₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲು 2016ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು 4–1ರ ಬಹುಮತದ ತೀರ್ಪಿನಲ್ಲಿ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಈ ವಿವಾದಿತ ತೀರ್ಮಾನದ ಒಂದು ಭಾಗವನ್ನು ಮಾತ್ರ ವಿಶ್ಲೇಷಿಸಿದೆ. ನೋಟುಗಳ ರದ್ದತಿಯ ತೀರ್ಮಾನವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಬಹುಮತದ ತೀರ್ಪಿನಲ್ಲಿ ನ್ಯಾಯಪೀಠವು ತಿರಸ್ಕರಿಸಿದೆ. ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಲೋಪಗಳಾಗಿಲ್ಲ ಎಂದಿರುವ ನ್ಯಾಯಾಲಯವು ನೋಟು ರದ್ದತಿಗೆ ಹೊರಡಿಸಿದ ಅಧಿಸೂಚನೆಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಕೋರ್ಟ್ ತನ್ನ ಈ ತೀರ್ಪಿಗೆ ಪೂರಕವಾಗಿ ನೀಡಿರುವ ವಿವರಣೆಗಳು ಸಮಾಧಾನಕರವಾಗಿಲ್ಲ. ಆದರೆ, ಅರ್ಜಿದಾರರು ನ್ಯಾಯಾಲಯದ ಮುಂದಿಟ್ಟಿದ್ದ ಪ್ರಶ್ನೆಗಳಿಗೆ ಸೀಮಿತವಾಗಿ ಈ ತೀರ್ಪು ಸಿಂಧುವಾಗುತ್ತದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ನೋಟು ರದ್ದತಿ ತೀರ್ಮಾನದ ವಿರುದ್ಧವಾಗಿ ನೀಡಿರುವ ತೀರ್ಪು, ಪ್ರಕ್ರಿಯೆಯು ಕಾನೂನಿಗೆ ಅನುಗುಣವಾಗಿ ಆಗಿರಲಿಲ್ಲ ಎಂದು ಹೇಳಿದೆ. ಇಂತಹ ಪ್ರಮುಖ ತೀರ್ಮಾನವೊಂದನ್ನು ಕೈಗೊಳ್ಳುವಾಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಸರ್ಕಾರ ಮತ್ತು ಸಂಸತ್ತನ್ನು ಹೇಗೆ ಒಳಗೊಳ್ಳಬೇಕಿತ್ತೋ ಆ ರೀತಿಯಲ್ಲಿ ಒಳಗೊಂಡಿಲ್ಲ ಎಂದು ಭಿನ್ನಮತದ ತೀರ್ಪಿನಲ್ಲಿ ಹೇಳಲಾಗಿದೆ. ರಿಸರ್ವ್ ಬ್ಯಾಂಕ್‌ನ ಸಾಂಸ್ಥಿಕ ಸ್ವಾತಂತ್ರ್ಯದ ಕುರಿತೂ ನ್ಯಾಯಮೂರ್ತಿ ನಾಗರತ್ನ ಅವರು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.
ನೋಟುಗಳನ್ನು ರದ್ದುಗೊಳಿಸುವ ಪ್ರಸ್ತಾವವು ಕೇಂದ್ರ ಸರ್ಕಾರದಿಂದಲೇ ಬಂದಿತ್ತು ಮತ್ತು ಅದನ್ನು ಆರ್‌ಬಿಐನಿಂದ ಅಭಿಪ್ರಾಯದ ರೂಪದಲ್ಲಿ ಪಡೆಯಲಾಗಿತ್ತು ಎಂಬುದನ್ನು ನ್ಯಾಯಮೂರ್ತಿ ನಾಗರತ್ನ ಅವರು ಗುರುತಿಸಿದ್ದಾರೆ. ಸರ್ಕಾರವು ‘ಬಯಸಿದಂತೆ’ ಹಾಗೂ ‘ಶಿಫಾರಸು ಮಾಡಿದಂತೆ’ ಎಂಬ ಪದಗಳು ಆರ್‌ಬಿಐನ ಅಭಿಪ್ರಾಯದಲ್ಲಿ ಉಲ್ಲೇಖವಾಗಿವೆ. ಇದು, ರಿಸರ್ವ್ ಬ್ಯಾಂಕ್ ಸ್ವತಂತ್ರವಾಗಿ ಯೋಚಿಸಿ, ನಿರ್ಧಾರ ಕೈಗೊಂಡಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ನೋಟು ರದ್ದತಿಯ ಇಡೀ ಪ್ರಕ್ರಿಯೆ 24 ಗಂಟೆಗಳಲ್ಲೇ ಮುಗಿದಿತ್ತು. ಆದರೆ, ಈ ತೀರ್ಮಾನಕ್ಕೆ ಪೂರಕವಾಗಿ ಆರು ತಿಂಗಳ ಕಾಲ ಸಮಾಲೋಚನೆ ನಡೆದಿತ್ತು ಎಂಬ ಉಲ್ಲೇಖವು ಬಹುಮತದ ತೀರ್ಪಿನಲ್ಲಿದೆ. ಅದು ನಿಜವೇ ಆಗಿದ್ದಲ್ಲಿ, ಈ ತೀರ್ಮಾನ ಸರಿಯಲ್ಲ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವೊಲಿಕೆ ಮಾಡುವಲ್ಲಿ ಆರ್‌ಬಿಐ ಏಕೆ ವಿಫಲವಾಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನೋಟು ರದ್ದತಿಯ ಪ್ರಸ್ತಾವವನ್ನು ಸರ್ಕಾರದ ನಿರ್ಧಾರ ಹೊರಬೀಳುವ ಮೊದಲೇ ಆರ್‌ಬಿಐ ವಿರೋಧಿಸಿತ್ತು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಸಭೆಯ ನಡಾವಳಿಯಲ್ಲೂ ಅಭಿಪ್ರಾಯ ದಾಖಲಿಸಿತ್ತು. ಆದರೆ ನಂತರ ಸರ್ಕಾರದ ಒತ್ತಡಕ್ಕೆ ಮಣಿಯಿತು. ಇದು ಸಂಸ್ಥೆಯ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ವ್ಯವಸ್ಥೆಯಲ್ಲಿನ ಲೋಪಗಳನ್ನು ಗುರುತಿಸಿ, ಸರಿಪಡಿಸುವ ಅರ್ಹತೆಯನ್ನು ಹೊಂದಿರುವ ಬಗ್ಗೆಯೂ ಅನುಮಾನಗಳಿಗೆ ಕಾರಣವಾಗುತ್ತದೆ. ಆರ್‌ಬಿಐ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರಕ್ಕೆ ಸರಿಯಾದ ಸಲಹೆಯನ್ನು ನೀಡುವ ಹೊಣೆಗಾರಿಕೆಯನ್ನು ಹೊಂದಿದೆ. ಹಳೆಯ ನೋಟುಗಳ ವಿನಿಮಯಕ್ಕೆ 52 ದಿನಗಳ ಕಾಲಾವಕಾಶ ನೀಡಿದ್ದ ನಿರ್ಧಾರ ಸಮಂಜಸವಾಗಿತ್ತು ಮತ್ತು ಈ ತೀರ್ಮಾನ ತಾತ್ವಿಕವಾಗಿ ಸರಿ ಇದೆ ಎಂದು ಬಹುಮತದ ತೀರ್ಪಿನಲ್ಲಿ ನಾಲ್ವರು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೆ, ಈ ತೀರ್ಮಾನವು ಪ್ರಶ್ನಿಸಲು ಅರ್ಹವಾಗಿದ್ದು, ಒಪ್ಪಿತವಾಗುವಂತೆಯೂ ಇಲ್ಲ.
ನೋಟು ರದ್ದತಿಯ ಸಿಂಧುತ್ವ ಕುರಿತ ಪ್ರಶ್ನೆಗಳು ಅಕಾಡೆಮಿಕ್ ಮೌಲ್ಯವನ್ನಷ್ಟೇ ಹೊಂದಿವೆ, 2016ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ತೀರ್ಮಾನವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯದಲ್ಲಿ ವಾದಿಸಲಾಗಿತ್ತು. ಈಗ ಅದೇ ವಾದದ ಆಧಾರದಲ್ಲಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ, ನೀತಿಗಳನ್ನು ರೂಪಿಸುವುದು ಮತ್ತು ಆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಂಸ್ಥೆಗಳ ಅಧಿಕಾರದ ಅತಿಕ್ರಮಣದ ವಿಚಾರವನ್ನು ಈ ಪ್ರಕರಣವು ಒಳಗೊಂಡಿತ್ತು. ಆ ದೃಷ್ಟಿಯಿಂದ ನೋಟು ರದ್ದತಿಗೆ ಸಂಬಂಧಿಸಿದ ವಿಚಾರಗಳು ಅತ್ಯಂತ ಮಹತ್ವದ್ದಾಗಿವೆ. ನೋಟು ರದ್ದತಿಯ ತೀರ್ಮಾನವು ಉದ್ದೇಶಿತ ಗುರಿಗಳನ್ನು ಸಾಧಿಸುವಲ್ಲಿ ಫಲಪ್ರದವಾಗಿದೆಯೇ ಎಂಬುದರ ಕುರಿತು ಯಾವುದೇ ತೀರ್ಪು ನೀಡಲಾಗದು ಎಂಬ ನ್ಯಾಯಾಲಯದ ನಿರ್ಧಾರ ಸರಿಯಾಗಿಯೇ ಇದೆ. ಉದ್ದೇಶಿತ ಗುರಿಗಳು ಕಾಲದಿಂದ ಕಾಲಕ್ಕೆ ಬದಲಾಗಿವೆ. ನೋಟು ರದ್ದತಿಯು ಜನರಿಗೆ ನೀಡಿದ ನೋವು, ದೇಶದ ಆರ್ಥಿಕತೆಗೆ ಉಂಟುಮಾಡಿದ ಆಘಾತ ಮತ್ತು ಆ ಪ್ರಕ್ರಿಯೆಯು ಉದ್ದೇಶಿತ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾಗಿರುವುದೆಲ್ಲವೂ ನಿಜ. ಹೀಗಾಗಿ ನೋಟು ರದ್ದತಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದರೂ, ನೋಟು ರದ್ದತಿಯ ಪರಿಣಾಮಗಳನ್ನು ಗ್ರಹಿಸಲು ಸಾಧ್ಯವಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ನೀಡಿರುವ ಭಿನ್ನಮತದ ತೀರ್ಪು, ನೋಟು ರದ್ದತಿಯ ಇಡೀ ಪ್ರಕ್ರಿಯೆಯನ್ನು ವಿಶ್ಲೇಷಿಸಬೇಕಾದ ಸರಿಯಾದ ಕ್ರಮವೊಂದನ್ನು ಜನರ ಎದುರು ಇಟ್ಟಿದೆ. ಅದು ಭವಿಷ್ಯಕ್ಕೆ ಅತ್ಯುತ್ತಮ ದಿಕ್ಸೂಚಿಯಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.