ADVERTISEMENT

ಆರೋಪ ಹೊತ್ತವರಿಗೆ ಅರಣ್ಯ ಖಾತೆ ರಾಜಕೀಯ ನೈತಿಕತೆಗೆ ತಿಲಾಂಜಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 22:21 IST
Last Updated 18 ಫೆಬ್ರುವರಿ 2020, 22:21 IST
   

ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅರಣ್ಯ ಮತ್ತು ಪರಿಸರ ಖಾತೆಯನ್ನು ನೀಡಿರುವುದು ಪ್ರಜ್ಞಾವಂತರು ಒಪ್ಪುವಂತಹ ನಡೆ ಅಲ್ಲ. ಅವರಿಗೆ ಸಚಿವ ಸ್ಥಾನವನ್ನು ನೀಡಬೇಕಾದ ಒತ್ತಡ ಮುಖ್ಯಮಂತ್ರಿ ಮೇಲೆ ಇದ್ದಿದ್ದರೆ, ಅದು ಸಹಜ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರ ಹಿಡಿಯಲು ನೆರವಾದ ಶಾಸಕರಲ್ಲಿ ಅವರೂ ಒಬ್ಬರು.

ಹಾಗಾಗಿ, ಕೃತಜ್ಞತೆಯ ದ್ಯೋತಕವಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿರಬಹುದು. ಆದರೆ, ತಮ್ಮ ವಿರುದ್ಧ ಹದಿನೈದು ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ ಎಂದು ಉಪಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆನಂದ್‌ ಸಿಂಗ್‌ ಅವರೇ ನಮೂದಿಸಿದ್ದಾರೆ. ದಾಖಲೆಗಳ ಫೋರ್ಜರಿ, ಕ್ರಿಮಿನಲ್‌ ಸಂಚು, ವಂಚನೆ, ಅರಣ್ಯ ಉತ್ಪನ್ನಗಳ ಅಕ್ರಮ ಸಾಗಣೆ... ಹೀಗೆ ಈ ಆರೋಪಗಳ ಪಟ್ಟಿ ಉದ್ದ ಇದೆ.

ಈ ಪ್ರಕರಣಗಳಲ್ಲಿ ಅವರ ವಿರುದ್ಧ ಸರ್ಕಾರದ ಅಧಿಕಾರಿಗಳೇ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಈಗ ಆರೋಪಿಯೇ ಸಚಿವರಾಗಿ ಬಂದು ಕುಳಿತಿರುವಾಗ ಆ ಅಧಿಕಾರಿಗಳು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಷ್ಠುರ ನಿಲುವು ತಳೆಯಲು ಸಾಧ್ಯವೇ? ಈ ಪ್ರಕರಣ ಗಳು ನ್ಯಾಯಬದ್ಧವಾಗಿ ಇತ್ಯರ್ಥವಾಗುವ ಸಾಧ್ಯತೆ ಇದೆಯೇ? ಅರಣ್ಯ ಇಲಾಖೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವಾಗ ಸಚಿವರಿಗೆ ಹಿತಾಸಕ್ತಿ ಸಂಘರ್ಷ ಖಂಡಿತವಾಗಿಯೂ ಎದುರಾಗುತ್ತದೆ.

ADVERTISEMENT

ಬೇಲೆಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಆನಂದ್‌ ಸಿಂಗ್‌ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು. ಶಾಸಕರಾಗಿ ಇದ್ದಾಗಲೇ ಸಿಂಗ್‌ ಅವರು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಹೊತ್ತವರು. ಈಗ ಅರಣ್ಯ ಖಾತೆಯ ಹೊಣೆ ಹೊತ್ತುಕೊಂಡ ಬಳಿಕ, ಅರಣ್ಯ ಕಾಯ್ದೆಯನ್ನು ಉಲ್ಲಂಘಿಸುವ ಇತರರ ವಿರುದ್ಧ ಕೈಗೊಳ್ಳುವ ನಿರ್ದಾಕ್ಷಿಣ್ಯ ಕ್ರಮಗಳಿಗೆ ಅವರು ಒತ್ತಾಸೆಯಾಗಿ ನಿಲ್ಲುತ್ತಾರೆ ಎಂದು ರಾಜ್ಯದ ಜನರು ನಂಬುವುದಾದರೂ ಹೇಗೆ?

ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಗಣಿ ಹಗರಣ ಬೆಳಕಿಗೆ ಬಂದಾಗ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇತ್ತು. ಲಕ್ಷಾಂತರ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ವರದಿ ಕೊಟ್ಟಿದ್ದವು. ರಾಜ್ಯದ ಬೊಕ್ಕಸಕ್ಕೆ ಸುಮಾರು ₹ 35,000 ಕೋಟಿ ನಷ್ಟ ಉಂಟಾಗಿದೆ ಎಂದು ವಿಶೇಷ ತನಿಖಾ ದಳ (ಎಸ್‌ಐಟಿ) ಮೊಕದ್ದಮೆ ದಾಖಲಿಸಿತ್ತು. ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಅರಣ್ಯ ಇಲಾಖೆ ಅಧಿಕಾರಿಗಳ ನ್ಯಾಯಾಂಗ ಹೋರಾಟ ಇನ್ನೂ ಮುಂದುವರಿದಿರುವಾಗ, ಆನಂದ್‌ ಸಿಂಗ್‌ ಅವರನ್ನೇ ಅರಣ್ಯ ಸಚಿವರನ್ನಾಗಿ ನೇಮಿಸಿರುವುದು ವಿರೋಧಾಭಾಸದ ನಡೆ.

ರಾಜಕೀಯದಲ್ಲಿ ನೈತಿಕತೆ ಪಾತಾಳಕ್ಕೆ ಕುಸಿದಿದೆ ಎಂಬುದರ ಸೂಚನೆ ಇದು. ಇತರ ಪಕ್ಷಗಳಿಗಿಂತ ತಮ್ಮ ಪಕ್ಷ ಭಿನ್ನ ಎಂದು ಪ್ರತಿಪಾದಿಸುವ ಬಿಜೆಪಿ ನಾಯಕರು ಮುಖ್ಯಮಂತ್ರಿಯವರ ಈ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಈ ವಿಷಯಕ್ಕೆ ಸಂಬಂಧಿಸಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿರೋಧ ಪಕ್ಷಗಳ ಕೈಗೆ ಇದೊಂದು ಅಸ್ತ್ರವಾಗಿ ಸಿಕ್ಕಿದೆ. ಇಂತಹ ಸ್ಥಿತಿ ಉಂಟಾಗದಂತೆ ಮುಖ್ಯಮಂತ್ರಿ ಎಚ್ಚರ ವಹಿಸಬೇಕಿತ್ತು. ಆದರೆ, ಹಾಗೆ ಮಾಡದೆ ಅರಣ್ಯ ಖಾತೆಯನ್ನು ಆನಂದ್‌ ಸಿಂಗ್‌ ಅವರಿಗೆ ವಹಿಸಿದ್ದು ವಿವೇಕಯುತ ನಡೆಯಲ್ಲ. ಈ ಖಾತೆಯ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸುವ ನೈತಿಕ ನಿಲುವನ್ನು ಮುಖ್ಯಮಂತ್ರಿ ತಳೆಯಬೇಕು. ಆಗಿರುವ ತಪ್ಪನ್ನು ಆ ಮೂಲಕ ಸರಿಪಡಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.