ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಹಾಗೂ ಅದರ ಸುತ್ತಲಿನ ಚರ್ಚೆಗಳು ಮೂರು ದಿನಗಳಿಂದ ದೇಶದ ಜನರ ಗಮನವನ್ನು ಸೆಳೆದಿವೆ. ಆದರೆ ಈ ಚರ್ಚೆಗಳು ತೀರಾ ನಿರಾಶಾದಾಯಕ ಆಗಿದ್ದವು. ಏಕೆಂದರೆ ಅವು ಎಂದಿನ ಆವೇಶದ ಭಾಷಣಗಳ ಆಚೆಗೆ ವಿಸ್ತರಿಸಿಕೊಳ್ಳಲಿಲ್ಲ. ಅವಿಶ್ವಾಸ ನಿರ್ಣಯವು ಮೋದಿ ಅವರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ಮುರಿಯುವಂತೆ ಮಾಡುವ ಸೀಮಿತ ಉದ್ದೇಶವನ್ನು ಹೊಂದಿತ್ತು ಎಂದಾದರೆ, ನಿರ್ಣಯದ ಯಶಸ್ಸಿನ ಬಗ್ಗೆಯೇ ಪ್ರಶ್ನೆಗಳು ಮೂಡುತ್ತವೆ. ಏಕೆಂದರೆ, ಪ್ರಧಾನಿಯವರು ಮಣಿಪುರದ ವಿಚಾರವಾಗಿ ಕೊನೆಗೂ ಮಾತನಾಡಿದರಾದರೂ, ಅದರ ಎಲ್ಲ ಆಯಾಮಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ. ದೇಶವನ್ನು ಈಗ ಕಾಡುತ್ತಿರುವ ಅತ್ಯಂತ ಗಹನವಾದ ವಿಷಯವೊಂದರ ಬಗ್ಗೆ ಪ್ರಧಾನಿಯವರು ಮಾತನಾಡುವಂತೆ ಮಾಡಲು ವಿರೋಧ ಪಕ್ಷಗಳು ಸಂಸದೀಯ ಪ್ರಕ್ರಿಯೆಗಳಲ್ಲಿ ಅಂತಿಮ ಅಸ್ತ್ರವಾಗಿರುವ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗುತ್ತದೆ ಎಂದಾದರೆ, ಅದೊಂದು ವಿಷಾದನೀಯ ಸ್ಥಿತಿ ಎನ್ನದೆ ವಿಧಿಯಿಲ್ಲ. ಈ ಸ್ಥಿತಿಯು ವಿರೋಧ ಪಕ್ಷಗಳ ಅಸಹಾಯಕತೆಯನ್ನೂ ಸರ್ಕಾರದ ಹಾಗೂ ಅದರ ನಾಯಕನ ಅಹಂಕಾರ, ಸಂವೇದನಾಶೂನ್ಯತೆ, ಪ್ರಶ್ನೆಗೆ ಅತೀತರಾಗಿದ್ದೇವೆ ಎಂಬ ಮನೋಭಾವವನ್ನೂ ತೋರಿಸುತ್ತದೆ. ಈ ಸ್ಥಿತಿಯು ದೇಶದ ಪ್ರಜಾತಂತ್ರ ವ್ಯವಸ್ಥೆ ತಲುಪಿರುವ ಅವಸ್ಥೆಯ ಪ್ರತಿಬಿಂಬವೂ ಹೌದು.
ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡಲು ಸರ್ಕಾರವು ಏನು ಮಾಡಲಿದೆ ಎಂಬುದನ್ನು ತಿಳಿಸುವ ವಿಚಾರವಾಗಿ ಪ್ರಧಾನಿಯವರ ಮಾತುಗಳಲ್ಲಿ ಅಥವಾ ಗೃಹ ಸಚಿವ ಅಮಿತ್ ಶಾ ಅವರ ಮಾತುಗಳಲ್ಲಿ ಹೆಚ್ಚಿನ ವಿವರಗಳೇನೂ ಇರಲಿಲ್ಲ. ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಆಶಾಭಾವನೆ ಅವರ ಮಾತುಗಳಲ್ಲಿ ಇತ್ತು. ಸಮರ್ಥನೆ ಸಾಧ್ಯವೇ ಇಲ್ಲ ಎಂಬ ಹಂತ ತಲುಪಿರುವ ರಾಜ್ಯ ಸರ್ಕಾರದ ಸಮರ್ಥನೆ ಇತ್ತು. ಇವುಗಳ ಜೊತೆಯಲ್ಲಿ, ಈಗ ಮಾಮೂಲು ಎಂಬಂತಾಗಿರುವ, ಮಣಿಪುರದ, ಈಶಾನ್ಯ ಭಾರತದ ಯಾವುದೇ ರಾಜ್ಯದ ಅಥವಾ ಭಾರತದ ಯಾವುದೇ ಪ್ರದೇಶದ ಸಮಸ್ಯೆಗಳಿಗೆ ಕಾಂಗ್ರೆಸ್ ಹೊಣೆ ಎನ್ನುವ ಮಾತುಗಳು ಕೂಡ ಇದ್ದವು. ಮೂರು ತಿಂಗಳಿನಿಂದ ಮಣಿಪುರದಲ್ಲಿ ಸಂಘರ್ಷ ನಡೆದಿರುವಾಗ, ‘ನಾವು ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಪ್ರಧಾನಿಯವರು ಆಡಿದ ಮಾತುಗಳು ಬದ್ಧತೆಯನ್ನಾಗಲೀ, ವಿಶ್ವಾಸವನ್ನಾಗಲೀ ವ್ಯಕ್ತಪಡಿಸುತ್ತಿಲ್ಲ. ಪ್ರಧಾನಿಯವರು 90 ನಿಮಿಷಕ್ಕೂ ಹೆಚ್ಚು ಅವಧಿಗೆ ಮಾತನಾಡಿದರು. ಅವರ ಮಾತುಗಳಲ್ಲಿ ಮಣಿಪುರದ ಬಗ್ಗೆ ಉಲ್ಲೇಖವೇ ಆಗದಿದ್ದಾಗ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಆ ನಂತರದಲ್ಲಿ ಪ್ರಧಾನಿಯವರು ಮಣಿಪುರದ ಬಗ್ಗೆ ಮಾತನಾಡಿದರು. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಹೆಚ್ಚಿನ ಸಮಯವನ್ನು ವಿರೋಧ ಪಕ್ಷಗಳನ್ನು ಅಣಕಿಸಲು, ಗೇಲಿ ಮಾಡಲು ಹಾಗೂ ಟೀಕಿಸಲು ಬಳಸಿಕೊಂಡರು. ‘ನನ್ನನ್ನು ಪ್ರಶ್ನಿಸಲು ನಿಮಗೆ ಅದೆಷ್ಟು ಧೈರ್ಯ’ ಎಂಬ ಧೋರಣೆ ಅವರ ಮಾತುಗಳಲ್ಲಿ ಇತ್ತು. ಮಾತುಗಳಲ್ಲಿ ಆರ್ಭಟ ಇತ್ತು. ರಾಜಕೀಯ ನಿಲುವುಗಳು ಬಿಗಿಗೊಳ್ಳುತ್ತಿರುವ, ರಾಷ್ಟ್ರ ರಾಜಕಾರಣದಲ್ಲಿನ ಅಂತರ ಹಾಗೂ ಬಿಕ್ಕಟ್ಟು ಹೆಚ್ಚುತ್ತಿರುವ ಸೂಚನೆಗಳು ಆ ಮಾತುಗಳಲ್ಲಿ ಇದ್ದವು. ದುರದೃಷ್ಟದ ವಿಚಾರವೆಂದರೆ, ಚರ್ಚೆ, ಸಂವಾದ ಹಾಗೂ ನಿರ್ಣಯ ಕೈಗೊಳ್ಳುವುದಕ್ಕೆ ದೇಶದ ಅತ್ಯುನ್ನತ ವೇದಿಕೆಯಾಗಿರುವ ಸಂಸತ್ತು ಸೋತುಹೋಗಿರುವುದರ ಸೂಚನೆಗಳು ಅಲ್ಲಿನ ಮಾತುಗಳಲ್ಲಿ ಇದ್ದವು. ಇವಿಷ್ಟನ್ನು ಹೊರತುಪಡಿಸಿದರೆ ಅಲ್ಲಿನ ಮಾತುಗಳು ಹೆಚ್ಚಿನದೇನನ್ನೂ ಧ್ವನಿಸಲಿಲ್ಲ.
ಅಲ್ಲಿ ಮಾತುಗಳ ಆಲಿಸುವಿಕೆ ಇರಲಿಲ್ಲ. ಬದಲಿಗೆ, ಮಾತನಾಡುವಿಕೆ ಮಾತ್ರವೇ ಇತ್ತು. ಮಾತುಗಳನ್ನು ಆಡಿದವರು ದೇಶದ ಮುಂದೆ ತಾವು ಚರ್ಚಿಸಲು ಬಯಸಿದ ವಿಷಯಗಳ ಬಗ್ಗೆ ಸಂವಾದ ನಡೆಸಲಿಲ್ಲ. ತಮ್ಮತಮ್ಮಲ್ಲಿಯೇ ಮಾತನಾಡಿಕೊಂಡರು. ಪ್ರಧಾನಿಯವರು ತಾವು ಹೇಳಬೇಕಿದ್ದುದನ್ನು ಹೇಳಲು ಮಾತ್ರ ಎಂಬಂತೆ ಲೋಕಸಭೆಗೆ ಬಂದರು. ಅಲ್ಲಿನ ಮಾತುಗಳು, 2024ರ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯವು ಸಂಸತ್ತಿನಿಂದಲೇ ಶುರುವಾಗಿದೆಯೇನೋ ಎಂದು ಅನ್ನಿಸುವಂತೆ ಇದ್ದವು. ವಿರೋಧ ಪಕ್ಷಗಳು ಹೊಸದೊಂದು ಮೈತ್ರಿಕೂಟವನ್ನು ರಚಿಸಿಕೊಂಡ ನಂತರದಲ್ಲಿ ಆಡಳಿತಾರೂಢರನ್ನು ನೇರವಾಗಿ ಎದುರಿಸಿದ ಮೊದಲ ಮಹತ್ವದ ವೇದಿಕೆ ಇದಾಗಿತ್ತು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಏನು ಹೇಳಲಾಯಿತು ಹಾಗೂ ಹೇಗೆ ಹೇಳಲಾಯಿತು ಎಂಬುದು ಮುಂದೆ ಬರಲಿರುವ ಚುನಾವಣೆಯಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು, ಯಾವುದನ್ನು ಪಕ್ಕಕ್ಕೆ ಸರಿಸಬೇಕು ಎಂಬುದಕ್ಕೆ ಭೂಮಿಕೆ ಸಜ್ಜುಗೊಳಿಸಿಕೊಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.