ADVERTISEMENT

ಸಂಪಾದಕೀಯ | ಜನಸಂಖ್ಯಾ ಸ್ವರೂಪದ ಕುರಿತು ಉಪರಾಷ್ಟ್ರಪತಿ ಹೇಳಿಕೆ ದುರದೃಷ್ಟಕರ

ಧನಕರ್‌ ಅವರು ರಾಜ್ಯಸಭೆಯ ಒಳಗೆ ಮತ್ತು ಹೊರಗೆ ನೀಡಿರುವ ವಿವಾದಾತ್ಮಕವಾದ ಹಲವು ಹೇಳಿಕೆಗಳು ಅವರು ಇರುವ ಸಾಂವಿಧಾನಿಕ ಹುದ್ದೆಗೆ ಒಪ್ಪುವಂತಹವಲ್ಲ

ಸಂಪಾದಕೀಯ
Published 18 ಅಕ್ಟೋಬರ್ 2024, 23:43 IST
Last Updated 18 ಅಕ್ಟೋಬರ್ 2024, 23:43 IST
   

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ‘ಜನಸಂಖ್ಯಾ
ಸ್ವರೂಪದಲ್ಲಿನ ಅವ್ಯವಸ್ಥೆಯು ದೇಶಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ’ ಎಂದು ಅವರು ಹೇಳಿದ್ದಾರೆ. ದೇಶದ ಕೆಲವು ಪ್ರದೇಶಗಳು ‘ನಿರ್ದಿಷ್ಟ ಗುಂಪು’ಗಳ ‘ರಾಜಕೀಯ ಕೋಟೆ’ಯಾಗಿ ಪರಿವರ್ತನೆ
ಯಾಗಿದ್ದು ಅಲ್ಲಿ ಚುನಾವಣೆ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಜನಸಂಖ್ಯಾ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯನ್ನು ಅವರು ಅಣುಬಾಂಬ್‌ಗೆ ಹೋಲಿಸಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಆಗಿರುವ ಈ ಬದಲಾವಣೆಯು ‘ಪ್ರಕ್ಷುಬ್ಧಕಾರಿ ಮಾದರಿ’ಯದ್ದಾಗಿದ್ದು ನಮ್ಮ ಮೌಲ್ಯಗಳು, ನಾಗರಿಕತೆಯ ವೈಶಿಷ್ಟ್ಯಗಳು ಮತ್ತು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಸವಾಲನ್ನು ಎದುರಿಸದೇ ಇದ್ದರೆ ದೇಶದ ಅಸ್ತಿತ್ವಕ್ಕೇ ಅದು ಬೆದರಿಕೆಯಾಗಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಭಾರತದ ಹಿತಾಸಕ್ತಿಗೆ ಮಾರಕವಾಗಿರುವ ಶಕ್ತಿಗಳ ಮೇಲೆ ‘ಸೈದ್ಧಾಂತಿಕ ಮತ್ತು ಮಾನಸಿಕ ಪ್ರತಿದಾಳಿ’ ನಡೆಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಜೈಪುರದಲ್ಲಿ ನಡೆದ ಅಧಿಕೃತ ಕಾರ್ಯಕ್ರಮ
ವೊಂದರಲ್ಲಿಯೇ ಉಪರಾಷ್ಟ್ರಪತಿ ಹೀಗೆ ಮಾತನಾಡಿದ್ದಾರೆ. ‘ಬಹುಸಂಖ್ಯಾತರಾದ ನಾವು ಉಪಶಮನಕಾರಿ ವ್ಯವಸ್ಥೆಯನ್ನು ಸೃಷ್ಟಿಸಿದ್ದರೆ, ಇನ್ನೊಂದು ರೀತಿಯ ಬಹುಸಂಖ್ಯಾತರದ್ದು ಕ್ರೂರ ಮತ್ತು ನಿರ್ದಯ ಕಾರ್ಯನಿರ್ವಹಣೆಯಾಗಿದೆ’
ಎಂದಿದ್ದಾರೆ. 

ಧನಕರ್‌ ಅವರು ನಿರ್ದಿಷ್ಟ ಸಮುದಾಯ ವೊಂದನ್ನು ಹೆಸರಿಸಿಲ್ಲ. ಆದರೆ, ಅವರು ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿಯೇ ಹೇಳುತ್ತಿದ್ದಾರೆ ಎಂಬುದು ಸ್ಪಷ್ಟ. ವಲಸಿಗರು ಮತ್ತು ನುಸುಳುಕೋರರ ಕುರಿತು ಅವರು ಮಾತನಾಡಿರಬಹುದಾದರೂ ಈ ಎಲ್ಲರ ಮೇಲೆಯೂ ಅವರು ಮುಸ್ಲಿಮರು ಎಂಬ ಕಾರಣಕ್ಕೆ ದಾಳಿ ನಡೆಸಲಾಗುತ್ತಿದೆ. ಮೊದಲನೆಯದಾಗಿ, ದೇಶದೊಳಕ್ಕೆ ಅಕ್ರಮ ವಲಸೆ ಮತ್ತು ನುಸುಳುವಿಕೆ ಹೆಚ್ಚುತ್ತಿದೆ ಎಂದಾದರೆ ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಮರ್ಥವಾಗಿಲ್ಲ ಎಂದು ಅರ್ಥ. ಗಡಿಗಳನ್ನು ಕಾಯುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ. ಗಡಿಗಳಲ್ಲಿ ಎಲ್ಲ ರೀತಿಯ ಎಚ್ಚರ ವಹಿಸಿದ ಬಳಿಕವೂ ನಿಲ್ಲದಿರುವ ನುಸುಳುವಿಕೆಯನ್ನು ‘ಜನಸಂಖ್ಯಾ ಸ್ವರೂಪದ ಅವ್ಯವಸ್ಥೆ ಮತ್ತು ಅಣುಸ್ಫೋಟ’ ಎಂದು ಬಣ್ಣಿಸುವುದು ಅತಿರೇಕದ ವರ್ತನೆ ಮತ್ತು ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಬೇರೊಂದು ಸಮುದಾಯವನ್ನು ಧ್ರುವೀಕರಿಸುವ ಪ್ರಯತ್ನ. ಕೆಲವು ಗುಂಪುಗಳ ಇರುವಿಕೆಯು ಚುನಾವಣೆಯನ್ನೇ
ಅರ್ಥಹೀನಗೊಳಿಸುತ್ತದೆ ಎಂಬುದಕ್ಕೆ ಯಾವ ಅರ್ಥವೂ ಇಲ್ಲ. ಕೆಲವು ಪ್ರದೇಶಗಳ ಜನಸಂಖ್ಯಾ ಸ್ವರೂಪದಲ್ಲಿ ಆಗಿರುವ ಬದಲಾವಣೆಯಿಂದ ತಮಗೆ ಭೀತಿಯಾಗಿದೆ ಎಂದೂ ಅವರು ಹೇಳಿದ್ದಾರೆ. ಜನರಲ್ಲಿ ಭಯ ಹುಟ್ಟಿಸುವ ಮತ್ತು ಬಹುಸಂಖ್ಯಾತ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಿಸುವ ಈ ಪ್ರಯತ್ನವು ಅನಪೇಕ್ಷಿತ. ದೇಶದ ಉಪರಾಷ್ಟ್ರಪತಿಯಾಗಿದ್ದರೂ ಅವರು ‘ಬಹುಸಂಖ್ಯಾತರಾದ ನಾವು’ ಎಂದು ಹೇಳುವ ಮೂಲಕ ಒಂದು ಸಮುದಾಯದ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 

ಧನಕರ್‌ ಅವರು ರಾಜ್ಯಸಭೆಯ ಒಳಗೆ ಮತ್ತು ಹೊರಗೆ ನೀಡಿರುವ ವಿವಾದಾತ್ಮಕವಾದ ಹಲವು ಹೇಳಿಕೆಗಳು ಅವರು ಇರುವ ಸಾಂವಿಧಾನಿಕ ಹುದ್ದೆಗೆ ಒಪ್ಪುವಂತಹವಲ್ಲ. ಸಂವಿಧಾನದ ಮೂಲಸ್ವರೂಪದ ತಾತ್ವಿಕತೆಯನ್ನು ಅವರು ಪ್ರಶ್ನಿಸಿದ್ದಾರೆ. ಸಂವಿಧಾನ ತಿದ್ದುಪಡಿ ಅಥವಾ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ರದ್ದುಪಡಿಸುವ ನ್ಯಾಯಾಂಗದ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದಾರೆ. ರಾಜ್ಯಸಭೆಯ ಸಭಾಪತಿಯಾಗಿ ಪಕ್ಷಪಾತಿಯಾಗಿ ಸದನ ನಡೆಸಿದ್ದಾರೆ ಎಂಬ ಟೀಕೆಯೂ ಅವರ ಕುರಿತು ಕೇಳಿಬಂದಿದೆ. ರಾಜಕೀಯ ಸ್ವರೂಪದ ಹೇಳಿಕೆಗಳನ್ನು ಅವರು ಆಗಾಗ ನೀಡುತ್ತಿರುವುದು ದುರದೃಷ್ಟಕರ ಮತ್ತು ಅವರ ಹುದ್ದೆಯ ಘನತೆಯ ಉಲ್ಲಂಘನೆ. ಜನಸಂಖ್ಯಾ ಸ್ವರೂಪದ ಬದಲಾವಣೆ ಮತ್ತು ಜನಸಂಖ್ಯಾ ಅಸಮತೋಲನವು ಸಂಘ ಪರಿವಾರದ ನೆಚ್ಚಿನ ವಿಚಾರಗಳಾಗಿವೆ. ಆ ಪರಿವಾರದ ಕೆಲವು ನಾಯಕರು ಸಾಮಾನ್ಯವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ದೇಶದ ಉಪರಾಷ್ಟ್ರಪತಿಯು
ಅದೇ ಬಗೆಯ ಮಾತುಗಳನ್ನು ಆಡಿರುವುದು ಸಮಂಜಸವಲ್ಲ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.