ADVERTISEMENT

ಸಂಪಾದಕೀಯ | ಪೋಕ್ಸೊ ಕಾಯ್ದೆ ಕುರಿತ ತೀರ್ಪು: ಆಶಯ ಸ್ಪಷ್ಟಪಡಿಸಿದ ಕೋರ್ಟ್

ಸಂಪಾದಕೀಯ
Published 26 ಸೆಪ್ಟೆಂಬರ್ 2024, 18:43 IST
Last Updated 26 ಸೆಪ್ಟೆಂಬರ್ 2024, 18:43 IST
SAMPADAKIYA 
SAMPADAKIYA    

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಮೂಲಕ ಸುಪ್ರೀಂ ಕೋರ್ಟ್‌ ಬಹಳ ಅಗತ್ಯವಾಗಿದ್ದ ಕೆಲಸ ಮಾಡಿದೆ. ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ವೀಕ್ಷಿಸುವುದು, ಅಂಥವುಗಳನ್ನು ಹೊಂದಿರುವುದು ಹಾಗೂ ಅವುಗಳನ್ನು ಹೊಂದಿರುವುದರ ಬಗ್ಗೆ ಸಂಬಂಧಪಟ್ಟವರಿಗೆ ವರದಿ ಮಾಡದೇ ಇರುವುದು ಅಪರಾಧ ಎಂಬುದನ್ನು ಕೋರ್ಟ್‌ ಸ್ಪಷ್ಟಪಡಿಸಿದೆ. ಮಕ್ಕಳ ಲೈಂಗಿಕ ದೃಶ್ಯಗಳನ್ನು ತನ್ನ ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದ 28 ವರ್ಷ ವಯಸ್ಸಿನ ಯುವಕನ ವಿರುದ್ಧದ ಪ್ರಕರಣವನ್ನು ರದ್ದುಮಾಡುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್, ಅಂತಹ ದೃಶ್ಯಗಳನ್ನು, ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಂಡ ಮಾತ್ರಕ್ಕೆ ಅದು ಅಪರಾಧ ಆಗುವುದಿಲ್ಲ ಎಂದು ಹೇಳಿತ್ತು. ಮದ್ರಾಸ್ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 15 ಅನ್ನು ಇಡೀ ಕಾಯ್ದೆಯ ಒಟ್ಟಾರೆ ಆಶಯದೊಂದಿಗೆ ಜೋಡಿಸುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಅಂದರೆ, ಈ ಸೆಕ್ಷನ್‌ನ ವ್ಯಾಪ್ತಿ ದೊಡ್ಡದಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಕಾಯ್ದೆಯ ಸೆಕ್ಷನ್ 15 ಈ ಮೊದಲು, ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ‘ವಾಣಿಜ್ಯ ಉದ್ದೇಶಗಳಿಗೆ ಇರಿಸಿಕೊಳ್ಳುವುದಕ್ಕೆ’ ಸೀಮಿತವಾಗಿತ್ತು. ನಂತರ ಅದನ್ನು ವಿಸ್ತರಿಸಿ, ಅಂತಹ ಚಿತ್ರ, ದೃಶ್ಯಗಳ ಬಗ್ಗೆ ಸಂಬಂಧಪಟ್ಟವರಿಗೆ ವರದಿ ಮಾಡದೇ ಇರುವುದು ಹಾಗೂ ಅಂಥವುಗಳನ್ನು ಹಂಚಿಕೊಳ್ಳುವ ಉದ್ದೇಶ ಹೊಂದಿರುವುದನ್ನೂ ಅಪರಾಧದ ವ್ಯಾಪ್ತಿಗೆ ತರಲಾಯಿತು. ಈಗ ಸುಪ್ರೀಂ ಕೋರ್ಟ್‌, ಇಂಟರ್ನೆಟ್ ಮೂಲಕ ವೀಕ್ಷಿಸುವಾಗ ವ್ಯಕ್ತಿಗೆ ಅಂತಹ ವಸ್ತು–ವಿಷಯಗಳ ಮೇಲೆ ‘ನಿರಂತರವಾದ ನಿಯಂತ್ರಣ ಇತ್ತು’ ಎಂದಾದರೆ, ಅದು ಕೂಡ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹೇಳಿರುವ ‘ಹೊಂದಿರುವಿಕೆ’ಯೇ ಆಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹೇಳಿರುವ ಅಪರಾಧಗಳ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನ ನೀಡಿದ್ದಕ್ಕಾಗಿ ಮಾತ್ರವೇ ಅಲ್ಲದೆ, ಮಕ್ಕಳ ಲೈಂಗಿಕ ದೃಶ್ಯ, ಚಿತ್ರಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದ್ದಕ್ಕಾಗಿ
ಈ ತೀರ್ಪು ಮುಖ್ಯವಾಗುತ್ತದೆ. ರಾಜ್ಯಸಭೆಯ ಸಮಿತಿ
ಯೊಂದು ಶಿಫಾರಸು ಮಾಡಿರುವಂತೆ, ತಾಂತ್ರಿಕ ಹಾಗೂ ಸಾಂಸ್ಥಿಕ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸ
ಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಕ್ರಮ
ಗಳನ್ನು ಬಹಳ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕೂಡ ತಾಕೀತು ಮಾಡಿದೆ. ಹಲವು
ಪ್ರಕರಣಗಳಲ್ಲಿ ಕಾನೂನಿನ ಅಡಿಯಲ್ಲಿ, ‘ಪ್ರತ್ಯಕ್ಷವಾಗಿ
ಕಾಣುವ ಕೃತ್ಯ’ಗಳಿಗೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ, ‘ಅಪರಾಧ ಎಸಗುವ ಆಲೋಚನೆ ಮೂಡಿದ್ದಕ್ಕೆ’ ಶಿಕ್ಷೆ ವಿಧಿಸುವುದಿಲ್ಲ ಎಂದು ಕೋರ್ಟ್ ಗುರುತಿಸಿದೆ. ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ವ್ಯಕ್ತಿಯು ಅಳಿಸಿ
ಹಾಕದಿದ್ದರೆ, ನಾಶಪಡಿಸದಿದ್ದರೆ ಅಥವಾ ಅಂಥವುಗಳ ಬಗ್ಗೆ ಸಂಬಂಧಪಟ್ಟವರಿಗೆ ವರದಿ ಮಾಡದಿದ್ದರೆ, ಆ ವ್ಯಕ್ತಿಗೆ ಆ ವಸ್ತು–ವಿಷಯಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಉದ್ದೇಶ ಇತ್ತು ಎಂಬ ತೀರ್ಮಾನಕ್ಕೆ ಬರಲು ಅದು ಆಧಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ಪೋಕ್ಸೊ ಕಾಯ್ದೆಯ ಒಟ್ಟಾರೆ ಆಶಯಕ್ಕೆ ಸೋಲಾಗಬಾರದು ಎಂಬ ಉದ್ದೇಶದೊಂದಿಗೆ ಸುಪ್ರೀಂ ಕೋರ್ಟ್, ಕಾಯ್ದೆಯ ಸೆಕ್ಷನ್‌ಗಳನ್ನು ಬಹಳ ಸೀಮಿತ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಬಾರದು ಎಂದು ಕೂಡ ಅಧೀನ ನ್ಯಾಯಾಲಯಗಳಿಗೆ ತಿಳಿಹೇಳಿದೆ. ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಯುವ ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿನ ಅಂಶಗಳು ಪ್ರಯೋಜನಕ್ಕೆ ಬರುತ್ತವೆ ಎಂದು ಹೇಳಿದೆ. ‘ಮಕ್ಕಳ ಲೈಂಗಿಕ ಚಿತ್ರ, ದೃಶ್ಯ’ ಎಂಬ ಪದಗಳನ್ನು ಬಳಸುವ ಬದಲು, ಪೋಕ್ಸೊ ಕಾಯ್ದೆಯಲ್ಲಿ ‘ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಮತ್ತು ದೌರ್ಜನ್ಯ ನಡೆಸಿದ ವಸ್ತು–ವಿಷಯ’ ಎಂಬ ವಿವರಣೆಯನ್ನು ಬಳಸುವುದು ಸೂಕ್ತ ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ.

ಮಕ್ಕಳ ಲೈಂಗಿಕ ದೃಶ್ಯ, ಚಿತ್ರಗಳ ವಿಚಾರವಾಗಿ ವಿವಿಧ ವೇದಿಕೆಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು ಹಾಗೂ ಅಗತ್ಯ ಎದುರಾದಾಗ ಪೊಲೀಸರಿಗೆ ವರದಿ ಮಾಡಬೇಕು ಎಂದು ಸೂಚಿಸಿದೆ. ಸಮಗ್ರವಾದ ಲೈಂಗಿಕ ಶಿಕ್ಷಣ ಯೋಜನೆಯನ್ನು ಜಾರಿಗೆ ತರುವಂತೆ ಅದು ಸರ್ಕಾರಕ್ಕೆ ಸೂಚನೆ ನೀಡಿದೆ. ಮಕ್ಕಳನ್ನು ಗುರಿಯಾಗಿಸಿಕೊಂಡ ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗುವುದು ಈಚಿನ ವರ್ಷಗಳಲ್ಲಿ ಹೆಚ್ಚಳ ಕಂಡಿದೆ. ಹಲವು ಪ್ರಕರಣಗಳು ವರದಿಯಾಗುತ್ತಿಲ್ಲ ಎಂಬುದೂ ನಿಜ. ಇಂತಹ ದೌರ್ಜನ್ಯಗಳ ಪರಿಣಾಮವಾಗಿ ಮಕ್ಕಳು ಜೀವನಪರ್ಯಂತ ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ಇತರರ ಜೊತೆಗಿನ ಅವರ ಸಂಬಂಧಗಳು ಹಾಗೂ ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಉಂಟಾಗುತ್ತದೆ. ಪ್ರಕರಣಗಳು ವರದಿಯಾದಾಗ, ಸೂಕ್ತವಾದ ಕ್ರಮಕ್ಕೆ ಮುಂದಾಗಲು ಪಾಲಕರು, ಶಿಕ್ಷಣ ಕ್ಷೇತ್ರದವರು ಹಾಗೂ ಕಾನೂನು ಜಾರಿ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ನ ಮಾತುಗಳು ಪ್ರೇರಣೆ ನೀಡಬೇಕು. ಮಕ್ಕಳನ್ನು ರಕ್ಷಿಸುವುದು ಪಾಲಕರ ಹೊಣೆ ಮಾತ್ರವೇ ಅಲ್ಲ, ಅದು ಸಮಾಜ ಹಾಗೂ ಸರ್ಕಾರದ ಕರ್ತವ್ಯ ಕೂಡ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.