ಒಂದೂವರೆ ತಿಂಗಳ ‘ಕ್ರಿಕೆಟ್ ಹಬ್ಬ’ಕ್ಕೆ ತೆರೆಬಿದ್ದಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಮತ್ತು ಸೆಮಿಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ತಂಡ, ಫೈನಲ್‌ನಲ್ಲಿ ಮುಗ್ಗರಿಸಿದ್ದು ಕ್ರೀಡಾಪ್ರೇಮಿಗಳಲ್ಲಿ ನಿರಾಶೆ ಮೂಡಿಸಿದೆ
ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ಚಾಂಪಿಯನ್ ಆಗುವುದನ್ನೇ ಅಚ್ಚುಮೆಚ್ಚಿನ ಹವ್ಯಾಸವಾಗಿಸಿ
ಕೊಂಡಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಪಾರಮ್ಯ ಮೆರೆದಿದೆ. ಏಕದಿನ ಕ್ರಿಕೆಟ್ ಮಾದರಿಯ 13ನೇ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದು ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ. ಅಹಮದಾಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಶಿಸ್ತು ಮತ್ತು ಯೋಜನಾಬದ್ಧ ಆಟದಿಂದ ರೋಹಿತ್ ಶರ್ಮಾ ಬಳಗವನ್ನು ಸೋಲಿಸಿತು. 12 ವರ್ಷಗಳ ನಂತರ ಭಾರತಕ್ಕೆ ಮತ್ತೆ ವಿಶ್ವಕಪ್ ಒಲಿಯಬಹುದೆಂಬ ನಿರೀಕ್ಷೆಯಲ್ಲಿದ್ದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಳಗಾದರು. ಅದರಲ್ಲೂ ದೇಶ, ವಿದೇಶಗಳಿಂದ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕಣ್ಣೀರು ಹಾಕಿದರು.
ಕ್ರಿಕೆಟ್ ಆಟವನ್ನು ಧರ್ಮದಂತೆ ಆರಾಧಿಸುವ ಭಾರತದ ಅಭಿಮಾನಿಗಳ ವಲಯಕ್ಕೆ ಈ ಸೋಲು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ, ಒಂದೂವರೆ ತಿಂಗಳಿನಿಂದ ನಡೆದ ಈ ಟೂರ್ನಿಯಲ್ಲಿ ಭಾರತವು ಲೀಗ್ ಹಂತದ ಎಲ್ಲ ಒಂಬತ್ತು ಪಂದ್ಯಗಳು ಮತ್ತು ನ್ಯೂಜಿಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿತ್ತು. ತಂಡದ ಎಲ್ಲರೂ ಉತ್ತಮವಾಗಿ ಆಡಿದ್ದರು. ಒಂದಿಲ್ಲೊಂದು ರೀತಿಯಲ್ಲಿ ಗೆಲುವುಗಳಿಗೆ ಕಾಣಿಕೆ ನೀಡಿದ್ದರು. ಆದ್ದರಿಂದಾಗಿಯೇ ತಂಡವು ವಿಶ್ವಕಿರೀಟ ಧರಿಸುವ ಅಪಾರ ವಿಶ್ವಾಸ ಮೂಡಿತ್ತು. ಆದರೆ ಲೀಗ್ ಹಂತದ ಪಂದ್ಯಗಳೇ ಬೇರೆ ಮತ್ತು ನಾಕೌಟ್ ಹಣಾಹಣಿಗಳೇ ಭಿನ್ನ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಈ ಹಂತದಲ್ಲಿಯೇ ಕಳೆದೊಂದು ದಶಕದಲ್ಲಿ ಹಲವು ಬಾರಿ ಭಾರತ ಪೆಟ್ಟು ತಿಂದಿದೆ. ಏಕದಿನ ಹಾಗೂ ಟಿ20 ಮಾದರಿಗಳ ವಿಶ್ವಕಪ್ ಟೂರ್ನಿಯಲ್ಲಿ ತಲಾ ಎರಡು ಬಾರಿ ಸೆಮಿಫೈನಲ್‌ಗಳಲ್ಲಿ ಮುಗ್ಗರಿಸಿದೆ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸೋತಿತ್ತು. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಎರಡು ಫೈನಲ್‌ಗಳಲ್ಲಿ ಪರಾಭವಗೊಂಡಿತ್ತು.
ವೈಯಕ್ತಿಕವಾಗಿ ವಿಶ್ವಶ್ರೇಷ್ಠ ದಾಖಲೆಗಳನ್ನು ಹೊಂದಿರುವ ಆಟಗಾರರಿರುವ ತಂಡವು ಈ ಸವಾಲನ್ನು ಮೀರಿ ನಿಲ್ಲುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸವೇ ಸರಿ. ದ್ವಿಪಕ್ಷೀಯ ಸರಣಿಗಳನ್ನು ಜಯಿಸಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ವಿಶ್ವಕಪ್‌ಗಳನ್ನು ಜಯಿಸಿದಾಗ ಮಾತ್ರವೇ ನಿಜವಾದ ಕೀರ್ತಿ ಲಭಿಸುತ್ತದೆ ಮತ್ತು ವಿಜಯೀ ಆಟಗಾರರು ದಿಗ್ಗಜರಾಗುತ್ತಾರೆ. ಈ ಮಾತಿಗೆ 1983 ಮತ್ತು 2011ರ ವಿಶ್ವಕಪ್ ಗೆದ್ದ ತಂಡಗಳೇ ಸಾಕ್ಷಿ. ಸರ್ವಶಕ್ತವಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಈಗ ಇದೆ.
ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ರೋಹಿತ್, ಯುವ ಆಟಗಾರರಾದ ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಗಾಯದ ಸಮಸ್ಯೆಯನ್ನು ಗೆದ್ದು ಬಂದು ಅಮೋಘ ಆಟವಾಡಿದ ಕೆ.ಎಲ್.ರಾಹುಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ಅವರೆಲ್ಲರಿಗೂ ಈ ವಿಶ್ವಕಪ್ ವಿಜಯದ ಅವಶ್ಯಕತೆ ಇತ್ತು. ಬಲಿಷ್ಠ ತಂಡವನ್ನಾಗಿ ರೂಪಿಸಲು ತೆರೆಮರೆಯಲ್ಲಿ ಶ್ರಮಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಜೀವಮಾನದ ಸಾಧನೆಯಾಗುತ್ತಿತ್ತು. ಆದರೆ ಹಿಂದಿನ ಅನುಭವ ಮತ್ತು ಭವಿಷ್ಯದ ಕನಸುಗಳು ಏನೇ ಇರಲಿ, ಪಂದ್ಯದ ದಿನ ಸಂಪೂರ್ಣ ಬದ್ಧತೆಯಿಂದ ಆಡುವ ತಂಡಕ್ಕೆ ಗೆಲುವು ಒಲಿಯುತ್ತದೆ. ಅದರಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು. ಇದಲ್ಲದೇ ಇನ್ನು ಕೆಲವು ಕಾರಣಗಳಿಗಾಗಿ ಈ ವಿಶ್ವಕಪ್ ಟೂರ್ನಿಯು ಜಗತ್ತಿನ ಗಮನ ಸೆಳೆಯಿತು.
ಅಷ್ಟೇನೂ ಅನುಭವವಿಲ್ಲದ ಅಫ್ಗಾನಿಸ್ತಾನ ಮತ್ತು ನೆದರ್ಲೆಂಡ್ಸ್‌ನಂತಹ ತಂಡಗಳು ದೊಡ್ಡ ತಂಡಗಳಿಗೆ ಸೋಲಿನ ರುಚಿ ತೋರಿಸಿದವು. ಆದರೆ ಹೋದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಯಿತು. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ನ್ಯೂಜಿಲೆಂಡ್ ತಂಡವು ನಾಲ್ಕರ ಘಟ್ಟದಲ್ಲಿ ಸೋತಿತು. ದಕ್ಷಿಣ ಆಫ್ರಿಕಾ ಈ ಬಾರಿಯೂ ತನ್ನ ‘ಚೋಕರ್ಸ್’ ಪಟ್ಟ ಕಿತ್ತೊಗೆಯುವಲ್ಲಿ ವಿಫಲವಾಯಿತು. ಕೆಲವು ವಿವಾದಗಳೂ ಸುದ್ದಿಯಾದವು. ಬಾಂಗ್ಲಾ ಎದುರಿನ ಪಂದ್ಯದಲ್ಲಿ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್ ಆದರು. ಕ್ರಿಕೆಟ್ ಇತಿಹಾಸದಲ್ಲಿಯೇ ಇದು ಮೊದಲ ಘಟನೆಯಾಯಿತು. ಅಹಮದಾಬಾದಿನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆದಾಗ ಕೆಲವು ಅಭಿಮಾನಿಗಳು ಜೈಶ್ರೀರಾಮ್ ಎಂದು ಕೂಗಿದ್ದು, ಮತ್ತೊಂದು ಪಂದ್ಯದಲ್ಲಿ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ತಮ್ಮ ಶತಕವನ್ನು ಗಾಜಾದ ಸಂತ್ರಸ್ತರಿಗೆ ಅರ್ಪಿಸುವುದಾಗಿ ಹೇಳಿದ್ದು, ಮೈದಾನದಲ್ಲಿ ಪ್ರಾರ್ಥನೆ ಮಾಡಿದ್ದು ಹಾಗೂ ಫೈನಲ್ ಪಂದ್ಯದಲ್ಲಿ ಪ್ಯಾಲೆಸ್ಟೀನ್ ಬೆಂಬಲಿಗನೊಬ್ಬ ಬಿಗಿ ಭದ್ರತೆಯನ್ನೂ ದಾಟಿ ಪಿಚ್‌ಗೆ ನುಗ್ಗಿ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ್ದು ಚರ್ಚೆಗೆ ಗ್ರಾಸವಾಗಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮಾರ್ಲೆಸ್ ಭಾಗವಹಿಸಿದ್ದ ಈ ಪಂದ್ಯದ ಭದ್ರತಾ ವ್ಯವಸ್ಥೆ ಈಗ ಪ್ರಶ್ನಾರ್ಹವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ವೇಳಾಪಟ್ಟಿಯ ಗೊಂದಲಗಳು ಮತ್ತು ಟಿಕೆಟ್ ಮಾರಾಟದ ಅವ್ಯವಸ್ಥೆಗಳೂ ಸುದ್ದಿಯಾಗಿದ್ದವು. ಇವೆಲ್ಲದರಾಚೆ ಕೊಹ್ಲಿ ದಾಖಲೆಯ ಐವತ್ತನೇ ಶತಕ, ಶಮಿ ಮೂರು ಬಾರಿ ಗಳಿಸಿದ ಐದು ವಿಕೆಟ್ ಗೊಂಚಲುಗಳು, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಗಳಿಸಿದ ಅಮೋಘ ದ್ವಿಶತಕ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. ಈ ಅಂಶಗಳೇ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.