ADVERTISEMENT

ಸಂಪಾದಕೀಯ | ಮತ್ತೆ ಹೆಚ್ಚಿದ ಉಗ್ರರ ಪಿಡುಗು: ನಿವಾರಣೆಗೆ ಬೇಕು ಹಲವು ಉಪಕ್ರಮ

ಸಂಪಾದಕೀಯ
Published 16 ಜುಲೈ 2024, 22:19 IST
Last Updated 16 ಜುಲೈ 2024, 22:19 IST
<div class="paragraphs"><p>SAMPADAKIYA&nbsp;&nbsp;</p></div>

SAMPADAKIYA  

   

ಜಮ್ಮು ಮತ್ತು ಕಾಶ್ಮೀರದಲ್ಲಿ ಈಚಿನ ತಿಂಗಳುಗಳಲ್ಲಿ ಭಯೋತ್ಪಾದಕ ದಾಳಿಗಳು ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳು ನಡೆಯುವುದು ಹೆಚ್ಚಾಗಿವೆ. ಭದ್ರತಾ ಸಿಬ್ಬಂದಿಯನ್ನು ಹಾಗೂ ಉಗ್ರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಂಡು ನಡೆಯುವ ದಾಳಿಗಳು ಜಾಸ್ತಿ ಆಗಿವೆ. ಜಮ್ಮು ಮತ್ತು ಕಾಶ್ಮೀರದ ಡೋಡಾದಲ್ಲಿ ಮಂಗಳವಾರ ನಡೆದ ದಾಳಿಯಲ್ಲಿ ನಾಲ್ಕು ಮಂದಿ ಸೇನಾ ಸಿಬ್ಬಂದಿ ಹತರಾಗಿದ್ದಾರೆ. ಇವರಲ್ಲಿ ಒಬ್ಬ ಸೇನಾಧಿಕಾರಿ ಕೂಡ ಇದ್ದಾರೆ. ಈ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಪ್ರಮುಖ ಭಯೋತ್ಪಾದಕ ದಾಳಿಗಳಲ್ಲಿ ಇದು ಆರನೆಯದು. ಜಮ್ಮು ಜಿಲ್ಲೆಯ ಕಠುವಾದಲ್ಲಿ ಕೆಲವು ದಿನಗಳ ಹಿಂದೆ ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರನೆಯ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ದಿನ ರಿಯಾಸಿ ಜಿಲ್ಲೆಯಲ್ಲಿ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಂಬತ್ತು ಮಂದಿ ಯಾತ್ರಿಕರು ಪ್ರಾಣ
ಕಳೆದುಕೊಂಡಿದ್ದರು, ಇತರ ಹಲವರು ಗಾಯಗೊಂಡಿದ್ದರು. ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಮೇಲೆ ನಡೆಸುವ ಹಠಾತ್‌ ದಾಳಿಗಳಲ್ಲಿ ಹಾಗೂ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವ ಯೋಧರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ, ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚಾಗುತ್ತಿವೆ ಹಾಗೂ ಅವು ಇನ್ನಷ್ಟು ವಿಸ್ತಾರವಾಗುತ್ತಿವೆ
ಎಂಬ ಭಾವನೆ ಇದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಗಳಲ್ಲಿ ಈಗ ಕಾಣುತ್ತಿರುವ ಪ್ರಮುಖ ಅಂಶವೆಂದರೆ, ಭಯೋತ್ಪಾದಕರ ಚಟುವಟಿಕೆಗಳು ಕಣಿವೆ ಪ್ರದೇಶದ ಬದಲು ಜಮ್ಮು ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಿರುವುದು. ಕಳೆದ ಕೆಲವು ತಿಂಗಳುಗಳಲ್ಲಿ ವರದಿಯಾದ ಬಹುತೇಕ ಪ್ರಕರಣಗಳು ನಡೆದಿರುವುದು ಜಮ್ಮು ಪ್ರದೇಶದಲ್ಲಿ. ತೀರಾ ಈಚಿನವರೆಗೆ ಈ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿರ
ಲಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಹಿಂದೆ ಭಯೋತ್ಪಾದಕರು ಬಹಳ ಸಕ್ರಿಯ
ರಾಗಿದ್ದ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು ಇದೆ, ಅಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಳೆಗಾಲದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ನುಸುಳುತ್ತಿರುವ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಹೀಗೆ ನುಸುಳುವವರ ಸಂಖ್ಯೆಯು ಚಳಿಗಾಲದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಭದ್ರತಾ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿ ಇರುವ ಜಮ್ಮು ಪ್ರದೇಶದ ಮೇಲೆ ಭಯೋತ್ಪಾದಕರು ಈಗ ಕಣ್ಣಿರಿಸಿದ್ದಾರೆ ಎಂಬ ವಾದ ಇದೆ. ಜಮ್ಮು ಭಾಗದಲ್ಲಿ ಇದ್ದ ಭದ್ರತಾ ಸಿಬ್ಬಂದಿಯಲ್ಲಿ ಹಲವರನ್ನು ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸ್ಥಳಾಂತರಿಸಲಾಗಿದೆ. ಭಯೋತ್ಪಾದಕರ ಬಳಿ ಅತ್ಯಾಧುನಿಕ ಸಲಕರಣೆಗಳು ಹಾಗೂ ಶಸ್ತ್ರಾಸ್ತ್ರಗಳು ಇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್‌ ಅಂತ್ಯದೊಳಗೆ ಚುನಾವಣೆ ನಡೆಯಬೇಕಿದೆ. ಅಲ್ಲಿ ಚುನಾವಣೆಯ ನಂತರ ಪರಿಸ್ಥಿತಿ ಸಹಜವಾಗ
ಬಹುದು, ಹಾಗಾಗದಂತೆ ನೋಡಿಕೊಳ್ಳಬೇಕು ಎಂಬ ಕೆಟ್ಟ ಉದ್ದೇಶ ಭಯೋತ್ಪಾದಕರಿಗೆ ಹಾಗೂ ಅವರಿಗೆ ಬೆಂಬಲ ಒದಗಿಸುತ್ತಿರುವವರಿಗೆ ಇದ್ದಿರಬಹುದು ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುವುದೇ ಅವರಿಗೆ ಇಷ್ಟವಿಲ್ಲದಿರಬಹುದು.

ADVERTISEMENT

ಪಾಕಿಸ್ತಾನದ ಬೆಂಬಲ ಇರುವ ಜೈಷ್ –ಎ– ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿರುವ ‘ಕಾಶ್ಮೀರ್ ಟೈಗರ್ಸ್’ ಎಂಬ ಸಂಘಟನೆಯು ಕೆಲವು ದಾಳಿಗಳಿಗೆ ಹೊಣೆ ಹೊತ್ತುಕೊಂಡಿದೆ. ಜಮ್ಮು ಪ್ರದೇಶದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿಕೊಳ್ಳಲು ಲಷ್ಕರ್ –ಎ –ತಯ್ಯಬಾ ಕೂಡ ಹವಣಿಸುತ್ತಿದೆ ಎಂಬ ವರದಿಗಳಿವೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸುವ ಹೊಣೆಯು ಭದ್ರತಾ ಪಡೆಗಳು ಹಾಗೂ ಸರ್ಕಾರದ ಮೇಲಿದೆ. ಜಮ್ಮು ಪ್ರದೇಶದಲ್ಲಿ ಜೀವ ಹಾನಿಯನ್ನು ತಪ್ಪಿಸಬೇಕು. ಪರಿಸ್ಥಿತಿ ಹದಗೆಡುತ್ತಿರುವುದು ಜಮ್ಮುವಿನಲ್ಲೂ ದೇಶದ ಇತರೆಡೆಗಳಲ್ಲೂ ಕಳವಳಕ್ಕೆ ಕಾರಣವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲ ರೀತಿಯಲ್ಲಿಯೂ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ, ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ. ಭಯೋತ್ಪಾದಕರು ಹೊಂದಿರಬಹುದಾದ ಸಂಪರ್ಕಗಳನ್ನು ಕಡಿಯಲು ಸಮುದಾಯಗಳ ಮಟ್ಟದಲ್ಲಿಯೂ ಒಂದಿಷ್ಟು ಕೆಲಸಗಳನ್ನು ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.