ ಸಮುದಾಯಗಳಿಗೆ, ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ, ತಿಂಗಳ ಪಡಿತರ ಸರಿಯಾಗಿ ತಲುಪುವಂತೆ ಮಾಡುವ ದಿಸೆಯಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆ.
ಆದರೆ, ಸರ್ಕಾರ ತಾನು ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬಲುದೂರ ಸಾಗಬೇಕಿದೆ. ಸೌಲಭ್ಯದಿಂದ ವಂಚಿತವಾದ ಹಾಡಿ, ತಾಂಡಾ, ಹಟ್ಟಿ ಹಾಗೂ ಎಸ್‌ಸಿ ಎಸ್‌ಟಿ ಕಾಲೊನಿಗಳನ್ನು ಗುರುತಿಸಿ, ಅಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಪಡಿತರ ವಿತರಣೆ ನಿಯಮಾವಳಿ ಪ್ರಕಾರ, ಹೊಸ ನ್ಯಾಯಬೆಲೆ ಅಂಗಡಿ ತೆರೆಯಬೇಕಾದರೆ ನಗರ ಪ್ರದೇಶದಲ್ಲಿ ಒಂದು ಅಂಗಡಿಗೆ ಕನಿಷ್ಠ 800 ಹಾಗೂ ಗ್ರಾಮೀಣ ಭಾಗದಲ್ಲಿ ಕನಿಷ್ಠ 500 ಪಡಿತರ ಚೀಟಿಗಳು ಇರಬೇಕು.
ಆದರೆ, ಹಾಡಿ, ತಾಂಡಾಗಳಂತಹ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜನಸಂಖ್ಯೆ ಕಡಿಮೆ ಇರುತ್ತದೆ. ಸಹಜವಾಗಿಯೇ ಪಡಿತರ ಚೀಟಿಗಳ ಸಂಖ್ಯೆಯೂ ಕಡಿಮೆಯೇ ಇರುತ್ತದೆ. ಹೀಗಾಗಿ ಅಲ್ಲಿನ ಫಲಾನುಭವಿಗಳು ಸದ್ಯ ಪಡಿತರ ಪಡೆಯಲು ಹತ್ತಿರದ ಪಟ್ಟಣ ಇಲ್ಲವೆ ಗ್ರಾಮಗಳಿಗೆ ತೆರಳುವುದು ಅನಿವಾರ್ಯವಾಗಿದೆ. ಇದರಿಂದ ದಿನದ ಕೂಲಿ ಕೆಲಸದಿಂದಲೂ ಅವರು ವಂಚಿತರಾಗುವಂತಾಗಿದೆ. ಸರ್ಕಾರದ ತೀರ್ಮಾನದಂತೆ ಅವರ ವಾಸದ ಸ್ಥಳದಲ್ಲೇ ನ್ಯಾಯಬೆಲೆ ಅಂಗಡಿಗಳನ್ನು ತೆರೆದರೆ ಪಡಿತರಕ್ಕಾಗಿ ಅಲೆಯುವುದು ತಪ್ಪಲಿದೆ.
ಈ ಮಧ್ಯೆ ಮುಖ್ಯಮಂತ್ರಿಯವರು ಮನೆ ಮನೆಗೆ ಪಡಿತರ ಪೂರೈಸುವ ‘ಜನ ಸೇವಕ’ ಯೋಜನೆಯನ್ನೂ ಘೋಷಿಸಿದ್ದಾರೆ. ನವೆಂಬರ್ 1ರಿಂದ ಈ ಯೋಜನೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಅಕ್ಕಿ, ಗೋಧಿ ಮತ್ತು ಸಕ್ಕರೆಯನ್ನು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬೆಂಗಳೂರಿ ನಲ್ಲಿ ಯೋಜನೆಯ
ಅನುಷ್ಠಾನವನ್ನು ನೋಡಿಕೊಂಡು 2022ರ ಜನವರಿ 26ರಿಂದ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ಭರವಸೆ ನೀಡಿ ದ್ದಾರೆ. ‘ಜನ ಸೇವಕ’ ಯೋಜನೆ ಏನಾದರೂ ಸಮರ್ಪಕವಾಗಿ ಅನುಷ್ಠಾನಗೊಂಡಿದ್ದೇ ಆದಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸದ್ಯ ಕಾಣುವ ಉದ್ದನೆಯ ಸರದಿ ಸಾಲುಗಳು ಮಾಯವಾಗಲಿವೆ. ಜನ ಕೂಲಿ ಕೆಲಸ ಬಿಟ್ಟು ಗಂಟೆಗಳವರೆಗೆ ಸರದಿಯಲ್ಲಿ ಕಾಯುವ ಪ್ರಮೇಯವೂ ತಪ್ಪಲಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ದ್ವಿತೀಯ ಜಾಗತಿಕ ಸಮರದ ಹೊತ್ತಿಗೆ ದೇಶದಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ತರಲಾಯಿತು.
ಆಗ ಭೀಕರ ಕ್ಷಾಮದಿಂದ ನಲುಗಿದ್ದ ಜನರ ಕಣ್ಣೀರನ್ನು ಒರೆಸಲು ಇದರಿಂದ ಸಾಧ್ಯವಾಯಿತು. ‘ದೇಶದ ಆಹಾರ ಅಭದ್ರತೆಗೆ ಧಾನ್ಯಗಳ ಕೊರತೆಯೇನೂ ಪ್ರಧಾನ ಕಾರಣವಲ್ಲ; ವಿತರಣಾ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ಹಾಗೂ ಜನರ ಕೈಗೆಟಕುವ ಬೆಲೆಯಲ್ಲಿ ಧಾನ್ಯ ಸಿಗದಿರುವುದು ಮುಖ್ಯ ಕಾರಣ’ ಎಂದು ಅಧ್ಯಯನಗಳು ಹೇಳಿದ್ದವು. ಆಹಾರ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದಲೇ ಆಗ ಪಿಡಿಎಸ್ ಅನ್ನು ಅನುಷ್ಠಾನಕ್ಕೆ ತರಲಾಗಿತ್ತು. ರಾಜ್ಯ ಸರ್ಕಾರ ಈಗ ಕೈಗೊಂಡಿರುವ ತೀರ್ಮಾನಗಳಿಂದ ಆಹಾರ ಭದ್ರತೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ.
ವಿತರಣಾ ವ್ಯವಸ್ಥೆಯನ್ನು ಪೂರ್ಣವಾಗಿ ಸದೃಢಗೊಳಿಸಲು ಉಳಿದಿರುವ ದೋಷಗಳನ್ನೂ ಸರಿಪಡಿಸುವ ಅಗತ್ಯವನ್ನು ಕುವೆಂಪು ವಿಶ್ವವಿದ್ಯಾಲಯದ ತಜ್ಞರ ತಂಡವೊಂದು ನಡೆಸಿದ ವರದಿ ಎತ್ತಿ ತೋರುತ್ತದೆ. ಪಡಿತರ ವ್ಯವಸ್ಥೆಯಲ್ಲಿ ಪೂರೈಸಬೇಕಾದ ಧಾನ್ಯವು ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದು, ವಿತರಿಸುವ ಪಡಿತರದಲ್ಲಿ ಕಲಬೆರಕೆ ಆಗುತ್ತಿರುವುದು, ಸಮರ್ಪಕ ಸಂಗ್ರಹ ವ್ಯವಸ್ಥೆ ಇಲ್ಲದಿರುವುದು, ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆ ಮಾಡುತ್ತಿರುವುದು, ನಕಲಿ ಪಡಿತರ ಚೀಟಿಗಳ ಹಾವಳಿ ಹೆಚ್ಚಿರುವುದು ಮತ್ತು ಈ ಅಧ್ವಾನಗಳನ್ನೆಲ್ಲ ಸರಿಪಡಿಸುವಂತಹ ನಿರ್ವಹಣಾ ವ್ಯವಸ್ಥೆ ಇಲ್ಲದಿರುವುದರ ಕಡೆಗೆ ಆ ವರದಿ ಬೊಟ್ಟು ಮಾಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪೂರೈಸುವ ಧಾನ್ಯಗಳು ಸೇವಿಸಲು ಯೋಗ್ಯವಾಗಿಲ್ಲ ಎಂಬ ದೂರುಗಳು ರಾಜ್ಯದ ಒಂದಿಲ್ಲೊಂದು ಭಾಗದಿಂದ ಆಗಾಗ ಕೇಳಿಬರುತ್ತಲೇ ಇವೆ.
ಬಡತನ ನಿವಾರಣೆಯ ಮೊದಲ ಮೆಟ್ಟಿಲಾಗಿರುವ ಪಿಡಿಎಸ್‌ನ ದೋಷಗಳನ್ನೆಲ್ಲ ನಿವಾರಿಸಿ, ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಸರ್ಕಾರ ಆದ್ಯತೆಯ ಮೇಲೆ ಕ್ರಮ ಜರುಗಿಸಬೇಕು. ಮನೆಬಾಗಿಲಿಗೆ ಪಡಿತರ ತಲುಪಿಸುವುದಷ್ಟೇ ಮುಖ್ಯವಲ್ಲ; ಹಾಗೆ ತಲುಪಿಸಿದ ಪಡಿತರ ಗುಣಮಟ್ಟದಿಂದ ಕೂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದೂ ತನ್ನ ಹೊಣೆ ಎಂಬುದನ್ನು ಅರಿಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.