ಐವತ್ತು ವರ್ಷಗಳೀಚಿನ ಭಾರತದ ಹೆಮ್ಮೆಯ ಸಾಧನೆಗಳ ಪಟ್ಟಿಯಲ್ಲಿ ಹುಲಿ ರಕ್ಷಣೆಗೆ ಅಗ್ರಸ್ಥಾನ ಲಭಿಸಿದೆ. ‘ಹುಲಿ ಯೋಜನೆ’ಯ ಆರಂಭದಲ್ಲಿ 1,827ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3,167ಕ್ಕೇರಿದೆ. ಸತತ ಕುಸಿಯುತ್ತಿರುವ ಅರಣ್ಯ ವಿಸ್ತೀರ್ಣ, ನಿರಂತರ ಏರುತ್ತಿರುವ ಜನಸಂಖ್ಯೆಯ ಮಧ್ಯೆಯೂ ಈ ಭವ್ಯಜೀವಿಗಳ ಸಂಖ್ಯೆ ಕ್ರಮೇಣ ದುಪ್ಪಟ್ಟಾಗಿದ್ದು ಸಣ್ಣ ಸಂಗತಿಯೇನಲ್ಲ. 1973ರಲ್ಲಿ ಈ ಮಹಾ
ಯೋಜನೆಯನ್ನು ಆರಂಭಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ, ಅದಕ್ಕಿಂತಲೂ ಹೆಚ್ಚಾಗಿ ಈ ದಿಸೆಯಲ್ಲಿ ಅವರ ಮನವೊಲಿಸಿ ನಾಯಕತ್ವದ ಮಟ್ಟದಲ್ಲಿ ಪರಿಸರಪ್ರಜ್ಞೆಯ ಬೀಜ ಬಿತ್ತಿದ ವನ್ಯಚಿಂತಕರಿಗೆ ಈ ಖ್ಯಾತಿಯ ಸಿಂಹಪಾಲು ಸಿಗಬೇಕು. ಆರಂಭದ ದಶಕಗಳಲ್ಲಿ ‘ಹುಲಿ ಯೋಜನೆ’ಯ ಅನುಷ್ಠಾನ ಸುಲಭದ್ದೇನಾಗಿರಲಿಲ್ಲ. ಹುಲಿಬೇಟೆಯನ್ನು, ಹುಲಿಸಂಖ್ಯೆಯ ಕುಸಿತವನ್ನು ತಡೆಯುವುದೇ ದೊಡ್ಡ ಸವಾಲಾಗಿತ್ತು. ಈ ಯಶಸ್ವೀ ಯೋಜನೆಯ ಮುಂದುವರಿಕೆಯಾಗಿ ಇದೀಗ ಹುಲಿ, ಸಿಂಹ, ಚಿರತೆ, ಹಿಮಚಿರತೆ, ಚೀತಾ, ಪ್ಯೂಮಾ, ಬೂದುಚಿರತೆ ಮುಂತಾದ ‘ಭವ್ಯ ಮಾರ್ಜಾಲ’ಗಳ ಉಳಿವಿಗೆ ಅಂತರ ರಾಷ್ಟ್ರೀಯ ವೇದಿಕೆಯೊಂದನ್ನು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ. ಭಾರತದ ಗೆಲುವಿನ ಪಾಠಗಳು ಇತರ ರಾಷ್ಟ್ರಗಳಲ್ಲೂ ಅನುರಣಿಸಬಹುದಾಗಿದೆ.
ರಕ್ಷಿತಾರಣ್ಯಗಳಲ್ಲಿ ಹುಲಿಗಳು ಅದೆಷ್ಟೇ ನೆಮ್ಮದಿಯಿಂದ ವಂಶವೃದ್ಧಿ ಮಾಡಿಕೊಳ್ಳುತ್ತಿದ್ದರೂ ಅವುಗಳ ತಳಿಗುಣಗಳಲ್ಲಿ ಕ್ರಮೇಣ ಏಕತಾನತೆ ಹೆಚ್ಚುತ್ತದೆ. ವೈರಾಣು ದಾಳಿಯಾದರೆ ಅಥವಾ ವಂಶವಾಹಿ ಕಾಯಿಲೆ ತಲೆದೋರಿದರೆ ಸಾಮೂಹಿಕ ಸಾವು ಸಂಭವಿಸುವ ಅಪಾಯ ಇದ್ದೇ ಇದೆ. ಹಿಂದಿನ ಕಾಲದಲ್ಲಿದ್ದಂತೆ ಕಾಡಿನಿಂದ ಕಾಡಿಗೆ ಅವುಗಳ ಸಂಚಾರದ ಅವಕಾಶವನ್ನು ಮರುಸೃಷ್ಟಿ ಮಾಡಬೇಕು ಎಂದು ವನ್ಯಜೀವಿ ತಜ್ಞರು ಹೇಳುತ್ತಿದ್ದಾರೆ. ಹಾಗೆ ವಿಭಿನ್ನ ಅರಣ್ಯವಲಯಗಳ ನಡುವಣ ಕೃಷಿಕ್ಷೇತ್ರ ಮತ್ತು ನಾಗರಿಕ ನೆಲೆಗಳನ್ನು ಖಾಲಿ ಮಾಡಿಸಿ ಹುಲಿಗಳಿಗಾಗಿ ನೂರಾರು ಕಿಲೊಮೀಟರ್ ಕಾರಿಡಾರ್ ಗಳನ್ನು ನಿರ್ಮಿಸಲಂತೂ ಸಾಧ್ಯವಿಲ್ಲ. ಆಗಿರುವ ಕಾಡಿನ ಒತ್ತುವರಿ ತೆರವು ಮಾಡಬೇಕು. ಆಫ್ರಿಕಾದ ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ವಿಮಾನದ ಮೂಲಕ ತಂದ ಹಾಗೆ, ಅಣಶಿಯ ಹುಲಿಗಳನ್ನು ಸುಂದರಬನಕ್ಕೋ ಅಥವಾ ತಾಡೋಬಾ ಕಾಡಿನ ಹುಲಿಗಳನ್ನು ಬಂಡೀಪುರಕ್ಕೋ ಸ್ಥಳಾಂತರಿಸುವಷ್ಟು ಒತ್ತುಗುರಿಯೂ ಇದ್ದಂತಿಲ್ಲ. ಸದ್ಯಕ್ಕಂತೂ ಆಯಾ ಸಂರಕ್ಷಿತ ಪ್ರದೇಶಗಳಲ್ಲಿನ ಧಾರಣಾ ಸಾಮರ್ಥ್ಯಕ್ಕೆ ತಕ್ಕಂತೆ ಹುಲಿಗಳ ಸಂಖ್ಯೆಯನ್ನು ಕಮ್ಮಿ ಮಾಡುವ ಅಥವಾ ಹೆಚ್ಚಿಸುವ ಯೋಜನೆಯ ನೀಲನಕ್ಷೆ ತಯಾರಾಗುತ್ತಿದೆ ಎಂಬ ವರದಿಗಳಿವೆ.
‘ಹುಲಿ ರಕ್ಷಣೆಗೆ ಪಣ ತೊಟ್ಟರೆ ನಗರ ನಿವಾಸಿಗಳಿಗೆ ಕುಡಿಯುವ ನೀರಿನ ಖಾತರಿ ಸಿಗುತ್ತದೆ’ ಎಂಬ ಒಗಟಿನಂಥ ಮಾತು ಆ ದಿನಗಳಲ್ಲಿ ಚಾಲ್ತಿಯಲ್ಲಿತ್ತು.
ಹುಲಿಗಳು ಉಳಿಯಬೇಕೆಂದರೆ ಅವುಗಳ ಆವಾಸದಲ್ಲಿ ಹುಲ್ಲು ಮೇಯುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿರಬೇಕು. ಅವು ಹೆಚ್ಚಾಗಿರಬೇಕೆಂದರೆ ಬೇಟೆಗೆ ನಿರ್ಬಂಧ ಹಾಕಿ, ಗಿಡಮರ ರಕ್ಷಣೆ, ಜಲರಕ್ಷಣೆ, ಮಣ್ಣುರಕ್ಷಣೆ ಮತ್ತು ಮೇವು ಲಭ್ಯತೆಗೆ ಕ್ರಮ ಕೈಗೊಳ್ಳಬೇಕು. ಅವೆಲ್ಲ ಜಾರಿಗೆ ಬಂದಾಗ ಸಹಜವಾಗಿಯೇ ಅರಣ್ಯದ ಹಳ್ಳಕೊಳ್ಳಗಳಲ್ಲಿ ವರ್ಷವಿಡೀ ನೀರು ಜಿನುಗುತ್ತ ನದಿಗಳೂ ಜೀವಂತವಾಗಿರುತ್ತವೆ. 1980ರ ದಶಕದಲ್ಲಿ ಬಂಡೀಪುರ, ನಾಗರಹೊಳೆ ಪ್ರದೇಶಗಳಲ್ಲಿ ಈ ಕ್ರಮಗಳನ್ನು ಉತ್ಸಾಹದಿಂದಲೇ ಜಾರಿಗೆ ತಂದ ಪರಿಣಾಮವಾಗಿ ಅಲ್ಲಿ ಹುಲಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತ ಬಂದಿದೆ.
ಈಗ ಇದು ರಾಷ್ಟ್ರದ ಅತಿ ಹೆಚ್ಚು ಹುಲಿಗಳಿರುವ ಪ್ರದೇಶಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ಆದರೆ ರಾಜ್ಯದ ಇತರ ರಕ್ಷಿತಾರಣ್ಯಗಳಲ್ಲಿ ಹುಲಿಗಳ ಸಂಖ್ಯೆಯ ಏರುಗತಿಯನ್ನು ಉಳಿಸಿಕೊಳ್ಳುವಲ್ಲಿ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಕಾಡಿನಲ್ಲಿ ಲಂಟಾನಾ ಮತ್ತು ಯುಪಟೋರಿಯಂ ಸಸ್ಯಗಳ ಹಾವಳಿ ಅತೀವ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅವುಗಳಿಂದಾಗಿ ಗೊರಸಿನ ಪ್ರಾಣಿಗಳಿಗೆ ಮೇವಿನ ಅಭಾವವಷ್ಟೇ ಅಲ್ಲ, ಕಾಡಿನ ಬೆಂಕಿಯ ಪ್ರಕರಣಗಳೂ ಹೆಚ್ಚುತ್ತಿವೆ. ಎರಡನೆಯದಾಗಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ನೆಲದ ಉಷ್ಣಾಂಶವೂ ಏರುಮುಖವಾಗುತ್ತಿದ್ದು, ದಟ್ಟ ಕಾಡಿನ ಹಳ್ಳಕೊಳ್ಳಗಳೂ ಬೇಸಿಗೆಯಲ್ಲಿ ಬತ್ತುತ್ತಿವೆ. ನೀರು-ಆಹಾರವನ್ನು ಹುಡುಕುತ್ತ ವನ್ಯಜೀವಿಗಳು ಬಫರ್ ವಲಯವನ್ನೂ ದಾಟಿ ಹೊಲ-ಗದ್ದೆಗಳಿಗೆ ಇಳಿದು ಸಂಘರ್ಷಕ್ಕೆ ಕಾರಣವಾಗುವ ಪ್ರಸಂಗಗಳು ಹೆಚ್ಚುತ್ತಿವೆ. ಪ್ರಧಾನಿ ಮೋದಿಯವರು ಮೊನ್ನೆ ಬಿಡುಗಡೆ ಮಾಡಿದ ‘ಅಮೃತಕಾಲದ ಮುನ್ನೋಟ’ದಲ್ಲಿ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ವನ್ಯಜೀವಿಗಳಿಗೆ ರಕ್ಷಣೆ ನೀಡಲು ವಿಶೇಷ ತಾಂತ್ರಿಕ ಸಾಧನಗಳನ್ನು ಒದಗಿಸುವ ಮಾತೇನೋ ಇದೆ ನಿಜ.
ಬರದ ಬೇಗೆಯನ್ನೂ ಕಾಳ್ಗಿಚ್ಚನ್ನೂ ಗುರುತಿಸಲು ಎಲೆಕ್ಟ್ರಾನಿಕ್ ಪರಿಕರಗಳನ್ನು ನಿಯೋಜಿಸಬಹುದು; ಡ್ರೋನ್‌ಗಳನ್ನೂ ಬಳಸಬಹುದು. ಅಷ್ಟಾದರೆ ಸಾಲದು. ಮಲೆನಾಡಿನ ಅನೇಕ ಪ್ರದೇಶಗಳಲ್ಲಿ ಹಂದಿ, ಕೋತಿ, ಕಾಟಿಗಳ ಸಂಖ್ಯಾಸ್ಫೋಟದಿಂದಾಗಿ ಮನೆಯಂಗಳದಲ್ಲೂ ತರಕಾರಿಯನ್ನು ಬೆಳೆಯಲಾಗದೆ ರೋಸಿಹೋದ ಸಹಸ್ರಾರು ಕುಟುಂಬಗಳು ‘ಹುಲಿಗಳು ಎಲ್ಲಿ ಹೋದವೊ’ ಎಂದು ಪರಿತಪಿಸುತ್ತಿವೆ. ವನ್ಯಲೋಕದ ಈ ಬಗೆಯ ಅಸಮತೋಲನವನ್ನು ನಿವಾರಿಸಬೇಕಿದೆ; ಇನ್ನೊಂದೆಡೆ ಹುಲಿ-ಚಿರತೆಗಳ ದಾಳಿಗೆ ಬಲಿಯಾದವರಿಗೆ ಕ್ಷಿಪ್ರ ಹಾಗೂ ಸೂಕ್ತ ನೆರವು ನೀಡುವಲ್ಲಿ ಈಗಿಗಿಂತ ಹೆಚ್ಚಿನ ಮಾನವೀಯ ಕಳಕಳಿ ಎದ್ದು ಕಾಣಬೇಕಿದೆ. ವನ್ಯಜೀವಿಗಳ ಬದುಕುವ ಹಕ್ಕನ್ನು ಗೌರವಿಸುವಂತೆ ಹಾಗೂ ಅವುಗಳೊಂದಿಗೆ ಕೆಲಮಟ್ಟಿನ ಸಹಜೀವನ ಅನಿವಾರ್ಯ ಎನ್ನುವುದನ್ನು ಅವರಲ್ಲಿ ಬಿಂಬಿಸಬೇಕಿದೆ. ‘ಹುಲಿ ಯೋಜನೆ’ಯ 50ನೇ ವರ್ಷದ ಸಂಭ್ರಮದಲ್ಲಿ ಅವರೂ ಪಾಲ್ಗೊಳ್ಳುವಂತೆ ಮಾಡುವುದೇ ಯೋಜನೆಯ ಯಶಸ್ಸಿನ ಅಳತೆಗೋಲಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.