ADVERTISEMENT

ಸಂಪಾದಕೀಯ | ಸ್ಕೈಡೆಕ್‌ ಹೆಸರಿನಲ್ಲಿ ಜನರ ತೆರಿಗೆ ಹಣದ ಪೋಲು ಸರಿಯಲ್ಲ

ಸರ್ಕಾರವು ತನ್ನ ಆದ್ಯತೆಗಳನ್ನು ಸರಿಯಾಗಿ ಗುರುತಿಸಿ, ಮುಂದುವರಿಯಲು ಇದು ಸಕಾಲ

ಸಂಪಾದಕೀಯ
Published 3 ಆಗಸ್ಟ್ 2024, 0:16 IST
Last Updated 3 ಆಗಸ್ಟ್ 2024, 0:16 IST
   

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರದ ವ್ಯಾಪ್ತಿಯಲ್ಲಿ ₹ 400 ಕೋಟಿಯಿಂದ ₹ 500 ಕೋಟಿ ಅಂದಾಜು ವೆಚ್ಚದಲ್ಲಿ 250 ಮೀಟರ್‌ ಎತ್ತರದ ಭವ್ಯವಾದ ಸ್ಕೈಡೆಕ್‌ ನಿರ್ಮಿಸಲು ಉತ್ಸುಕರಾಗಿದ್ದಾರೆ. ರಾಜ್ಯ ಸರ್ಕಾರವು ಈ ಯೋಜನೆಗೆ ಇದ್ದ ಆರಂಭಿಕ ಹಂತದ ಎಲ್ಲ ಅಡೆತಡೆಗಳನ್ನು ನಿವಾರಿಸಿದ್ದು, ತ್ವರಿತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವತ್ತ ಹೆಜ್ಜೆ ಇರಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರ ತೀವ್ರವಾದ ಸಂಕಷ್ಟದ ಸ್ಥಿತಿಯಲ್ಲಿದ್ದು, ₹ 27,000 ಕೋಟಿಯಷ್ಟು ವರಮಾನದ ಕೊರತೆಯನ್ನು ಎದುರಿಸುತ್ತಿದೆ. ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಹರಸಾಹಸಪಡುತ್ತಿರುವ ಸರ್ಕಾರವು ಇಂತಹ ದುಂದುವೆಚ್ಚದ ಯೋಜನೆಯನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆಯೇ? ವರಮಾನದ ಕೊರತೆಯಿಂದ ಸೃಷ್ಟಿಯಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೆಚ್ಚದಲ್ಲಿ ಹಿಡಿತ ಸಾಧಿಸಬೇಕಿದ್ದ ಸರ್ಕಾರ, ಈ ರೀತಿಯ ಭಾರಿ ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ.

ನಗರದಲ್ಲಿ 250 ಮೀಟರ್‌ ಎತ್ತರದ ಸ್ಕೈಡೆಕ್‌ ನಿರ್ಮಾಣದಿಂದ ಬ್ರ್ಯಾಂಡ್‌ ಬೆಂಗಳೂರಿನ ವರ್ಚಸ್ಸು ಹೆಚ್ಚುತ್ತದೆ ಮತ್ತು ನಗರಕ್ಕೆ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಕಾರಣವಾಗುತ್ತದೆ ಎಂಬ ಶಿವಕುಮಾರ್‌ ಅವರ ವಾದ ಸರಿಯಾಗಿಯೇ ಇರಬಹುದು. ಆದರೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳದಂತೆ ಖಾಸಗಿ ಹೂಡಿಕೆದಾರರ ಸಹಭಾಗಿತ್ವದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಹೇರಳ ಅವಕಾಶಗಳಿದ್ದರೂ ಸರ್ಕಾರವೇ ಬೃಹತ್‌ ಮೊತ್ತವನ್ನು ವೆಚ್ಚ ಮಾಡುವುದು ಸಮರ್ಥನೀಯ ನಡೆಯಲ್ಲ.

ADVERTISEMENT

ರಾಜ್ಯ ಸರ್ಕಾರವು ಸ್ಕೈಡೆಕ್‌ ನಿರ್ಮಾಣಕ್ಕೆ ಈ ಮೊದಲು ನಾಲ್ಕು ಸ್ಥಳಗಳಲ್ಲಿ ಜಮೀನು ಗುರುತಿಸಿತ್ತು. ಆದರೆ, ಯೋಜನೆಗೆ ಗುರುತಿಸಿದ್ದ ಜಮೀನುಗಳಿಗೆ ಸಂಪರ್ಕದ ಕೊರತೆಯ ಕಾರಣದಿಂದ ಅಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವದಿಂದ ಹಿಂದೆ ಸರಿಯಿತು. ಈಗ ನಗರದ ನೈರುತ್ಯ ಭಾಗದಲ್ಲಿ, ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ರಸ್ತೆಯ ಸಮೀಪದಲ್ಲಿರುವ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್‌ ನಿರ್ಮಿಸುವ ನಿರ್ಧಾರಕ್ಕೆ ಬರಲಾಗಿದೆ. ತಲಘಟ್ಟಪುರ ಮೆಟ್ರೊ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿರುವ ಈ ತಾಣವು ತುರಹಳ್ಳಿ ಕಿರು ಅರಣ್ಯದ ವಿಹಂಗಮ ನೋಟವನ್ನು ಒದಗಿಸಲಿದೆ. ತುರಹಳ್ಳಿ ಅರಣ್ಯ ಪ್ರದೇಶವು ಈಗಾಗಲೇ ಒತ್ತುವರಿ ಸಮಸ್ಯೆಯನ್ನು ಎದುರಿಸುತ್ತಿದೆ.

ಈ ಯೋಜನೆಯು ಅಲ್ಲಿನ ಅರಣ್ಯದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದರ ಕುರಿತು ಸರ್ಕಾರವು ಈವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಬೆಂಗಳೂರು ನಗರದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವವೂ ಚರ್ಚೆಯಲ್ಲಿದೆ. ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ದಕ್ಷಿಣ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದೇ ಆದಲ್ಲಿ ಸ್ಕೈಡೆಕ್‌ ಆ ಯೋಜನೆಗೆ ಅಡ್ಡಿಯಾಗಿ ಪರಿಣಮಿಸಲಿದೆ. ಬೈಯಪ್ಪನಹಳ್ಳಿಯಲ್ಲಿರುವ ಎನ್‌ಜಿಇಎಫ್‌ ಕಾರ್ಖಾನೆಯ ಜಮೀನಿನಲ್ಲಿ ಸ್ಕೈಡೆಕ್‌ ನಿರ್ಮಿಸಲು ರಾಜ್ಯ ಸರ್ಕಾರ ಆರಂಭದಲ್ಲಿ ಯೋಚಿಸಿತ್ತು. ಆದರೆ, ಆ ಜಮೀನು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಅತಿ ಸಮೀಪದಲ್ಲಿರುವ ಕಾರಣದಿಂದ ಆ ಪ್ರಸ್ತಾವವನ್ನು ಕೈಬಿಡಲಾಗಿತ್ತು.

ಸ್ಕೈಡೆಕ್‌ ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರದ ಸ್ವೇಚ್ಛಾಚಾರದ ನಡೆಯನ್ನು ವಿರೋಧ ಪಕ್ಷಗಳು ಗಟ್ಟಿ ಧ್ವನಿಯಲ್ಲಿ ವಿರೋಧಿಸುತ್ತವೆ ಎಂಬ ನಿರೀಕ್ಷೆ ಜನರಲ್ಲಿ ಇದ್ದಿರಬಹುದು. ಆದರೆ ಅದಕ್ಕೆ ತದ್ವಿರುದ್ಧವಾಗಿ, ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯವರೂ ಸೇರಿದಂತೆ ಬೆಂಗಳೂರಿನ ಎಲ್ಲ ಶಾಸಕರು ಯೋಜನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್‌. ಅಶೋಕ ಕೂಡ ಯೋಜನೆಯ ಪರವಾಗಿ ಇದ್ದಾರೆ. ಇಂತಹ ಯೋಜನೆಗಳ ನಿರ್ಮಾಣ, ನಿರ್ವಹಣೆ ಹಾಗೂ ಮಾರುಕಟ್ಟೆ ಮಾಡುವುದರಲ್ಲಿ ಖಾಸಗಿ ವಲಯದವರು ಉತ್ತಮವಾಗಿ ಕೆಲಸ ಮಾಡಬಲ್ಲರು.

ಸರ್ಕಾರವು ಜಮೀನು ಮತ್ತು ತೆರಿಗೆ ರಿಯಾಯಿತಿಗಳನ್ನು ಒದಗಿಸಿ ಖಾಸಗಿಯವರೊಂದಿಗೆ ಆದಾಯ ಹಂಚಿಕೆ ಮಾದರಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಉತ್ತಮ. ಜನರ ತೆರಿಗೆಯ ಹಣವನ್ನು ಸ್ಕೈಡೆಕ್‌ ನಿರ್ಮಾಣದಂತಹ ದುಂದುವೆಚ್ಚದ ಯೋಜನೆಗಳಿಗೆ ವ್ಯಯಿಸುವುದು ಸಮಂಜಸವಲ್ಲ. ಬೆಂಗಳೂರು ನಗರವು ಎದುರಿಸುತ್ತಿರುವ ಗಂಭೀರವಾದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಗಮನಹರಿಸಬೇಕು ಮತ್ತು ತನ್ನ ಸಂಪನ್ಮೂಲವನ್ನು ವ್ಯಯಿಸಬೇಕು. ಶಿವಕುಮಾರ್‌ ಆಗಾಗ ಉಲ್ಲೇಖಿಸುವ ಬ್ರ್ಯಾಂಡ್‌ ಬೆಂಗಳೂರು, ತೀವ್ರವಾದ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ. ಅತಿಯಾದ ಸಂಚಾರ ದಟ್ಟಣೆ ಮತ್ತು ಇತರ ನಾಗರಿಕ ಸಮಸ್ಯೆಗಳು ನಗರವನ್ನು ಕಾಡುತ್ತಿವೆ. ಸರ್ಕಾರವು ತನ್ನ ಆದ್ಯತೆಗಳನ್ನು ಸರಿಯಾಗಿ ಗುರುತಿಸಿ, ಮುಂದುವರಿಯಲು ಇದು ಸಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.