ದೆಹಲಿಯ ಚುನಾಯಿತ ಸರ್ಕಾರದ ಸುಪರ್ದಿಯಲ್ಲಿ ಇರಬೇಕಿರುವ ಆಡಳಿತದ ಕೆಲಸಗಳನ್ನು ಕೇಂದ್ರವು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸ್ಪಷ್ಟ ನಿದರ್ಶನ ಇದು
ಸಾರ್ವಜನಿಕ ಭದ್ರತೆ, ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಇತರ ಎಲ್ಲ ಸೇವೆಗಳ ವಿಚಾರದಲ್ಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ (ಎನ್‌ಸಿಟಿ) ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಈಚೆಗೆ ನೀಡಿದ್ದ ತೀರ್ಪನ್ನು ಅಪ್ರಸ್ತುತಗೊಳಿಸುವ ರೀತಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶುಕ್ರವಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದೆ. ಈ ಮೂಲಕ ಅದು ಎನ್‌ಸಿಟಿ ಪ್ರದೇಶದಲ್ಲಿನ ಸೇವೆಗಳಿಗೆ ಸಂಬಂಧಿಸಿದ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ವಿರೋಧ ಪಕ್ಷವೊಂದರ ನೇತೃತ್ವದಲ್ಲಿ ನಡೆಯುತ್ತಿರುವ, ಜನರಿಂದ ಆಯ್ಕೆಯಾಗಿರುವ ಸರ್ಕಾರದ ಅಧಿಕಾರವನ್ನು ಇಲ್ಲವಾಗಿಸಲು ಕೇಂದ್ರವು ತನ್ನ ಅಧಿಕಾರವನ್ನು ಬಳಸಿಕೊಳ್ಳುತ್ತಿರುವುದರ ಸ್ಪಷ್ಟ ನಿದರ್ಶನ ಇದು. ಇದು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾದ ನಡೆ.
2015ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಎಎಪಿ ವಿರುದ್ಧ ಭಾರಿ ಸೋಲು ಕಂಡ ನಂತರದಲ್ಲಿ ಕೇಂದ್ರ ಸರ್ಕಾರವು ದೆಹಲಿಯ ಸರ್ಕಾರದ ಜೊತೆ ನಿರಂತರವಾಗಿ ಸಂಘರ್ಷ ನಡೆಸಿಕೊಂಡು ಬಂದಿದೆ. ಆ ವರ್ಷ ಅಧಿಸೂಚನೆಯೊಂದನ್ನು ಹೊರಡಿಸಿದ್ದ ಕೇಂದ್ರ ಗೃಹ ಸಚಿವಾಲಯವು ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಅಲ್ಲಿನ ಸೇವೆಗಳ ಮೇಲೆ ನಿಯಂತ್ರಣ ಇದೆ ಎಂದು ಹೇಳಿತ್ತು. ಇದನ್ನು ಎಎಪಿ ಪ್ರಶ್ನಿಸಿತ್ತು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಮೇ 11ರಂದು ನೀಡಿದ ತೀರ್ಪಿನಲ್ಲಿ, ಎನ್‌ಸಿಟಿ ಪ್ರದೇಶದಲ್ಲಿ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ದೆಹಲಿ ಸರ್ಕಾರಕ್ಕೆ ಶಾಸಕಾಂಗದ ಅಧಿಕಾರ ಮತ್ತು ಆಡಳಿತಾತ್ಮಕ ಅಧಿಕಾರ ಇದೆ ಎಂದು ಸಾರಿತು. ಇದು ಒಕ್ಕೂಟ ವ್ಯವಸ್ಥೆಗೆ ಹಾಗೂ ಪ್ರಾತಿನಿಧ್ಯದ ಆಧಾರದಲ್ಲಿ ಕೆಲಸ ಮಾಡುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಮಾನಕ್ಕೆ ಗೌರವ ಕೊಡಬೇಕು ಎಂಬ ತಾತ್ವಿಕತೆಗೆ ಸಿಕ್ಕ ಜಯವಾಗಿತ್ತು. ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹಾಗೂ ಅಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ನಡುವಿನ ನಿರಂತರ ಸಂಘರ್ಷಕ್ಕೆ ಈ ತೀರ್ಪು ಅಂತ್ಯ ಹೇಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರವು ಅವಸರದಲ್ಲಿ ಸುಗ್ರೀವಾಜ್ಞೆ ತಂದಿರುವ ಬಗೆಯನ್ನು ಕಂಡರೆ, ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ, ಒಕ್ಕೂಟ ವ್ಯವಸ್ಥೆಯ ಬಗ್ಗೆ ಅದಕ್ಕಿರುವ ಗೌರವ ಬಹಳ ಕಡಿಮೆ ಎಂಬುದು ಗೊತ್ತಾಗುತ್ತದೆ.
ಪೊಲೀಸ್ ವ್ಯವಸ್ಥೆ, ಸಾರ್ವಜನಿಕ ಭದ್ರತೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ಅಧಿಕಾರಿಗಳು ಉತ್ತರದಾಯಿ ಆಗಬೇಕಿರುವುದು ದೆಹಲಿಯ ಚುನಾಯಿತ ಸರ್ಕಾರಕ್ಕೆ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಎನ್‌ಸಿಟಿ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆ, ಸಾರ್ವಜನಿಕ ಭದ್ರತೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ದೆಹಲಿಯ ಚುನಾಯಿತ ಸರ್ಕಾರ ಹೊಂದಿರುವ ಕಾರ್ಯಾಂಗದ ಅಧಿಕಾರವನ್ನು ಕೇಂದ್ರ ಸರ್ಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರೆ ಒಕ್ಕೂಟ ವ್ಯವಸ್ಥೆ ಹಾಗೂ ಪ್ರಾತಿನಿಧ್ಯ ಆಧಾರಿತ ಪ್ರಜಾತಂತ್ರದ ತತ್ವವು ನೆಲೆ ಕಳೆದುಕೊಳ್ಳುತ್ತದೆ ಎಂದು ಕೋರ್ಟ್ ಎಚ್ಚರಿಸಿತ್ತು. ಆದರೆ, ಕೋರ್ಟ್‌ನ ಎಚ್ಚರಿಕೆಯನ್ನು ಗೌರವದಿಂದ ಕಾಣದೆ ಇರುವ ಮೂಲಕ ಕೇಂದ್ರ ಸರ್ಕಾರವು ರಾಜಕೀಯವಾಗಿ ಬಹಳ ಮಹತ್ವದ್ದಾದ ಅಧಿಕಾರವನ್ನು ತನ್ನಲ್ಲಿ ಇರಿಸಿಕೊಳ್ಳಲು ಕೋರ್ಟ್ ಬೇಡ ಎಂದಿದ್ದನ್ನೂ ತಾನು ಮಾಡಲು ಸಿದ್ಧ ಎಂದು ತೋರಿಸಿದಂತಾಗಿದೆ. ವಾಸ್ತವದಲ್ಲಿ ಎನ್‌ಸಿಟಿ ಪ್ರದೇಶದಲ್ಲಿ ನಾಗರಿಕ ಸೇವೆಗಳ ಗುಣಮಟ್ಟ ಕೂಡ ಬಹಳ ಕಳಪೆಯಾಗಿದೆ. ಎನ್‌ಸಿಟಿ ಪ್ರದೇಶವು 2022ರ ಡಿಸೆಂಬರ್‌ವರೆಗೆ ಬಿಜೆಪಿಯ ನಿಯಂತ್ರಣದಲ್ಲಿತ್ತು. ದೆಹಲಿ ಪೊಲೀಸರ ಮೇಲೆ ತನಗೆ ನಿಯಂತ್ರಣ ಇದ್ದರೂ, ಡೊನಾಲ್ಡ್ ಟ್ರಂಪ್ ಅವರ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಕೋಮು ಗಲಭೆ ನಡೆದ ಪ್ರಸಂಗವು ಅಲ್ಲಿ ಸಾರ್ವಜನಿಕರಿಗೆ ಭದ್ರತೆ ಕಲ್ಪಿಸುವ ಕೆಲಸದಲ್ಲಿ ತಾನು ವಿಫಲವಾಗಿದ್ದನ್ನು ಕೇಂದ್ರವು ತೋರಿಸಿಕೊಂಡಾಗಿತ್ತು. ಹೀಗಿದ್ದರೂ, ದೆಹಲಿಯ ಚುನಾಯಿತ ಸರ್ಕಾರದ ಸುಪರ್ದಿಯಲ್ಲಿ ಇರಬೇಕಿರುವ ಆಡಳಿತದ ಕೆಲಸಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಕೇಂದ್ರವು ದೆಹಲಿಯ ಜನರ ಇಚ್ಛೆಯನ್ನು ಹೊಸಕಿದಂತೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.