ಬೆಂಗಳೂರು ನಗರ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿಯು ಹತ್ತು ವರ್ಷಗಳ ಹಿಂದೆ ಕಾವೇರಿ ಐದನೇ ಹಂತದ ನೀರು ಪೂರೈಕೆ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ವಾರದಿಂದ ಈ ಯೋಜನೆಯಡಿ ನಗರಕ್ಕೆ ನೀರು ಪೂರೈಕೆಯೂ ಆರಂಭವಾಗಿದೆ.
ನಗರಕ್ಕೆ ಮೊದಲ ಬಾರಿಗೆ ಶುದ್ಧೀಕರಿಸಿದ ನೀರು ಪೂರೈಕೆಯು ಅರ್ಕಾವತಿ ನದಿಯಿಂದ 1896ರಲ್ಲಿ ಆರಂಭವಾಯಿತು. ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯು 1974ರಲ್ಲಿ ಆರಂಭವಾಗಿದ್ದು, 50 ವರ್ಷ ಪೂರೈಸಿದೆ. ಮೊದಲ ನಾಲ್ಕು ಹಂತದ ಯೋಜನೆಗಳಿಂದ ಬೆಂಗಳೂರಿಗೆ ಕಾವೇರಿ ನದಿಯಿಂದ ಪ್ರತಿನಿತ್ಯ 145 ಕೋಟಿ ಲೀಟರ್ ನೀರು ಪೂರೈಕೆಯಾಗುತ್ತಿತ್ತು. ಈಗ 77.5 ಕೋಟಿ ಲೀಟರ್ ನೀರು ಹೆಚ್ಚುವರಿಯಾಗಿ ನಗರಕ್ಕೆ ಹರಿದುಬರುತ್ತಿದೆ.
2008ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚನೆಯಾದಾಗ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 110 ಹಳ್ಳಿಗಳನ್ನು ಬಿಬಿಎಂಪಿಯ ವ್ಯಾಪ್ತಿಗೆ ತರಲಾಯಿತು. ಈ ಪ್ರದೇಶಗಳಲ್ಲಿ ವ್ಯವಸ್ಥಿತವಾದ ಕುಡಿಯುವ ನೀರಿನ ಪೂರೈಕೆ ಇರಲಿಲ್ಲ. ಅಲ್ಲಿನ ನಿವಾಸಿಗಳಿಗೂ ಕಾವೇರಿ ನೀರನ್ನು ಪೂರೈಸಬೇಕೆಂಬ ಬೇಡಿಕೆ ಇತ್ತು. ಈ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಮೊದಲ ಹಂತದ ಯಶಸ್ಸು ದೊರಕಿದೆ. ಈ ಪ್ರದೇಶದ ಎಲ್ಲ ಮನೆಗಳು, ಕಟ್ಟಡಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದು ಮತ್ತು ನಿಯಮಿತವಾಗಿ ನೀರು ಪೂರೈಸಲು ದೋಷವಿಲ್ಲದ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ದೊಡ್ಡ ಸವಾಲು ಈಗ ಜಲಮಂಡಳಿಯ ಮುಂದಿದೆ.
ಐದನೇ ಹಂತದ ಯೋಜನೆಯೂ ಸೇರಿದಂತೆ ಈಗ ಕಾವೇರಿ ನದಿಯಿಂದ ಬೆಂಗಳೂರು ನಗರಕ್ಕೆ 222.5 ಕೋಟಿ ಲೀಟರ್ ನೀರು ಸರಬರಾಜು ಆಗುತ್ತಿದೆ. ಜಲಮಂಡಳಿಯ ಅಂದಾಜಿನ ಪ್ರಕಾರ, ಕೆಲವು ವರ್ಷಗಳವರೆಗೆ ಬೇಡಿಕೆಯನ್ನು ಸರಿದೂಗಿಸಲು ಸಾಧ್ಯವಾಗುವ ಸ್ಥಿತಿ ಇದೆ. ಆದರೆ, ಭವಿಷ್ಯದ ದಿನಗಳ ಬೇಡಿಕೆಯನ್ನು ಪೂರೈಸಲು ದೂರದೃಷ್ಟಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದ ತುರ್ತು ರಾಜ್ಯ ಸರ್ಕಾರದ ಮುಂದಿದೆ. ಜಲಮಂಡಳಿಯ ಅಂದಾಜಿನ ಪ್ರಕಾರ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬೆಂಗಳೂರು ನಗರಕ್ಕೆ 2031ರಲ್ಲಿ 290 ಕೋಟಿ ಲೀಟರ್ ನೀರು ಅಗತ್ಯ.
2041ರಲ್ಲಿ ಈ ಪ್ರಮಾಣ 340 ಕೋಟಿ ಲೀಟರ್‌ಗೆ ಏರಿಕೆಯಾಗಲಿದೆ. 2051ರಲ್ಲಿ 410 ಕೋಟಿ ಲೀಟರ್‌ಗೆ ಹೆಚ್ಚಲಿದೆ. ಈಗ ಕಾವೇರಿ ಕಣಿವೆಯಲ್ಲಿ ರಾಜ್ಯದ ಪಾಲಿಗೆ ನಿಗದಿಯಾಗಿರುವ ನೀರಿನಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿಯನ್ನು ಬೆಂಗಳೂರು ನಗರದ ಬಳಕೆಗೆ ಮರುಹಂಚಿಕೆ ಮಾಡಲಾಗಿದೆ. ಅದರ ಹೊರತಾಗಿ ಬೆಂಗಳೂರು ನಗರಕ್ಕೆ ಕಾವೇರಿ ನದಿಯಿಂದ ನೀರು ತರಲು ಅವಕಾಶವೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಆರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ. ಅಲ್ಲಿಗೆ ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರಿನ ಬಳಕೆಯ ಅವಕಾಶಗಳು ಪೂರ್ಣಗೊಂಡಂತಾಗುತ್ತದೆ.
ಜನಸಂಖ್ಯೆ ಹೆಚ್ಚಳ ಮತ್ತು ನಗರದ ವ್ಯಾಪ್ತಿ ವಿಸ್ತಾರವಾದಂತೆ ಬೆಂಗಳೂರಿನ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಸಮೃದ್ಧವಾಗಿ ಮಳೆಯಾದ ವರ್ಷಗಳಲ್ಲಷ್ಟೇ ಕಾವೇರಿ ಕಣಿವೆಯಿಂದ ಬೆಂಗಳೂರಿಗೆ ಪೂರ್ಣ ಪ್ರಮಾಣದಲ್ಲಿ ನೀರು ತರಲು ಸಾಧ್ಯ. ಮಳೆ ಕೊರತೆಯಾದರೆ ಅದರ ಪರಿಣಾಮ ರಾಜ್ಯ ರಾಜಧಾನಿಯ ಕುಡಿಯುವ ನೀರಿನ ಪೂರೈಕೆಯ ಮೇಲೂ ಆಗುತ್ತದೆ. ರಾಜ್ಯವು ಬರಗಾಲ ಎದುರಿಸಿದ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದ ದಿನಗಳನ್ನು ಕಂಡಿದ್ದೇವೆ. ಈಗ ಬೆಂಗಳೂರಿನಲ್ಲಿ ಉಳಿದಿರುವ 189 ಕೆರೆಗಳ ನೀರಿನ ಗುಣಮಟ್ಟ ಸುಧಾರಿಸಿ, ಬಳಸಿಕೊಳ್ಳುವ ಬಗ್ಗೆಯೂ ವೈಜ್ಞಾನಿಕವಾಗಿ ಪರಿಶೀಲಿಸಿ, ಆ ದಿಸೆಯಲ್ಲಿ ಹೆಜ್ಜೆ ಇಡಬೇಕಿದೆ. ಜಲಮಂಡಳಿಯ ಅಂಕಿಅಂಶದ ಪ್ರಕಾರ, ಬೆಂಗಳೂರಿನಲ್ಲಿ 148 ಕೋಟಿ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ 121.2 ಕೋಟಿ ಲೀಟರ್ ಅನ್ನು ಶುದ್ಧೀಕರಿಸಲಾಗುತ್ತಿದೆ. ಶುದ್ಧೀಕರಣಗೊಂಡ ಬಹುಪಾಲು ನೀರನ್ನು ಕೆ.ಸಿ. ವ್ಯಾಲಿ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಹರಿಸಲಾಗುತ್ತಿದೆ. ಸಂಸ್ಕರಿಸಿದ ಕೊಳಚೆ ನೀರನ್ನು ಕೈಗಾರಿಕೆ, ಕಟ್ಟಡ ನಿರ್ಮಾಣದಂತಹ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ಕಡ್ಡಾಯಗೊಳಿಸುವ ದಿಸೆಯಲ್ಲಿ ಜಲಮಂಡಳಿ ಹಾಗೂ ರಾಜ್ಯ ಸರ್ಕಾರ ದೃಢವಾದ ಹೆಜ್ಜೆ ಇಡಬೇಕಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ನಗರಕ್ಕೆ ಪೂರೈಕೆಯಾಗುವ ನೀರು ಪೋಲಾಗುವುದನ್ನು ತಡೆಯುವ ಕೆಲಸ ಮಾಡಬೇಕಿದೆ. ನೀರಿನ ಸೋರಿಕೆ ತಡೆಯುವುದಕ್ಕೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಮಿತಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಆಗಬೇಕು. ನಗರದಲ್ಲಿ ಸುರಿಯುವ ಮಳೆನೀರನ್ನು ಮುತುವರ್ಜಿಯಿಂದ ಸಂಗ್ರಹಿಸಿ, ಸಂಸ್ಕರಿಸಿ ಬಳಕೆ ಮಾಡಿದರೆ ಬೆಂಗಳೂರಿಗೆ ಬಾಹ್ಯ ಜಲಮೂಲಗಳ ಅವಲಂಬನೆಯ ಅಗತ್ಯವೇ ಇಲ್ಲ ಎಂಬುದು ಜಲತಜ್ಞರ ಅಭಿಪ್ರಾಯ. ಮಳೆನೀರು ಸಂಗ್ರಹವನ್ನು ಕಡ್ಡಾಯಗೊಳಿಸಿದ್ದರೂ ಅದು ಕಾಟಾಚಾರಕ್ಕೆ ಪಾಲನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತಹ ಬಿಗಿ ನಿಲುವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಆಗ, ಬೆಂಗಳೂರಿನ ನೀರಿನ ಬೇಡಿಕೆ ಈಡೇರಿಸುವ ವಿಚಾರದಲ್ಲಿ ದೃಢವಾದ ಹೆಜ್ಜೆ ಇರಿಸಿದಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.