ದೇಶದ ಪ್ರತೀ ಪ್ರಜೆಗೂ ಆಹಾರ ಭದ್ರತೆಯನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಅಲ್ಲದೆ, ಆಹಾರವು ಪೌಷ್ಟಿಕಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ಆದರೆ, ಹತ್ತಾರು ಬಗೆಯ ಯೋಜನೆಗಳ ಹೊರತಾಗಿಯೂ ಹಸಿವುಮುಕ್ತ ಸಮಾಜ ರೂಪಿಸಲು ನಮಗೆ ಈವರೆಗೂ ಸಾಧ್ಯವಾಗಿಲ್ಲ. ಜಾಗತಿಕ ಹಸಿವಿನ ಸೂಚ್ಯಂಕವು ಈ ಕಹಿಸತ್ಯವನ್ನು ನಮಗೆ ಪದೇ ಪದೇ ನೆನಪಿಸುತ್ತಲೇ ಇದೆ. ಈ ವರ್ಷದ ಹಸಿವಿನ ಸೂಚ್ಯಂಕದಲ್ಲಿ ಭಾರತವು ಕೊನೆಯಿಂದ 13ನೇ ಸ್ಥಾನದಲ್ಲಿದೆ. ಹಸಿವಿನ ಸೂಚ್ಯಂಕಕ್ಕಾಗಿ 107 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಭಾರತದ ಸ್ಥಾನ 94. ರ್‍ಯಾಂಕ್ ಪಟ್ಟಿಯಲ್ಲಿ ನೆರೆರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತ ನಾವು ಹಿಂದೆ ಉಳಿದಿದ್ದೇವೆ.ದೇಶದಲ್ಲಿ ಶೇಕಡ 14ರಷ್ಟು ಮಂದಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಐದು ವರ್ಷದೊಳಗಿನ ಶೇಕಡ 37ರಷ್ಟು ಮಕ್ಕಳ ಬೆಳವಣಿಗೆಯು ಕುಂಠಿತಗೊಂಡಿದೆ ಎಂಬ ಆಘಾತಕಾರಿ ಅಂಶ ವರದಿಯಲ್ಲಿದೆ. ಕಳೆದ ವರ್ಷ ಸಮೀಕ್ಷೆ ನಡೆಸಿದ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿತ್ತು. ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಹಾಗೂ ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ರೂಪಿಸಲಾಗಿದೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವ ಸಂಗತಿಗಳು. ಒಂದೂವರೆ ದಶಕದ ಹಿಂದಿನ ಸ್ಥಿತಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯಲ್ಲಿ ಈಗ ಆರು ಕೋಟಿಯಷ್ಟು ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಅಧ್ಯಯನ ವರದಿಯೊಂದು ಹೇಳಿದೆ. ಹಾಗಿದ್ದೂ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲೇ ಉಳಿದುಕೊಂಡಿದೆ. ನಾವು ಎಡವಿರುವುದು ಎಲ್ಲಿ ಎನ್ನುವುದರ ಗಂಭೀರ ವಿಶ್ಲೇಷಣೆಗೆ ಇದು ಪ್ರೇರಣೆಯಾಗಬೇಕು.ನಮ್ಮ ಅಭಿವೃದ್ಧಿ ಮಾದರಿಗಳ ಕುರಿತು ಪುನರಾವಲೋಕನ ನಡೆಸಲು ಕಾರಣವಾಗಬೇಕು.
ಬಡತನ ನಿರ್ಮೂಲನೆಯು ನಮ್ಮ ರಾಜಕೀಯ ಪಕ್ಷಗಳ ಆಕರ್ಷಕ ಘೋಷಣೆಗಳಲ್ಲಿ ಒಂದು. ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಈ ವಿಷಯಕ್ಕೆ ಸುಭದ್ರ ಸ್ಥಾನ ಇದ್ದೇ ಇರುತ್ತದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ‘ಗರೀಬಿ ಹಠಾವೊ’ದಿಂದ ಕರ್ನಾಟಕದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ಹಸಿವು ನಿವಾರಣೆ ಹಾಗೂ ಬಡತನ ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹವು. ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ದೇಶದ ಎಲ್ಲ ರಾಜ್ಯಗಳಲ್ಲೂ ಅನುಷ್ಠಾನದಲ್ಲಿ ಇವೆ. ಇಷ್ಟೆಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ನಂತರವೂ ಹಸಿವಿನ ಸಮಸ್ಯೆ ಹೋಗಲಾಡಿಸಲು ಆಗಿಲ್ಲ ಎನ್ನುವುದು ಅನುಷ್ಠಾನ ವೈಫಲ್ಯದ ದ್ಯೋತಕ. ಸದುದ್ದೇಶದ ಯೋಜನೆ, ಕಾರ್ಯಕ್ರಮಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಆದರೆ, ಅವು ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ. ಆಹಾರ ಧಾನ್ಯಗಳಿಗೆ ನಮ್ಮಲ್ಲಿ ಅಭಾವ ಇಲ್ಲ. ದವಸ–ಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುತ್ತಿವೆ. ಇಲಿ–ಹೆಗ್ಗಣಗಳ ಪಾಲಾಗುತ್ತಿವೆ. ಆದರೆ, ಆ ಧಾನ್ಯವನ್ನು ಹಸಿದ ಹೊಟ್ಟೆಗಳಿಗೆ ತಲುಪಿಸುವಲ್ಲಿ ಸೋತಿದ್ದೇವೆ. ಆಹಾರದ ಪೋಲು ಇನ್ನೊಂದು ಬಗೆಯ ಸಮಸ್ಯೆ. ದೇಶದಲ್ಲಿನ ವೈರುಧ್ಯಗಳಿಗೆ ಇವು ಕನ್ನಡಿ ಹಿಡಿಯುತ್ತವೆ. ಹಸಿವಿನ ಸೂಚ್ಯಂಕವು ನಮ್ಮ ಪಡಿತರ ವ್ಯವಸ್ಥೆಯನ್ನು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಹೇಳುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮತ್ತು ಮಹಿಳೆಯರ ಆರೋಗ್ಯ ರಕ್ಷಣೆಗೆ ಇನ್ನಷ್ಟು ಒತ್ತು ನೀಡುವ ಅಗತ್ಯವನ್ನು ಸೂಚಿಸುತ್ತದೆ. ಆಹಾರ ಮತ್ತು ಆರೋಗ್ಯವನ್ನು ಎಲ್ಲರಿಗೂ ಖಾತರಿಪಡಿಸುವುದು ಸರ್ಕಾರದ ಆದ್ಯತೆಯಾಗಬೇಕು. ವಿಶ್ವದ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳಲು ಹಂಬಲಿಸುತ್ತಿರುವ ದೇಶ ಮೊದಲು ತನ್ನ ಜನರ ಹಸಿವು ನಿವಾರಣೆಗೆ ಪಣ ತೊಡಬೇಕಾಗಿರುವುದು ಇಂದಿನ ತುರ್ತು ಅಗತ್ಯ. ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕನ್ನು ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳಲ್ಲಿ ಒಂದು ಎನ್ನುತ್ತದೆ. ಜೀವಿಸುವುದು ಅಂದರೆ ಪ್ರಾಣಿಗಳಂತೆ ಬದುಕುವುದು ಎಂಬುದಲ್ಲ; ಬದಲಿಗೆ, ಘನತೆಯಿಂದ ಬದುಕುವುದು ಎಂಬ ಅರ್ಥ ಇದೆ. ಘನತೆಯಿಂದ ಬದುಕಲು ಆಹಾರ ಅನಿವಾರ್ಯ. ಹಸಿವಿನ ಸೂಚ್ಯಂಕದಲ್ಲಿ ದೇಶ ಪಡೆದಿರುವ ಸ್ಥಾನವನ್ನು ಗಮನಿಸಿದರೆ, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ವ್ಯವಸ್ಥೆ ಸೋತಿದೆ ಎಂಬುದು ಗೊತ್ತಾಗುತ್ತದೆ. ಜನ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಸಾಂವಿಧಾನಿಕ ಹೊಣೆಗಾರಿಕೆಯನ್ನೂ ಪ್ರಭುತ್ವಕ್ಕೆ ಸರಿಯಾಗಿ ನಿಭಾಯಿಸಲು ಆಗದಿರುವುದು ಶೋಭೆ ತರುವ ಸಂಗತಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.