ಭಾರತದಲ್ಲಿ ಕ್ರಿಕೆಟ್ ಆಟವು ಅಗಾಧವಾಗಿ ಬೆಳೆದಿದೆ. ಆದರೆ ಹಾಕಿ ಕ್ರೀಡೆಯೊಂದಿಗಿನ ಭಾವನಾತ್ಮಕ ನಂಟು ಇನ್ನೂ ಗಟ್ಟಿಯಾಗಿಯೇ ಉಳಿದಿದೆ. ಆದ್ದರಿಂದಲೇ ಭಾರತವು ಯಾವುದೇ ಅಂತರರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಮಾಡುವ ಸಾಧನೆಯು ಅಭಿಮಾನಿಗಳಲ್ಲಿ ಹರುಷದ ಹೊನಲು ಹರಿಸುತ್ತದೆ. ಇದೀಗ ಯುವ ಆಟಗಾರ್ತಿ ಸಲೀಮಾ ಟೆಟೆ ಸಾರಥ್ಯದ ಭಾರತ ಮಹಿಳಾ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ದೇಶದ ಕ್ರೀಡಾಪ್ರೇಮಿಗಳ ಮನಸ್ಸಿಗೆ ತಂಪೆರೆದಿದೆ. ಭಾರತದ ವನಿತೆಯರ ತಂಡವು ಸತತ ಎರಡನೇ ಬಾರಿ ಟ್ರೋಫಿ ಜಯಿಸಿರುವುದು ಹೆಮ್ಮೆಯ ಸಂಗತಿ. ಆಗಸ್ಟ್‌ನಲ್ಲಿ ಜರುಗಿದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮಹಿಳಾ ತಂಡವು ಅರ್ಹತೆ ಗಳಿಸಿರಲಿಲ್ಲ. ಆ ನಿರಾಶೆಯನ್ನು ಮರೆಸುವ ರೀತಿಯಲ್ಲಿ ಭಾರತ ಪುಟಿದೆದ್ದಿದೆ. ಮುಂದಿನ ಒಲಿಂಪಿಕ್ಸ್ ಮತ್ತು ವಿಶ್ವಕಪ್ ಟೂರ್ನಿಗಳತ್ತ ಸಾಗುವ ಪಯಣಕ್ಕೆ ಈ ಗೆಲುವು ಹುರುಪು ತುಂಬಲಿದೆ. ಬಿಹಾರದ ಐತಿಹಾಸಿಕ ನಗರಿ ರಾಜಗೀರ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಏಷ್ಯಾದ ಆರು ಪ್ರಮುಖ ತಂಡಗಳು ಪೈಪೋಟಿ ನಡೆಸಿದವು. 2023ರಲ್ಲಿ ಚಾಂಪಿಯನ್ ಆಗಿದ್ದ ಭಾರತವೇ ಈ ಬಾರಿಯೂ ಪ್ರಶಸ್ತಿಗೆ ನೆಚ್ಚಿನ ತಂಡವಾಗಿತ್ತು. ಆದರೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಚೀನಾ ತಂಡ ಮತ್ತು ಶಿಸ್ತಿನ ಆಟಕ್ಕೆ ಹೆಸರಾದ ಜಪಾನ್ ತಂಡವನ್ನು ಮಣಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ ರೌಂಡ್ ರಾಬಿನ್ ಲೀಗ್ ಮತ್ತು ನಾಕೌಟ್ ಹಂತಗಳಲ್ಲಿ ಈ ತಂಡಗಳನ್ನು ಸೋಲಿಸಿದ್ದು ಭಾರತದ ಹೆಗ್ಗಳಿಕೆ. ಅದರಲ್ಲೂ ಫೈನಲ್‌ನಲ್ಲಿ ಚೀನಾ ತಂಡದ ಪ್ರತಿರೋಧ ಮತ್ತು ಸೆಮಿಫೈನಲ್‌ನಲ್ಲಿ ಜಪಾನ್ ತಂಡದ ದಿಟ್ಟ ಆಟವನ್ನು ಮೀರಿ ನಿಂತಿದ್ದು ರೋಚಕವಾದ ಅಧ್ಯಾಯಗಳು. ಥಾಯ್ಲೆಂಡ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಆಡಿದ ಈ ಟೂರ್ನಿಯಲ್ಲಿ ಅಜೇಯವಾಗುಳಿದ ಏಕೈಕ ತಂಡ ಭಾರತ.
2010ರಿಂದ ಈ ಟೂರ್ನಿ ನಡೆಯುತ್ತಿದ್ದು, ಭಾರತ ತಂಡವು 2016ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. 2013, 2018ರಲ್ಲಿ ರನ್ನರ್ಸ್ ಅಪ್ ಆಗಿತ್ತು. 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಭಾರತದ ವನಿತೆಯರು ನಾಲ್ಕನೇ ಸ್ಥಾನ ಪಡೆದರು. ಕೂಟದಲ್ಲಿ ಅವರು ಆಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆನಂತರ ಭಾರತದ ಮಹಿಳಾ ಹಾಕಿ ತಂಡವೂ ತಾರಾಮೌಲ್ಯ ಪಡೆಯಿತು. ಆದರೂ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಥಾನ ಪಡೆಯುವಲ್ಲಿ ಹಿನ್ನಡೆ ಅನುಭವಿಸಿತು. ಇದೀಗ ಮುಖ್ಯ ಕೋಚ್ ಹರೇಂದರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ತಂಡವು ಯಶಸ್ಸು ದಾಖಲಿಸಿದೆ. ಈ ತಂಡದಲ್ಲಿ ಗೋಲ್‌ಕೀಪರ್, 34 ವರ್ಷ ವಯಸ್ಸಿನ ಸವಿತಾ ಪೂನಿಯಾ ಅವರೊಬ್ಬರೇ ಅನುಭವಿ ಆಟಗಾರ್ತಿ. ನಾಯಕಿ ಸಲೀಮಾ ಸೇರಿದಂತೆ ಎಲ್ಲರೂ ಯುವ ಆಟಗಾರ್ತಿಯರು. ಆಟದಲ್ಲಿ ಅವರೆಲ್ಲರೂ ತೋರಿದ ಬದ್ಧತೆ ಮತ್ತು ಛಲ ಭರವಸೆ ಮೂಡಿಸಿದವು. ಜಾರ್ಖಂಡ್‌ನ ಕುಗ್ರಾಮದ ಬಡಕುಟುಂಬ ವೊಂದರ ಸಲೀಮಾ ಅವರ ಪಾಲಿಗಂತೂ ಇದು ಬಹಳ ದೊಡ್ಡ ಸಾಧನೆ. ಈ ಹಿಂದೆ ಅಸುಂತಾ ಲಕ್ರಾ, ರಾಣಿ ರಾಂಪಾಲ್, ಸವಿತಾ ಪೂನಿಯಾ ಅವರು ನಾಯಕತ್ವದಲ್ಲಿ ಮಾಡಿದ ಸಾಧನೆಯನ್ನು ಸರಿಗಟ್ಟುವ ಭರವಸೆಯನ್ನೂ ಸಲೀಮಾ ಮೂಡಿಸಿದ್ದಾರೆ. ಜಾರ್ಖಂಡ್‌ನವರೇ ಆದ ಸಂಗೀತಾ ಕುಮಾರಿ, ಉತ್ತರಪ್ರದೇಶದ ಪ್ರೀತಿ ದುಬೆ ಅವರು ಗಮನ ಸೆಳೆದರು. ಆದರೆ ಹರಿಯಾಣದ ದೀಪಿಕಾ ಸೆಹ್ರಾವತ್ ಅವರ ಆಟವು ಕಣ್ಮನ ಸೆಳೆಯಿತು. ಟೂರ್ನಿಯಲ್ಲಿ ಒಟ್ಟು 11 ಗೋಲುಗಳನ್ನು ಗಳಿಸಿದ ಅವರು, ಭಾರತೀಯ ಹಾಕಿ ಕ್ಷೇತ್ರದ ನವತಾರೆಯಾಗಿ ಹೊರಹೊಮ್ಮಿದ್ದಾರೆ. ಹರಿಯಾಣದವರೇ ಆದ ನವನೀತ್ ಕೌರ್, ಉದಿತಾ ಧುಹಾನ್, ಉತ್ತರಾಖಂಡದ ಮನೀಷಾ ಅವರೆಲ್ಲರೂ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದಾರೆ. ಬಿಹಾರ, ಹರಿಯಾಣ, ಪಂಜಾಬ್, ಒಡಿಶಾ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ಸಿಗುತ್ತಿರುವ ಪ್ರೋತ್ಸಾಹದ ಫಲವಾಗಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಮಹಿಳೆ ಮತ್ತು ಪುರುಷರ ಹಾಕಿ ತಂಡಗಳಿಗೆ ಅತ್ಯುನ್ನತ ಮಟ್ಟದ ತರಬೇತಿ ಲಭಿಸುತ್ತಿರುವುದು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಹಾಕಿ ವಸತಿ ನಿಲಯದಲ್ಲಿ ಎಂಬುದು ವಿಶೇಷ. ಆದರೆ ಕರ್ನಾಟಕದ ಒಬ್ಬ ಆಟಗಾರ್ತಿಯೂ ಈ ಬಾರಿಯ ತಂಡದಲ್ಲಿ ಇರಲಿಲ್ಲ ಎನ್ನುವುದು ಬೇಸರದ ಸಂಗತಿ. ಕರ್ನಾಟಕವು ಈ ಹಿಂದೆ ಪುರುಷ ಮತ್ತು ಮಹಿಳಾ ವಿಭಾಗಗಳ ತಂಡಗಳಿಗೆ ಉತ್ತಮ ಆಟಗಾರ್ತಿಯರನ್ನು ನೀಡಿರುವ ಹೆಗ್ಗಳಿಕೆ ಹೊಂದಿದೆ. ಆ ಪರಂಪರೆಯನ್ನು ಮುಂದುವರಿಸುವ ದಿಸೆಯಲ್ಲಿ ಹಾಕಿ ಕರ್ನಾಟಕ
ಕಾರ್ಯೋನ್ಮುಖವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.