ADVERTISEMENT

ಸಂಪಾದಕೀಯ: ರೆ‍ಪೊ ದರದಲ್ಲಿ ಯಥಾಸ್ಥಿತಿ- ಕಾರ್ಯತಂತ್ರ ಬದಲಿಸದ ಆರ್‌ಬಿಐ

ಸಂಪಾದಕೀಯ

ಸಂಪಾದಕೀಯ
Published 10 ಡಿಸೆಂಬರ್ 2023, 19:37 IST
Last Updated 10 ಡಿಸೆಂಬರ್ 2023, 19:37 IST
<div class="paragraphs"><p>ಸಂಪಾದಕೀಯ: ರೆ‍ಪೊ ದರದಲ್ಲಿ ಯಥಾಸ್ಥಿತಿ- ಕಾರ್ಯತಂತ್ರ ಬದಲಿಸದ ಆರ್‌ಬಿಐ</p></div>

ಸಂಪಾದಕೀಯ: ರೆ‍ಪೊ ದರದಲ್ಲಿ ಯಥಾಸ್ಥಿತಿ- ಕಾರ್ಯತಂತ್ರ ಬದಲಿಸದ ಆರ್‌ಬಿಐ

   

ಈ ತಿಂಗಳ ಆರಂಭದಲ್ಲಿ ನಡೆದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರದಲ್ಲಿ ನಿರೀಕ್ಷೆಯಂತೆಯೇ ಯಾವುದೇ ಬದಲಾವಣೆ ತರಲಿಲ್ಲ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಲು ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಅನುಸರಿಸುತ್ತಿರುವ ಕಾರ್ಯತಂತ್ರಕ್ಕೆ ಪೂರಕವಾಗಿದೆ ಈ ನಿಲುವು.

ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡ ಆರ್‌ಬಿಐ, ಹಣದುಬ್ಬರವನ್ನು ತಗ್ಗಿಸುವ ಹಾದಿಯಲ್ಲಿ ತಾನು ಈಗಲೂ ಸಾಗುತ್ತಿರುವುದಾಗಿ ಹೇಳಿದೆ. ಆದರೆ, ಹಣದುಬ್ಬರ ನಿಯಂತ್ರಣದ ವಿಚಾರದಲ್ಲಿ ಆರ್‌ಬಿಐ ಈ ಮೊದಲಿನ ಮಟ್ಟದ ಆತಂಕವನ್ನು ಈಗ ಹೊಂದಿಲ್ಲ. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ವಿಚಾರವಾಗಿ ಆರ್‌ಬಿಐ ಹೆಚ್ಚು ಆಶಾದಾಯಕವಾಗಿದೆ.

ADVERTISEMENT

ಈಗ ರೆಪೊ ದರವು ಶೇ 6.5ರಷ್ಟು ಇದೆ. ಈಗಿನ ಹಣಕಾಸು ನೀತಿಯನ್ನು ಮುಂದುವರಿಸಿಕೊಂಡು ಹೋಗಲು ಎಂಪಿಸಿ ಬಹುಮತದ ತೀರ್ಮಾನ ಕೈಗೊಂಡಿದೆ. ಚಿಲ್ಲರೆ ಹಣದುಬ್ಬರದ ಪ್ರಮಾಣವು ಶೇ 4ಕ್ಕೆ ಮಿತಿಗೊಳ್ಳಬೇಕು ಎಂಬ ಗುರಿಯನ್ನು ತಲುಪುವ ಯತ್ನ ಕೇಂದ್ರೀಯ ಬ್ಯಾಂಕ್‌ ಕಡೆಯಿಂದ ನಡೆದಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಸಂದರ್ಭ ಎದುರಾದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ. ಎಂಪಿಸಿಯು ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿರುವುದು ಇದು ಸತತ ಐದನೆಯ ಬಾರಿ. ಬಹುಶಃ, ಆರ್ಥಿಕ ಬೆಳವಣಿಗೆ ಹಾಗೂ ಹಣಕಾಸು ಸ್ಥಿರತೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಉದ್ದೇಶದೊಂದಿಗೆ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ.

ಈಚಿನ ತಿಂಗಳುಗಳಲ್ಲಿ ಹಣದುಬ್ಬರ ಪ್ರಮಾಣವು ತುಸು ತಗ್ಗಿದೆ. ಜುಲೈನಲ್ಲಿ ಶೇ 7.44ಕ್ಕೆ ಏರಿಕೆ ಕಂಡಿದ್ದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 4.87ಕ್ಕೆ ಇಳಿಕೆಯಾಗಿದೆ. ಜುಲೈನಲ್ಲಿ ಶೇ 11.51ರಷ್ಟು ಇದ್ದ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಅಕ್ಟೋಬರ್‌ನಲ್ಲಿ ಶೇ 6.61ಕ್ಕೆ ಇಳಿಕೆಯಾಗಿದ್ದು ಇದಕ್ಕೆ ಒಂದು ಪ್ರಮುಖ ಕಾರಣ. ಹೀಗಿದ್ದರೂ ಅಲ್ಪಾವಧಿಯಲ್ಲಿ ಹಣದುಬ್ಬರ ವಿಚಾರವಾಗಿ ಮುನ್ನೋಟದಲ್ಲಿ ಸ್ಥಿರತೆ ಕಾಣುತ್ತಿಲ್ಲ. ಡಿಸೆಂಬರ್‌ನಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬರಬಹುದು. ಈಗ ಜಾಗತಿಕ ಮಟ್ಟದಲ್ಲಿ ಸಕ್ಕರೆ ಬೆಲೆಯು ಹೆಚ್ಚಳ ಕಾಣುತ್ತಿರುವುದು ತುಸು ಕಳವಳ ಮೂಡಿಸುವಂಥದ್ದು.

ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡುಬಂದಲ್ಲಿ, ಹಣದುಬ್ಬರ ಪ್ರಮಾಣ ಏರಿಕೆ ಕಾಣಬಹುದು ಎಂದು ದಾಸ್ ಅಂದಾಜು ಮಾಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದಲ್ಲಿ ಹಣದುಬ್ಬರ ಪ್ರಮಾಣವು ಶೇ 5.2ಕ್ಕೆ ಇಳಿಕೆ ಆಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಈ ಇಳಿಕೆಯ ನಂತರವೂ, ಆರ್‌ಬಿಐ ತನ್ನ ಗುರಿಯನ್ನು ತಲುಪುವುದರಿಂದ ಬಹುದೂರವೇ ಉಳಿದಿರುತ್ತದೆ. ಹೀಗಾಗಿ, ಸದ್ಯಕ್ಕಂತೂ ಬಡ್ಡಿ ದರ ಇಳಿಕೆಯ ನಿರೀಕ್ಷೆ ಇಲ್ಲ.

ಪ್ರಸಕ್ತ ಆರ್ಥಿಕ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 7.6ರಷ್ಟು ಬೆಳವಣಿಗೆ ಕಂಡಿದೆ. ಇದು ನಿರೀಕ್ಷೆಗಿಂತ ಹೆಚ್ಚಿನ ಬೆಳವಣಿಗೆ. ಇದರ ಪರಿಣಾಮವಾಗಿ ಆರ್‌ಬಿಐ, ಇಡೀ ವರ್ಷದ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 7ಕ್ಕೆ ಹೆಚ್ಚು ಮಾಡಿದೆ (ಈ ಮೊದಲಿನ ಅಂದಾಜು ಶೇ 6.5ರಷ್ಟು ಇತ್ತು). ನಗರ ‍ಪ್ರದೇಶಗಳಲ್ಲಿ ಬೇಡಿಕೆಯು ಸ್ಥಿರವಾಗಿ ಇರುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆಯು ನಿಧಾನವಾಗಿ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಆರ್‌ಬಿಐಗೆ ಇದೆ.

ಬೇಡಿಕೆಯ ವಿಚಾರವಾಗಿ ಕೆಲವು ಕಳವಳಗಳು ಇವೆಯಾದರೂ ಸರ್ಕಾರದ ಕಡೆಯಿಂದ ವೆಚ್ಚಗಳು ಹೆಚ್ಚುತ್ತಿರುವ ಕಾರಣ ಹೂಡಿಕೆಗೆ ಉತ್ತೇಜನ ಸಿಕ್ಕಿದೆ. ಇದು ಮುಂದಿನ ದಿನಗಳಲ್ಲಿಯೂ ಹೀಗೆಯೇ ಉಳಿಯಬಹುದು. ಮುಂದಿನ ದಿನಗಳಲ್ಲಿ ರಫ್ತು ಪ್ರಮಾಣದಲ್ಲಿ ಹೆಚ್ಚಳ ಕಾಣಬಹುದು. ಮುಂದಿನ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆಯು ಶೇ 6.7, ಶೇ 6.5 ಮತ್ತು ಶೇ 6.4ರಷ್ಟು ಇರಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಮುಂದಿನ ವರ್ಷದಲ್ಲಿ ಮುಂಗಾರು ಮಳೆಯು ವಾಡಿಕೆಯಂತೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಅಂದಾಜು ಮಾಡಲಾಗಿದೆ ಎಂದು ದಾಸ್ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಮುಂದುವರಿದಿದ್ದರೂ ಭಾರತವು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳ ಸಾಲಿನಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂಬ ವಿಶ್ವಾಸವನ್ನು ದಾಸ್ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.