ADVERTISEMENT

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಆತುರದ ನಿರ್ಧಾರ ಸಲ್ಲದು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 20:00 IST
Last Updated 6 ಅಕ್ಟೋಬರ್ 2019, 20:00 IST
   

ಶಾಲಾ ಮಕ್ಕಳು ದಸರಾ ರಜೆಯ ಸಂಭ್ರಮದಲ್ಲಿರುವಾಗಲೇ ಅವರ ಉತ್ಸಾಹವನ್ನು ಕುಗ್ಗಿಸುವಂತೆ ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆಯನ್ನು ನಡೆಸುವ ನಿರ್ಧಾರ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರವು ಶಿಕ್ಷಣದ ಯಶಸ್ಸನ್ನು ಪರೀಕ್ಷೆಗಳ ಮೂಲಕ ಅಳೆಯುವ ಚಿಂತನೆಯ ಫಲ. ಅಲ್ಲದೆ, ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಮೂಲ ಆಶಯಕ್ಕೆ ವಿರುದ್ಧವಾದುದು.

ಕಲಿಕೆಯೊಂದಿಗೆ ಮಕ್ಕಳನ್ನು ಮುಂದಿನ ತರಗತಿಗಳಿಗೆ ಕರೆದೊಯ್ಯುವುದಕ್ಕೆ ಆರ್‌ಟಿಇ ಒತ್ತು ನೀಡುವುದೇ ಹೊರತು, ಮಕ್ಕಳನ್ನು ಅನುತ್ತೀರ್ಣಗೊಳಿಸುವುದಕ್ಕಲ್ಲ. ಆಯಾ ದಿನದ ಕಲಿಕೆಯ ಮೌಲ್ಯಮಾಪನಕ್ಕೆ ಅಂದೇ ಅವಕಾಶ ಕಲ್ಪಿಸುವ ‘ನಿರಂತರ ಮೌಲ್ಯಮಾಪನ’ ಪದ್ಧತಿ ಪ್ರಸ್ತುತ ಚಾಲ್ತಿಯಲ್ಲಿದೆ. ಹೀಗಿರುವಾಗ, ಮತ್ತೊಂದು ವಾರ್ಷಿಕ ಮೌಲ್ಯಮಾಪನದ ಹೇರಿಕೆ ಅಪ್ರಸ್ತುತ, ಅವೈಜ್ಞಾನಿಕ. ನಮ್ಮಲ್ಲಿನ ಕಲಿಕಾ ಪ್ರಕ್ರಿಯೆಯ ಅವ್ಯವಸ್ಥೆಗಳು ಒಂದೆರಡಲ್ಲ. ಆ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಕಲಿಸದೆಯೇ ಮಕ್ಕಳನ್ನು ಅನುತ್ತೀರ್ಣಗೊಳಿಸಲು ಸರ್ಕಾರ ಹೊರಟಂತಿದೆ.

ಮಕ್ಕಳ ಕಲಿಕಾಮಟ್ಟ ಕುಸಿಯುತ್ತಿರುವ ಬಗ್ಗೆ ಹಲವು ಸಮೀಕ್ಷೆಗಳು ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೂ ಪರೀಕ್ಷಾ ಪದ್ಧತಿಗೂ ಸಂಬಂಧವಿದೆ ಎಂದು ಅವರು ನಂಬಿರುವಂತಿದೆ. ಒಂದರಿಂದ ಹತ್ತನೇ ತರಗತಿಯವರೆಗೆ ಮಕ್ಕಳ ಕಲಿಕೆಯ ಸಮರ್ಪಕ ಮೌಲ್ಯಮಾಪನಕ್ಕೆ ಅವಕಾಶವೇ ಇಲ್ಲದಿರುವುದರಿಂದ, ಏಳನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯವೂ ಇದೆ. ಹತ್ತನೇ ತರಗತಿಗೆ ಬಂದರೂ ಕೆಲವು ಮಕ್ಕಳಿಗೆ ಓದಲು, ಬರೆಯಲು ಸರಿಯಾಗಿ ಬರುವುದಿಲ್ಲ ಎನ್ನುವ ದೂರುಗಳೂ ಇವೆ. ಇವೆಲ್ಲ ದೂರುಗಳಿಗೆ ಪಬ್ಲಿಕ್‌ ಪರೀಕ್ಷೆಯೇ ಮದ್ದೆಂದು ಸರ್ಕಾರ ಭಾವಿಸಿದಂತಿದೆ. ಆದರೆ, ಪರೀಕ್ಷೆಯ ಫಲಿತಾಂಶ ತಂದೊಡ್ಡಬಹುದಾದ ಸಮಸ್ಯೆಗಳ ಬಗ್ಗೆ ಯಾರೂ ಗಂಭೀರವಾಗಿ ಚಿಂತಿಸಿದಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಅನೇಕರು ತಮ್ಮ ಶಿಕ್ಷಣಕ್ಕೇ ತಿಲಾಂಜಲಿ ಹೇಳುವುದಿದೆ.

ADVERTISEMENT

ಸ್‌ಎಸ್‌ಎಲ್‌ಸಿ–‍ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಶಿಕ್ಷಣವನ್ನು ಕೊನೆಗೊಳಿಸಿರುವವರ ದೊಡ್ಡ ಸಮೂಹ ನಮ್ಮ ನಡುವೆ ಇದೆ. ಆ ಗುಂಪಿನಲ್ಲಿ ಇನ್ನು ಮುಂದೆ ಏಳನೇ ತರಗತಿಯಲ್ಲಿ ನಪಾಸಾಗಿ ಶಾಲೆ ಬಿಡುವವರು ಎದ್ದು ಕಾಣುವಂತಾಗಬಹುದು. ಪಬ್ಲಿಕ್‌ ಪರೀಕ್ಷೆಯೆನ್ನುವುದು ಹೆಣ್ಣುಮಕ್ಕಳ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮ ಬೀರಬಹುದು. ಅವರು ಶಾಲೆಯಿಂದ ದೂರವಾಗಲು ಕಾರಣವಾಗಬಹುದು. ಈ ಸಾಮಾಜಿಕ ಆಯಾಮವನ್ನೂ ಪಬ್ಲಿಕ್‌ ಪರೀಕ್ಷೆ ನಡೆಸಲು ಹೊರಟಿರುವವರು ಗಮನಿಸಬೇಕು.

ಪರೀಕ್ಷೆಗೆ ಕೊಡುವ ಒತ್ತನ್ನು ಕಲಿಕೆಗೆ ಕೊಡದಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪಗಳಲ್ಲೊಂದು. ಸ್ಪರ್ಧಾತ್ಮಕ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಬಾಲ್ಯವನ್ನು ಈಗಾಗಲೇ ಕಸಿದುಕೊಂಡಾಗಿದೆ. ಈಗ ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆಯನ್ನು ಪರಿಚಯಿಸುವ ಮೂಲಕ ಎಳೆಯರ ಮೇಲೆ ಮತ್ತಷ್ಟು ಒತ್ತಡ ಹೇರಿದಂತಾಗುತ್ತದೆ. ಅದರಲ್ಲೂ ಶೈಕ್ಷಣಿಕ ವರ್ಷದಲ್ಲಿ ಅರ್ಧಭಾಗ ಮುಗಿದಿರುವಾಗ ಇಂಥ ಪ್ರಯೋಗಗಳ ಚಿಂತನೆಯನ್ನು ಹರಿಯಬಿಡುವುದೇ ಸರಿಯಲ್ಲ. ಪ್ರಾಥಮಿಕ ಶಿಕ್ಷಣ ಕ್ಷೇತ್ರಕ್ಕೆ ಸದ್ಯಕ್ಕೆ ಅಗತ್ಯವಿರುವುದು ಪ್ರಯೋಗಗಳಲ್ಲ; ಇರುವ ಅಪಸವ್ಯಗಳನ್ನು ಸರಿಪಡಿಸುವುದು. ಪ್ರಾಥಮಿಕ ಶಾಲಾ ಶಿಕ್ಷಕರ ಮೇಲಿನ ಶಿಕ್ಷಣೇತರ ಹೊರೆಗಳನ್ನು ಇಳಿಸಿ, ಅವರ ಎಲ್ಲ ಸಮಯವನ್ನು ಬೋಧನೆಗೆ ದೊರೆಯುವಂತೆ ಮಾಡಬೇಕಿದೆ.

ಕಡ್ಡಾಯ ವರ್ಗಾವಣೆ ಎನ್ನುವ ಶಿಕ್ಷೆಯ ಆತಂಕವಿಲ್ಲದೆ ಪಾಠ ಮಾಡಲು ಅವಕಾಶ ಕಲ್ಪಿಸಬೇಕಾಗಿದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಸುಧಾರಿಸಬೇಕಾಗಿದೆ. ಇವೆಲ್ಲವನ್ನೂ ಮಾಡಿದ ನಂತರ ಮಕ್ಕಳ ಕಲಿಕೆಯ ಗುಣಮಟ್ಟ ಮಾತ್ರವಲ್ಲ, ಶಿಕ್ಷಕರ ಬೋಧನೆಯ ಗುಣಮಟ್ಟವನ್ನೂ ಸರ್ಕಾರ ಪರೀಕ್ಷೆ ಮಾಡುವುದಾದರೆ ಮಾಡಲಿ. ಏಳನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವುದು ಹೊಸ ಪ್ರಯೋಗವೂ ಅಲ್ಲ ಎನ್ನುವುದನ್ನು ಸರ್ಕಾರ ಗಮನಿಸಬೇಕು. ಏಳನೇ ತರಗತಿಗೆ ಈ ಮುನ್ನ ಕೂಡ ಪಬ್ಲಿಕ್ ಪರೀಕ್ಷೆ ನಡೆಸಲಾಗಿದೆ, ನಂತರ ಕೈಬಿಡಲಾಗಿದೆ. ಹೀಗಿರುವಾಗ ಮತ್ತೆ ಪಬ್ಲಿಕ್‌ ಪರೀಕ್ಷೆಯನ್ನು ಆರಂಭಿಸುವ ಚಿಂತನೆಯು ತೀಕ್ಷ್ಣ ವಿಮರ್ಶೆಗೆ ಒಳಗಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.