ಮಹಿಳೆಯರ ಬಟ್ಟೆ ಹೊಲಿಯುವುದರ ಭಾಗವಾಗಿ ಅವರ ದೇಹದ ಅಳತೆ ತೆಗೆದುಕೊಳ್ಳುವ ಕೆಲಸಗಳಿಂದ ಪುರುಷರನ್ನು ದೂರವಿಡಬೇಕು. ಜಿಮ್ ಅಥವಾ ಯೋಗ ಕೇಂದ್ರಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡುವಂತಹ ಕೆಲಸಗಳನ್ನು ಪುರುಷರ ಬದಲಿಗೆ ಮಹಿಳೆಯರೇ ನಿರ್ವಹಿಸಬೇಕು. ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರ ಕೇಶಾಲಂಕಾರ ಮಾಡುವುದಕ್ಕೆ ಪುರುಷರಿಗೆ ಅವಕಾಶ ಇರಕೂಡದು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಸಂಬಂಧ ಉತ್ತರಪ್ರದೇಶದ ಮಹಿಳಾ ಆಯೋಗವು ಚಿಂತನೆ ನಡೆಸಿದೆ. ಮಹಿಳೆಯರಿಗೆ ಸಂಬಂಧಿಸಿದ ಹೊಲಿಗೆ, ಬ್ಯೂಟಿ ಪಾರ್ಲರ್, ಜಿಮ್‌ಗಳಿಂದ ಪುರುಷರನ್ನು ದೂರ ಮಾಡುವುದರಿಂದ ಲೈಂಗಿಕ ಕಿರುಕುಳಗಳನ್ನು ತಪ್ಪಿಸಬಹುದು ಎನ್ನುವುದು ಆಯೋಗದ ಅಭಿಪ್ರಾಯ. ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಮಹಿಳಾ ಆಯೋಗ ಸಲ್ಲಿಸಲು ಉದ್ದೇಶಿಸಿರುವ ಪ್ರಸ್ತಾವದಲ್ಲಿನ ಹಲವಾರು ಅಂಶಗಳು ಅಪ್ರಬುದ್ಧವಾಗಿವೆ. ಈ ಚಿಂತನೆಯು ಹೊಲಿಗೆಯಲ್ಲಿ ತೊಡಗಿರುವ ಹಾಗೂ ಪಾರ್ಲರ್‌ಗಳಲ್ಲಿ ಕೆಲಸ ಮಾಡುವ ಗಂಡಸರನ್ನು ಅವಮಾನಿಸುವಂತಹದ್ದು ಹಾಗೂ ಅಲ್ಲಿಗೆ ಹೋಗುವ ಹೆಣ್ಣುಮಕ್ಕಳನ್ನು ಅಳುಕುವಂತೆ ಮಾಡುವಂತಹದ್ದೂ ಆಗಿದೆ. ರಾಜರು ತಮ್ಮ ಅಂತಃಪುರಗಳಿಂದ ಗಂಡಸರನ್ನು ದೂರವಿರಿಸುತ್ತಿದ್ದ ಇತಿಹಾಸವನ್ನು ಆಯೋಗದ ನಡವಳಿಕೆ ನೆನಪಿಸುವಂತಿದೆ. ಉತ್ತರಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಶಾಲೆಯ ವಾಹನ ಚಾಲಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾದ ಪ್ರಕರಣ ಇತ್ತೀಚೆಗಷ್ಟೇ ನಡೆದಿತ್ತು. ಜಿಮ್‌ಗೆ ಬರುತ್ತಿದ್ದ ಮಹಿಳೆಯೊಬ್ಬರನ್ನು ಅದೇ ಜಿಮ್‌ನ ತರಬೇತುದಾರ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಬಾಲಕಿಯ ಮೇಲೆ ದರ್ಜಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎನ್ನಲಾದ ಪ್ರಕರಣ ವರದಿಯಾಗಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ, ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರಕ್ಕೆ ಸಲ್ಲಿಸಲು ಉದ್ದೇಶಿಸಿರುವ ಪ್ರಸ್ತಾವದಲ್ಲಿ ಈ ಅಂಶಗಳನ್ನು ಅಳವಡಿಸಲು ಮಹಿಳಾ ಆಯೋಗವು ಗಂಭೀರವಾಗಿ ಯೋಚಿಸಿದೆ. ಮಹಿಳೆಯರ ಸುರಕ್ಷತೆ ಕುರಿತಂತೆ ಆಯೋಗದ ಕಾಳಜಿ ಸರಿಯಾದುದು. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾ ಕಣ್ಗಾವಲು ಅಳವಡಿಸುವುದು ಹಾಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕೆನ್ನುವ ಆಯೋಗದ ಒತ್ತಾಯವೂ ಸರಿಯಾಗಿದೆ. ಆದರೆ, ಅಪರಾಧ ಪ್ರಕರಣಗಳಿಗೂ ಕೆಲವು ವೃತ್ತಿಗಳಿಗೂ ತಳಕು ಹಾಕುವ ಧಾಟಿಯ ಚಿಂತನೆಯಲ್ಲಿ ಲೋಪವಿದೆ. ದೌರ್ಜನ್ಯ ಎಸುಗುವ ವ್ಯಕ್ತಿಯ ಅಪರಾಧದೊಂದಿಗೆ ವೃತ್ತಿಗೆ ಸಂಬಂಧ ಕಲ್ಪಿಸುವುದನ್ನು ಒಪ್ಪಲಿಕ್ಕಾಗದು. ಪ್ರತಿ ಅಪರಾಧದ ಹಿನ್ನೆಲೆಯಲ್ಲಿಯೂ ಅಪರಾಧಿಯ ವೃತ್ತಿಯನ್ನು ಗುರುತಿಸುತ್ತಾ ಹೋದರೆ, ಸಮಾಜದಲ್ಲಿನ ಯಾವ ವೃತ್ತಿಯೂ ಗೌರವಯುತವಾಗಿ ಉಳಿಯುವುದು ಸಾಧ್ಯವಿಲ್ಲ ಹಾಗೂ ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲೂ ಕೆಲಸ ಮಾಡಲಾಗದಂತಹ ಸ್ಥಿತಿ ತಲೆದೋರಬಹುದು. ಕಟ್ಟುನಿಟ್ಟಿನ ಕಾನೂನು ಕ್ರಮಗಳ ಜಾರಿ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬೇಕೇ ವಿನಾ ಮಹಿಳೆಯರು ಹಾಗೂ ಪುರುಷರ ನಡುವೆ ಗೋಡೆ ಕಟ್ಟುವ ಮೂಲಕವಲ್ಲ.
ಹಾಥರಸ್‌ನ ಅಮಾನುಷ ಘಟನೆಯೂ ಸೇರಿದಂತೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕ್ರೌರ್ಯವೆಸಗಿದ ಹಲವು ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಉತ್ತರಪ್ರದೇಶದಿಂದ ವರದಿಯಾಗಿವೆ. ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ, ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿಅಂಶಗಳು ದೃಢಪಡಿಸಿವೆ. ಮಹಿಳೆಯರ ಮೇಲಿನ 65,743 ದೌರ್ಜನ್ಯ ಪ್ರಕರಣಗಳು 2022ರಲ್ಲಿ ದಾಖಲಾಗಿದ್ದರೆ, 2021ರಲ್ಲಿ 56,083 ಪ್ರಕರಣಗಳು ವರದಿಯಾಗಿವೆ. ಈ ಅಪರಾಧ ಕೃತ್ಯಗಳು ಕಾನೂನು ಸುವ್ಯವಸ್ಥೆಯ ವೈಫಲ್ಯದ ಜೊತೆಗೆ ಹೆಣ್ಣನ್ನು ಸರಕಿನಂತೆ ನೋಡುವ ಗಂಡಿನ ಮನಃಸ್ಥಿತಿಯ ಸಂಕೇತವೂ ಆಗಿವೆ. ಲೈಂಗಿಕ ದೌರ್ಜನ್ಯಗಳ ವಿರುದ್ಧ ದೊಡ್ಡದೊಂದು ಆಂದೋಲನ ರೂಪುಗೊಳ್ಳಬೇಕಾಗಿರುವುದು ಸದ್ಯದ ಅಗತ್ಯ. ಆದರೆ, ಮಹಿಳೆಯರ ಬಟ್ಟೆಗಳನ್ನು ಹೊಲಿಯುವ ಅಥವಾ ಕೇಶಾಲಂಕಾರದಂತಹ ಕೆಲಸಗಳನ್ನು ಗಂಡಸರು ಮಾಡುವುದರಿಂದ ಅತ್ಯಾಚಾರಗಳು ಸಂಭವಿಸುತ್ತಿವೆ ಎಂದು ಆಯೋಗ ಭಾವಿಸಿರುವುದು ಬಾಲಿಶ ಚಿಂತನೆಯಾಗಿದೆ; ಲೈಂಗಿಕ ಕಿರುಕುಳಗಳಂಥ ಗಂಭೀರ ಸಮಸ್ಯೆಗಳನ್ನು ಸರಳೀಕರಿಸುವ ಪ್ರಯತ್ನವೂ ಆಗಿದೆ. ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಮಹಿಳಾ ಆಯೋಗವು ಬೌದ್ಧಿಕ ಹಾಗೂ ವೈಜ್ಞಾನಿಕ ನೆಲಗಟ್ಟಿನಲ್ಲಿ ಪರಿಹಾರೋಪಾಯಗಳ ಬಗ್ಗೆ ಯೋಚಿಸಬೇಕು ಹಾಗೂ ಕಾನೂನುಗಳ ಪರಿಣಾಮಕಾರಿ ಜಾರಿಗೆ ಸರ್ಕಾರದ ಮೇಲೆ ಒತ್ತಾಯ ಹೇರಬೇಕು. ಯಾರನ್ನೋ ದೂರುವಂತಹ ಅಥವಾ ದೂರೀಕರಿಸುವಂತಹ ಚಿಂತನೆಗಳನ್ನು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನವೆಂದೇ ಭಾವಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.