ಪ್ರಾಥಮಿಕ ಶಾಲೆಗಳಪದವೀಧರ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರವು ಮುಂದಾಗಿದೆ. ಈ ಸಂಬಂಧವಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. 6ರಿಂದ 8ನೇ ತರಗತಿಯವರೆಗಿನ ಶಿಕ್ಷಕರ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಗಬಹುದು ಎಂದು ಭಾವಿಸಲಾಗಿದೆ. ವಿಜ್ಞಾನ ಮತ್ತು ಗಣಿತ ಶಿಕ್ಷಕರ ಹುದ್ದೆಗಳಿಗೆ ಗುಣಮಟ್ಟದ ಶಿಕ್ಷಕರು ಸಿಗದೇ ಇರುವುದರಿಂದಾಗಿ, ಆ ವಿಷಯಗಳನ್ನು ಬೋಧಿಸಲು ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡಬಹುದು ಎಂಬ ತಜ್ಞರ ಸಮಿತಿಯ ಅಭಿಪ್ರಾಯದ ಆಧಾರದ ಮೇಲೆ ನಿಯಮಗಳ ತಿದ್ದುಪಡಿಗೆ ಸರ್ಕಾರ ಮುಂದಾಗಿದೆ. 2017ರ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ 2018 ಮತ್ತು 2019ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ, ಅಗತ್ಯ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸದ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿದ್ದವು. ಗಣಿತ ಮತ್ತು ವಿಜ್ಞಾನ ವಿಷಯಗಳ ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಚಿಂತೆಯ ವಿಷಯ. ಹೀಗಾಗಿ, ಆ ವಿಷಯಗಳ ಬೋಧನೆಗೆ ಎಂಜಿನಿಯರಿಂಗ್ ಪದವೀಧರರನ್ನು ನೇಮಿಸಲು ಸರ್ಕಾರ ಯೋಚಿಸಿರುವಂತಿದೆ.
ಎಂಜಿನಿಯರಿಂಗ್ ಪದವೀಧರರನ್ನು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಿಗೆ ನೇಮಿಸುವ ಸರ್ಕಾರದ ಚಿಂತನೆಯು ಮೇಲ್ನೋಟಕ್ಕೆ ಆಕರ್ಷಕವಾಗಿದ್ದರೂ ಅದು ಎಷ್ಟರಮಟ್ಟಿಗೆ ಪ್ರಾಯೋಗಿಕ ಎನ್ನುವುದರ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಾಗಿದೆ. ಬಿ.ಎಸ್ಸಿ. ಮತ್ತು ಎಂಜಿನಿಯರಿಂಗ್ ಪದವಿಗಳ ಸ್ವರೂಪ ಭಿನ್ನವಾದುದು. ವೃತ್ತಿಪರ ಶಿಕ್ಷಣವೇ ಎಂಜಿನಿಯರಿಂಗ್ ಕೋರ್ಸ್‌ನ ಪ್ರಧಾನ ಉದ್ದೇಶ. ಬಿ.ಎಸ್ಸಿಯು ಜ್ಞಾನಶಿಸ್ತು ಕೋರ್ಸ್. ಹಾಗಾಗಿ, ತಾಂತ್ರಿಕ ವೃತ್ತಿಪರ ಪದವಿ ಪಡೆದವರನ್ನು ಏಕಾಏಕಿ ಶಾಲಾ ಬೋಧಕರಾಗಿ ನೇಮಿಸಿಕೊಳ್ಳುವುದರ ಬಗ್ಗೆ ಅವಸರದ ತೀರ್ಮಾನ ಸಲ್ಲದು. ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗಳಿಗೆ ಅಗತ್ಯವಾದಷ್ಟು ಪದವೀಧರರು ಪ್ರಸ್ತುತ ದೊರೆಯದಿರುವುದಕ್ಕೆ ಬಿ.ಎಸ್ಸಿ. ಪದವಿಯನ್ನು ಶೈಕ್ಷಣಿಕ ವಲಯ ನಿರ್ಲಕ್ಷಿಸಿರುವುದೇ ಮುಖ್ಯ ಕಾರಣವಾಗಿದೆ. ಪದವಿ ಹಂತದಲ್ಲಿ ಬಹುತೇಕ ವಿದ್ಯಾರ್ಥಿಗಳ ಆಯ್ಕೆಯು ಕಾಮರ್ಸ್ ಕೋರ್ಸ್‌ಗಳೇ ಆಗಿರುವುದರಿಂದ, ವಿಜ್ಞಾನವನ್ನು ಮುಖ್ಯ ವಿಷಯವನ್ನಾಗಿ ಕಲಿತ ಅಭ್ಯರ್ಥಿಗಳ ಕೊರತೆ ಕಂಡುಬರುವುದು ಸಹಜ. ಈ ಕೊರತೆಯನ್ನು ತುಂಬಲಿಕ್ಕಾಗಿ ಎಂಜಿನಿಯರಿಂಗ್ ಕಲಿತವರನ್ನು ಬಳಸಿಕೊಳ್ಳುವ ಪ್ರಯತ್ನವು ತಾತ್ಕಾಲಿಕ ಪರಿಹಾರವಾಗಬಲ್ಲದೇ ವಿನಾ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಪದವಿ ಹಂತದಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ದಿಸೆಯಲ್ಲಿ ವಿದ್ಯಾರ್ಥಿಗಳ ಮನವೊಲಿಸುವ ಕೆಲಸ ಈಗ ನಡೆಯಬೇಕು. ಬಿ.ಎಸ್ಸಿ. ಮಾಡಿದಲ್ಲಿ ಉದ್ಯೋಗದ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಮನದಟ್ಟಾದರೆ ವಿದ್ಯಾರ್ಥಿಗಳು ವಿಜ್ಞಾನದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಈ ದಿಸೆಯಲ್ಲಿ ಪ್ರಯತ್ನಿಸದೆ, ಎಂಜಿನಿಯರಿಂಗ್ ಪದವೀಧರರಿಗೆ ಶಿಕ್ಷಕರಾಗಲು ಅವಕಾಶ ಕಲ್ಪಿಸುವುದರಿಂದ ಬಿ.ಎಸ್ಸಿ. ಕೋರ್ಸ್‌ಗಳು ಮತ್ತಷ್ಟು ಸೊರಗಲು ಸರ್ಕಾರವೇ ಅವಕಾಶ ಕಲ್ಪಿಸಿದಂತಾಗುತ್ತದೆ. ಎಂಜಿನಿಯರಿಂಗ್ ಕಲಿತವರು ಶಾಲಾ ಮಕ್ಕಳಿಗೆ ಗಣಿತ ಅಥವಾ ವಿಜ್ಞಾನವನ್ನು ಉತ್ತಮವಾಗಿ ಬೋಧಿಸಬಲ್ಲರು ಎಂಬುದಕ್ಕೆ ಪುರಾವೆಗಳು ಇದ್ದಂತಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಿಂದ ಹೊರಬೀಳುವವರ ಕೌಶಲದ ಬಗ್ಗೆ ಉದ್ಯೋಗದಾತ ಸಂಸ್ಥೆಗಳು ಅತೃಪ್ತಿ ವ್ಯಕ್ತಪಡಿಸಿರುವ ಉದಾಹರಣೆಗಳು ಬಹಳಷ್ಟಿವೆ. ಎಂಜಿನಿಯರಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ಹೊಂದಿರುವವರಿಗೆ ವಿಶ್ವದಾದ್ಯಂತ ಉದ್ಯೋಗದ ಆಯ್ಕೆಗಳಿರುವಾಗ, ಅವರು ಶಿಕ್ಷಕ ಹುದ್ದೆಯನ್ನು ಬಯಸುತ್ತಾರೆಂದು ಹೇಳಲಾಗದು. ಹಾಗಾಗಿ, ಅಲ್ಲಿ ಸಲ್ಲದ ಅಭ್ಯರ್ಥಿಗಳೇ ಶಿಕ್ಷಣ ಕ್ಷೇತ್ರಕ್ಕೆ ಗತಿ ಎನ್ನುವಂತಾಗಬಹುದು. ಅಂಥವರು ಶಿಕ್ಷಕರಾಗಿ ಉತ್ತಮ ಸಾಮರ್ಥ್ಯ ತೋರುತ್ತಾರೆಂದು ನಿರೀಕ್ಷಿಸುವುದು ಹೇಗೆ? ಸರ್ಕಾರದ ಹೊಸ ಚಿಂತನೆಯಿಂದ, ಎಂಜಿನಿಯರಿಂಗ್ ಪದವಿ ಪಡೆದವರು ಹಾಗೂ ಪಡೆಯದವರು ಎನ್ನುವ ಗುಂಪುಗಳು ಶಿಕ್ಷಕವೃಂದದಲ್ಲಿ ರೂಪುಗೊಳ್ಳುವ ಸಾಧ್ಯತೆಯೂ ಇದೆ. ಇಂಥ ಬೆಳವಣಿಗೆ ಕೂಡ ಶಿಕ್ಷಣ ಕ್ಷೇತ್ರದ ಹಿತಾಸಕ್ತಿಗೆ ಪೂರಕವಾದುದೇನಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.