ADVERTISEMENT

ಐಪಿಎಲ್‌ ಕೌತುಕಕ್ಕೆ ತೆರೆ; ವಿಶ್ವಕಪ್‌ಗೆ ದಿನಗಣನೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 4:26 IST
Last Updated 15 ಮೇ 2019, 4:26 IST
   

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಹನ್ನೆರಡನೇ ಆವೃತ್ತಿಯು ರೋಚಕ ಮುಕ್ತಾಯ ಕಂಡಿದೆ. ಭಾನುವಾರ ಹೈದರಾಬಾದಿನಲ್ಲಿ ನಡೆದ ಫೈನಲ್ ಪಂದ್ಯವು ಕೊನೆಯ ಎಸೆತದವರೆಗೂ ಕುತೂಹಲ ಉಳಿಸಿಕೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮುಂಬೈ ಇಂಡಿಯನ್ಸ್‌ ತಂಡವು ಕೇವಲ ಒಂದು ರನ್‌ನಿಂದ ಸೋಲಿಸಿ ಇತಿಹಾಸ ಬರೆಯಿತು.

ಮುಂಬೈ ಪ್ರಶಸ್ತಿ ಗೆಲ್ಲುತ್ತಿರುವುದು ಇದು ನಾಲ್ಕನೇ ಬಾರಿ. ಚೆನ್ನೈ ಮೂರು ಸಲ ಚಾಂಪಿಯನ್ ಆಗಿತ್ತು. ಫೈನಲ್‌ ಹಣಾಹಣಿಯನ್ನು ಸ್ಪ್ಯಾನಿಷ್ ಲೀಗ್ ಫುಟ್‌ಬಾಲ್ ಟೂರ್ನಿಯ ರಿಯಲ್ ಮ್ಯಾಡ್ರಿಡ್ ಮತ್ತು ಎಫ್‌ಸಿ ಬಾರ್ಸಿಲೋನಾ ತಂಡಗಳ ನಡುವಣ ಹಣಾಹಣಿಗೆ ಹೋಲಿಕೆ ಮಾಡಲಾಗಿತ್ತು. ಅಷ್ಟೇ ಕೌತುಕದ ಕ್ಷಣಗಳನ್ನು ಈ ಪಂದ್ಯ ಉಣಬಡಿಸಿದ್ದು ಸುಳ್ಳಲ್ಲ. ಈ ಸಲದ ಟೂರ್ನಿಯ ಬಹಳಷ್ಟು ಪಂದ್ಯಗಳು ರೋಚಕ ಅಂತ್ಯ ಕಂಡಿದ್ದು ವಿಶೇಷ. ಕೆಲವು ಪಂದ್ಯಗಳ ಹಣೆಬರಹ, ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ನಿರ್ಧಾರವಾಗಿದೆ.

ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ಸಮಬಲದ ಹೋರಾಟವು ಚುಟುಕು ಕ್ರಿಕೆಟ್‌ನ ಸೊಬಗನ್ನು ಹೆಚ್ಚಿಸಿತು. ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್, ಕ್ರಿಸ್ ಗೇಲ್, ಅಲ್ಜಾರಿ ಜೋಸೆಫ್, ಡ್ವೇನ್‌ ಬ್ರಾವೊ, ಕೀರನ್ ಪೊಲಾರ್ಡ್, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರ ಆಟ ಕಳೆಗಟ್ಟಿತ್ತು.ಚೆಂಡು ವಿರೂಪ ಪ್ರಕರಣದ ನಿಷೇಧ ಶಿಕ್ಷೆ ಮುಗಿಸಿ ಬಂದಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅವರ ವೃತ್ತಿಜೀವನಕ್ಕೆ ಇಲ್ಲಿ ಮರುಜನ್ಮ ಲಭಿಸಿತು. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಾರ್ನರ್, 692 ರನ್‌ಗಳನ್ನು ಪೇರಿಸಿ ಆರೆಂಜ್ ಕ್ಯಾಪ್‌ ಮುಡಿಗೇರಿಸಿಕೊಂಡರು. ಸಾಲು ಸೋಲುಗಳಿಂದ ಜರ್ಜರಿತವಾದ ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕತ್ವದಿಂದ ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಿ ಸ್ಮಿತ್ ಅವರಿಗೆ ಹೊಣೆ ನೀಡಲಾಯಿತು. ಅದನ್ನು ಅವರು ಯಶಸ್ವಿಯಾಗಿ ನಿಭಾಯಿಸಿದರು.

ADVERTISEMENT

ಪರ್ಪಲ್ ಕ್ಯಾಪ್ ಗಳಿಸಿದ ಚೆನ್ನೈ ತಂಡದ ಸ್ಪಿನ್ನರ್ ಇಮ್ರಾನ್ ತಾಹೀರ್, ಮಹೇಂದ್ರಸಿಂಗ್ ಧೋನಿ ತಾವಿನ್ನೂ ‘ಯುವಕರು’ ಎಂಬುದನ್ನು ಸಾಬೀತು ಮಾಡಿದರು. ‘ಕಾಫಿ ವಿತ್ ಕರಣ್’ ಪ್ರಕರಣದಲ್ಲಿ ಟೀಕೆಗಳಿಗೆ ತುತ್ತಾಗಿದ್ದ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಇಲ್ಲಿ ತಮ್ಮ ಆಟದ ಮೂಲಕ ಸುದ್ದಿಯಾದರು. ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಮನಗೆದ್ದರು. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಬೌಲಿಂಗ್‌ನ ಶಕ್ತಿ ಇವರು. ವಿಶ್ವಕಪ್ ಟೂರ್ನಿಯಲ್ಲಿ ಆಡುವ ಆಟಗಾರರಿಗೆ ವಿಶ್ರಾಂತಿ ನೀಡುವ ಕುರಿತ ಚರ್ಚೆ ಐಪಿಎಲ್‌ ಈ ಆವೃತ್ತಿ ಆರಂಭಕ್ಕೂ ಮುನ್ನ ನಡೆದಿತ್ತು. ಆದರೂ ಭಾರತದ ಆಟಗಾರರು ತಮ್ಮ ಪಾಲಿನ ಬಹುತೇಕ ಪಂದ್ಯಗಳಲ್ಲಿ ಆಡಿದರು.

ಅವರೆಲ್ಲರೂ ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಇದರ ಫಲಾಫಲವನ್ನು ಕಾದು ನೋಡಬೇಕು. ತಪ್ಪು ನಿರ್ಧಾರಗಳು ಮತ್ತು ಒರಟು ನಡವಳಿಕೆಯಿಂದಾಗಿ ಕೆಲವು ಅಂಪೈರ್‌ಗಳು ಟೀಕೆಗೆ ಒಳಗಾದರು. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿದ್ದರೂ ಲೋಪಗಳಾದವು. ಈ ವಿಭಾಗದಲ್ಲಿ ಸುಧಾರಣೆಗಳ ಅವಶ್ಯಕತೆ ಇದೆ.

ಭಾರತ ಕ್ರಿಕೆಟ್‌ನ ‘ಶಕ್ತಿಕೇಂದ್ರ’ವಾಗಿ ಕರ್ನಾಟಕ ಬೆಳೆಯುತ್ತಿದೆ. ಇಲ್ಲಿನ ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಮಿಂಚಿದರು. ರಾಹುಲ್, ಶ್ರೇಯಸ್ ಗೋಪಾಲ್, ಮನೀಷ್ ಪಾಂಡೆ ಛಾಪು ಮೂಡಿಸಿದರು. ಆದರೆ, ಬೆಂಗಳೂರಿನ ರಾಯಲ್ ಚಾಲೆಂಜರ್ಸ್‌ ತಂಡದಲ್ಲಿ ಕನ್ನಡಿಗರಿಗೆ ಈ ಸಲವೂ ಅವಕಾಶ ಸಿಗಲಿಲ್ಲ. ವಿರಾಟ್ ಕೊಹ್ಲಿ ಬಳಗವು ‘ಪ್ಲೇ ಆಫ್‌’ ತಲುಪಲಿಲ್ಲ. ಆದರೂ ಆರ್‌ಸಿಬಿ ಸೇರಿದಂತೆ ಎಲ್ಲ ತಂಡಗಳ ಪಂದ್ಯಗಳಿಗೂ ಕ್ರೀಡಾಂಗಣ ಹೌಸ್‌ಫುಲ್ ಆಗಿತ್ತು. ಹೋದ ವರ್ಷ ಅಧಿಕೃತ ಪ್ರಸಾರ ಸಂಸ್ಥೆಗೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಜಾಹೀರಾತು ಆದಾಯ ಬಂದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಆದಾಯದ ನಿರೀಕ್ಷೆ ಇದೆ. ಬೆಟ್ಟಿಂಗ್ ಬಜಾರ್‌ನಲ್ಲಿ ಕೈಬದಲಾದ ಹಣಕ್ಕೆ ಲೆಕ್ಕ ಇಟ್ಟವರಾರು? ಒಟ್ಟಾರೆಯಾಗಿ ಈ ಸಲದ ಐಪಿಎಲ್, ಜನಪ್ರಿಯತೆಯ ಮತ್ತೊಂದು ಮೆಟ್ಟಿಲನ್ನು ಏರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.