ADVERTISEMENT

ಸಂಪಾದಕೀಯ | ಒಲಿಂಪಿಕ್ಸ್‌: ಪದಕ ಇಲ್ಲವಾದರೂ ವಿನೇಶ್‌ ಸಾಧನೆ ಚಿರಸ್ಥಾಯಿ

ವಿನೇಶ್‌ ಚಿನ್ನದ ಪದಕದ ಹೊಸ್ತಿಲಲ್ಲಿ ಬಂದು ನಿಂತಿದ್ದು ಸಣ್ಣ ಸಾಧನೆಯೇನಲ್ಲ

ಸಂಪಾದಕೀಯ
Published 8 ಆಗಸ್ಟ್ 2024, 23:30 IST
Last Updated 8 ಆಗಸ್ಟ್ 2024, 23:30 IST
ವಿನೇಶ್ ಫೋಗಟ್
ವಿನೇಶ್ ಫೋಗಟ್   

ಯಾವುದೇ ಪದಕದ ಹೊಳಪು ಕಾಲಾನಂತರ ಮಸುಕಾಗಬಹುದು. ಆದರೆ ಭಾರತದ ಕುಸ್ತಿಪಟು ವಿನೇಶ್ ರಾಜಪಾಲ್ ಫೋಗಟ್ ಅವರ ಸಾಧನೆ ಅಚ್ಚಳಿಯದೇ ಉಳಿಯುವುದರಲ್ಲಿ ಎರಡು ಮಾತಿಲ್ಲ. ಹರಿಯಾಣದ ವಿನೇಶ್ ಅವರು ಒಲಿಂಪಿಕ್ಸ್‌ ಫೈನಲ್‌ನಲ್ಲಿ ದೇಹತೂಕ ನಿಯಮದ ನಿರ್ವಹಣೆಯಲ್ಲಿ ವಿಫಲರಾಗಿ ಅನರ್ಹಗೊಂಡಿರಬಹುದು. ಆದರೆ ಅದೊಂದೇ ಪದಕದಿಂದ ಅವರ ದಿಟ್ಟ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಅಳೆಯಲಾಗದು. ಅವರ ಹೋರಾಟವು ಮುಂದಿನ ಹಲವಾರು ಪೀಳಿಗೆಗಳಿಗೆ ಪ್ರೇರಣೆಯ ಕತೆಯಾಗಿದೆ.

29 ವರ್ಷ ವಯಸ್ಸಿನ ವಿನೇಶ್ ಅವರು ಈಗ ಕುಸ್ತಿ ಕ್ರೀಡೆಗೆ ವಿದಾಯ ಹೇಳಿದ್ದಾರೆ. ಅವರು ಈ ಕ್ರೀಡೆಯಲ್ಲಿ ಮಾಡಿರುವ ಸಾಧನೆಗಳು ಹಲವಾರು. ಕಳೆದೊಂದು ದಶಕದಲ್ಲಿ ಅವರು ವಿಶ್ವ ಚಾಂಪಿಯನ್‌ಷಿಪ್, ಏಷ್ಯಾ ಚಾಂಪಿಯನ್‌ಷಿಪ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಜಯಿಸಿದ್ದಾರೆ. ಆದರೆ ಪ್ರಶಸ್ತಿಗಳು ತುಂಬಿರುವ ಅವರ ಕಪಾಟಿನಲ್ಲಿ ಒಲಿಂಪಿಕ್ಸ್ ಪದಕದ ಜಾಗ ಮಾತ್ರ ಖಾಲಿಯಾಗಿದೆ. ಮೂರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ ಅವರಿಗೆ ಅದು ಕೈಗೆಟುಕದಿರುವುದು ದುರದೃಷ್ಟಕರ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಾಲಿನ ಗಾಯದಿಂದಾಗಿ ಹೊರಬಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತರು. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆ.ಜಿ. ವಿಭಾಗದಲ್ಲಿ ಘಟಾನುಘಟಿಗಳನ್ನು ಸೋಲಿಸಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್‌ ಚಿನ್ನದ ಪದಕ ಸುತ್ತಿಗೆ ಲಗ್ಗೆ ಇಟ್ಟ ಭಾರತದ ಮೊದಲ ಮಹಿಳೆಯೆಂಬ ಹೆಗ್ಗಳಿಕೆ ಅವರದ್ದು. ಆದರೆ ಫೈನಲ್‌ಗೂ ಮೊದಲು ನಡೆಸುವ ತೂಕ ಪರೀಕ್ಷೆಯಲ್ಲಿ ಮತ್ತೊಮ್ಮೆ ಅವರಿಗೆ ದುರದೃಷ್ಟ ಕಾಡಿತು. 100 ಗ್ರಾಂ ಹೆಚ್ಚುವರಿ ತೂಕಕ್ಕೆ ಅವರ ಜೀವಮಾನದ ಪರಿಶ್ರಮ, ತ್ಯಾಗ ಮತ್ತು ಭಾರತೀಯರ ಚಿನ್ನದ ಕನಸು ಅಪ್ಪಚ್ಚಿಯಾಗಿದ್ದು ವಿಪರ್ಯಾಸ.

ADVERTISEMENT

ಈ ನಿಯಮವು ಮೇಲ್ನೋಟಕ್ಕೆ ವಿಚಿತ್ರವೆನಿಸಬಹುದು. ಆದರೆ ನಿಯಮದ ಚೌಕಟ್ಟಿನ ಕುರಿತು ಕ್ರೀಡೆಗೆ ಸಂಬಂಧಿಸಿದವರೆಲ್ಲರಿಗೂ ಅರಿವು ಇದ್ದೇ ಇರುತ್ತದೆ. ಅದಕ್ಕೆ ಬದ್ಧವಾಗಿರುವುದು ಕಡ್ಡಾಯ. 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಬೌಂಡರಿ ಕೌಂಟ್ ನಿಯಮವು ನ್ಯೂಜಿಲೆಂಡ್ ಗೆಲುವನ್ನು ತಪ್ಪಿಸಿತ್ತು. ಬಹುತೇಕ ಎಲ್ಲ ಕ್ರೀಡೆಗಳಲ್ಲಿಯೂ ಇಂತಹ ನಿಯಮಗಳಿರುತ್ತವೆ. ಆದರೆ ಅಪರೂಪಕ್ಕೊಮ್ಮೆ ಸುದ್ದಿ ಮಾಡುತ್ತವೆ. 

ಇವೆಲ್ಲದರಾಚೆ, ವಿನೇಶ್ ಅವರು ತಮ್ಮ ಕ್ರೀಡಾಸಾಧನೆಗಳ ಜೊತೆಜೊತೆಗೆ ಧೈರ್ಯಶಾಲಿ ವ್ಯಕ್ತಿತ್ವದ ಕಾರಣದಿಂದಲೂ ಹೆಗ್ಗುರುತಾಗಿ ಉಳಿಯಲಿದ್ದಾರೆ. ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಛಲಗಾತಿ. ಅದೂ ಭಾರತ ಕುಸ್ತಿ ಫೆಡರೇಷನ್‌ನ ಆಗಿನ ಅಧ್ಯಕ್ಷ ಮತ್ತು ಆಡಳಿತಾರೂಢ ಬಿಜೆಪಿಯ ಸಂಸದರಾಗಿದ್ದ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ಅವರು ಬೀದಿಗಿಳಿದಿದ್ದು ಇತಿಹಾಸ.

40 ದಿನಗಳಿಗೂ ಹೆಚ್ಚಿನ ಕಾಲ ತಮ್ಮ ಸಂಗಡಿಗರೊಂದಿಗೆ ನವದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿ ನಡೆಸಿದ್ದರು. ಈ ಹೋರಾಟವನ್ನು ದಮನಿಸಲು ವಿರೋಧಿಗಳು ನಡೆಸಿದ ಹುನ್ನಾರಗಳು ಗುಟ್ಟಾಗಿಯೇನೂ ಉಳಿದಿಲ್ಲ. ಆದರೆ ಯಾರಿಗೂ ಜಗ್ಗದ ವಿನೇಶ್ ತಮ್ಮ ಕ್ರೀಡಾ ಭವಿಷ್ಯವನ್ನೇ ಪಣಕ್ಕೊಡ್ಡಿದ್ದರು. ಈ ಹೋರಾಟವನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಅವರು ಎಂದೂ ಯತ್ನಿಸಲಿಲ್ಲ. ಕುಸ್ತಿ ಕಣದಲ್ಲಿ ಕಠಿಣ ತಾಲೀಮು ನಡೆಸಿ ಒಲಿಂಪಿಕ್ಸ್ ಅರ್ಹತೆಯನ್ನು ಗಿಟ್ಟಿಸಿದರು. ಅಷ್ಟೇ ಅಲ್ಲ, ಚಿನ್ನದ ಪದಕದ ಹೊಸ್ತಿಲಲ್ಲಿ ಬಂದು ನಿಂತಿದ್ದು ಸಣ್ಣ ಸಾಧನೆಯೇನಲ್ಲ.

ಈ ಎಲ್ಲ ಕಾರಣಗಳಿಂದಾಗಿಯೇ ಅವರು ಈಗ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ದೇಶದ ಕೋಟ್ಯಂತರ ಅಭಿಮಾನಿಗಳ ಕಣ್ಮಣಿಯಾಗಿದ್ದಾರೆ. ತಮ್ಮ ದೊಡ್ಡಪ್ಪ, ಕೋಚ್ ಮಹಾವೀರ್ ಸಿಂಗ್ ಫೋಗಟ್, ಅಕ್ಕಂದಿರಾದ ಗೀತಾ ಫೋಗಟ್, ಬಬಿತಾ ಫೋಗಟ್ ಅವರ ಕುಸ್ತಿಯಾಟವನ್ನು ನೋಡಿ ಪ್ರೇರಣೆ ಪಡೆದವರು ವಿನೇಶ್.

ಕುಸ್ತಿ ಕ್ರೀಡೆಯಿಂದ ಮಹಿಳೆಯರನ್ನು ದೂರವಿರಿಸಿದ್ದ ಕಾಲಘಟ್ಟದಲ್ಲಿ ಫೋಗಟ್ ಸಹೋದರಿಯರು ಮಾಡಿದ ಸಾಧನೆಯಲ್ಲಿ ವಿನೇಶ್ ಪಾಲು ಕೂಡ ಇದೆ. ಇದೀಗ ತನ್ನ ಅಕ್ಕಂದಿರಿಗಿಂತ ಮತ್ತಷ್ಟು ಎತ್ತರಕ್ಕೆ ವಿನೇಶ್ ಏರಿದ್ದಾರೆ. ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಮಂಡಳಿಯಲ್ಲಿ ವಿನೇಶ್ ಮೇಲ್ಮನವಿ ಸಲ್ಲಿಸಿದ್ದಾರೆ. ಬೆಳ್ಳಿಪದಕವನ್ನು ನೀಡುವಂತೆ ಕೋರಿದ್ದಾರೆ. ಅವರಿಗೆ ಹಲವು ಅಂತರರಾಷ್ಟ್ರೀಯ ಕ್ರೀಡಾಪಟುಗಳೂ ಬೆಂಬಲ ಸೂಚಿಸಿದ್ದಾರೆ. ಅವರ ಈ ಬೇಡಿಕೆ ಈಡೇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ವಿನೇಶ್ ಕೋಟಿ ಕೋಟಿ ಹೃದಯಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿರುವುದಂತೂ ದಿಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.