ADVERTISEMENT

ಸಂಪಾದಕೀಯ: ಕ್ರಿಕೆಟ್: ಏಕರೂಪದ ಸಂಭಾವನೆ– ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 19:45 IST
Last Updated 3 ನವೆಂಬರ್ 2022, 19:45 IST
ಸಂಪಾದಕೀಯ: ಕ್ರಿಕೆಟ್: ಏಕರೂಪದ ಸಂಭಾವನೆ– ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ
ಸಂಪಾದಕೀಯ: ಕ್ರಿಕೆಟ್: ಏಕರೂಪದ ಸಂಭಾವನೆ– ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ   

ರೋಜರ್ ಬಿನ್ನಿ ಅಧ್ಯಕ್ಷತೆಯ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ದೇಶದ ಕ್ರಿಕೆಟ್ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ತರುವತ್ತ ಒಂದು ಮಹತ್ವದ ಹೆಜ್ಜೆಯಿಟ್ಟಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪುರುಷರ ತಂಡದ ಆಟಗಾರರು ಪಡೆಯುವಷ್ಟೇ ಪಂದ್ಯ ಸಂಭಾವನೆಯನ್ನು ಮಹಿಳೆಯರಿಗೂ ನೀಡಲು ಮಂಡಳಿ ನಿರ್ಧರಿಸಿದೆ. ಮಹಿಳೆಯರ ಕ್ರಿಕೆಟ್‌ಗೆ ಉತ್ತೇಜನ ನೀಡುವಂತಹ ಈ ತೀರ್ಮಾನವು ಸ್ವಾಗತಾರ್ಹ. ಇಲ್ಲಿಯವರೆಗೂ ಪುರುಷ ಹಾಗೂ ಮಹಿಳೆಯರ ಪಂದ್ಯ ಸಂಭಾವನೆಯಲ್ಲಿದ್ದ ಅಜಗಜಾಂತ
ರವನ್ನು ಮಂಡಳಿಯು ತೊಡೆದುಹಾಕಿದೆ. ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ಮಹಿಳಾ ಕ್ರಿಕೆಟಿಗರು ಈಗ ₹ 1 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ. ಈ ಮೊತ್ತ ಇನ್ನು ಮುಂದೆ ₹6 ಲಕ್ಷ ಆಗಲಿದೆ. ಟಿ20 ಪಂದ್ಯದ ಸಂಭಾವನೆಯು ₹ 1 ಲಕ್ಷದಿಂದ ₹ 3 ಲಕ್ಷಕ್ಕೆ ಹಾಗೂ ಟೆಸ್ಟ್‌ ಪಂದ್ಯದ ಸಂಭಾವನೆಯು ₹ 4 ಲಕ್ಷದಿಂದ ₹ 15 ಲಕ್ಷಕ್ಕೆ ಏರಿಕೆ ಆಗಲಿದೆ. ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರ್ತಿಯರಿಗೆ ಇದರ ಪ್ರಯೋಜನ ದಕ್ಕಲಿದೆ. ಈ ನಿಯಮವನ್ನು ಜಾರಿಗೆ ತಂದ ವಿಶ್ವದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ನ್ಯೂಜಿಲೆಂಡ್‌ನಲ್ಲಿ ಈಗಾಗಲೇ ಈ ನೀತಿ ಇದೆ.

ಮಂಡಳಿಯು ಈ ಪರಿಷ್ಕರಣೆಯನ್ನು ಬಹಳ ಹಿಂದೆಯೇ ಮಾಡಬೇಕಿತ್ತು. ಆದರೆ, ಈಗ ಎಚ್ಚೆತ್ತುಕೊಳ್ಳಲು ಭಾರತ ಮಹಿಳಾ ತಂಡ ಮಾಡಿರುವ ಗಮನ ಸೆಳೆಯುವಂತಹ ಸಾಧನೆಗಳು ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಈಚೆಗೆ ಏಷ್ಯಾ ಕಪ್ ಜಯಿಸಿದ್ದ ತಂಡವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗಳಿಸಿತ್ತು. ಮಹಿಳಾ ಕ್ರಿಕೆಟಿಗರಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಪುರುಷರಿಗೆ ಕಮ್ಮಿಯಿಲ್ಲದ ರೀತಿಯಲ್ಲಿ ಕೌಶಲಗಳನ್ನೂ ರೂಢಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ ಆಟಗಾರ್ತಿಯರಿಗೂ ಜಾಹೀರಾತುಗಳಲ್ಲಿ ಮಿಂಚುವ ಅವಕಾಶಗಳು ಸಿಗುತ್ತಿವೆ. ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ರಚನೆಯಾದ ನಿಯಮಾವಳಿಯಲ್ಲಿ ಕ್ರಿಕೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಒತ್ತು ನೀಡಲಾಗಿದೆ. ಅದರಿಂದಾಗಿಯೇ ಈಗ ಅಪೆಕ್ಸ್‌ ಕೌನ್ಸಿಲ್‌ನಲ್ಲಿ ಮಹಿಳಾ ಪ್ರತಿನಿಧಿ ಇದ್ದಾರೆ. ಕೌನ್ಸಿಲ್‌ ರಚನೆಯಾದಾಗ ಕರ್ನಾಟಕದ ಶಾಂತಾ ರಂಗಸ್ವಾಮಿ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅವರ ಅವಧಿ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಆ ಸ್ಥಾನಕ್ಕೆ ಶುಭಾಂಗಿ ಕುಲಕರ್ಣಿ ಅವರು ನೇಮಕವಾಗಿದ್ದಾರೆ. ಮಹಿಳಾ ಕ್ರಿಕೆಟ್‌ ಬೆಳವಣಿಗೆಯ ಪರವಾಗಿ ಬಿಸಿಸಿಐ ಸಭೆಗಳಲ್ಲಿ ದನಿಯೆತ್ತುವ ಕಾರ್ಯವನ್ನು ಈ ಪ್ರತಿನಿಧಿಗಳು ಮಾಡುತ್ತಿದ್ದಾರೆ.

ಈಗ ಜಾರಿಯಾಗಿರುವ ನಿಯಮದಿಂದ ಪ್ರಯೋಜನ ಪಡೆಯುವವರ ಸಂಖ್ಯೆ ಬಹಳ ಕಡಿಮೆ. ಆದ್ದರಿಂದ ಈ ನೀತಿಯು ದೇಶಿ ಕ್ರಿಕೆಟ್‌ಗೂ ವಿಸ್ತರಣೆಯಾಗಬೇಕು. ಇತ್ತೀಚಿನ ದಿನಗಳಲ್ಲಿ
ಗ್ರಾಮಾಂತರ ಪ್ರದೇಶಗಳಿಂದಲೂ ಕ್ರಿಕೆಟ್‌ ಕಲಿಯಲು ಬರುತ್ತಿರುವ ಬಾಲಕಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ದೇಶಿ ಟೂರ್ನಿಗಳಲ್ಲಿ ಆಡುವ ಆಟಗಾರ್ತಿಯರಿಗೆ ಪುರುಷರಿಗೆ ನೀಡುವಷ್ಟೇ ಸಂಭಾವನೆ ಸಿಗುವಂತಾದರೆ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಮಹಿಳೆಯರಿಗಾಗಿ ದೀರ್ಘ ಮಾದರಿಯ ದೇಶಿ ಟೂರ್ನಿಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆ. 2023ರಲ್ಲಿ ಮಹಿಳೆಯರಿಗಾಗಿಯೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆಯೋಜಿಸುವುದಾಗಿ ಬಿಸಿಸಿಐ ಘೋಷಿಸಿರುವುದರಿಂದ ಹೆಚ್ಚು ಪ್ರತಿಭೆಗಳಿಗೆ ಅವಕಾಶ ಸಿಗುವ ಭರವಸೆ ಮೂಡಿದೆ. ವಾರ್ಷಿಕ ಗುತ್ತಿಗೆಯ ಮೊತ್ತದಲ್ಲೂ ಸಮಾನತೆ ತರುವ ದಿಸೆಯಲ್ಲಿ ಮಂಡಳಿ ಚಿತ್ತ ಹರಿಸಬೇಕು ಎಂಬ ಕೂಗು ಸಹ ಇದೆ. ಸದ್ಯ ಬಿಸಿಸಿಐ ತೆಗೆದುಕೊಂಡಿರುವ ತೀರ್ಮಾನದಿಂದಾಗಿ ಮಹಿಳಾ ಕ್ರಿಕೆಟ್‌ನ ಹಳೆಯ ಬೇಡಿಕೆಗಳಿಗೂ ಸ್ಪಂದನೆ ಲಭಿಸುವ ಭರವಸೆ ಚಿಗುರಿದೆ. ಬಿಸಿಸಿಐನ ಈ ನಡೆಯು ದೇಶದ ಬೇರೆ ಕ್ರೀಡೆಗಳ ಆಡಳಿತಗಾರರಿಗೂ ಮಾದರಿಯಾಗುವಂತಿದೆ. ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಗಿಟ್ಟಿಸಲು ಪುರುಷರಷ್ಟೇ ಮಹಿಳೆಯರೂ ಶ್ರಮಪಡುತ್ತಾರೆ. ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಪುರುಷರಿಗಿಂತ ಹೆಚ್ಚಾಗಿ ಎದುರಿಸುತ್ತಾರೆ. ಆದರೂ ದೇಶದ ಕೀರ್ತಿಪತಾಕೆಯನ್ನು ವಿಶ್ವಮಟ್ಟದಲ್ಲಿ
ಹಾರಿಸುವಲ್ಲಿ ಹಿಂದೆ ಬಿದ್ದಿಲ್ಲ. ಆದ್ದರಿಂದ ಅವರೆಲ್ಲರಿಗೂ ಹೆಚ್ಚಿನ ಪ್ರೋತ್ಸಾಹ ನೀಡುವತ್ತ ಕ್ರೀಡಾ ಫೆಡರೇಷನ್‌ಗಳು ಮುಂದಾಗಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.